ಪ್ರೇಮ ಕಾಶ್ಮೀರದಲ್ಲಿ ಪ್ರೇಮದ ಹತ್ಯೆ. 

ಪ್ರೇಮ ಕಾಶ್ಮೀರದಲ್ಲಿ ಪ್ರೇಮದ ಹತ್ಯೆ. 

 

ಮಕ್ಕಳು ಮಕ್ಕಳು ಅಂತ ಕಂಡ ದೇವರಿಗೆ
ಕೈಮುಗಿದು ಹರಕೆ ಹೊತ್ತು ಹೆರುವರು
ಮಕ್ಕಳಿಗಾಗಿ ಜೀವನ ಬತ್ತಿಯಂತೆ ಸುಡುವರು
ಬೇಡಿದ್ದನ್ನೆಲ್ಲಾ ಕೊಡಿಸಿ ಆಶೆಯ ಪೂರೈಸುವರು.

ವಿದ್ಯೆ ಬುದ್ಧಿ ಕಲಿಸಿ ಕಷ್ಟ ಸೋಕದಂತೆ  ಬೆಳೆಸಿ
ಅಮೃತಧಾರೆಯ ಹರಿಸಿ ಕಂಗಳ ಕಾವಲಿರಿಸಿ
ಕರುಳ ಬಳ್ಳಿಗೆ ದುಷ್ಟ ದೃಷ್ಟಿ ತಾಗದಂತೆ ಹಾರೈಸಿ
ಬೇಗ ಮನೆಗೆ ಬರದಿರೆ ಅದೆಷ್ಟೋ ಒತ್ತಡ ಸಹಿಸಿ.

ಮಕ್ಕಳಿಗೆ ಆಸ್ತಿ ಮಾಡದೆ ಅವರನ್ನೇ ಆಸ್ತಿ ಮಾಡಿ
ರಂಗುರಂಗಿನ  ಕನಸುಗಳಿಗೆ ರೆಕ್ಕೆ ಪುಕ್ಕ ನೀಡಿ
ಮನದ ಭಯ ಆತಂಕಗಳನು ಹೊರದೂಡಿ
ಭದ್ರ ಭವಿಷ್ಯವ ಕಟ್ಟಿಕೊಟ್ಟು ದೇವರ ಬೇಡಿ.

ಏನೆಲ್ಲವ ಮಾಡಿ ಹರಿಸಿ ಹಾರೈಸಿ ಕಳಿಸಿದರು
ನಗುನಗುತ ಕೈಬೀಸಿ ಬೀಳ್ಕೊಟ್ಟು ಹೋದವರು
ಸ್ವರ್ಗದಿಂದ ಇಳಿದು ಬಂದ ರತಿ ಮನ್ಮಥರಿವರು
ಹಸೆ ಮನೆಯ ಮೈಬಣ್ಣದ ಕಂಪು ಆರದವರು

ಕನಸುಗಳ ಬಣ್ಣವನ್ನು ಛಿದ್ರ ಮಾಡಿದಿರಲ್ಲಾ
ಸುಂದರ ಜೋಡಿ ದಾಂಪತ್ಯಕ್ಕೆ ಕೊಳ್ಳಿ ಇಟ್ಟಿರಲ್ಲ
ಅದ್ಯಾವ ದೇವರು ಕೂಡ ನಿಮ್ಮನ್ನು ಕ್ಷಮಿಸಲ್ಲಾ
ಪ್ರೇಮದ ನಾಡಿನಲ್ಲಿ ಪ್ರೇಮದ. ಹತ್ಯೆಯಾಯಿತಲ್ಲ

ಒಲವ ಹಾಡಿನಲ್ಲಿ ಬರ ಸಿಡಿಲು ಬಡಿಯಿತು
ಸ್ವರ್ಗದ ಬಾಗಿಲಲ್ಲಿ ರಕ್ತದ ಕೋಡಿ ಹರಿಯಿತು
ನಿಸರ್ಗದ ಚೆಲುವಿನಲ್ಲಿ ಗುಂಡಿನ ಮಳೆ ಸುರಿಯಿತು
ಮರಳಿ ಬಂದಾರೆಂದು ಕಾಯ್ದ ಗುಂಡಿಗೆ ಒಡೆಯಿತು

ಮನುಷ್ಯರೂಪದ ರಾಕ್ಷಸರಿಗೆ ಕರುಣೆ ಇಲ್ಲ
ಅಮಾನುಷ ಹೇಡಿತನ ಕೃತ್ಯಕ್ಕೆ ಸಹನೆ ಬೇಕಿಲ್ಲ
ಶತಮಾನಗಳ ಸಂಚಿಗೆ ಕೊನೆ ಹಾಡಲೇ ಬೇಕಲ್ಲ
ಮೇಣದ ಬತ್ತಿಗಳ ಮೌನ ಮೆರವಣಿಗೆ ಸಾಕಲ್ಲ.

 

ಜಯಶ್ರೀ ಭ. ಭಂಡಾರಿ 
ಬಾದಾಮಿ.

Don`t copy text!