ನಮ್ಮ ಮನೆಯ ಹೆಣ್ಣು ಮಗಳು
ನವಮಾಸ ಹೊತ್ತು ಹೆತ್ತು ಬೆಳೆಸಿದ ಅಮ್ಮನ
ಮಡಿಲಿನ ಕೂಸು,
ಅಪ್ಪನ ಹೆಗಲ ಮೇಲೆ ಅಂಬಾರಿ ಆಡಿದವಳು…
ಅಣ್ಣ ತಮ್ಮಂದಿರ ಪ್ರೀತಿಯ ಸೋದರಿ ಇವಳು
ಮನೆ ಮಂದಿಗೆಲ್ಲರಿಗೂ ಅಚ್ಚುಮೆಚ್ಚಿನವಳು…
ಇವಳೇ ನಮ್ಮ ಮಹಾಲಕ್ಷ್ಮಿ
ಶಾಲೆಯಲ್ಲಿ ಆದರ್ಶ ವಿದ್ಯಾರ್ಥಿನಿ ಇವಳು
ಆಟ ಪಾಠಗಳಲ್ಲಿ ಮೊದಲಿನವಳು
ಗೆಳತಿಯರ ಪ್ರೀತಿಯ ಸಹಪಾಠಿ ಇವಳು
ಕನಸಿನ ಬದುಕಿಗೆ ಕೋಟೆ ಕಟ್ಟಿದವಳು
ಸಾಧನೆಯ ಮೆಟ್ಟಿಲು ಹತ್ತುತ್ತಿದ್ದವಳು
ಕಠಿಣ ಪರಿಶ್ರಮದಿಂದ
ದಡಿದವಳು
ಪ್ರಾಮಾಣಿಕತೆಗೆ ಹೆಸರುವಾಸಿ ಇವಳು
ಪಾಪಿಗಳ ಕಾಮದಾಟಕ್ಕೆ ಬಲಿಯಾದಳು
ಅವರು ಕೊಟ್ಟ ಚಿತ್ರಹಿಂಸೆಯ ಬೆಂಕಿಯಲ್ಲಿ ಬೆಂದವಳು
ಕರ ಚಾಚಿ ಅಂಗಲಾಚಿ ಬಿಟ್ಟುಬಿಡಿ ಎಂದು ಮರುಗಿದಳು
ಕರುಣೆ ಇಲ್ಲದ ಕ್ರೂರ ಮೃಗಗಳಂತೆ
ಅವಳ ಮೇಲೆರಗಿ
ರಕ್ತ ಮಾಂಸದ ಜೊತೆ ಚೆಲ್ಲಾಟ ಆಡಿದರು ಹೃದಯ ಹೀನ ಕಿರಾತಕರು
ತಮಗೂ ತಾಯಿ ತಂಗಿ ಇದ್ದಾರೆಯೆಂಬುವುದ ಮರೆತುಬಿಟ್ಟರು
ಮುಗ್ಧ ಮಗುವಿನ ದೇಹವನ್ನು
ಹಸಿದ ನಾಯಿಯಂತೆ ಕಿತ್ತು ತಿಂದರು
ರಕ್ತದ ಮಡುವಿನಲ್ಲಿ
ನರಳಿ ನರಳಿ ಸತ್ತಳು
ಹೆತ್ತ ಕರುಳಿನ ಕೂಗು ಆಕಾಶಕ್ಕೆ ಮುಟ್ಟಿತು
ಇಡೀ ಹೆಣ್ಣು ಕುಲಕ್ಕೆ ಶಾಪವಾಯಿತು
ಭೂಮಿಗೆ ಯಾಕಾದರೂ ಹೆಣ್ಣಾಗಿ ಹುಟ್ಟಿ ಬಂದೆ ಎನಿಸಿತು
–ಸ್ವರೂಪರಾಣಿ ನಾಗುರೆ