“ಸುದ್ದಿ ಮೂಲ” ದಿಂದ “ಆತ್ಮದ ಮೂಲ” ಹುಡುಕುತ್ತ
ಹೋರಟ ಸಿಂಧನೂರಿನ ಪತ್ರಕರ್ತ “ಶರಣ”
ಸತ್ಯದ ಹುಡುಕಾಟ ಎಂಬುದು ಕೇವಲ ಔಪಚಾರಿಕ ಭಾಷಣವಾದಾಗ ಅದಕ್ಕೆ ಗಾ0ಭಿರ್ಯತೆಯೇ ಇರುವುದಿಲ್ಲ. ಲೌಕಿಕ ಜೀವನದ ಯಾವುದೇ ಕೆಲಸವನ್ನು ಶೃದ್ಧೆಯಿಂದ ಮಾಡುತ್ತಿದ್ದರೆ, ಅಲೌಕಿಕದ ಬಾಗಿಲು ಕೈಬಿಸಿ ಕರೆಯುತ್ತದೆ ಎನ್ನುವ ಕಠೋರ ಸತ್ಯಕ್ಕೆ ಸಾಕ್ಷಿ ನಮ್ಮ ಶರಣು. ಪಿ. ಹಿರೇಮಠ ಎಂಬ “ಪತ್ರಕರ್ತ ಶರಣ”.
ಹೌದು, ಸುಮಾರು ಮೂರು ದಶಕಗಳ ಕಾಲ ರಾಯಚೂರು ಮೂಲದ “ಸುದ್ದಿ ಮೂಲ” ಪತ್ರಿಕೆಯಿಂದ ಹಿಡಿದು, ಇಂದು ಹೆಮ್ಮರವಾಗಿ ಬೆಳೆದು ನಿಂತಿರುವ “ವಿಜಯ ಕರ್ನಾಟಕ” ಪತ್ರಿಕೆಯವರೆಗೂ ತನ್ನ ವರದಿ, ಸಂಶೋಧನೆ, ಚಿಂತನೆ, ಚಾಟಿಏಟುಗಳ ಮೂಲಕ ವ್ಯವಸ್ಥೆಯ ಹೂರಣವನ್ನೇ ಬಯಲು ಮಾಡಿದ ದಿಟ್ಟ.
ಮಾಮೂಲಿ ವರದಿಗಾರನಾಗಿರದೇ, ಸದಾ ಹೊಸತನ, ಕೂತುಹಲಗಳನ್ನೇ ಬೆನ್ನಟ್ಟಿ, ಅವುಗಳಿಗೆ ತನ್ನದೇ ಆದ ಅನನ್ಯ ಅಕ್ಷರಗಳ ಸ್ಪರ್ಶ ನೀಡಿ ಪತ್ರಿಕೆಗಳಿಗೆ ಒಂದು “ಖದರ್” ತಂದು ಕೊಟ್ಟ ಅಪರೂಪದ ಪತ್ರಕರ್ತ.
ಅದು ಹಿಂದಿ ನಟ ಸಂಜಯದತ್ತ ಇರಬಹುದು, ಗದ್ದರ್ ರಂತಹ ನಕ್ಸಲ್ ದಂಡನಾಯಕರ ಸಂದರ್ಶನವೇ ಇರಬಹುದು. ರಾಜಕಾರಣಿ ನಾಯಕರಿಗಂತೂ ನಮ್ಮ ಶರಣು ಸಿಂಹ ಸ್ವಪ್ನ. ಹಾಗೆಯೇ ಅವರ ಒಳ್ಳೆಯತನಕ್ಕೆ ಬೆಟ್ಟದಷ್ಟು ಪ್ರೀತಿ ಕೊಟ್ಟ “ಸಮದರ್ಶಿ” ಸಂಪಾದಕ.
“ವಿಜಯ ಕರ್ನಾಟಕ” ಗಂಗಾವತಿ ಆವೃತ್ತಿಯಲ್ಲಿರುವಾಗ ನಾನು ಹಾಗೂ ಶರಣು ವೃತ್ತಿ ಧರ್ಮದ ಚೌಕಟ್ಟಿನ ಹೊರತಾಗಿಯೂ ತುಂಬಾ ಆತ್ಮೀಯರು. ಅದಕ್ಕೆ ಕಾರಣ, ಆತನಲ್ಲಿರುವ ಸೂಕ್ಷ್ಮ ಸಂವೇದನೆಯ ಮನಸ್ಸು, ಅದಕ್ಕೆ ಪೂರಕವಾಗಿ ನಾನು ಕೊಡುವ ಪ್ರತಿಕ್ರಿಯೆ.
ಇಂದು, ಆ ಭಾಗದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಹಿರಿಯ, ಕಿರಿಯ ಹುಡುಗರೆಲ್ಲ “ಶರಣು” ಎಂಬ “ಸುದ್ದಿ ಮನೆ”ಯ ಅಂಗಳದಲ್ಲಿ ಬೆಳೆದವರೇ.
ಕೊನೆಗೆ, ಶರಣು ಬದಲಾಗಿದ್ದ. ತನ್ನ ಹರಿತವಾದ ಅಕ್ಷರಗಳಿಗೆ ವಿರಾಮ ಕೊಟ್ಟು, ವಿರಾಗಿಯಾಗಿದ್ದ. ಇತ್ತೀಚಿಗೆ ಉತ್ತರ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದ. ನಾಗಾ ಸಾಧುಗಳ ಹತ್ತಿರ ಚರ್ಚೆ ಮಾಡುತ್ತಿದ್ದ. ಎಷ್ಟೋ ಸಾರಿ ನಿರ್ಜನ ಪ್ರದೇಶಗಳಲ್ಲಿ ಒಬ್ಬನೇ ಕುಳಿತು ಧ್ಯಾನಾಸಕ್ತನಾಗುತ್ತಿದ್ದ.
ಈ ಆರು ತಿಂಗಳ ಹಿಂದೆ ಶರಣು ಫೋನ್ ಮಾಡಿದ್ದ, “ಸರ್ ನಾನು ಹುಬ್ಬಳ್ಳಿಗೆ ಬಂದಿದ್ದೇನೆ, ನಿಮ್ಮನ್ನು ನೋಡುವ ಆಸೆ, ಇಲ್ಲಿಯೇ ಅಯೋಧ್ಯ ಹೋಟೆಲ್ ಗೆ ಬನ್ನಿ…. “
ಸಂತೋಷ, ಕುತೂಹಲದಿಂದ ನಾನೂ ಹೊರಟೆ. ಹೋಟೆಲ್ ನಲ್ಲಿ ಕಾಫಿ ಕುಡಿಯುತ್ತ ನಾನು ಕೇಳಿದೆ “ಏನು ಶರಣು… ಇತ್ತೀಚಿಗೆ ನೀನು ತುಂಬಾ ಬದಲಾಗಿದ್ದೀಯಾ…”
ಆಗ ಶರಣುವಿನ ಮುಖದಲ್ಲಿನ ಅವ್ಯಕ್ತ ಕಳೆ, ಅಲೌಕಿಕ ನಗೆಯೇ ಆತನ ಉತ್ತರವಾಗಿತ್ತು. ಮೊನ್ನೆ ತಾನೇ ನನ್ನ ಹುಟ್ಟುಹಬ್ಬಕ್ಕೆ ಎಲ್ಲಾ ನೆನಪುಗಳನ್ನು ಹಂಚಿಕೊಂಡು ಶುಭ ಹಾರೈಸಿದ್ದ.
ವಿಧಿ ಬರಹ ಹೇಗಿದೆ ನೋಡಿ, ಇಂದು ನಾನು ಅದೇ ಶರಣುಗೆ ಶೃದ್ಧಾಂಜಲಿ ಅರ್ಪಿಸಬೇಕಾಗಿದೆ. ಹೌದು, ಶರಣು. ಪಿ. ಹಿರೇಮಠ ನಿಧನರಾದರು.
ಶರಣುಗೆ ತುಂಬಾ ಹತ್ತಿರವಾಗಿದ್ದ ನನ್ನ ಆತ್ಮೀಯ ಗೆಳೆಯ ರಮೇಶ ವಿಠಲಾಪುರ ನನ್ನ ವಾಟ್ಸ್ ಆಪ್ ಗೆ ಮೆಸೇಜ್ ಕಳಿಸಿದಾಗ ನಿಜವಾಗಿಯೂ ಒಂದು ಕ್ಷಣ ಮೌನವಾಗಿಬಿಟ್ಟೆ.
ಸಿಂಧನೂರಿನ ಮಾಧ್ಯಮ ಲೋಕದ “ಸಿಂಧೂರ” ಇನ್ನಿಲ್ಲ.
“ಶರಣು ನಿನಗೆ ಶರಣು….”
–ಅನಿಲ್ ಕುಲಕರ್ಣಿ ಹುಬ್ಬಳ್ಳಿ (ಫೇಸ್ ಬುಕ್ ಬರಹ )