ಮತ್ತೊಂದು ದಿನವ ಪ್ರಾಮಾಣಿಕವಾಗಿ ಎದುರಿಸುವುದು ಹೇಗೆ?
ನಾವಿಬ್ಬರೂ ಶಿಕ್ಷಕರು. ಅವರು ನನಗಿಂತ ಚೂರು ಹಿರಿಯರು. ವೃತ್ತಿಯಲ್ಲಿ ನಾನು ಹಿರಿಯ. ಪ್ರವೃತ್ತಿಯಲ್ಲಿ ಸಮಾನ ಆಸಕ್ತರು.
ನಾವು ಪರಸ್ಪರ ಭೇಟಿಯಾಗೋದೆ ಯಾವುದೋ ಒಂದು ಮೀಟಿಂಗೋ ಅಥವಾ ಅವರ ಊರ ಕಡೆ ನಾ ಹೋದಾಗ ಅಥವಾ ಅವರು ಈ ಕಡೆ ಬಂದಾಗ.
ಭೇಟಿಯಾಗಲೇಬೇಕೆಂಬ ಹಠವಿರುವುದಿಲ್ಲ. ಭೇಟಿಯಾಗಬಾರದೆಂಬ ಇರಾದೆಗಳೂ ಇರುವುದಿಲ್ಲ.
ಆದರೆ ನಮ್ಮ ಭೇಟಿಯ ವಿಶೇಷವೆಂದರೆ ನಾವಿಬ್ಬರೂ ಕೂತು ಮಾತನಾಡುತ್ತಿರುವಾಗ ಅವರ ಕಣ್ಣುಗಳು ಮಂಜಾಗಿರುತ್ತವೆ, ನನ್ನ ಮನಸ್ಸು ಆರ್ದ್ರವಾಗಿರುತ್ತದೆ.
ಯಾಕೋ ಕಾಣೆ ಇಂಥ ಭೇಟಿಗಳು ಅಪರೂಪ. ಅವರ ಕುರಿತು ನನಗೆ ಕೀಳರಿಮೆಗಳಿಲ್ಲ ನನ್ನ ಕುರಿತು ಅವರಿಗೆ ಅಸೂಯೆಯಿಲ್ಲ.
ಅಂತಿಮವಾಗಿ ಇಂದಿನ ನಮ್ಮ ಮಾತು ‘ಒಬ್ಬ ಸಾಮಾನ್ಯ ನಾಗರಿಕರಾಗಿ ಪ್ರಾಮಾಣಿಕವಾಗಿ ಸಹಜವಾಗಿ ಬದುಕುವುದು ಹೇಗೆ’ ಎಂಬುದರ ಸುತ್ತಲೇ ಇತ್ತು.
ನಮ್ಮಿಬ್ಬರ ಅನುಭವ ಮತ್ತು ತಿಳುವಳಿಕೆಗಳು ಈ ಕುರಿತೇ ಹೆಚ್ಚು ಕೇಂದ್ರೀಕೃತವಾಗಿದ್ದವು.
ಒಬ್ಬ ಶಿಕ್ಷಕ ದಿನನಿತ್ಯ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಬದುಕಲಿಕ್ಕೆ ಇರುವ ಸವಾಲುಗಳು ಯಾವುದು ಪ್ರಾಮಾಣಿಕರಾಗಿರಲೂ ಸಹ ಅದೆಷ್ಟು ನೋವು ಹತಾಶೆ ಅವಮಾನ ಅನುಭವಿಸಬೇಕಲ್ಲ… ಇದೆಲ್ಲದರಿಂದ ಬಿಡುಗಡೆ ಹೇಗೆ…. ಈ ವ್ಯವಸ್ಥೆ ನಮ್ಮಿಂದ ಬಯಸೋದು ಏನನ್ನ… ನಮ್ಮೆದುರು ಶಾಲೆ ಮಕ್ಕಳ ಸುಧಾರಣೆಯ ಮಾತುಗಳನ್ನಾಡುತ್ತಲೇ ಶಾಲೆಗೆ ಭೇಟಿಕೊಟ್ಟು ‘ಪಾಕೆಟ್’ ಅಪೇಕ್ಷಿಸುವವರು ಎಂಥವರು… ಈ ‘ಪಾಕೆಟ್’ ಕೊಡುವ ಕೊಡದಿರುವ ಆಯ್ಕೆ ನಮಗಿದೆಯೇ ಕೊಟ್ಟರೆ ನಮಗೆ ನಮ್ಮ ಆತ್ಮವಂಚನೆ ಕಾಡುತ್ತದೆ… ಕೊಡದಿದ್ದರೆ ‘ಅವರು’ ನಮ್ಮ ನೆಮ್ಮದಿ ಹಾಳು ಮಾಡುತ್ತಾರೆ… ಈ ಸಂಕೀರ್ಣ ಹಂತದಲ್ಲಿ ನಮ್ಮ ಆಯ್ಕೆ ಯಾವುದಿರಬೇಕು? ಇಂಥ ಸಂದಿಗ್ದತೆಯಲ್ಲಿ ಅದೆಷ್ಟು ಜನ ಇದ್ದಾರೆ…?! ಅವರೆಲ್ಲ ಹೇಗೆ ಬದುಕುತ್ತಿದ್ದಾರೆ? ಇದಾವುದನ್ನೂ ಯೋಚಿಸದೆ ಕಾಲಪ್ರವಾಹದಲ್ಲಿ ಕೊಚ್ಚಿ ಬದುಕುಳಿದವರೇ ಶ್ರೇಷ್ಠರಲ್ಲವೇ?
ಹೀಗೆ ನೂರೆಂಟು ಪ್ರಶ್ನೆಗಳು ಹತ್ತಾರು ನಿಮಿಷಗಳಲ್ಲಿ ನಮ್ಮಿಬ್ಬರನ್ನೂ ಕಾಡಿದವು…
ಇದಕ್ಕೆ ಪರಿಹಾರವಾಗಿ ಕಮೂ, ಮಾರ್ಕ್ವೆಜ್, ಸೀತಾರಾಂ, ಸೇತುರಾಂ, ಗುಂಡಣ್ಣ ಚಿಕ್ಕಮಗಳೂರು, ಏಣಗಿ ನಟರಾಜ್, ಏಣಗಿ ಬಾಳಪ್ಪ, ಲಂಕೇಶ್, ನೀಲು, ಕಾರ್ನಾಡ್, ಕಂಬಾರ, ಅಕ್ಕಮಹಾದೇವಿ, ಅತ್ತಿಮಬ್ಬೆ, ರನ್ನ, ಯಶೋಧರಾ, ಅತ್ತಿಮಬ್ಬೆ, ಅಮೃತಮತಿ, ಶರಣರು, ಕವಿಗಳು ಹೀಗೆ ಎಲ್ಲರೂ ಬಂದರು.
ತುಂಬಾ ಗಾಢವಾಗಿದ್ದ ಈ ಆಪ್ತಮಾತುಕತೆ ಜೊತೆ ಕೂತು ಒಂದು ಊಟಮಾಡಿದ ನಂತರ ಬೀಳ್ಕೊಡುವ ಮಾತನ್ನಾಡುವವರೆಗೆ ಮುಂದುವರೆಯಿತು…
ಕೊನೆಯಲ್ಲಿ ಇಬ್ಬರ ಕಣ್ಣಲ್ಲೂ ಮಂಜು ಹೃದಯ ಆರ್ದ್ರ ಮತ್ತು ನಮ್ಮಿಬ್ಬರ ಅಂತಃಶಕ್ತಿ ತುಸು ಜಾಸ್ತಿಯೇ ಹೆಚ್ಚಿತು….
ಎಂದಿನ ಮತ್ತೊಂದು ಪ್ರಾಮಾಣಿಕ ದಿನವ ಕಾಣುವುದು ಹೇಗೆ ಎಂಬ ಜಿಜ್ಞಾಸೆಯಲ್ಲಿ ಪರಸ್ಪರ ಬೀಳ್ಕೊಟ್ಟೆವು…
ಉರಿಬಿಸಿಲಲ್ಲಿ ನಾವಿಬ್ಬರೂ ಪರಸ್ಪರ ವಿರುದ್ಧ ದಾರಿಯಲ್ಲಿ ನಮ್ಮ ನಮ್ಮ ಗೂಡುಗಳಿಗೆ ಬಂದೆವು…
ಈಗ ರಾತ್ರಿ ಒಂಭತ್ತೂವರೆ … ಈ ಗಾಳಿಯಿಲ್ಲದ ತಂಪಲ್ಲೂ ಅವರ ಆ ಮಂಜುಗಣ್ಣುಗಳೇ ಕಾಣುತ್ತಿವೆ… ಅವರಿಗೆ ಅವರ ಕಣ್ಣಮಂಜು ನನಗೆ ಕಂಡಿಲ್ಲವೆಂಬ ನಿರಾಳತೆಯಲ್ಲಿರಬಹುದು…
ಆ ಕಣ್ಣಮಂಜಲ್ಲಿನ ಪ್ರಾಮಾಣಿಕತೆಯ ನಾನು ಅದೇಗೆ ಗುರುತಿಸದಿರಲಿ… ನನ್ನ ಕಣ್ಣಿಗೆ ತಾಕಿಸಿಕೊಳ್ಳದಿರಲಿ …
ನೀವೇ ಹೇಳಿ….
– ವೀರಣ್ಣ ಮಡಿವಾಳರ