ಅನುಭಾವದ ಆಡುಂಬೋಲ ಗೂಗಲ್ಲು.
ಈ ಜಗತ್ತು ಪ್ರಾಕೃತಿಕವಾಗಿ ಅಂದರೆ ಭೌಗೋಳಿಕವಾಗಿ ಮತ್ತು ಬುದ್ಧಿವಂತ ಪ್ರಾಣಿ ಎನಿಸಿದ ಮನುಷ್ಯನ ವಿಶೇಷ ಅರಿವಿನ ಕಾರಣವಾಗಿ ಬಹಳಷ್ಟು ಕುತೂಹಲಕಾರಿಯಾದ ಮತ್ತು ವಿಶೇಷವಾದ ಸಂಗತಿಗಳನ್ನು ತನ್ನಲ್ಲಿ ಅಳವಡಿಸಿಕೊಂಡಿದೆ. ಹಾಗಾಗಿ ಇದು ನಮ್ಮಂಥವರನ್ನು ನಿರಂತರವಾಗಿ,ನಾನಾ ಕಾರಣವಾಗಿ ತನ್ನೆಡೆಗೆ ಸೆಳೆಯುತ್ತ ಹೊಸ ಹೊಸ ಸಂಗತಿಗಳನ್ನು ಬಿಚ್ಚಿಕೊಳ್ಳುತ್ತಾ ಲೋಕದ ಬದುಕಿಗೆ ವಿಶೇಷತೆಯನ್ನು, ಹೊಸತನವನ್ನು ಹಾಗೂ ಚೈತನ್ಯವನ್ನು ತುಂಬುತ್ತಲೇ ಇರುತ್ತದೆ.ಹೀಗಾಗಿ ನಾವು ನಿಂತುಕೊಂಡ ಮತ್ತು ನಮ್ಮ ಸುತ್ತಲಿನ ನೆಲವನ್ನು ಆಗಾಗ ಬಗೆಬಗೆಯ ದೃಷ್ಟಿಯಿಂದ ಗಮನಿಸುತ್ತಲೇ ಇರಬೇಕೆನಿಸುತ್ತದೆ.
ಈ ಕಾರಣಕ್ಕಾಗಿಯೇ ನನಗೆ ನಮ್ಮ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವಿಶೇಷ ನೆಲೆಯಾದ ಗೂಗಲ್ಲು ತಾಣವನ್ನು ಮತ್ತೆ ಮತ್ತೆ ಗಮನಿಸಬೇಕೆನಿಸುತ್ತದೆ.
ಗೂಗಲ್ಲು ದೇವದುರ್ಗ ಪಟ್ಟಣದಿಂದ ಪೂರ‍್ವ ಭಾಗಕ್ಕೆ ಇಪ್ಪತ್ತೆರಡು ಕಿಲೋಮೀಟರ್ ಅಂತರದಲ್ಲಿರುವ ಒಂದು ಸುಂದರ ಪ್ರಾಕೃತಿಕ ನೆಲೆ. ನಾರಾಯಣಪುರ ಜಲಾಶಯದಿಂದ ಹರಿದುಬರುವ ಕೃಷ್ಣಾ ನದಿ ಈ ತಾಣಕ್ಕೆ ಒಂದು ಸುಂದರವಾದ ಮೆರಗನ್ನು ತಂದಿದೆ. ನದಿಯ ದಂಡೆಯಲ್ಲಿ ದೊಡ್ಡದಾದ ಹಾಸು ಬಂಡೆಗಳು, ನಂತರದಲ್ಲಿ ಅಲ್ಲಿಯೇ ನೆಲದಾಳದಲ್ಲಿ ಆಳವಾದ ಒಂದು ಗುಹೆ ಇದೆ. ಈ ಗವಿಯೇ ಈ ಕ್ಷೇತ್ರದ ಮಹತ್ವಕ್ಕೆ ಕಾರಣವಾಗಿದೆ .
ಈ ಸ್ಥಳಕ್ಕೆ ಗೂಗಲ್ಲು ಎಂಬ ಹೆಸರು ಏಕೆ ಬಂತು ಎಂಬುದು ಕೂಡ ನನ್ನ ಕುತೂಹಲಗಳಲ್ಲೊಂದಾಗಿದೆ.
ಯಾವಾಗಲೂ ಯಾವದೇ ಸ್ಥಳಗಳ ಹೆಸರುಗಳಿಗೆ ಪ್ರಾಕೃತಿಕ,ಚಾರಿತ್ರಿಕ ಮತ್ತು ಸಾಂಸ್ಕೃತಿಕವಾದ ಹಿನ್ನೆಲೆಗಳಿರುತ್ತವೆ.ಈ ಹಿನ್ನೆಯಲ್ಲಿ ಗೂಗಲ್ಲು ರೂಪ ನಿಷ್ಪತ್ತಿ ಕುರಿತು ಆಲೋಚಿಸುವಾಗ ನನಗೆ ಇಲ್ಲಿನ ಪ್ರಾಕೃತಿಕ ಪರಿಸರವೇ ಈ ಹೆಸರಿಗೆ ಕಾರಣವಾಗಿರಬೇಕೆನಿಸುತ್ತದೆ.ಈ ಹೆಸರು ಒಂದು ಸಮಾಸ ಪದವಾಗಿದೆ.ಕೃಷ್ಣಾ ನದಿ ತಟದಲ್ಲಿ ಹರಡಿಕೊಂಡಿರುವ ನೆಲಬಂಡೆಗಳು ಮತ್ತು ಬಹುಶಃ ಯಾರೋ ಕೊರೆದದ್ದೋ ಇಲ್ಲ ಪ್ರಕೃತಿ ಸಹಜವಾದದ್ದೋ ಆಗಿರುವ ಗುಹೆಗಳೇ ಈ ಹೆಸರಿನಲ್ಲಿ ಸೇರಿರುವ ಎರಡು ಪದಗಳು; ಗವಿ ಮತ್ತು ಕಲ್ಲು ಎನ್ನುವ ಈ ಸ್ಥಳ ಸೂಚಕ ಪ್ರಾಕೃತಿಕ ಪದಗಳು ಇದರ ಹೆಸರಿನಲ್ಲಿವೆ.ಈ ಎರಡು ಪದಗಳು ಬಿಡಿಬಿಡಿಯಾಗಿ ಉಚ್ಛಾರಗೊಳ್ಳದೇ ಇಡಿಯಾಗಿ ಅಂದರೆ ಕೂಡು ಪದವಾಗಿ ಉಚ್ಛಾರವಾಗುವಾಗ ‘ಗವಿಕಲ್ಲು’, ‘ಗವಿಗಲ್ಲು’ ಎಂದಾಗಿ ಮುಂದೆ ‘ಗವಿ’ ಎನ್ನುವ ಪದ ‘ಗೂ’ ಎಂದು ರೂಪಾಂತರಗೊಂಡು ‘ಗೂಗಲ್ಲು’ ಎಂದಾಗಿದೆ ಎನಿಸುತ್ತದೆ. ಇಂಥ ಸ್ಥಳಗಳು ಏನಾದರೊಂದು ವಿಶೇಷತೆಗೆ ಮುಖ್ಯ ಭೂಮಿಕೆಯಾಗುತ್ತವೆ.
ಅಂತೆಯೇ ಕೃಷ್ಣಾ ನದಿ ದಡದಲ್ಲಿರುವ ಹಾಸು ಬಂಡೆಗಳ ಅಡಿಯಲ್ಲಿನ ಗವಿ ನಮಗೀಗ ಪವಿತ್ರವಾದ ಚಾರಿತ್ರಿಕವಾದ ನೆಲೆಯಾಗಿ ಪರಿಣಮಿಸಿದೆ. ಏಕೆಂದರೆ ಈ ಗವಿಯನ್ನು ಪ್ರಭುದೇವರ ಗುಹೆ ಎಂದೇ ಕರೆಯಲಾಗುತ್ತದೆ .ಇಲ್ಲಿ ಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮಪ್ರಭುದೇವರು ಈ ಗವಿಯಲ್ಲಿ ನೆಲೆಯಾಗಿ ತಪೋನುಷ್ಠಾನ ಮಾಡಿದ್ದರೆಂದು ಪ್ರತೀತಿ ಇದೆ.ಹಾಗಾಗಿ ಇದು ಬಹಳ ಮಹತ್ವ ಪಡೆದಿದೆ. ಹಾಗಾದರೆ ಪ್ರಭುದೇವರು ಇಲ್ಲಿಗೆ ಏಕೆ ಮತ್ತು ಹೇಗೆ ಬಂದರು ಎಂಬ ಬಗ್ಗೆ ಎರಡು ವಿಚಾರಗಳಿವೆ.ಒಂದನೇದು ಲೋಕ ಸಂಚಾರಿಯಾದ ಪ್ರಭುದೇವರು ಕಲ್ಯಾಣಕ್ಕೆ ಹೋಗುವ ಮೊದಲು ಇದೇ ಮಾರ‍್ಗವಾಗಿ ಸೊನ್ನಲಿಗೆಗೆ ಹೋಗಿ ಅಲ್ಲಿಂದ ಕಲ್ಯಾಣ ತಲುಪಿದರು ಎಂಬುದು ಒಂದು ವಾದ.ಈ ಸಂದರ್ಭದಲ್ಲಿ ಅವರು ಮೊಸರಕಲ್ಲಿನ ಮುಕ್ತಾಯಕ್ಕನಿಗೆ ಭೇಟಿಯಾಗಿದ್ದರು ಎಂಬ ಆಲೋಚನೆ ಇದೆ.ಇನ್ನೊಂದು ವಾದದ ಪ್ರಕಾರ ಪ್ರಭುದೇವರು ಕಲ್ಯಾಣವನ್ನು ತೊರೆದು ಶ್ರೀಶೈಲದ ಕದಳಿಗೆ ಹೋಗುವಾಗ ಮಾರ‍್ಗ ಮಧ್ಯದಲ್ಲಿ ಗವಿಯಲ್ಲಿ ತಂಗಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿ ಮೊದಲು ಹೇಳಿದ ವಿಚಾರದಂತೆ ತನ್ನ ಗುರು ಹಾಗೂ ಅಣ್ಣನಾದ ಅಜಗಣ್ಣನನ್ನು ಕಳೆದುಕೊಂಡು ದುಃಖದಲ್ಲಿರುವ ಸಹೋದರಿ ಮುಕ್ತಾಯಕ್ಕ ಳನ್ನು ಕಂಡು ಪ್ರಭುದೇವರು ಆಕೆಯೊಂದಿಗೆ ಸಂವಾದ ಮಾಡಿದ್ದು ಇಲ್ಲಿಯೇ ಎಂಬ ವಿಚಾರ ಈಗ ಬಲವನ್ನು ಪಡೆದುಕೊಳ್ಳುತ್ತಿದೆ.ಇದೇನೇ ಇದ್ದರೂ ಪ್ರಭುದೇವರಂತೂ ಇಲ್ಲಿಗೆ ಬಂದದ್ದು ಇಲ್ಲಿನ ಗುಹೆಯಲ್ಲಿ ಅನುಷ್ಠಾನ ಗೈದದ್ದು ಸತ್ಯವಾಗಿದೆ.
ಇದರ ಕುರುಹಾಗಿ ಈ ಗುಹೆಯಲ್ಲಿ ಪ್ರಭುದೇವರು ಕುಳಿತಿದ್ದರು ಎನ್ನಲಾದ ಸ್ಥಳದಲ್ಲಿ ಅದರ ಗುರುತಿಗಾಗಿ ಲಿಂಗವನ್ನು ಸ್ಥಾಪಿಸಲಾಗಿದೆ. ಅಷ್ಟೇ ಅಲ್ಲ ಅದು ಈಗ ಒಂದು ಪವಿತ್ರ ಸ್ಥಳವಾಗಿ ಭಕ್ತಿಯ ತಾಣವಾಗಿ ಜನರನ್ನು ಕರೆಯುತ್ತಿದೆ.ಜೊತೆಗೆ ಪ್ರತಿ ವರ್ಷ ಚೈತ್ರ ಶುದ್ಧ ಪಂಚಮಿ ಅಂದರೆ ಯುಗಾದಿ ಅಮಾವಾಸ್ಯೆಯ ನಂತರ ಐದನೇ ದಿನದಂದು ಬಹುದೊಡ್ಡ ಜಾತ್ರೆಯಾಗುತ್ತದೆ. ಈ ಜಾತ್ರೆಯಲ್ಲಿ ದನಗಳ ಜಾತ್ರೆಯು ನಡೆಯುತ್ತದೆ. ಇಲ್ಲಿ ಇದೇ ದಿನದಂದೇ ಜಾತ್ರೆ ಯಾಕೆ ನಡೆಯುತ್ತದೆ ಎಂಬುದು ನಿಜಕ್ಕೂ ಒಂದು ವಿಚಾರಾತ್ಮಕವಾದ ಪ್ರಶ್ನೆ. ಪ್ರಭು ದೇವರಂತೂ ಇಲ್ಲಿಗೆ ಬಂದದ್ದು ಸತ್ಯ ಆದರೆ ಜಾತ್ರೆ ಅದೇ ದಿನವೇ ಏಕೆ ಎಂಬ ಎಂಬ ಪ್ರಶ್ನೆ ಹಾಕಿಕೊಂಡಾಗ ಸಾಮಾನ್ಯವಾಗಿ ಜಾತ್ರೆಗಳು ಉತ್ಸವಗಳು ಜರುಗುವುದು ಒಂದು ಸಂದರ್ಭದ ನೆನಪಿಗಾಗಿ.ಅದರಲ್ಲೂ ಇದು ಪ್ರಭುದೇವರ ಜಾತ್ರೆ ಅಂದಾಗ ಪ್ರಭುದೇವರ ನೆನಹಿನಲ್ಲಿ ನಡೆಯುವ ಜಾತ್ರೆ ಎಂದು ತಿಳಿದುಕೊಳ್ಳಬೇಕು. ಪ್ರಭುದೇವರ ನೆನಪು ಅಂದರೆ, ಬಹುಶಃ ಪ್ರಭುದೇವರು ಇದೇ ದಿನವೇ ಇಲ್ಲಿಗೆ ಬಂದಿರಬೇಕು ಅಥವಾ ಇದೇ ದಿನವೇ ಇಲ್ಲಿಂದ ನಿರ‍್ಗಮಿಸಿರಬೇಕು. ಹಾಗಾಗಿ ಈ ನೆನಪಿಗಾಗಿ ಜಾತ್ರೆ ನಡೆಯುತ್ತಿದೆ.
ಪ್ರಭುದೇವರು ಅಂದರೆ ಅದೊಂದು ಈ ದೇಶ ಕಂಡ ಬಹುದೊಡ್ಡ ವಿಸ್ಮಯ;ಅರಿವು, ಅನುಭಾವ ಮತ್ತು ಯೋಗ ಇವುಗಳ ಪರಿಪೂರ‍್ಣ ಮೊತ್ತ. ಅಂತೆಯೇ ಆತ ತನ್ನ ಸಮಕಾಲೀನವಾಗಿಯೂ ಮತ್ತು ನಂತರದಲ್ಲಿ ಈವರೆಗೂ ತನ್ನದೇ ಆದ ಬಹುದೊಡ್ಡ ಪ್ರಭಾವವನ್ನು ಬೀರಿದ್ದುದನ್ನು ಕಾಣುತ್ತೇವೆ.ಮೊದಲೇ ಹರಿಯುವ ಪವಿತ್ರವಾದ ನದಿಯ ತಾಣವಾಗಿ ಅವರಿವರೆನ್ನದೆ ಎಲ್ಲರಿಗೂ ಆಕರ‍್ಷಣೀಯ ತಾಣವಾಗಿರುವ ಈ ನೆಲೆ ಪ್ರಭುದೇವರ ತಪೋ ನೆಲವೂ ಆದಕಾರಣ ಇದಕ್ಕೆ ಇನ್ನಷ್ಟು ಪಾವಿತ್ರತೆ ಉಂಟಾಗಿ ಭಕ್ತಿಯ ನೆಲೆಯಾಗಿಯೂ ಮಹತ್ವವನ್ನು ಪಡೆದುಕೊಂಡಿದೆ. ಇದಷ್ಟೇ ಅಲ್ಲ ಮುಂದಿನ ಪೀಳಿಗೆಯಲ್ಲಿ ಅನುಭಾವದ ಚಿಲುಮೆಯಾಗಿ ಯೂ ಪರಿಣಮಿಸಿ ನಮ್ಮ ಅನುಭಾವ ಪರಂಪರೆಗೆ ಶಕ್ತಿಯನ್ನು ತುಂಬುವಲ್ಲಿ ಬಹುದೊಡ್ಡ ಕರ‍್ಯ ನಿರ‍್ವಹಿಸಿದೆ. ಅಂತೆಯೇ ಇದೀಗ ಪ್ರಭುದೇವರ ಗೂಗಲ್ಲು ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇಂತಹ ಗೂಗಲ್ಲು ಪ್ರಭುದೇವರ ನಂತರ ಸುಮಾರು ೬೦೦ ವರ್ಷಗಳು ಗತಿಸಿದ ಮೇಲೆ ಕ್ಷೇತ್ರದಲ್ಲಿ ಅನುಭಾವ ಮತ್ತೆ ಮೈದುಂಬಿಕೊಂಡಿತು.
ಕ್ರಿ.ಶ.ಸುಮಾರು ೧೭೮೦ ರಲ್ಲಿ ಈಗಿನ ಯಾದಗಿರಿ ಜಿಲ್ಲೆಯ ಬೆಂಡೆಗಂಬಳಿ ಎಂಬ ಊರಿನ ಅಕ್ಕಸಾಲಿಗ ವಂಶದ ಕಾಳಪ್ಪ ಮಾನಮ್ಮ ದಂಪತಿಗಳ ಮಗನಾಗಿ ಜನಿಸಿದಾತ ಪರಪ್ಪಯ್ಯ.ಈತನಿಗೆ ಮೊದಲಿನಿಂದಲೂ ಸಂಸಾರದ ಬಗ್ಗೆ ಬಲವಾದ ವೈರಾಗ್ಯ.ಆದರೂ ಮನೆಯ ಹಿರಿಯರ ಒತ್ತಾಯದಿಂದಾಗಿ ಸಾವಿತ್ರಿ ಎಂಬ ಕನ್ಯೆಯೊಂದಿಗೆ ಮದುವೆಯಾಗುತ್ತಾನೆ; ಇವರಿಬ್ಬರಿಗೆ ಮಕ್ಕಳೂ ಆಗುತ್ತವೆ.ಆದರೆ ಹೆಂಡತಿ ಮಕ್ಕಳು ಬಹು ಕಾಲ ಬಾಳಲಿಲ್ಲ.,ಕಾಲರಾ ಪೀಡಿತರಾಗಿ ತೀರಿಹೋಗುತ್ತಾರೆ.ಮೊದಲೇ ಸಂಸಾರದ ಬಗ್ಗೆ ನಿರಾಸಕ್ತನಾಗಿದ್ದ ಪರಪ್ಪಯ್ಯನಿಗೆ ತನ್ನ ಹೆಂಡತಿ ಮತ್ತು ಮಕ್ಕಳ ಸಾವು ಆತನ ವೈರಾಗ್ಯದ ಸಾಧನೆಗೆ ಬಲ ತುಂಬಿದಂತಾಗುತ್ತದೆ.ಗುಡ್ಡ ಬೆಟ್ಟಗಳ ಸಾಲಿನ ಕೆಳಗೆ ಇರುವ ಕೃಷ್ಣ ನದಿ ತೀರದ ತನ್ನ ಊರಾದ ಬೆಂಡೆಗಂಬಳಿಯನ್ನು ಬಿಟ್ಟು ಇದೇ ನದಿಯ ಪಕ್ಕದ ತೀರದ ಬಯಲು ಪ್ರದೇಶದಲ್ಲಿನ ಗೂಗಲ್ಲಿಗೆ ಬಂದುಬಿಡುತ್ತಾನೆ. ಅಲ್ಲಿ ತಪೋನುಷ್ಠಾನಗೈದಿದ್ದ ಪರಮವಿರಾಗಿ ಅಲ್ಲಮಪ್ರಭು ದೇವರ ಭಕ್ತನಾಗಿ ಆತನ ಮಾರ‍್ಗದಲ್ಲಿಯೇ ತಾನೂ ಕೂಡ ಅನುಭಾವಿಯಾಗಲು ಸಾಧನೆಗೆ ತೊಡಗಿ,
‘ಪರುವ’ ಎನ್ನುವ ಅಂಕಿತದಲ್ಲಿ ಅನುಭಾವದ ಹಾಡುಗಳನ್ನು ಕಟ್ಟಿ ಹಾಡತೊಡಗುತ್ತಾನೆ.ಶರಣರ ಪ್ರಭಾವಕ್ಕೊಳಗಾಗಿ ಜಾತಿ ಕುಲಗಳನ್ನು,ಖಂಡಿಸಿ, ಗೊಡ್ಡು ಸಂಪ್ರದಾಯಗಳನ್ನು ಪ್ರಶ್ನಿಸಿದ.ಪ್ರಭುದೇವರ ಭಕ್ತನಾಗಿ,ಆತನಂತೆ ವಿರಾಗಿಯಾಗಿ,ಶರಣರ ಅನುಯಾಯಿಯೂ ಆಗುತ್ತ ತನ್ನ ವಿಶ್ವಕರ್ಮ ವಂಶದ ಪ್ರಭಾವ ಕಾರಣವಾಗಿ ಶಾಕ್ತನೂ ಆಗುತ್ತಾನೆ.ಹಾಗಾಗಿ ಶರಣರಂತೆ ಇಷ್ಟಲಿಂಗೋಪಾಸಕನಾಗದೇ ವೀರಭದ್ರ ಹಾಗೂ ಶ್ರೀ ದೇವಿಯರ ಆರಾಧಕನಾಗುತ್ತಾನೆ.ನಮ್ಮ ಅನುಭಾವ ಪರಂಪರೆ ಶರಣರಿಂದಲೇ ಆರಂಭವಾದರೂ ಕೂಡ ಮುಂದೆ ಅದು ಕೇವಲ ಇಷ್ಟಲಿಂಗೋಪಾಸನೆಯಂಥ ಏಕದೇವೋಪಾಸನೆಗೆ ಸೀಮಿತವಾಗದೇ ಶಾಕ್ತಸಿದ್ಧಾಂತದೆಡೆಗೂ ಸೆಳೆದುಕೊಂಡಿರುವದನ್ನೂ ನಾವು ಕಾಣುತ್ತೇವೆ.ಇಂಥ ಗುಂಪಿನಲ್ಲಿ ಈ ಪರಪ್ಪಯ್ಯನೂ ಒಬ್ಬನಾಗಿದ್ದಾನೆ.ತನ್ನ ಹುಟ್ಟೂರಾದ ಬೆಂಡೆಗಂಬಳಿಯಲ್ಲಿರುವಾಗಲೇ ವಿರಾಗಿಯಾಗಿದ್ದ ಈ ಬೆಂಡೆಗಂಬಳಿ ಪರಪ್ಪಯ್ಯ,ಗೂಗಲ್ಲಿಗೆ ಬಂದ ಮೇಲೆ ಗೂಗಲ್ಲು ಪರಪ್ಪಯ್ಯ ಎಂತಲೂ ಕರೆಯಲ್ಪಡುತ್ತಾನೆ.
”ಗೂಗಲ್ಲು ಗವಿಯೊಳಗಿದ್ದ ಗುರುರಾಯ ಅಲ್ಲಮಾಸಿದ್ಧ
ನಗರ ಪರುವಗೆ ಮೈ ಬೆರೆತ ನಂದೀಶನ ರ‍್ತ”
ಎಂಬೀ ಹಾಡಿನಲ್ಲಿ ಪ್ರಭುದೇವರನ್ನು ತನ್ನ ಗುರುವೆಂದು ಒಪ್ಪಿಕೊಂಡಿರುವುದನ್ನು ಕಾಣುತ್ತೇವೆ.ಹೀಗೆ ಪ್ರಭುದೇವರನ್ನು ಒಂದರ‍್ಥದಲ್ಲಿ ಶರಣ ಸಿದ್ಧಾಂತವನ್ನು ಒಪ್ಪಿಕೊಂಡಿರುವ ಪರಪ್ಪಯ್ಯ,ಅತ್ತ ಶಾಕ್ತ ಸಂಪ್ರದಾಯಕ್ಕೂ ಒಲಿದು ಬಹುಶಃ ತಮ್ಮ ಮನೆಯ ದೇವರಾಗಿರಬಹುದಾದ ವೀರಭದ್ರ ದೇವರ ಕುರಿತಾಗಿಯೂ ಹಾಡಿರುವುದನ್ನು ಕಾಣುತ್ತೇವೆ.
”ಎಷ್ಟು ಬಣ್ಣಿಪೆ ನಿನ್ನ ಕಷ್ಟ ಪ್ರತಾಪಕ್ಕೆ
ಸೃಷ್ಟಿಗಧಿಕ ಹಲಕರಟೆಯ ಶರಭಾ ನಿನ್ನ”
ಎಂದು ಹಾಡುವುದನ್ನು ಗಮನಿಸಬಹುದಾಗಿದೆ.ಹೀಗೆ ಈ ವೀರಭದ್ರನ ಸಂಪ್ರದಾಯದಲ್ಲಿ ದೇವಸೂಗೂರನ ಸೂಗೂರೇಶ್ವರ(ವೀರಭದ್ರ) ಈತನಿಗೆ ಬಹಳಷ್ಟು ಪ್ರಭಾವ ಬೀರಿದ್ದಾನೆ.ಆತನ ಮಹಿಮೆ,ಪವಾಡಗಳ ಕುರಿತಾಗಿಯೇ ಅನೇಕ ಹಾಡುಗಳನ್ನು ಕಟ್ಟಿದ್ದಾನೆ.ಒಮ್ಮೆ ಈತ ಸೂಗೂರೇಶ್ವರನ ದರ್ಶನಕ್ಕೆಂದು ದೇವಸೂಗೂರಗೆ ನಡೆದು ಹೊರಟಾಗ ದಾರಿಯಲ್ಲಿ ಕೆರೆಯ ಏರಿಯ ಮೇಲೆ ಕೊಬ್ಬಿದ ಗೂಳಿಯೊಂದು ಧೂಳೆಬ್ಬಿಸುತ್ತ ಈತನ ಎದುರು ರಭಸವಾಗಿ ಬರುತ್ತಿರುವಾಗ ಅದರಿಂದ ಹೆದರಿದ ಈತ
“ಮೊರೆಹೊಕ್ಕೆ ನೀ ಕಾಯೋ ಮಲೆತ ಮಲ್ಲನ ಗೂಳಿ ಸೂಗೂರವೀರ…..” ಎಂದು ಭಕ್ತಿಯಿಂದ ಹಾಡೊಂದನ್ನು ಕಟ್ಟಿ ಹಾಡುತ್ತಾನೆ.ಆಗ ಆ ಗೂಳಿ ಈತನಿಂದ ದೂರಸರಿದು ಆತನಿಗೆ ಹೋಗಲು ದಾರಿಬಿಟ್ಟಿತು ಎಂಬುದಾಗಿ ತಿಳಿದುಬರುತ್ತದೆ.ಹೀಗೆ ನಡೆದು ದೇವಸೂಗೂರಿಗೆ ಬಂದಾಗ ಸಮಯವಾಯಿತೆಂದು ಪೂಜಾರಿಯವರು ಗರ್ಭ ಗುಡಿಯ ಬಾಗಿಲು ಹಾಕಿಬಿಡುತ್ತಾರೆ.ಇದರಿಂದ ನೊಂದುಕೊಂಡ ಪರಪ್ಪಯ್ಯ ಆಗಲೂ “ಏನು ಹೇಳಲಿ ಮಹಿಮೆ,ಆಹಾ ಜ್ಞಾನಿಗೆ ಪ್ರತಿಪಾಲಿಸುವ ಸ್ವಾಮಿ” ಎಂದು ಪದಕಟ್ಟಿ ಹಾಡಿದಾಗ ಗರ್ಭ ಗುಡಿಯ ಬಾಗಿಲು ತೆರೆದು ಸೂಗೂರೇಶ್ವರ ದರ್ಶನ ನೀಡಿದನೆಂದು ಪ್ರತೀತಿ ಇದೆ.
ಇದೇ ರೀತಿಯಲ್ಲಿಯೇ,ಗೂಗಲ್ಲಿಗೆ ಬಂದಿದ್ದ ಘನಮಠದ ಶಿವಯೋಗಿಗಳು ಸಂಚಾರ ಮಾಡುತ್ತಾ,ಸೊನ್ನಲಿಗೆಗೆ ಬಂದಾಗಲೂ ಕೂಡ ಸಮಯವಾಯಿತೆಂದು ಅರ್ಚಕರು ಸಿದ್ಧರಾಮೇಶ್ವರ ದೇವಾಲಯದ ಗರ್ಭಗುಡಿಯ ಬಾಗಿಲು ಮುಚ್ಚುತ್ತಾರೆ, ಆಗ ಘನಮಠದ ಶಿವಯೋಗಿಗಳು “ಸಿದ್ಧರಾಮ ಹೋ…” ಎಂಬ ಹಾಡನ್ನು ಕಟ್ಟಿ ಹಾಡಿದಾಗ ದೇಗುಲದ ಬಾಗಿಲು ತೆಗೆದು ದರ್ಶನವಾಯಿತೆಂದು ಹೇಳಲಾಗುತ್ತದೆ.
ಹೀಗೆ ಪ್ರಭುದೇವರ ಮೇಲೆಯೂ ಇರುವ ಆತನ ಅಗಾಧವಾದ ಶ್ರದ್ಧೆ ಭಕ್ತಿಗಳನ್ನು ಕೂಡ ನಾವು ಗಮನಿಸಬಹುದಾಗಿದೆ.
ಪರಪ್ಪಯ್ಯನಿಗೆ ಮೊದಲಿನಿಂದಲೂ ಗೂಗಲ್ಲಿನ ಪ್ರಭುದೆವರ ಮೇಲೆ ಅಪಾರ ಭಕ್ತಿ.ಹೀಗಾಗಿ ಆತ ನದಿಯಾಚೆಗಿನ ತನ್ನ ಊರಿನಿಂದ ಹರಿಗೋಲಲ್ಲಿ ಬಂದು ಪ್ರಭುದೇವರ ದರ್ಶನ ಪಡೆಯುತ್ತಿದ್ದ.
ಒಮ್ಮೆಅಂಬಿಗರಿಲ್ಲದೇ ಹರಿಗೋಲು ಸಿಗದಿದ್ದಾಗ ನದಿಯಲ್ಲಿ ಕಂಬಳಿ ಹಾಸಿ ಅದರ ಮೇಲೆ ಕುಳಿತು ನದಿ ದಾಟಿ ದಂಡ ಸೇರಿದನೆಂದು ಹೇಳಲಾಗುತ್ತದೆ.ಇದರಿಂದ ಆತನ ಯೋಗದ ಸಾಧನೆಯನ್ನು
ನಾವು ತಿಳಿಯ ಬಹುದಾಗಿದೆ.
ಹೀಗೆ ಈ ಪರಪ್ಪಯ್ಯನೊಂದಿಗೆ ಗೂಗಲ್ಲಿನಲ್ಲಿ ಜೊತೆಯಾದ ಮತ್ತೊಬ್ಬ ಅನುಭಾವಿ ಕೂಡಲೂರ ಬಸವಲಿಂಗ ಶರಣ.
ಕೂಡಲೂರ ಬಸವಲಿಂಗ ಶರಣ ಈ ಭಾಗದ ಹಿರಿಯ ,ಪ್ರಮುಖ ಅನುಭಾವಿ ಕವಿ.ಹುಟ್ಟಿದ್ದು ಈಗಿನ ಯಾದಗಿರಿ ಜಿಲ್ಲೆಯ ಬಳಿಚಕ್ರದ ಲಿಂಗಾಯತ ಬಣಜಿಗ ಮನೆತನದಲ್ಲಿ.ಹೆಚ್ಚಾಗಿ ಜೀವನ ಕಳೆದದ್ದು ರಾಯಚೂರು ಜಿಲ್ಲೆಯ ದೇವದೂರ್ಗ ತಾಲೂಕಿನಲ್ಲಿ.ಕೂಡಲೂರೇಶ ಅಂಕಿತದಲ್ಲಿ ಅನೇಕ ಹಾಡುಗಳನ್ನು ರಚಿಸಿದರು .ಈತ ಪರಪ್ಪಯ್ಯನ ವ್ಯಕ್ತಿತ್ವದ ಬಗ್ಗೆ ತಿಳಿದು ಆತನನ್ನು ಕಾಣಲೆಂದೇ ಗೂಗಲ್ಲಿಗೆ ಬರುತ್ತಾನೆ.ಗೂಗಲ್ಲಿನ ಪ್ರಭುದೇವರು ಈ ಪರಪ್ಪಯ್ಯನೊಂದಿಗೆ ದಿನಾಲು ಮಾತನಾಡುತ್ತಾನೆ ಎಂಬ ಪ್ರತೀತಿಯನ್ನು ಪರೀಕ್ಷಿಸಬೇಕೆಂದು ತವಕಿಸುತ್ತಾನೆ.ಆಗ ಎಂದಿನಂತೆ ಪರಪ್ಪಯ್ಯ ಪ್ರಭುದೇವರ ಪೂಜೆ ಪ್ರಾರ್ಥನೆಗಳನ್ನು ಮಾಡಿ ಮಾತನಾಡಲು ಎಷ್ಟೊ ಹೊತ್ತು ಕಾಯ್ದರೂ ಆತ ಮಿಸಕದೇ ಇದ್ದಾಗ,ಕೂಡಲೂರು ಬಸವಲಿಂಗರು
“ಕಲ್ಲು ಪೂಜೆಯ ಮಾಡಿ ಕಲ್ಲಿನಂತಾಗುವರೆ ಕೇಳೇ ಕಲ್ಲೇ,
ಕಲ್ಲು ಅಲ್ಲ ನೀನು ಅಲ್ಲಮಪ್ರಭು ಇದ್ದೀ ಕೇಳೇ ಕಲ್ಲೇ….”
ಎಂದು ಹಾಡಿದಾಗ ಪರಪ್ಪಯ್ಯನಲ್ಲಿ ಗೊತ್ತಿಲ್ಲದೇ ಅಂಕುರಿಸಿದ್ದ ಅಹಂಕಾರ ನಾಶವಾಯಿತೆಂದು ಹೇಳಲಾಗುತ್ತದೆ.
ಇದರಿಂದಾಗಿಯೇ ಪರಪ್ಪಯ್ಯನಲ್ಲಿ ಬದಲಾವಣೆಯಾಗಿ ಶರಣರ ಇಷ್ಟಲಿಂಗ ಪ್ರಜ್ಞೆ ಬಲಗೊಳ್ಳುತ್ತದೆ.
೧೯ನೇ ಶತಮಾನದಲ್ಲಿ ಆಂಧ್ರದ ದೋರವಾಡದಿಂದ ಕನ್ನಡ ನಾಡಿಗೆ ಬಂದ ವೈರಾಗ್ಯಮೂರ‍್ತಿ ಅಪ್ಪಟ ಬಸವಾನುಯಾಯಿ ಘನಮಠದ ನಾಗಭೂಷಣ ಶಿವಯೋಗಿಗಳವರು ಕನ್ನಡ ನಾಡಿನಲ್ಲಿ ಸಂಚಾರ ಮಾಡುತ್ತಾ, ಬಸವ ತತ್ವವನ್ನು ಪ್ರಸಾರ ಮಾಡುತ್ತಾ,ಬಸವಾದಿ ಶರಣರ ವಚನಗಳ ಕಟ್ಟುಗಳನ್ನು ತಮ್ಮ ಜೋಳಿಗೆಯಲ್ಲಿ ಹೊತ್ತುಕೊಂಡು ಶರಣರ ನೆಲೆಯಾದ ಸ್ಥಳಗಳಿಗೆ ಭೇಟಿ ಕೊಡುತ್ತ, ಪ್ರಭುದೇವರ ತಪೋಭೂಮಿಯಾದ ಈ ಗೂಗಲ್ಲಗೆ ಬರುತ್ತಾರೆ. ಆಗ ಪ್ರಭುದೇವರು ಅನುಷ್ಠಾನ ಮಾಡಿದ ಆ ಗುಹೆಯನ್ನು ಪ್ರವೇಶ ಮಾಡಿ ಭಕ್ತಿ ಮತ್ತು ಧನ್ಯತೆಯ ಭಾವದಿಂದ ಅಲ್ಲಿಂದ ಕದಲದೆ ಅಲ್ಲಿಯೇ ಉಳಿದುಬಿಡುತ್ತಾರೆ. ಮೊದಲೇ ಬಟಾಬಯಲಿನಲ್ಲಿರುವ ಕೃಷ್ಣಾ ತೀರದ ಈ ಸುಂದರ ತಾಣ ಪ್ರಭುದೇವರ ತಪೋಭೂಮಿಯೂ ಆಗಿರುವುದರಿಂದ ಅವರ ಅಪ್ಪಟ ಅನುಯಾಯಿಯಾಗಿರುವ ಘನಮಠ ಶಿವಯೋಗಿಗಳಿಗೆ ಅದು ನೆಚ್ಚಿನ ತಾಣವಾಗುತ್ತದೆ. ಹಾಗಾಗಿ ಅವರು ಆ ದಿನ ಅಲ್ಲಿಯೇ ಉಳಿದು ಬಿಡುತ್ತಾರೆ ಆಗ ಬಹುಶಃ ಮಳೆಗಾಲವಾಗಿರಬೇಕು, ರಾತ್ರಿ ಹೊತ್ತು ಅವರು ಬಯಲಿನ ಹಾಸುಗಲ್ಲಿನ ಮೇಲೆ ಒರಗಿದಾಗ ಏಕಾಏಕಿ ಧಾರಾಕಾರವಾಗಿ ಮಳೆ ಸುರಿಯುತ್ತದೆ ಇದರಿಂದಾಗಿ ಅವರ ಜೋಳಿಗೆ ಯಲ್ಲಿರುವ ಬಸವಾದಿ ಶರಣ ಶರಣೆಯರು ವಚನಕಟ್ಟುಗಳು ನೀರಿಗೆ ತೋಯ್ದು ಹಾಳಾಗುತ್ತಿರುವಾಗ ಇದರಿಂದ ಪರಿತಪಿಸಿದ ಘನಮಠರು ಅವುಗಳನ್ನು ಉಳಿಸಿಕೊಳ್ಳಲು ವಚನಕಟ್ಟುಗಳ ಗಂಟನ್ನು ಬಂಡೆಯ ಮೇಲಿಟ್ಟು ಅದರ ಮೇಲೆ ತಾವು ಬೋರಲಾಗಿ ರಾತ್ರಿಯಿಡೀ ಮಲಗಿ ಬಿಡುತ್ತಾರೆ. ಈ ಮೂಲಕ ವಚನಗಳನ್ನು ಸಂರಕ್ಷಿಸುತ್ತಾರೆ. ಈ ಘಟನೆ ಘನಮಠ ಶಿವಯೋಗಿಗಳಲ್ಲಿನ ಪ್ರಭುದೇವರ ಮೇಲಿನ ಅಗಾಧವಾದ ಭಕ್ತಿ ವಚನಗಳ ಮೇಲಿನ ನಿಷ್ಠೆ ಮತ್ತು ಕಾಳಜಿಗಳನ್ನು ಎತ್ತಿತೋರಿಸುತ್ತದೆ. ಘನಮಠ ಶಿವಯೋಗಿಗಳು ಈ ಕ್ಷೇತ್ರಕ್ಕೆ ಭೇಟಿ ನೀಡಿದ ನೆನಪಿಗಾಗಿ ಆ ಸ್ಥಳದಲ್ಲೇ ಪ್ರಭುದೇವರ ಕುರಿತಾಗಿ ಹಾಡನ್ನು ರಚಿಸಿ ಹಾಡುತ್ತಾರೆ.
ಹೀಗೆ ಈಗಿನ ಗೂಗಲ್ಲು ತನ್ನ ಗವಿಯೊಳಗೆ ಅಲ್ಲಮಪ್ರಭು ದೇವರನ್ನು ಅಡಗಿಸಿಕೊಂಡು,ಅದರ ಪ್ರಭಾವದಿಂದ ಅನುಭಾವಿಗಳಾದ ಬೆಂಡೆಬಂ(ಗಂ)ಬಳಿ ಪರಪ್ಪಯ್ಯ,ಕೂಡಲೂರ ಬಸವಲಿಂಗ ಶರಣ ಹಾಗೂ ಘನಮಠ ಶಿವಯೋಗಿಗಳಂಥವರ ನೆಲೆಯಾಗಿರುವದರೊಂದಿಗೆ,ಪ್ರಭುದೇವರ ವೈರಾಗ್ಯ,ಅನುಭಾವ ಹಾಗೂ ಶರಣತ್ವಗಳ ಪರಂಪರೆಯ ತಾಣವಾಗಿರುವದರಿಂದ ನಮ್ಮ ಪರಂಪರೆಯ ಜೀವಂತಿಕೆಗೆ,ಪಾವಿತ್ರ‍್ಯತೆಗೆ ಇಂದಿಗೂ ಸಾಕ್ಷಿಯಾಗಿ ನಮ್ಮೆಲ್ಲರಲ್ಲಿ ಅರಿವಿನ ಮೂಲಕ ಮನುಷ್ಯತ್ವವನ್ನು ಜಾಗರಗೊಳಿಸುತ್ತಿರುವ ಜಾಗೃತ ಸ್ಥಳವಾಗಿರುವದರಿಂದ ನಮ್ಮೆಲ್ಲರ ಅಭಿಮಾನದ,ಭಕ್ತಿಯ ಮತ್ತು ಗೌರವದ ಕ್ಷೇತ್ರವಾಗಿ ಈ ಭಾಗದ ಮಹತ್ತು ಹಾಗೂ ವಿಶೇಷತೆಗೆ ಮೆರಗಿನ ತಾಣವಾಗಿದೆ ಎಂದರೆ ಅತಿಶಯೋಕ್ತಿಯಲ್ಲವೆನಿಸುತ್ತದೆ.
–ಕೆ.ಶಶಿಕಾಂತ, ಲಿಂಗಸುಗುರು