ಮುಸ್ಸಂಜೆ ಪಯಣ

ಕವಿತೆ

ಮುಸ್ಸಂಜೆ ಪಯಣ

ಒಲಿದು ನಲಿದ ಜೀವ ನಾವು
ಒಂದೆ ದೋಣಿಯ ಪಯಣಿಗರು
ಮುಸ್ಸಂಜೆ ಬಾಳ ಬಾನಿನಲ್ಲಿ
ಜೊತೆ ಜೊತೆಗೆ ಸಾಗುವರು ||

ನಮ್ಮ ಬಾಳ ಬಟ್ಟೆಯಲ್ಲಿ
ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು
ನೋವು ನಲಿವಲಿ ನಾವು
ಸಮಹೆಗಲ ಕೊಟ್ಟವರು ||

ಮಣ್ಣಲ್ಲಿ ಮಣ್ಣಾಗಿ
ಭೂತಾಯಿ ಮಡಿಲಲ್ಲಿ
ಬೆವಹ್ರರಿಸಿ ಉಂಡೆವು
ಸುಖ ದುಃಖ ಸವಿಯನು ||

ದುಡಿವ ಜೀವವು ನಾವು ಜೋಡಿ ಎತ್ತಂತೆ
ಒಡಲು ಬೇರಾದರೇನು
ನಮ್ಮ ಜೀವ ಒಂದಂತೆ ||

ಮುಸ್ಸಂಜೆ ಬದುಕಲಿ
ನೊಗ ಹೊತ್ತು ನಡೆಯುತಲಿ
ಬವಣೆ ಬದುಕಲೇ ನಮ್ಮ
ಸಿರಿಭಾಗ್ಯ ಕಂಡವರು ||

ಸೋಲು ಗೆಲುವಲಿ ನಾವು
ಎದೆಗುಂದದೆ ನಡೆದವರು
ಸಂಸಾರ ಭಾರವನು
ಸಮನಾಗಿ ಹೊತ್ತವರು ||

ಒಲವು ಆರಿಲ್ಲ
ಬಿರುಗಾಳಿ ಬಿಸಿಲಿಗೆ
ಸಿಹಿಪ್ರೀತಿ ಬತ್ತಿಲ್ಲಾ
ಬಡತನದ ಬೇಗೆಗೆ ||

ಬಾಳ ಕೊನೆ ದಿನಗಳಲಿ
ಜೊತೆ ಜೊತೆಗೆ ಸಾಗುತಲಿ
ಶರಣರಾ ಬಳಿವಿಡಿದು
ಸಾಗೋಣ ಅರಿತು ||

ಹೋದರೆ ಹೋಗಲಿ
ನಮ್ಮ ಜೀವ ಜೊತೆಗೆ
ಸಂತೃಪ್ತ ಬದುಕಿದು
ಅರ್ಪಿತವು ಶಿವಗೆ ||

ಸವಿತಾ ಮಾಟೂರ, ಇಲಕಲ್ಲ

Don`t copy text!