e-ಸುದ್ದಿ, ಮಸ್ಕಿ
ಕರೊನಾ ಸೋಂಕು ಭಯದ ನಡುವೆಯೂ ಗ್ರಾಮ ಪಂಚಾಯಿತಿ 2 ನೇ ಹಂತದ ಚುನಾವಣೆಗೆ ತಾಲೂಕು ಆಡಳಿತ ಸಿದ್ದತೆ ನಡೆಸಿದೆ. ಮತಗಟ್ಟೆಯಲ್ಲಿ ಜನದಟ್ಟಣೆ ನಿಯಂಣತ್ರಣ, ಏಕಕಾಲಕ್ಕೆ ಜನರ ಪ್ರವೇಶ ತಡೆಗೆ ತಾಲೂಕಿನಲ್ಲಿ ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ತಹಸೀಲ್ದಾರ ಬಲರಾಮ ಕಟ್ಟಿಮನಿ ತಿಳಿಸಿದರು.
ಮಸ್ಕಿ ತಾಲೂಕಿನ 17 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಹಂತ ಡಿ.27ರಂದು ಮತದಾನಕ್ಕೆ ದಿನ ನಿಗದಿ ಮಾಡಲಾಗಿದೆ. ತಾಲೂಕು ಆಡಳಿತ ಎಲ್ಲ ತಯಾರಿಯೂ ನಡೆಸಿದ್ದು, ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿಗಳಿಗೆ ತರಬೇತಿ, ಚುನಾವಣೆ ಕರ್ತವ್ಯದ ಜವಾಬ್ದಾರಿಗಳನ್ನು ವಿವರಿಸಿದೆ. ಆದರೆ ಇದರ ಜತೆಗೆ ಕರೊನಾ ಸೋಂಕು ಹರಡುವಿಕೆ ತಡೆಗೂ ಹೆಜ್ಜೆ ಇಟ್ಟಿದ್ದು, ಜನರ ನಿಯಂತ್ರಣಕ್ಕಾಗಿ ಸಾವಿರಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ವಿಭಜಿಸಿ ಪ್ರತ್ಯೇಕ ಮತಗಟ್ಟೆ ಆರಂಭಿಸಲಾಗಿದೆ. ಒಂದೇ ಮತಗಟ್ಟೆಗೆ ಹೆಚ್ಚು ಜನರನ್ನು ಸೇರಿಸುವ ಬದಲು ಪರ್ಯಾಯವಾಗಿ ಈ ಮಾರ್ಗ ಹುಡುಕಲಾಗಿದೆ.
54 ಪರ್ಯಾಯ: ತಾಲೂಕಿನಲ್ಲಿ ಒಟ್ಟು 1,29,896 ಮತದಾರರಿದ್ದಾರೆ. ಒಟ್ಟು 281 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 668 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೀಗಾಗಿ ಈ ಎಲ್ಲರ ಆಯ್ಕೆಗಾಗಿ 17 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 140 ಮೂಲ ಮತಗಟ್ಟೆಗಳಿವೆ. ಇದರಲ್ಲಿ 106 ಸಾಮಾನ್ಯ, 60 ಸೂಕ್ಷ್ಮ, 28 ಅತಿಸೂಕ್ಷ್ಮ ಮತಗಟ್ಟೆಗಳಾಗಿವೆ.
ಇದಲ್ಲದೇ ಕೆಲವು ಗ್ರಾಮದ ಒಂದೇ ಬೂತ್‍ಗಳಲ್ಲಿ ಸಾವಿರಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಪ್ರತ್ಯೇಕ ಪಟ್ಟಿ ಮಾಡಲಾಗಿದೆ. ಇಂತಹ ಮತಗಟ್ಟೆಗಳಲ್ಲಿ ಹೆಚ್ಚುವರಿಯಾಗಿ /ಎ ಮತಗಟ್ಟೆ ಆರಂಭಿಸಿದೆ. ಇಂತಹ ಹೆಚ್ಚುವರಿ ಮತಗಟ್ಟೆಗಳನ್ನು ತಾಲೂಕಿನ 54 ಕಡೆಗಳಲ್ಲಿ ಸ್ಥಾಪಿಸಲಾಗಿದೆ. ಇದರಿಂದ ಮತಗಟ್ಟೆಗಳ ಸಂಖ್ಯೆ 194ಕ್ಕೆ ಹೆಚ್ಚಿದಂತಾಗಿದೆ.
——————————————–
ಮತದಾರರು ಮತಗಟ್ಟೆ ಮತ ಚಲಾಯಿಸಲು ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ದೈಹಿಕ ಅಂತರ ಕಪಾಡಿಕೊಂಡು ಮತ ಚಲಾಯಿಸಬೇಕು. ಮತಗಟ್ಟೆಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ. ಕರೊನಾ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಮುಂಜಾಗ್ರತೆಯಿಂದ ಮತ ಚಲಾಯಿಸಿರಿ.
-ಬಲರಾಮ ಕಟ್ಟಿಮನಿ, ತಹಸೀಲ್ದಾರ ಮಸ್ಕಿ