ಲಿಂಗಮ್ಮ
12 ನೇ ಶತಮಾನದ ಶ್ರೇಷ್ಠ ಶರಣರಾದ ಅಪ್ಪಣ್ಣ ಅವರ ಪತ್ನಿಯಾದ ಲಿಂಗಮ್ಮ ಅವರು. ಹಡಪ ಎನ್ನುವುದಕ್ಕೆ ಎರಡು ನಾನಾರ್ಥಗಳಿವೆ .ಒಂದು ಬಸವಣ್ಣವ ಮಹಾಮನೆಯಲ್ಲಿ ವಿಳ್ಯವನ್ನು ವಿತರಿಸುವ ಕಾಯಕ ಮತ್ತೊಂದು ಕ್ಷೌರಿಕ ಕಾಯಕ .
ಲಿಂಗಮ್ಮನವರು ಬರೆದ ಒಟ್ಟು 114 ವಚನಗಳು ನಮಗೆ ಸಿಕ್ಕಿವೆ.
ವಚನಗಳ ಅಂಕಿತನಾಮ ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ .
ಲಿಂಗಮ್ಮ ಳನ್ನು ಸಾಹಿತ್ಯಕಾರರು ಪುಣ್ಯ ಸ್ತ್ರೀ ಎಂದು ನಮೂದಿಸಿರುವುದು ಕಂಡು ಬಂದಿದೆ .
ಯಾವ ಸ್ತ್ರೀ ಆದರೂ ಕೂಡಾ ಒಂದು ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡು.ಸಾಂಸ್ಕೃತಿಕವಾಗಿ , ಉತ್ತಮ ಸಂಸ್ಕಾರಯುತ ಬದುಕಿಗೆ ಹೆಚ್ಚಿನ ಗೌರವ ಮರ್ಯಾದೆ ಇರುವುದು .
ಯಾವ ವ್ಯಕ್ತಿಗಳಾದರೂ ಕೂಡಾ ಸಂಸ್ಕೃತಿ ಮತ್ತು ಸಂಸ್ಕಾರದ ನಡೆ ಇಲ್ಲದೆ ತಿರುಗುವ ವ್ಯಕ್ತಿಗಳು , ಸಮಾಜದಲ್ಲಿ ಇದ್ದು ಸತ್ತಂತೆ.
ಲಿಂಗಮ್ಮ ತಮ್ಮ ಬದುಕಿನಲ್ಲಿ ಉತ್ತಮ ನಡೆ ನುಡಿಗಳನ್ನು ಕಂಡು ತನ್ನ ಪತಿಯ ಹೆಸರನ್ನೇ ಅಂಕಿತವನ್ನು ಇಟ್ಟು ಕೊಂಡು ವಚನಗಳನ್ನು ಬರೆದಿರುವುದು ಕಂಡು ಬಂದಿದೆ.
ಇವರ ಒಂದು ವಚನವನ್ನು ಅನುಭಾವದ ಹಿನ್ನೆಲೆಯಲ್ಲಿ ಗಮನಿಸಲಾಗಿ , ಸಮಾಜದಲ್ಲಿ ಜಂಬ ಕೊಚ್ಚಿಕೊಂಡು ನಡೆಯುವ ನಾಗರಿಕ ಸಮಾಜಕ್ಕೆ ಒಂದು ಉತ್ತಮ ಪಾಠವನ್ನೇ ಕಲಿಸಿದ ಲಿಂಗಮ್ಮಳ ವಚನಗಳನ್ನು ನಾವು ಮೆಚ್ಚಲೇ ಬೇಕು.
ಕಾಮವಿಲ್ಲ ಕ್ರೋಧವಿಲ್ಲ ಲೋಭವಿಲ್ಲ
ಮೋಹವಿಲ್ಲ ಮದವಿಲ್ಲ
ಮತ್ಸರವಿಲ್ಲ
ಎಂಬ ಅಣ್ಣಗಳಿರಾ ನೀವು ಕೇಳಿರೋ ಹೇಳಿಹೆನು
ಕಾಮವಿಲ್ಲದವನಿಗೆ ಕಳವಳವುಂಟೆ
ಕ್ರೋಧವಿಲ್ಲದವಂಗೆ ರೋಷವುಂಟೆ
ಲೋಭವಿಲ್ಲದವಂಗೆ ಆಸೆಯುಂಟೆ
ಮೋಹವಿಲ್ಲದವಂಗೆ ಪಾಶವುಂಟೆ
ಮದವಿಲ್ಲದವಂಗೆ ತಾಮಸವುಂಟೆ
ಮತ್ಸರವಿಲ್ಲದವನು ಮನದಲ್ಲಿ ಮತ್ತೊಂದ ನೆನೆವನೆ
ಇವು ಇಲ್ಲವೆಂದು ಮನವ ಕದ್ದು ನುಡಿವ
ಅಬದ್ದರ ಮಾತ ಮೆಚ್ಚುವನೆ
ನಮ್ಮ ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ
ಈ ದೈವ ಸೃಷ್ಟಿಯ ನೆಲೆಯಲ್ಲಿ ಬದುಕುವ ಚರಾಚರ ಜೀವ ರಾಶಿಗಳಲ್ಲಿ ಅರಿಷಡ್ವರ್ಗಗಳು ಇದ್ದೆ ಇವೆ .ಈ ಅರಿಷಡ್ವರ್ಗಗಳಾದ .ಕಾಮ ಕ್ರೋಧ ಲೋಭ ,ಮೋಹ,ಮದ,ಮತ್ಸರಗಳನ್ನು ನಾವು ಗೆದ್ದು ನಡೆಯಬೇಕು ಅಷ್ಟೆ.
ಕಾಮವಿಲ್ಲದ ವ್ಯಕ್ತಿ ಇಲ್ಲ . ಕ್ರೋಧ ಇಲ್ಲದ ಮನುಷ್ಯ ನಿಲ್ಲ, ಲೋಭವಿಲ್ಲದ ರಾಜನಿಲ್ಲ,ಮದವಿಲ್ಲದ ಮಾನವನಿಲ್ಲ,ಹಾಗೇ ಮತ್ಸರವಿಲ್ಲದ ಮನುಷ್ಯ ನಿಲ್ಲ. ಇವೆಲ್ಲವುಗಳು ಮನುಷ್ಯನಿಗೆ ಇದ್ದೆ ಇವೆ .ಆದರೆ ಅವುಗಳು ಅತಿಯಾದರೆ ಅನಾಹುತಕ್ಕೆ ದಾರಿ ಮಾಡಿಕೊಟ್ಟಂತೆ ಎನ್ನುವರು ಲಿಂಗಮ್ಮ.
ಕಾಮ :-ಕಂಡದ್ದನ್ನು ಬಯಸುವುದು
ಕ್ರೋಧ;- ಬಯಸಿದ್ದು ಸಿಗದೇ ಇದ್ದಾಗ ಉಂಟಾಗುವುದೇ ಕ್ರೋಧ
ಲೋಭ :- ದೊರೆತರೂ ಇನ್ನಷ್ಟು ಬೇಕೆಂಬುದೇ ಲೋಭ
ಮೋಹ :- ಇನ್ನಷ್ಟು ದೊರೆತಾಗ ಕೈಬಿಟ್ಟು ಹೋಗಬಾರದೆಂಬುದೇ ಮೋಹ.
ಮದ :- ಕೈ ಬಿಟ್ಟು ಹೋಗದೇ ತನ್ನಲ್ಲಿಯೇ ಉಳಿದಾಗ ತನ್ನ ಬಳಿ ಮಾತ್ರ ಇದೆ ಎಂಬ ಜಂಬವೇ ಮದ .
ಮತ್ಸರ:- ತನ್ನಲ್ಲಿರುವುದು ಬೇರೊಬ್ಬನಲ್ಲಿ ಇದೆ ಎಂದು ತಿಳಿದು ಬಂದಾಗ ಉಂಟಾಗುವುದೇ ಮತ್ಸರ
ಲಿಂಗ, ಜಂಗಮ ,ಗುರು ಸ್ವರೂಪಿ ಗಳು . ಪೀಠಾಧಿಪತಿಗಳು , ಅರಿಷಡ್ವರ್ಗಗಳಿಂದ ದೂರವಿದ್ದು . ಮಹಾತ್ಮರಾಗಿ .ಸಮಾಜದಲ್ಲಿ ದೇವ ಪುರುಷರಾಗಿ ಸಂಚರಿಸಿ , ತಮ್ಮ ನಡೆ ಮತ್ತು ನುಡಿಗಳಿಂದ ಜನರ ಮನವನ್ನು ತಿದ್ದಿ, ತಮ್ಮ ಅನುಭಾವದ ಅಮೃತದ ಹಿತವಚನಗಳನ್ನು, ತಮ್ಮ ಜಿಹ್ವೆಯೊಳಗೆ ಒಂದಾಗಿಸಿಕೊಂಡು ನಡೆದವರು .ಅವುಗಳನ್ನೇ ಲಿಂಗಮ್ಮ ಅವರು ತಮ್ಮ ವಚನಗಳಲ್ಲಿ ಹೇಳಿದ್ದಾರೆ .
ಶರಣರು ಸನ್ಯಾಸಿಗಳಲ್ಲ ಸಂಸಾರದಲ್ಲಿ ಇದ್ದುಕೊಂಡೇ ಸಂಸ್ಕೃತಿಯನ್ನು ಬೆಳೆಸಿದವರು . ಸನ್ಮಾರ್ಗದಲ್ಲಿ ನಡೆದವರು ಪಾಪಿಗಳನ್ನು ಪಾವನ ಮಾಡಿದವರು . ಕೆಟ್ಟು ತಿರುಗುವವರಿಗೆ . ಸಮಬಾಳು ಕಲಿಸಿದವರು .ಸಹನೆ ಸಂಪ್ರೀತಿ, ಸಂಸ್ಕೃತಿ, ಸಮಾನತೆ,ಸಮ್ಮೀಲನ ಭಾವ ,ಸಹೋದರ ಪ್ರೇಮ ಭಾವದಲ್ಲಿ ಧ್ವನಿಗೆ ಧ್ವನಿಯಾದವರು . ಶರಣರಿಗೆ ಕ್ರೋಧವಿಲ್ಲ ,ಮೋಹವಿಲ್ಲ, ಸಿಟ್ಟಿಲ್ಲ, ರೋಷವಿಲ್ಲ, ಮದವಿಲ್ಲ, ಅಹಂಕಾರವಿಲ್ಲ,ವೈರ ಭಾವ ಇಲ್ಲವೇ ಇಲ್ಲ ಅಣ್ಣಗಳಿರಾ ನೀವು ಕೇಳಿರೋ ಎನ್ನುವರು ಲಿಂಗಮ್ಮ.
ಹೀಗೆ ಸಮಾಜದಲ್ಲಿ ನಡೆ ಮತ್ತು ನುಡಿಗಳನ್ನು ಒಂದಾಗಿಸಿ ಕೊಂಡು ನಡೆದ ಪುಣ್ಯ ಪುರುಷ ಶರಣ ಶರಣೆಯರು ಈ ನಾಡಿನಲ್ಲಿ ಬದುಕಿ ಬಾಳಿ ಹೋಗಿದ್ದಾರೆ .
ಕಾಮ , ಕ್ರೋಧ, ಲೋಭ,ಮೋಹ,ಮದ ,ಮತ್ಸರಗಳೇ ಮನದಲ್ಲಿ ತುಂಬಿಕೊಂಡು ನಡೆಯುವ ಭಕ್ತರು . ಮನದಲ್ಲಿ ಕದ್ದು ನುಡಿವರನು ಕಂಡರೆ ,ನಮ್ಮ ಅಪ್ಪಯ್ಯ ಪ್ರೀಯ ಚೆನ್ನಬಸವಣ್ಣನವರು ಮೆಚ್ಚುವರೇ,?
ನನಗಾವ ಆಸೆಯೂ ಇಲ್ಲವೆಂದು ಸಂಚರಿಸುವ ಭಕ್ತರನ್ನು ಕಂಡು ನಗುವು ಬರುವುದು ಎನ್ನುವರು ಲಿಂಗಮ್ಮ.ಒಳಗೊಂದು ಭಾವ ಹೊರಗೊಂದು ಭಾವ,ಮಲೀನ ಮನದಲಿ ಉಕ್ಕಿ ಹರಿವ ಕೋಪದ ಕೆಂಡದುಂಡೆಯಲಿ ಕಣ್ಣು ಕಳೆದುಕೊಂಡ ಕುರುಡರ ಭಕ್ತಿ.ಇದು ಎಂಥಹದೋ ನಾ ಕಾಣೆನು .ತೋರಿಕೆಯ ಭಕ್ತಿ.ಒಳಧ್ವನಿಯನು ಅರಿಯದ ಅನುಭಾವದ ವಚನ ಹೇಳಿದರೆಷ್ಟು ,ಕೇಳಿದರೆಷ್ಟು .
ಸತ್ಯದಲಿ ಸೋಲು ,ಮಿತ್ಯದಲಿ ನಗು .ಏನೂ ಅರಿಯದ ಮೂಢ ಭಕ್ತರಂತೆ ತಿರುಗುವ,ಕಾಲ ಚಕ್ರದಲಿ ಸಿಲುಕಿ ನಗುವ ಜನರನ್ನು ಕಂಡು ಲಿಂಗಮ್ಮ ನಗುವರು.
ಲಿಂಗವೆಂದೆ ,ಸಂಗವೆಂದೆ, ಸಂಘದಲ್ಲಿ ಸೋತು ಸುಣ್ಣಾಗಿ ಮಣ್ಣು ಸೇರುವ ಶರಣ ಮಹಾಶಯರ ನುಡಿ ಮಾತುಗಳು ನಗುವು ತರಿಸುವ ಬಿರು ವಚನಗಳು .
ಒಪ್ಪವಾಗಿ , ಗಟ್ಟಿಯಾಗಿ ನಿಂತ ಜಂಗಮ ನಿಲುವಿಗೆ ಭಂಗ ತರುವ ಬುದ್ಧಿಗೇಡಿಗಳು .ದಡ್ಡರಾಗಿ, ದೊಡ್ಡ ಧ್ವನಿಯಲ್ಲಿ ಬೀಗುವರು.ಇವರಿಗೆ ಬಳಲಿಕೆ ಇಲ್ಲ .ನೊಂದವರ ಬಲಿದಾನ ಬಲಿಪಶು ಆಗುವ ಮುಗ್ಧ ಹೃದಯ ಹೌಹಾರಿ ಹಾದಿ ತಪ್ಪಿತು .
ಕರೆದು ಕಾರ್ಮೋಡದಲಿ ಕರಗಿ ಹೋಯಿತು.
ಇದು ಮಿತ್ಯ ಅಲ್ಲದ ಸತ್ಯ ಸುಖದ ಅನುಭಾವ.ಮಾತಿಗೂ ನಿಲುಕದ ಪದ ಸಾಂಗತ್ಯ .
ಸೋತಿರುವೆ ಜಗದ ಜಂಜಾಟದಲ್ಲಿ.
ಗೆದ್ದಿರುವೆ.ಬಳಲಿಕೆಯಲಿ ನೊಂದು .ಎಲೇ ಮೌನವೇ ಹರಸು
ನಿನಗೇ ಶುಶೋಭಿತ ಎನ್ನುವರು ಲಿಂಗಮ್ಮ.ಸುಳ್ಳನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ,ಜನರ ನಂಬಿಕೆಗೆ ಮೋಸ ಮಾಡಿ ಸಮಾಜದಲ್ಲಿ ತಲೆ ಎತ್ತಿ ಮೆರೆವ ಕಲೆಯನ್ನು ಕರಗತ ಮಾಡಿಕೊಂಡು ತಿರುಗುವವರ ಮೂಢ ಭಕ್ತರನ್ನು ನೇರವಾಗಿ ತಮ್ಮ ವಚನಗಳ ಅನುವಾದ ಹಿನ್ನೆಲೆಯಲ್ಲಿ ಲಿಂಗಮ್ಮ ಬಹಳ ಸೂಕ್ಷ್ಮವಾಗಿ ಎಚ್ಚರದ ಹೆಜ್ಜೆಗೆ ಸವಾಲನ್ನು ಹಾಕಿರುವುದು ಕಂಡು ಬಂದಿದೆ .
ಒಟ್ಟಿನಲ್ಲಿ ಆಸೆ ಆಕಾಂಕ್ಷೆಗಳನ್ನು ಕಟ್ಟಿಕೊಂಡು ಹೊತ್ತು ತಿರುಗುವ ,ಮನದ ಕಾಮನೆಗೆ ಒಪ್ಪಿಕೊಳ್ಳದ ಮನಕೆ ದಿಟ್ಟವಾಗಿ ಪ್ರಶ್ನೆಯ ಮುಖಾಂತರ ಎಚ್ಚರಿಸುವ ಲಿಂಗಮ್ಮನ ಅನುಭಾವದ ಭಕ್ತಿಯ ನುಡಿಗೆ ಶರಣು ಶರಣೆನ್ನುವೆ ತಂದೆ ಮಹಾದೇವ.
-ಡಾ ಸಾವಿತ್ರಿ ಕಮಲಾಪೂರ