ಕರುಣೆ ತೋರಮ್ಮ ವರಮಹಾಲಕ್ಷ್ಮಿ
ವಿಧವಿಧ ಸುವಾಸಿತ ಹೂಗಳ ತಂದು
ಚಂದನ ಫಲಗಳಲಿ ಅಲಂಕರಿಸುತ
ಅರಿಶಿನ ಕುಂಕುಮ ಕರದಲ್ಲಿ ಪಿಡಿದೆತ್ತಿ
ರಂಗವಲ್ಲಿ ಹೊಯ್ದು ನಮಿಸುವೆವುತಾಯೆ
ಶ್ರಾವಣ ಮಾಸದಿ ಮನೆಗೆ ಬರುವೆಯಮ್ಮ
ಶುಕ್ರವಾರ ಸುಮಂಗಲೆಯರು ಮಡಿಯಲಿ
ರೇಷಿಮೆಯ ದುಕುಲ ಹೊಳೆವ ನತ್ತ ನಿಡಿಸಿ
ಕಾಲುಂಗುರ ಕೆಂಪಿನ ಬೆಂಡೋಲೆ ತೊಡಿಸಿ
ತಾಮ್ರದ ಕಲಸವನ್ನು ಮಂಟಪದಿ ಸಿಂಗರಿಸುತ
ವರಮಹಾಲಕ್ಷ್ಮಿ ವರಗಳ ನೀಡೆಂದು ಬೇಡುವೆವು
ಪಾಯಸ ಮೃಷ್ಟಾನ್ನ ನೈವೇದ್ಯ ಅರ್ಪಿಸುವೆಮ್ಮ
ಶುಕ್ರವಾರ ಸುಗುಣೆಯರು ಭಕ್ತಿಯಲಿ ಹಾಡುವರು
ದೀಪ ದೂಪದಲಿ ಕಂಗೊಳಿಸಿ ನಲಿಯುವವಳೆ
ಬಾಳೆ ಮಾವಿನ ತೋರಣಗಳಲಿ ಮಿಂಚುವೆಯಮ್ಮ
ಮುತ್ತೈದೆಯರಿಗೆಲ್ಲಾ ಕರೆದು ಬಾಗಿನ ನೀಡುವೆವು
ಬಾಗುತ ತೂಗುತ ಮುತ್ತಿನಾರತಿಯ ಎತ್ತುವೆವಮ್ಮ
ವರ್ಷಕ್ಕೊಮ್ಮೆ ಬರುವ ಅಷ್ಟೈಶ್ವರ್ಯದ ಲಕುಮಿ
ಮುತ್ತು ರತ್ನ ವೈಢೂರ್ಯದ ರಮಣನ ಅರಸಿಯೆ
ಸಂಪತ್ತು ದಂಪತ್ತು ಹೆಚ್ಚಿಸಿ ಮಕ್ಕಳನು ಕಾಯಮ್ಮ
ಆಪತ್ತನ್ನು ತೊಡೆದು ಅನುಗಾಲ ದಯೆ ತೋರಮ್ಮ.
–ಜಯಶ್ರೀ.ಭ.ಭಂಡಾರಿ.
ಬಾದಾಮಿ