e-ಸುದ್ದಿ ಮಸ್ಕಿ
ನಾರಾಯಣಪೂರ ಬಲದಂಡೆ 5ಎ ಕಾಲುವೆ ಯೋಜನೆ ವ್ಯಾಪ್ತಿ ಪ್ರದೇಶದ ರೈತರ ಹೊಲಗಳಿಗೆ ನಂದವಾಡಗಿಯ 2ನೇ ಹಂತದಲ್ಲಿ ಹರಿ ನೀರಾವರಿ ಒದಗಿಸಲು ಸರ್ಕಾರ ಚಿಂತಿಸುತ್ತಿರುವದನ್ನು ರೈತರು ವಿರೋಧಿಸುತ್ತಿದ್ದಾರೆ. 5ಎ ನಾಲೆಗೆ ನೀರು ಮತ್ತು ಹಣವನ್ನು ರಾಜ್ಯ ಸರ್ಕಾರ ಮೀಸಲಿಡಬೇಕೆಂದು ಎನ್ನಾರ್ಬಿಸಿ 5ಎ ಕಾಲುವೆ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪೂರು ಆಗ್ರಹಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ಷೇತ್ರದ ಹರಿ ನೀರಾವರಿ ಅನುಕೂಲವಿರುವ ಹಳ್ಳಿಗಳ ಪ್ರದೇಶದ ನೀರು ಮತ್ತು ಹಣವನ್ನು ರಾಜ್ಯ ಸರ್ಕಾರ ಮತ್ತು ಕೆಬಿಜಿಎನ್‍ಎಲ್ ನಿಗಮದ ಅಧಿಕಾರಿಗಳು ವ್ಯಯ ಮಾಡದೆ, ಎನ್‍ಆರ್‍ಬಿಸಿ 5ಎ ಪಾಮನಕಲ್ಲೂರು ಶಾಖಾ ಕಾಲುವೆ ಯೋಜನೆಗೆ ಕಾಯ್ದಿರಿಸಬೇಕೆಂದರು ಒತ್ತಾಯಿಸಿದರು.
ಹೊರಾಟ ಸಮಿತಿಯ ಮುಖಂಡ ನಾಗರಡ್ಡೆಪ್ಪ ದೇವರಮನಿ ಮಾತನಾಡಿ ಮಸ್ಕಿ ವಿಧಾನಸಭಾ ಕ್ಷೇತ್ರದ 58ಕ್ಕೂ ಹೆಚ್ಚು ಹಳ್ಳಿಗಳ ಸುಮಾರು 32 ಸಾವಿರ ಹಾಗೂ ರಾಯಚೂರು ವಿಧಾನಸಭಾ ಕ್ಷೇತ್ರದ 28 ಹಳ್ಳಿಗಳು ಹಾಗೂ ಮಾನ್ವಿ ತಾಲೂಕಿನ 4 ಹಳ್ಳಿಗಳ ಎನ್‍ಆರ್‍ಬಿಸಿ 5ಎ ನಾಲೆಯಿಂದ ಹರಿ ನೀರಾವರಿ ಸಾದ್ಯತೆ ಇರುವದರಿಂದ ಅಧಿಕಾರಿಗಳು ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಂದವಾಡಗಿ ಏತ ನೀರಾವರಿ ಯೋಜನೆಗೆ ಬಿಡುಗಡೆಗೊಂಡ 2.25 ಟಿಎಂಸಿ ನೀರು ಮತ್ತು 1800 ಕೋಟಿ ರೂ.ಗಳ ಹಣವನ್ನು ಖರ್ಚು ಮಾಡಿದರೆ ಅಧಿಕಾರಿಗಳೆ ನೇರ ಹೊಣೆಗಾರರಾಗುತ್ತಾರೆ. ರಾಜಕಾರಣಿಗಳು 5ಎ ಯೋಜನೆಯನ್ನು ರಾಜಕೀಯ ಭಾಷಣಕ್ಕೆ ಸೀಮಿತಗೊಳಿಸಿದ್ದಾರೆಂದು ಆರೋಪಿಸಿದರು.
5ಎ ಯೋಜನೆಗೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ನೀಡಿ ಗೊಂದಲಗಳನ್ನು ನಿವಾರಿಸಿಕೊಳ್ಳಬೇಕೆಂದು ಆಗ್ರಹ ಪಡಿಸಿದರು. 5ಎ ಯೋಜನೆಗೆ ರಾಜಕೀಯ ಇಚ್ಚಾಸಕ್ತಿಯ ಕೊರತೆ ಎದ್ದು ಕಾಣುತ್ತಿದ್ದು, ಅಧಿಕಾರಿಗಳು ಕೂಡ ರೈತರ ದಾರಿ ತಪ್ಪಿಸುತ್ತಿರುವದು ಬಿಡಬೇಕೆಂದರು. ಪಾಮನಕಲ್ಲೂರಿನಲ್ಲಿ 40 ದಿನಗಳಿಂದ ಅನಿರ್ಧಿಷ್ಟಾವಧಿ ಧರಣಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡದಿರುವದಕ್ಕೆ ಖಂಡಸಿ ಆಕ್ರೋಶ ವ್ಯಕ್ತಪಡಿಸಿದರು.
ಹೊರಾಟ ಸಮಿತಿಯ ಮತ್ತೊಬ್ಬ ಮುಖಂಡ ಎನ್.ಶಿವನಗೌಡ ವಟಗಲ್ ಮಾತನಾಡಿ ಮುಂಬರುವ ದಿನಗಳಲ್ಲಿ ಹೊರಾಟ ಸಮಿತಿಯನ್ನು ಬಲಪಡಿಸಲು ನುರಿತ ಇಂಜಿನಿಯರ್‍ಗಳು, ವಕೀಲರನ್ನು ಹೊರಾಟ ಸಮಿತಿಯಲ್ಲಿ ಸೇರಿಸಿಕೊಂಡು ಕಾನೂನು ಹೊರಾಟ ಮಾಡುವ ಕುರಿತು ಚಿಂತನೆ ನಡೆದಿದೆ ಎಂದು ತಿಳಿಸಿದರು.