Whatsapp status, ನಮ್ಮ ಬದುಕಿಗೊಂದು status ಆಗಲಿ…..
ಯಾಹೂ ಕಂಪನಿಯಿಂದ ಕೆಲಸ ಕಳೆದುಕೊಂಡು ಆಕ್ಟಾನ್ ಮತ್ತು ಜಾನ್ ಕೌಮ್ ಅವರ ‘ನಿರುದ್ಯೋಗದ ಖಾಲಿ ತಲೆ’ಯಲ್ಲಿ ಹುಟ್ಟಿಕೊಂಡ ಶೀಘ್ರ ಸಂವಹನ ತಂತ್ರವೇ ಈ whatsapp.
2007 ರಲ್ಲಿ yahoo company ಯಿಂದ ಹೊರಬಂದು ಕ್ಯಾಲಿಫೋರ್ನಿಯಾದ ತಾಂತ್ರಿಕ ಕಾರಿಡಾರ್ ಗಳಲ್ಲಿ ಹೊಸ ಕೆಲಸ ಹುಡುಕುತ್ತಾ, ಪರಿಚಯವಾದ ಗೆಳೆಯ ಫಿಶ್ ಮನ್ ನೊಂದಿಗೆ ಮಾತಾಡಿಕೊಳ್ಳುವಾಗ, ” ಏನಾಯ್ತು,ಎಲ್ಲಿಗೆ ಬಂತು…” ಎಂದು ಕೇಳುವುದರ ಅರ್ಥದ ‘whats up’ ಎಂಬ ಮಾತೇ, whats app ಆಗಿ ಸಂಚಲನವನ್ನು ಸೃಷ್ಠಿ ಮಾಡಿತು!
ಈ ಕಲ್ಪನೆ ಮೂಡಿದ್ದೇ ತಡ, ಆಕ್ಟಾನ್ ಮತ್ತು ಕೌಮ್ ಫೆಬ್ರುವರಿ 24, 2009 ರಂದು whatsapp ಲಾಂಚ್ ಮಾಡಿಯೇ ಬಿಟ್ಟರು. ಫೇಸ್ಬುಕ್ ಗಿಂತಲೂ ಕೇವಲ ಐದು ವರ್ಷಗಳಲ್ಲಿ ಜಗತ್ತಿನಾದ್ಯಂತ ಚಿರಪರಿಚಿತವಾದ ವಾಟ್ಸಪ್ ನ ತಾಂತ್ರಿಕ ನಿಪುಣತೆ, ಜನರನ್ನು ತಲುಪುವ ಕ್ಷಿಪ್ರ ತೆ ಮನಗಂಡು 19ನೇ ಫೆಬ್ರವರಿ 2014ರಲ್ಲಿ ಫೇಸ್ಬುಕ್ ನ ಜನಕ ಮಾರ್ಕ್ ಜುಕರ್ಬರ್ಗ್ ಖರೀದಿ ಮಾಡಿ ಅದರ ಸಂವಹನ ತಂತ್ರಜ್ಞಾನ, ಮಾಹಿತಿ ವಿನಿಮಯದ ಸಾಧ್ಯತೆ, ಜನಪ್ರಿಯತೆ ಇನ್ನೂ ಹೆಚ್ಚಿಸಿದ. 2020 ರ ಫೆಬ್ರವರಿ ವೇಳೆಗೆ ಇಡೀ ಜಗತ್ತಿನಾದ್ಯಂತ ವಾಟ್ಸಪ್ ಬಳಕೆದಾರರ ಸಂಖ್ಯೆ ಎರಡು ನೂರು ಕೋಟಿ!
ಫೇಸ್ಬುಕ್ ತೆಕ್ಕೆಗೆ ವಾಟ್ಸಪ್ ಸೇರಿಕೊಂಡಾಗಿನಿಂದ ಬದಲಾಗುತ್ತಿರುವ ತಾಂತ್ರಿಕ ಅಭಿರುಚಿಗನುಗುಣವಾಗಿ ಅದರ ಫೀಚರುಗಳು ಜನಮಾನಸ ವಾಗುತ್ತಿವೆ. ಯೂಸರ್ ಫ್ರೆಂಡ್ಲಿ ಅನಿಸುತ್ತಿದೆ. ಸುಲಭ ಬಳಕೆ ಆಗುತ್ತಿದೆ. ಇತ್ತೀಚೆಗಷ್ಟೇ ವಾಟ್ಸಪ್ ಮನಿ ಟ್ರಾನ್ಸ್ಫರ್ ಗೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಒಪ್ಪಿಗೆ ನೀಡಿರುವ ಈ ಸಂದರ್ಭದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ‘ವಾಟ್ಸಪ್ ಸ್ಟೇಟಸ್’ ಬಗ್ಗೆ ಒಂದಷ್ಟು ಮಾಹಿತಿ ತಿಳಿಯುತ್ತಾ ಅದರ ಸದ್ಬಳಕೆ ಬಗ್ಗೆ ಗಮನಹರಿಸೋಣ.
ವಾಟ್ಸಪ್ ಸ್ಟೇಟಸ್
ಆರಂಭದ ಮೊಬೈಲ್ ಬಳಕೆ ಯಲ್ಲಿ ಅತಿ ಹೆಚ್ಚು ಇಷ್ಟವಾಗಿದ್ದು ಎಸ್ಎಂಎಸ್. ಆದರೆ ಇದರಲ್ಲಿ ಆಡಿಯೋ, ವಿಡಿಯೋ, ಚಿತ್ರಗಳು ವಿನಿಮಯ ಸಾಧ್ಯವಿರಲಿಲ್ಲ. ಎಂಎಂಎಸ್ ಇತ್ತಾದರೂ ಅದು ಕೇವಲ ಪರಿಣಿತ ಬಳಕೆದಾರರ ಕೈಗೊಂಬೆಯಾಗಿ ತ್ತು. ಇವೆಲ್ಲವುಗಳನ್ನು ಆಚೆಗಿಟ್ಟು ಸಾಮಾನ್ಯ ಅನಕ್ಷರಸ್ಥರಿಗೂ ಸುಲಭ ಬಳಕೆಯ ಸಾಧ್ಯತೆ ಸೃಷ್ಟಿಸಿದ್ದು ವಾಟ್ಸಪ್. ಅದರಲ್ಲಿಯೂ ಇತ್ತೀಚಿಗೆ ಭಾರಿ ಹವಾ ಎಬ್ಬಿಸಿರುವುದು ವಾಟ್ಸಪ್ ನಲ್ಲಿನ ‘ಸ್ಟೇಟಸ್’. ಇಲ್ಲಿ ಕಾಮಿಡಿ ಕಾಣುತ್ತೆ, ಮನಮುಟ್ಟುವ ಮಾತಿರುತ್ತೇ, ಅಯ್ಯೋ ಎನಿಸಬಹುದಾದ ಚಿತ್ರ ಅಂಟಿರುತ್ತದೆ, ವಾವ್ ಎಂದು ಮನಸ್ಸಿಗೆ ತಾಕುತ್ತದೆ.
ಹದಿನೈದು ಸೆಕೆಂಡುಗಳ ಕಾಲ ಕಾಣುವ ಈ ಸ್ಟೇಟಸ್ ನಲ್ಲಿ ಏನ್ ಇದ್ದರೆ ಚೆಂದ ಏನ್ ಇರದಿದ್ದರೆ ಅಂದ ಎಂಬುದನ್ನು ನಾವು ಮೊದಲು ತಿಳಿಯಬೇಕಿದೆ.
ಏನಿರಲಿ…
ಈಗಾಗಲೇ ಆತ್ಮೀಯರ ಸಂಭ್ರಮದ ದಿನಗಳನ್ನು ಕ್ಷಣಗಳನ್ನು ಹರಕೆ ಹಾರೈಕೆಗಳನ್ನು ಕೆಲವರ ಅಗಲಿಕೆಯ ನೋವನ್ನು ಸ್ಟೇಟಸ್ ಮೇಲಿಟ್ಟು ವ್ಯಕ್ತಪಡಿಸುತ್ತಿದ್ದೇವೆ. ಇದರೊಂದಿಗೆ ಮತ್ತಷ್ಟು ಭಿನ್ನವಾಗಿರಲು,
* ನಮ್ಮ ಊರಿನ ನಿಸರ್ಗ ಸಿರಿಯ ಚಿತ್ರಗಳು
*ನಮ್ಮೂರಿನ ಹೆಮ್ಮೆಯ ಎಲೆಮರೆ ಸಾಧಕರ ಪರಿಚಯ
*ಹತ್ತಿರದ ಪಾರಂಪರಿಕ ತಾಣಗಳ ಬಗ್ಗೆ
*ನಮ್ಮ ನಡುವೆಯೇ ಇರುವ ನಿಷ್ಠಾವಂತ ಸೇವಕರ ಕುರಿತು
* ಸರ್ಕಾರದ ಅಧಿಕೃತ ಮುನ್ನೆಚ್ಚರಿಕೆ ಸಂದೇಶಗಳು
* ಸರ್ಕಾರದ ಯೋಜನೆಗಳು
* ಪ್ರವಾಹ ಮಾಹಿತಿ ಮಳೆ ಮಾಹಿತಿ
*ದುಸ್ಥಿತಿಯ ನಡುವೆಯೂ ಸಾಧಿಸಿದವರ ವಿವರ,
* ಇಷ್ಟವಾಗುವ ಹಾಡಿನ ಸಾಲುಗಳು
*ಓದಿದ ಪುಸ್ತಕದ ಬಗ್ಗೆ ನಾಲ್ಕು ಮಾತುಗಳು
*ಪ್ರವಾಸ ಕೈಗೊಳ್ಳಬಹುದಾದ ಸ್ಥಳಗಳು
*ವ್ಯವಸ್ಥೆಯಲ್ಲಿ ಬದಲಾವಣೆ ತರಬಹುದಾದ ಬರಹಗಳು
* ಸಂಶೋಧನೆಗೆ ಪ್ರೇರಣೆಯಾದ ಅಂಶಗಳು
* ದಿನಾಚರಣೆಗೆ ಅರ್ಥ ತರುವ ಬರಹಗಳು ಮತ್ತು ಅನು ಪಾಲಕರ ಪರಿಚಯ
* ಸದ್ದುಗದ್ದಲವಿಲ್ಲದೆ ಅರಳುವ ಪ್ರಕೃತಿ ವಿಸ್ಮಯಗಳು
*ನಾವು ಮಾಡಬಹುದಾದ ಮತ್ತು ಮಾಡಿದ ಸಹಾಯಗಳು.
ಏನು ಬೇಡ…
*ರಾಜಕೀಯ ವಿಷಯಗಳು
* ಜಾತಿ ಧರ್ಮದ ಬಗ್ಗೆ ಪರ-ವಿರೋಧಗಳು
* ಅಪರಾಧಗಳ ಬಗ್ಗೆ ಸ್ವತೀರ್ಪು
* ಕೊಲೆ ಆಕ್ಸಿಡೆಂಟ್ ಗಳ ಭಯಾನಕ ಚಿತ್ರ ವಿಡಿಯೋ
* ಇನ್ನೊಬ್ಬರನ್ನು ಅವಮಾನಿಸುವ ಸಂದೇಶಗಳು
* ಹೀರೋಯಿನ್ಗಳ ಅರೆಬರೆ ಚಿತ್ರಗಳು
* ದೇಶದ ಸಾಮರಸ್ಯಕ್ಕೆ ಧಕ್ಕೆ ತರಬಹುದಾದ ಸಂಗತಿಗಳು
* ವಯಕ್ತಿಕ ಮನಸ್ಥಿತಿ ಮತ್ತು ದ್ವೇಷ
ಸ್ಟೇಟಸ್ ನಲ್ಲಿನ ಅಂಶಗಳು ಹೇಗೆಲ್ಲಾ ಸಂಚಲನ ಉಂಟು ಮಾಡಬಹುದು ಎಂಬುದಕ್ಕೆ ಒಂದು ನಿದರ್ಶನ ತಿಳಿಯುವುದಾದರೆ, ನಮ್ಮೂರಿನ ಯುವಕರ ತಂಡ ಪ್ರತಿ ರವಿವಾರದಂದು ಕೈಗೊಳ್ಳುವ ಸ್ವಚ್ಛತಾ ಕಾರ್ಯದ ಫೋಟೋಗಳು, ಸುತ್ತಲಿನ ಹಳ್ಳಿಗಳ ಯುವಕರಿಗೂ ಪ್ರೇರಣೆಯಾಗಿ, ಅವರೂ ತಂಡ ಕಟ್ಟಿಕೊಂಡು ಸ್ವಚ್ಛತೆಗೆ ಅಣಿಯಾದರು!
ನಮ್ಮ ಮನಸ್ಥಿತಿಯ ಪ್ರತಿಬಿಂಬ ಆಗಬಹುದಾದ ಸ್ಟೇಟಸ್ ನಲ್ಲಿ ಪ್ರತಿ ದಿನವೂ ಮತ್ತೊಬ್ಬರಿಗೆ ವಸ್ತು, ವಿಷಯ, ಸ್ಥಳ, ಘಟನೆ ಪರಿಚಯ ಮಾಡಿಸಬಹುದಾಗಿದೆ. ಪರಿಣಾಮಕಾರಿ ಬಳಕೆಯ ಮೂಲಕ ನಮ್ಮ ಸ್ಟೇಟಸ್ ಗೊಂದು ಘನತೆ, ಅನುಯಾಯಿಗಳನ್ನು ಸೃಷ್ಟಿ ಮಾಡಿಕೊಳ್ಳಬಹುದಾದ ಸಾಧ್ಯತೆಗಳಿವೆ.
ನಾವು ಸ್ಟೇಟಸ್ ಹಾಕಿದರೆ ನೋಡುಗರಿಗೆ ಪ್ರತಿದಿನವೂ ವಿಭಿನ್ನ ಎನಿಸಬೇಕು, ಅನುಕರಣೆ ಉಂಟುಮಾಡಬೇಕು, ಪ್ರೇರೇಪಿಸಬೇಕು. ಹೆಚ್ಚು ಹೆಚ್ಚು ಶೇರ್ ಆಗುವಂತಿರಬೇಕು.
ಯಾರಿಗೆ ಗೊತ್ತು? ಯಾವ ಒಂದು ಮಾತು, ಯಾವ ಒಂದು ಘಟನೆ, ಯಾವ ಒಂದು ಬರಹ, ಮತ್ತೊಬ್ಬರ ಬದುಕಿನಲ್ಲಿ ಬದಲಾವಣೆ ತರಬಹುದೋ?! ಐಷಾರಾಮಿ ಯಾಗಿದ್ದ ‘ಸಿದ್ಧಾರ್ಥ’ ನೋಡಿದ ನಾಲ್ಕು ದೃಶ್ಯಗಳಿಂದ ‘ಬುದ್ಧ’ನಾಗಲಿಲ್ಲವೇ!!
ವಾಟ್ಸಪ್ ಲಿ ನಾವು ಹಾಕುವ status ಕೂಡ ನಮ್ಮ ದೃಷ್ಠಿಕೋನ,ಮನಸ್ಥಿತಿ,ಒಂದು ಆತ್ಮೀಯ ಬದಲಾವಣೆಗೂ ಕಾರಣವಾಗಬೇಕು,ಪ್ರೇರಣೇ ಆಗಬೇಕು…ಅಂದಾಗ ಮಾತ್ರ ವಾಟ್ಸಪ್ status ಕೂಡ, ನಮ್ಮ ಬದುಕಿನ status ನ್ನು ಹೆಚ್ಚಿಸುತ್ತದೆ.
–ಷಣ್ಮುಖ ಹೂಗಾರ್.
ಗಬ್ಬೂರ. ತಾ.ದೇವದುರ್ಗ
Good information bro. Kindly share the same. I think it is useful article for us.
Meaningfull lines bro trending one..wtsp#👍