ಶರಣಸಾಹಿತ್ಯದ ಸಿರಿಗೌರಿ
ಉಡುತಡಿ ಗ್ರಾಮ ಬೆಳಕಿನಿಂದ
ಬೆಳಗಿತು ಶರಣೆಯಿಂದ
ಪರಿಶುದ್ಧ ಭಕ್ತಿಯ ದಂಪತಿಗಳಾದ
ಸುಮತಿ ನಿರ್ಮಲಶೆಟ್ಟಿಯಿಂದ
ಓಂಕಾರಸ್ವರೂಪಿಣಿ ಕಲ್ಯಾಣಿಯಾದ
ಅಕ್ಕಮಹಾದೇವಿಯಿಂದ//
ರಾಜ ವೈಭವಭೋಗ ತ್ಯಾಗ ಮಾಡಿದ
ವೀರ ವಿರಾಗಿಣಿ ನೀ
ರಾರಾಜಿಸಿದೆ ಅಂತರಂಗ ಆನಂದದಿ
ಶ್ರೀ ಗಿರಿಯ ಸಿಂಹಿಣಿ
ರಾಜಾಧಿರಾಜ ಮಲ್ಲಿಕಾರ್ಜುನನ
ಕಣ್ಮಣಿ ಜ್ಞಾನ ಖಣಿ ನೀ//
ಉತ್ತುಂಗಶಿಖರವೇರಿ ನೆಲೆನಿಂದ
ಉತ್ಕೃಷ್ಟ ಕವಯಿತ್ರಿ
ಕರುನಾಡಿನ ಶರಣ ಸಾಹಿತ್ಯಸಿರಿಗೌರಿ
ಕನ್ನಡಾಂಬೆಯ ಪುತ್ರಿ
ಶರಣಾಗತ ಭಾವ ಶರಣ ಶರಣೆಯರ
ಸನ್ನಿಧಾನದಿ ಸಿದ್ಧಿ ಧಾತ್ರಿ//
ಅನುಭವದ ನುಡಿಮುತ್ತಿನ ವಚನ
ಸಿಂಚನಗೈದೆ ಅಕ್ಕ
ಅನುಭವಮಂಟಪದಿ ಅಲ್ಲಮರಿಗೆ
ಅಮೃತಧಾರೆ ಎರೆದೆ
ಅಲೌಕಿಕ ಸುಖಕಾಗಿ ಅನಂತದೆಡೆ
ಸಾಗಿ ಕದಳಿ ಕರ್ಪೂರವಾದೆ//
ತ್ರಿಗುಣ ಸುಟ್ಟ ಭಸ್ಮದ ತ್ರಿಪುಂಡ್ರಹಣೆ
ತ್ರಿಪುಟಿ ಮೀರಿ ನಿಂತವಳೆ
ತ್ರಿನೇತ್ರನಿಗಾಗಿ ಕನಸುಕಂಡು ಬಯಸಿ
ನನಸು ಮಾಡಿಕೊಂಡವಳೆ
ತ್ರಿಕಾಲ ಸಂಧ್ಯಾ ಇಷ್ಟಲಿಂಗವನರ್ಚಿಸಿ
ಲಿಂಗ ಸ್ವರೂಪವಾದವಳೆ//
-ಸೌ ಅನ್ನಪೂರ್ಣ ಸು ಸಕ್ರೋಜಿ ಪುಣೆ
8975323059