ಮಸ್ಕಿ ಗುರು ಮಂದಾರ ದ್ವನಿ ಸುರುಳಿ ಬಿಡುಗಡೆ
ವೀರಶೈವ ಲಿಂಗಾಯತ ಸಮಾಜದಿಂದ ಜಗದ್ಗುರು ರೇಣುಕಾಚಾರ್ಯ ಮತ್ತು ಬಸವ ಜಯಂತಿ ಆಚರಣೆ
e- ಸುದ್ದಿ ಮಸ್ಕಿ
ಪಟ್ಟಣದಲ್ಲಿ ಮೇ ೨ ರಂದು ಶುಕ್ರವಾರ ಜಗದ್ಗುರು ರೇಣುಕಾಚಾರ್ಯ ಮತ್ತು ಬಸವ ಜಯಂತಿ ಆಚರಣೆ, ಪಂಪಯ್ಯ ಸ್ವಾಮಿ ಅಂತರಗಂಗಿ ರಚಿಸಿದ ಮಸ್ಕಿ ಗುರು ಮಂದಾರ ದ್ವನಿ ಸುರುಳಿ ಬಿಡುಗಡೆ ಹಾಗೂ ಧಾರ್ಮಿಕ ಸಭೆಯನ್ನು ವೀರಶೈವ ಲಿಂಗಾಯತ ಸಮಾಜದಿಂದ ಆಯೋಜಿಸಲಾಗಿದೆ ಎಂದು ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ರವಿವಾರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಡಿದ ಅವರು ಮೇ ೨ ರಂದು ಸಂಜೆ ೬ ಗಂಟೆಗೆ ಜನಜಾಗೃತಿ ಧರ್ಮಸಭೆ ನಡೆಯಲಿದೆ. ಧರ್ಮ ಸಭೆಯ ದಿವ್ಯ ಸಾನ್ನಿಧ್ಯವನ್ನು ಶ್ರೀಮದ್ ಜ್ಞಾನ ಸಿಂಹಾಸನಾಧೀಶ್ವರರಾದ ಶ್ರೀ ೧೦೦೮ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಶ್ರೀ ಕಾಶಿಪೀಠ ವಾರಣಾಸಿ ವಹಿಸುವರು.
ಸಂತೆಕೆಲ್ಲೂರಿನ ಘನಮಠೇಶ್ವರ ಮಠದ ಶ್ರೀ ಗುರುಬಸವ ಸ್ವಾಮೀಜಿ, ಬಳಗಾನೂರು ಮರಿಸ್ವಾಮಿ ಮಠದ ಶ್ರೀಸಿದ್ಧಬಸವ ಸ್ವಾಮೀಜಿ, ಅಂಕುಶದೊಡ್ಡಿಯ ಶ್ರೀವಾಮದೇವ ಶಿವಾಚಾರ್ಯರು, ವೆಂಕಟಗಿರಿ ಕ್ಯಾಂಪಿನ ಶ್ರೀ ಸಿದ್ಧರಾಮ ಶರಣರು, ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ, ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಆಗಮಿಸಲಿದ್ದಾರೆ.
ಬೆಳಿಗ್ಗೆ ಪ್ರಾತಃಕಾಲ ೫-೩೦ ಕ್ಕೆ ಕತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಧ್ವಜಾರೋಹಣ ನೆರವೇರಲಿದೆ. ೬-೩೦ ಕ್ಕೆ ಜಂಗಮ ವಟುಗಳ ಅಯ್ಯಾಚಾರ ಮತ್ತು ಶಿವಭಕ್ತರಿಗೆ ಲಿಂಗದೀಕ್ಷೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಡಾ.ಪಂಚಾಕ್ಷರಯ್ಯಸ್ವಾಮಿ, ಡಾ.ಮಲ್ಲಿಕಾರ್ಜುನ ಇತ್ಲಿ, ಅಪ್ಪಾಜಿಗೌಡ ಪಾಟೀಲ, ಕೊಮಾರಪ್ಪ ಕಮತರ, ಡಾ.ಪಂಪಣ್ಣ ಇದ್ದರು.