ಜೋಳಿಗೆಯ ಸಂತ
ಎಂದೂ ಸವೆಯದ
ಹಾದಿಯ ನಡೆದರು
ಸವದಿಯ ಶ್ರೀ ಮಹಾಂತರು
ಚಿತ್ತವೆಳಸದೇ ಚಿತ್ತರಗಿಗೊಲಿದರು
ಚಿತ್ತ ಜಾರಿಯ ಮಹಿಮರು.
ಆರು-ಮೂರನು
ಸುಟ್ಟು ಅಳಿದು
ಆರು ಸ್ಥಲಕೆ ಸಂದರು
ಕಾವಿ ಹೊದ್ದರು
ಭವವ ಗೆದ್ದರು
ಲಿಂಗ ಕಳೆಯ ಸಮೃದ್ಧರು.
ವೀರ ವಿರತರು
ಸುವಿಚಾರ ಚರಿತರು
ವಿಜಯ ಮಹಾಂತಗೆ ಪ್ರಿಯರು
ವಚನ ಧ್ಯಾನವು
ಶರಣ ಸೇವೆಯು
ಬಸವ ರೂಪವ ಮೆರೆದರು.
ಅನ್ನ-ಅರಿವೆ ನರರಿಗಿರುವವು
ಮಣ್ಣು ಮರಕೆ ಸಲ್ಲವು
ಹೆಣ್ಣು ಗಂಡು ಅನ್ಯವಲ್ಲ
ಎರಡೂ ಲಿಂಗದ ರೂಪವು
ಕಣ್ಣ ತುಂಬ ಲಿಂಗ ರೂಪ
ಕಿವಿಯ ತುಂಬಿತು ವಚನ ರಿಂಗಣ
ಬಾಯಿ ತುಂಬ ಬಸವ ಬೋಧೆಯು
ಕಲ್ಯಾಣಕೆ ನಡೆದನೀ ಜಂಗಮ.
ಕೈಯಲ್ಹಿಡಿದರು ಧರ್ಮ ದಂಡವ
ಲಿಂಗ ಕರದಲಿ ಜೋಳಿಗೆ
ಬಾಳ ಜೊಳ್ಳನು ಇದರೊಳ್ಹಾಕಿರಿ
ನಿತ್ಯ ಕಾಣಲಿ ಜಗದ ಏಳಿಗೆ
ಕಂತೆ ಭಿಕ್ಷೆಯೇ
ಬಸವ ಭೋಜ್ಯವು
ಕರದ ಲಿಂಗಕೂ ನೈವೇದ್ಯವು
ಆನೆ ಬಯಸದ ಸಿರಿಗೆ ಎಳಸದ
ಶರಣ ಸೇವೆಯ ಭೃತ್ಯರು…
ಬಸವ ರತ್ನವು ನೆಲದ ಭಾಗ್ಯವು
ನಿರುತ ವಚನದ ವ್ಯಸನಿಯು
ಬೆಂಕಿ ಮಳೆಗೆ ಮೈಯನೊಡ್ಡಿಯೂ
ಬೆಳಕನಿತ್ತ ಪರಮ ಯೋಗಿಯು…
ಸಂಗವಳಿದ ನಿಸ್ಸಂಗ ದೇಹಿಯು
ಲಿಂಗ ನಿಲುವಿನ ಸಂತರು
ಕಲ್ಯಾಣವಾಯಿತು ಜಗವು ಬೆಳಗಿತು
ಜೋಳಿಗೆಯ ತರಲು ಮಹಾಂತರು..
– ಕೆ.ಶಶಿಕಾಂತ.