“ಜಗತ್ತಿನ ಅತೀ ಶ್ರೇಷ್ಠ ಕ್ರಿಶ್ಚಿಯನ್ ಎಂದೂ ಕ್ರೈಸ್ತನಾಗಲಿಲ್ಲ ಎಂಬುದು ವಿಪರ್ಯಾಸ. ಆದರೂ ನಾನು ಹೇಳಿದ್ದು ಅನಿವಾರ್ಯ ಸತ್ಯ” ಅಮೇರಿಕನ್ ಚರ್ಚಿನ ಪಾದ್ರಿಯೊಬ್ಬರಿಗೆ ನೇರವಾಗಿ ಉತ್ತರಿಸಿದ್ದರು ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್.
ಫಿಲ್ಡೆಲ್ಫಿಯಾ ಎಂಬಲ್ಲಿ ಫೆಲೋಷಿಪ್ ಹೌಸ್ ನಲ್ಲಿ ಡಾ|| ಮಾಡೇಚಿ ಜಾನ್ಸನ್ ಅವರು ಮಾತನಾಡಿದ್ದನ್ನು ಕೇಳಿದ ನಂತರ ಮಾರ್ಟಿನ್ ಲೂಥರ್ ಕಿಂಗ್ ಗಾಂಧೀಜಿಯ ಸತ್ಯಾಗ್ರಹಕ್ಕೆ ಮನಸೋತರು. ಈ ಭಾಷಣ ಎಷ್ಟು ಗಾಢ, ವಿದ್ಯುತ್ ಸಂಚಾರ ಮಾಡಿಸುವಂತದ್ದು ಎನಿಸಿತು ಎಂದರೆ, ಕಿಂಗ್ ಅವರು ಸಭೆಯಿಂದ ಹೊರಬಂದು ಗಾಂಧೀಜಿಯ ಜೀವನ ಕಾರ್ಯಗಳ ಬಗ್ಗೆ ಸುಮಾರು ಅರ್ಧ ಡಜನ್ ಪುಸ್ತಕಗಳನ್ನು ಕೊಂಡರು. ಗಾಂಧೀಜಿಯವರ ಬಗ್ಗೆ ತಿಳಿಯುವ ಕುತೂಹಲ ತೀವ್ರವಾಗಿ ೧೯೫೯ ರಲ್ಲಿ ಭಾರತಕ್ಕೆ ಬಂದರು. ಗಾಂಧೀಜಿಯ ಬಗ್ಗೆ ತಿಳಿದುಕೊಂಡರು.
ಭಾರತದಿಂದ ವಾಪಸ್ಸು ಹೋದ ಮೇಲೆ ಅವರು ಬರೆದರು “ದಮನಕ್ಕೆ ಒಳಗಾದ ಜನ ನ್ಯಾಯಕ್ಕಾಗಿ, ಮಾನವೀಯ ಘನತೆಗಾಗಿ ಹೋರಾಡಬೇಕಾದರೆ, ಅಹಿಂಸಾತ್ಮಕ ಪ್ರತಿರೋಧವೇ ಅತ್ಯಂತ ಶಕ್ತಿಯುತ ಅಸ್ತ್ರ ಎಂಬುದನ್ನು ಹಿಂದೆಂದಿಗಿಂತಲೂ ಮನಗಂಡು ನಾನು ಭಾರತದಿಂದ ಹೊರಟೆ. ನಿಜವಾದ ರೀತಿಯಲ್ಲಿ ಮಹಾತ್ಮ ಗಾಂಧಿಯವರು ಜಗತ್ತಿನ ನೈತಿಕ ರಚನೆಯಲ್ಲಿ ಅಂತರ್ಗತವಾಗಿರುವ ಕೆಲವು ಜಾಗತಿಕ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ಈ ತತ್ವಗಳು ಗುರುತ್ವಾಕರ್ಷಣೆಯ ನಿಯಮದಂತೆ ತಪ್ಪಿಸಿಕೊಳ್ಳಲಾರದಂಥವು.”
ಗಾಂಧಿ ಮಾರ್ಗದಲ್ಲಿ ಹೋರಾಟ ನಿರತರಾದ ಕಿಂಗ್ ಯಶ ಕಂಡರು. “ಏಸುಕ್ರಿಸ್ತನ ಪ್ರೇಮನೀತಿಯನ್ನು ಕೇವಲ ವ್ಯಕ್ತಿಗಳ ನಡುವೆ ಇದ್ದ ಆ ನೀತಿಯನ್ನು ವಿಸ್ತರಿಸಿ, ಭಾರಿ ಪ್ರಮಾಣದ ಶಕ್ತಿಯುತ ಪರಿಣಾಮಕಾರಿ ಸಾಮಾಜಿಕ ಶಕ್ತಿಯನ್ನಾಗಿ ಮಾನವಕುಲದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಾಡಿದ್ದು ಮಹಾತ್ಮ ಗಾಂಧಿ. ಮಾನವ ಕುಲ ಉಳಿಯಬೇಕಾದರೆ ಗಾಂಧಿ ಅನಿವಾರ್ಯ, ಅವರನ್ನು ಅಲಕ್ಷ್ಯ ಮಾಡಿದರೆ ನಮಗೇ ಹಾನಿ. ನನ್ನ ಜೀವನ ರೂಪಿಸಿದ್ದು ಇಬ್ಬರು, ಒಬ್ಬ ಜೀಸಸ್ ಕ್ರೈಸ್ತ ಇನ್ನೊಬ್ಬ ಮಹಾತ್ಮ ಗಾಂಧಿ” ಎಂದು ಕಿಂಗ್ ಘೋಷಿಸಿದಾಗ ಅಮೇರಿಕಾದ ಚರ್ಚಿನ ವ್ಯಕ್ತಿಯೊಬ್ಬ ಇದನ್ನು ಟೀಕಿಸಿದನು. ಆಗ ಕಿಂಗ್ “ಜಗತ್ತಿನ ಅತೀ ಶ್ರೇಷ್ಠ ಕ್ರಿಶ್ಚಿಯನ್ ಎಂದೂ ಕ್ರೈಸ್ತನಾಗಲಿಲ್ಲ ಎಂಬುದು ವಿಪರ್ಯಾಸ, ಆದರೂ ಅನಿವಾರ್ಯ ಸತ್ಯ. ಗಾಂಧೀಜಿ ಕ್ರೈಸ್ತನ ಸಾಲಿಗೆ ನಿಲ್ಲುವವರು” ಎಂದು ಕಿಂಗ್ ಉತ್ತರಿಸಿದರು..
~ರವಿಚಂದ್ರ ಜಂಗಣ್ಣವರ್.