ನೋವುಂಡು ನಂಜುಂಡ
ನೋವುಂಡು ನಂಜುಂಡನಾಗಿ
ಕೆಸರಿನಲ್ಲೊಂದು ಕಮಲವಾದರೂ. ವಿಷ್ಣುನಾಭಿಯನ್ನು ಸೇರದೆ
ಸರ್ವ ಸಾಮಾನ್ಯರ ಬದುಕಿಗೆ
ನೆರಳಾಗಿ ನಿಂತಾತ ಬಾಬಾ ಸಾಹೇಬ
ಹಲವು ತತ್ವಗಳ ಸಾರ ತಿಳಿದರೂ
ಗೊಡ್ಡು ಜ್ಞಾನಿಯಾಗಲಿಲ್ಲ
ವಾಸ್ತವದ ಪಾತಳಿಯ ಮೇಲೆ
ಬದುಕನು ರೂಪಿಸಿದಾತ ಬಾಬಾ ಸಾಹೇಬ
ವಿಚಾರಕ್ಕಿಂತ ಆಚಾರಕ್ಕೆ ಅವಕಾಶ
ಚರಿತ್ರೆಗಿಂತ ಚಾರಿತ್ರಕೆ ಪ್ರಾಶಸ್ತ್ಯ
ನುಡಿಗೆ ಮನ್ನಣೆ ನೀಡಿದಾತ ಬಾಬಾ ಸಾಹೇಬ
ಬಸವಳಿದವರ ಬದುಕಿಗೆ ಆಸರೆ
ಧ್ವನಿ ಇಲ್ಲದವರ ಗಂಟಲಿಗೆ ಉಸಿರೆ
ಹಸಿವೆಗೆ ದಾರಿ ತೋರಿಸಿದ ಬಾಬಾ ಸಾಹೇಬ
ಬುದ್ಧ ಗುರುವಿನ ಅರಿವು
ಬಸವ ಗುರುವಿನ ಸಮತೆ
ಗುರು ಅಂಬೇಡಕರರ ಬೆಳಕಾದ ಬಾಬಾಸಾಹೇಬ
ಇಂದಿಗೂ ಕೆಲವರ ಪಾಲಿಗೆ ಬಿಸಿ ತುಪ್ಪ
ಮಾನವತೆ ಅರಿತವರಿಗೆ ನಿನೇ ಅಪ್ಪ
–ಡಾ. ನಾಹೀರಾ ಕುಷ್ಟಗಿ