ತ್ಯಾಗಶೀಲೆ ಮೈತ್ರೇಯಿ ತುರಡಗಿ ತಿಮ್ಮಮ್ಮ”

ನಾ ಓದಿದ ಪುಸ್ತಕ
ಸಾಧ್ವಿ ಶಿರೋಮಣಿ ತುರಡಗಿ ತಿಮ್ಮಮ್ಮ
— ಚರಿತ್ರೆ
ಲೆಖಕರು – ಗುಂಡುರಾವ್ ದೇಸಾಯಿ
ಪುಟಗಳು – 56
ಬೆಲೆ – 35 ರೂ

“ತ್ಯಾಗಶೀಲೆ ಮೈತ್ರೇಯಿ ತುರಡಗಿ ತಿಮ್ಮಮ್ಮ”

ಹೌದು, ಯಾಜ್ಞವಲ್ಕ್ಯ ಮಹರ್ಷಿಗಳ ಪತ್ನಿ ತ್ಯಾಗಶೀಲೆ ಮೈತ್ರೇಯಿಯ ಅಂಶ ಸಂಭೂತರೇ ತುರಡಗಿ ತಿಮ್ಮಮ್ಮನವರು ಎಂಬ ನಂಬಿಕೆ ಶ್ರೇಷ್ಠತೆಯ ಪ್ರತೀಕ. ಬಾಲ್ಯದಲ್ಲಿಯೇ ವೈಧವ್ಯ ಪ್ರಾಪ್ತಿಯಾಗಿ ಗಂಡನ ಮನೆಯವರ ಮೂದಲಿಕೆ ನಡುವೆ ಅರಳಿದ ಸಾಧ್ವಿ ತಿರುಪತಿ ತಿಮ್ಮಪ್ಪನ ಅನುಪಮ ಭಕ್ತೆ ತುರಡಗಿ ತಿಮ್ಮಮ್ಮನವರು.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ತುರಡಗಿ ಗ್ರಾಮದಲ್ಲಿ, ವೆಂಕಟರಮಣನ ಕೃಪಾಶೀರ್ವಾದದಿಂದ ಕ್ರಿ.ಶ 1728ರಲ್ಲಿ ಕಣ್ವಮಠ ಪರಂಪರೆಯ ಶ್ರೀ ನರಸಿಂಹಾಚಾರ್ಯ ಜೋಷಿ ಮತ್ತು ಚಂದ್ರಲೇಖಾದೇವಿ ದಂಪತಿಗಳ ಸುಪುತ್ರಿಯಾಗಿ ಜನಿಸಿದ ತಿರುಮಲಾಂಬರು ಬಾಲ್ಯದಲ್ಲೇ ಧಾರ್ಮಿಕ ಪದ್ಧತಿ, ಸಂಪ್ರದಾಯಗಳನ್ನು ಅರಿತು ಅಳವಡಿಸಿಕೊಂಡವರು. ಬಾಲೆಯರು ಗೊಂಬೆ, ಅಡುಗೆ ಮನೆ ಪಾತ್ರೆಗಳ ಜೊತೆ ಆಟವಾಡಿದರೆ, ಇವರು ದೇವರ ಮೂರ್ತಿಗಳೊಡನೆ ಆಟವಾಡುತ್ತಿದ್ದರು. ಸಹೃದಯತೆ, ಧರ್ಮಶ್ರದ್ಧೆ ರೂಢಿಸಿಕೊಂಡ ತಿಮ್ಮಮ್ಮನವರು ಬಡವರೆಂದರೆ ಮಮಕಾರವನ್ನೂ ಬೆಳೆಸಿಕೊಂಡಿದ್ದರು. ಪುರಾಣ ಪ್ರವಚನ ಆಲಿಸುವಾಗ ಮೂಡಿದ ದ್ವಂದ್ವಗಳಿಗೆ ಪ್ರಶ್ನೆ ಮೂಲಕ ಬಗೆಹರಿಸಿಕೊಳ್ಳುತ್ತಿದ್ದರು.
ಆ ಕಾಲಮಾನಕ್ಕನುಗುಣವಾಗಿ ತಿಮ್ಮಮ್ಮನವರಿಗೂ ಬಾಲ್ಯ ವಿವಾಹವಾಯಿತು. ಆದರೆ ವೈವಾಹಿಕ ಬದುಕೆಂದರೇನು ಎಂದು ಅರಿಯುವ ಮುನ್ನವೇ ವೈಧವ್ಯ ತಿಮ್ಮಮ್ಮನವರನ್ನು ಅರಸಿಕೊಂಡು ಬಂದಿತು.
ತಂದೆಯವರಿಂದ ಬದುಕಿನ ಪಾಠಗಳನ್ನು ಕೇಳಿ ತಿಳಿದಿದ್ದ ತಿಮ್ಮಮ್ಮನವರು ಅದನ್ನು ಅಕ್ಷರಶಃ ಬದುಕಿನಲ್ಲಿ ರೂಢಿಸಿಕೊಂಡು ಮಡಿ ಅಮ್ಮನ ಸ್ಥಾನವನ್ನು ಅನಾಮತ್ತಾಗಿ ಸ್ವೀಕರಿಸಿ ವ್ರತ ಆಚರಣೆಗಳಿಗೆ ಬದ್ಧರಾದಂತೆ ಬದುಕತೊಡಗಿದರು.
ಮೊದಲೇ ಅತ್ತೆಯ ಮೂದಲಿಕೆಗೆ ಗುರಿಯಾಗಿದ್ದ ತಿಮ್ಮಮ್ಮನವರು ವಿಧವೆಯಾದ ನಂತರ ಸಂಪೂರ್ಣ ಅವರ ಚುಚ್ಚು ಮಾತುಗಳಿಗೆ ಬಲಿಯಾದರು.
ದೈವಾನುಗ್ರಹ ಇದ್ದವರ ಬದುಕು ದೇವರಿಗೆ ಹತ್ತಿರವಾಗುವಂತಾಗಲು ದೇವರೇ ಸಮಯ ಸಂದರ್ಭಗಳನ್ನು ಸೃಷ್ಟಿಸಿಕೊಡುತ್ತಾನೆ ಎನ್ನುವಂತೆ, ತಿಮ್ಮಮ್ಮನವರ ಬದುಕು ಅವರ ಮನೆ ದೇವರಾದ ಕೊಪ್ಪರ ನರಸಿಂಹ ದೇವರ ಯಾತ್ರಾ ಸಂದರ್ಭದಲ್ಲಿ ಬದಲಾಗುತ್ತದೆ.
ದೇವದುರ್ಗದ ಮಹಾತಪಸ್ವಿ ಪರಮಪೂಜ್ಯ ಶ್ರೀಗಿರಿಯಪ್ಪನವರು ತಿಮ್ಮಮ್ಮನವರ ಮೇಲೆ ಅಪಾರ ಪ್ರಭಾವ ಬೀರುತ್ತಾರೆ. ತಮ್ಮ ಬದುಕಿನ ಸಾಧನೆಗೆ ಇವರೇ ದಾರಿದೀಪ ಎಂದರಿತ ತಿಮ್ಮಮ್ಮನವರನ್ನು ಕಂಡ ಶ್ರೀಗಿರಿಯಪ್ಪನವರಿಗೂ ತಿಮ್ಮಮ್ಮನವರೊಳಗಿದ್ದ ಭಕ್ತಿಯ ತೇಜಸ್ಸು ಕಾಣುತ್ತದೆ. ಅವರೇ ತಿಮ್ಮಮ್ಮನವರನ್ನು ಶಿಷ್ಯಳಾಗಿ ಸ್ವೀಕರಿಸಿ ಜ್ಞಾನೋಪದೇಶ, ಆಧ್ಯಾತ್ಮಕ ಜಾಗೃತಿಯನ್ನು ಮೂಡಿಸಿದರು. ಗುರುಗಳೊಂದಿಗೆ ಗುಲ್ಬರ್ಗಾ ಜಿಲ್ಲೆಯ ಮೋತಂಪಲ್ಲಿಗೂ, ಶ್ರೀ ವೆಂಕಟರಮಣನ ಸನ್ನಿಧಾನಕ್ಕೂ ಯಾತ್ರೆ ಕೈಗೊಂಡು ಆ ಸಮಯದಲ್ಲಿ ಜ್ಞಾನಿಗಳ ಮುಖವಾಣಿಯಿಂದ ಕೇಳಿದ ಸದುಪದೇಶಗಳಿಂದ ಮಹಾಜ್ಞಾನವನ್ನು ಪಡೆದು ಅಪರೋಕ್ಷ ಜ್ಞಾನಿಗಳಾಗುತ್ತಾರೆ. ಅಲ್ಲಿಂದ ಗುರಗಳ ದಯೆಯಿಂದ ಅನೇಕ ಪವಾಡದ ಘಟನೆಗಳು ತಿಮ್ಮಮ್ಮ ಅವರಿಂದ ಜರುಗಿ ಅನೇಕ ಜನರ ಕಾಯಿಲೆಗಳು, ಕಷ್ಟಗಳು ಪರಿಹಾರವಾಗುತ್ತವೆ. ನಂತರ ಇಪ್ಪತ್ತು ವರ್ಷಗಳ ಗುರುಗಳ ಸಾನಿಧ್ಯದಿಂದ ಬೀಳ್ಕೊಂಡು ತಿರುಮಲಾಂಬ, ತಿಮ್ಮಮ್ಮ ಆಗಿ ಮರಳಿ ತಮ್ಮ ತವರೂರಾದ ತುರಡಗಿಗೆ ಮರಳುತ್ತಾರೆ.
ತಿಮ್ಮಮ್ಮನವರಲ್ಲಿ ದೈವತ್ವ ಸಾನಿಧ್ಯ ಎಷ್ಟು ಆಗಿತ್ತೆಂದರೆ, ಅವರು ಧ್ಯಾನಕ್ಕೆ ಕುಳಿತರೆ ವಿಶಿಷ್ಟ ಪ್ರಭೆ ಅವರ ಸುತ್ತ ಆವರಿಸಿಕೊಳ್ಳುತ್ತಿತ್ತಂತೆ. ಊಟ, ನಿದ್ರೆ, ಆಹಾರಾದಿಗಳನ್ನೂ ಮರೆತು ದಿನಗಟ್ಟಲೆ ಹರಿಧ್ಯಾನದಲ್ಲಿ ನಿರತರಾಗಿರುತ್ತಿದ್ದರಂತೆ. ಒಮ್ಮೆ ಹೀಗೆ ಧ್ಯಾನಕ್ಕೆ ಕುಳಿತುಕೊಂಡಾಗ ಕಂಡ ಜ್ಯೋತಿಯ ಬೆನ್ಹತ್ತಿ ನಡೆದಾಗ, ತಿಮ್ಮಮ್ಮನವರ ಭಕ್ತಿಗೆ ಮೆಚ್ಚಿದ ಶ್ರೀ ಹರಿ ವೃದ್ಧರೂಪದಲ್ಲಿ ದರ್ಶನವಿತ್ತು, ಸಂಭಾಷಣೆ ಮಾಡುತ್ತಿದ್ದನಂತೆ.
ಮುಂದೆ ಶ್ರೀ ಹರಿ ತಿಮ್ಮಮ್ಮನವರಿಗೆ “ನೀನು ಊರು ಬಿಡುವ ಕಾಲ ಸನ್ನಿಹಿತವಾಗಿದೆ. ಆಯ್ತು ಇನ್ನು ಮಾಡಬೇಕಾದ ಕಾರ್ಯವನ್ನೆಲ್ಲ ಮಾಡು. ನಾನು ನಿನ್ನಲ್ಲಿ ನಿಂತು ಅನುಗ್ರಹಿಸುವೆನು” ಎಂದು ಅದೃಶ್ಯನಾದನಂತೆ. ಈ ಘಟನೆ ತಿಮ್ಮಮ್ಮನವರ ಮನವನ್ನು ಕಲಕಿ ತಿಮ್ಮಮ್ಮನವರು ತುರಡಗಿಯಿಂದ ಹೂನೂರಿಗೆ ಬಂದು ಅಲ್ಲಿಯ ಮಾರುತಿ ದೇವಸ್ಥಾನದಲ್ಲಿ ವಾಸಿಸಲು ಆರಂಭಿಸುತ್ತಾರೆ.
ಕ್ರಿ.ಶ 1748ರಲ್ಲಿ ತಮ್ಮ 40 ನೇ ವಯಸ್ಸಿನಲ್ಲಿನಿಂದ ಈ ಮಾರುತಿ ದೇವಸ್ಥಾನವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ತಪಸ್ಸು ಸಾಧನೆಯಲ್ಲಿ ತೊಡಗುತ್ತಾರೆ. ಇಲ್ಲಿ ಶ್ರೀ ಗಿರಿಯಪ್ಪನವರು ಸ್ವಪ್ನದಲ್ಲಿ ಅನುಗ್ರಹಿಸಿದ ಹಿನ್ನೆಲೆಯಲ್ಲಿ ಅಕ್ಷತೆ ಹನುಮಂತಾಚಾರ್ಯ ಎಂಬುವವರು ಅಮ್ಮನವರ ತಪಸ್ಸಿನ ಪ್ರಭಾವ ಕಂಡು ಅಮ್ಮನವರ ಶಿಷ್ಯತ್ವವನ್ನು ವಹಿಸುತ್ತಾರೆ. ಹನುಮಂತಾಚಾರ್ಯರು ಪ್ರತಿದಿನ ನರಸಿಂಹ ಸಾಲಿಗ್ರಾಮ, ಶ್ರೀದೇವಿ, ಭೂದೇವಿ ಸಹಿತ ವೆಂಕಟರಮಣ ವಿಗ್ರಹವನ್ನು ಪೂಜಿಸಿ ದೀಪ, ನೈವೇದ್ಯ, ವೈಶ್ಯದೇವ ಮಾಡಿ ತಿಮ್ಮಮ್ಮನವರಿಗೆ ತೀರ್ಥವನ್ನು ನೀಡುತ್ತಿದ್ದರು. ಇದೇ ಸಂದರ್ಭದಲ್ಲಿ ತಿಮ್ಮಮ್ಮನವರು ಸುಂದರ ಗೋ ಶಾಲೆಯನ್ನೂ ನಿರ್ಮಿಸಿ ಅದನ್ನು ಪೋಷಿಸುತ್ತಿದ್ದರು. ಗೋ ಶಾಲೆಯನ್ನು ವೀಕ್ಷಿಸಲು ಬರುತ್ತಿದ್ದ ಆಸ್ತಿಕರಿಗೆ ಜ್ಞಾನೋಪದೇಶ ನೀಡುತ್ತಿದ್ದರು ಮತ್ತು ಅವರ ಸಂಕಷ್ಟಗಳಿಗೆ ಪರಿಹಾರ, ಸಾಂತ್ವನ ಮಾತುಗಳನ್ನು ನೀಡಿ ಅವರಿಗೆ ಅನ್ನದಾನವನ್ನೂ ಸಹ ಮಾಡುತ್ತಿದ್ದರು. ಈ ಸಮಯದಲ್ಲಿ ತಿಮ್ಮಮ್ಮನವರು ಯಾರಿಗೂ ಅನ್ನ ಸಂತರ್ಪಣೆಗಾಗಿ ಪರಿಕರಗಳನ್ನು ಯಾಚಿಸುತ್ತಿರಲಿಲ್ಲವಾದರೂ ಅವರ ಕುಟೀರ ಯಾವಾಗಲೂ ಧಾನ್ಯಗಳಿಂದ ಸಮೃದ್ಧಿಯಾಗಿ ಇರುತ್ತಿತ್ತು.
ಆಗಿನ ಕಾಲದಲ್ಲಿ ತಿಮ್ಮಮ್ಮನವರು ಒಟ್ಟು ತಮ್ಮ ಜೀವಮಾನದಲ್ಲಿ 64 ಬಾರಿ ನಡೆದುಕೊಂಡೇ ತಿರುಪತಿ ಯಾತ್ರೆಯನ್ನು ಮಾಡಿದ್ದು ಸೋಜಿಗ ಎನಿಸುತ್ತದೆ. 64 ನೇ ತೀರ್ಥಯಾತ್ರೆಯನ್ನು ತಮ್ಮ 83 ನೇ ವಯಸ್ಸಿನಲ್ಲಿ ಮಾಡಿದ್ದು ಇನ್ನೂ ವಿಶೇಷ ಎನಿಸುತ್ತದೆ. ಈ ಯಾತ್ರಾ ಸಂದರ್ಭದಲ್ಲೂ ಅವರು ಆಸ್ತಿಕರಿಗೆ ಧರ್ಮೋಪದೇಶ, ಬಡವರಿಗೆ ಅನ್ನದಾನ, ಕಷ್ಟದಲ್ಲಿರುವವರಿಗೆ ಪರಿಹಾರವನ್ನು ನಿಡಿದ್ದಾರೆ. ತಮ್ಮ ಜೊತೆಯಲ್ಲಿಯೇ ಇರುವ ಅಕ್ಷತೆ ಹನುಮಂತಾಚಾರ್ಯರು ಹಮ್ಮಿಣಿ(ಹಣದ ಗಂಟು)ಯನ್ನು ಮರೆತು ಬಿಟ್ಟು ಕಳೆದುಕೊಂಡು ಬಂದಾಗಲೂ ತಿಮ್ಮಮ್ಮನವರಾಡಿದ ಸಾಂತ್ವನದ ಮಾತುಗಳು ಅವರ ಕ್ಷಮಾಗುಣವನ್ನೂ, ದೇವರ ಮೇಲಿನ ಅಚಲ ನಂಬಿಕೆಯನ್ನೂ ತೋರಿಸುವಂತದ್ದಾಗಿದೆ. ಅದೇ ಸಮಯದಲ್ಲಿ ಒಬ್ಬ ಮಾರವಾಡಿಯಿಂದ ಕಳೆದುಕೊಂಡಷ್ಟೇ ಹಣ ಮರಳಿ ಬಂದದ್ದು ಅವರ ನಂಬಿಕೆಗೆ ಸಾಕ್ಷಿಯಾಗುತ್ತದೆ. “ಕಸಿದು ಕೊಡುವದು ದೇವನ ಆಟ!”, ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಬಂದ ಕಷ್ಟಗಳ ಬಗ್ಗೆ ಯೋಚಿಸುತ್ತ ಕುಳಿತು ಕುಗ್ಗದೆ ಮುಂದಿನ ಕಾರ್ಯಗಳತ್ತ ಹೆಜ್ಜೆ ಹಾಕಬೇಕು. ಇದೇ ಭಕ್ತನ ಲಕ್ಷಣ ಎಂದು ತಿಮ್ಮಮ್ಮನವರು ಹೇಳಿದ ಮಾತು ಅವಿಸ್ಮರಣೀಯವಾಗಿದೆ.
ಯಾತ್ರಾ ಸಂದರ್ಭದಲ್ಲಿ ಕಾಲರಾ ರೋಗ ಹರಡಿದ ಸಂದರ್ಭದಲ್ಲಿ, ಕಾಲರಾ ರೋಗ ಹರಡದಂತೆ ಎಚ್ಚರಿಕೆ ವಹಿಸಿ ರೋಗ ನಿಯಂತ್ರಣದ ಬಗ್ಗೆ ಜ್ಞಾನೋಪದೇಶ ಮಾಡಿ ಜೊತೆಗೆ ಬಂದ ಯಾವ ಯಾತ್ರಿಕರಿಗೂ ರೋಗ ಬರದಂತೆ ತಡೆದದ್ದು ತಿಮ್ಮಮ್ಮನವರ ಆಯುರ್ವೇದ ಜ್ಞಾನವನ್ನು ತಿಳಿಸುತ್ತದೆ.
ಇದೇ ಸಂದರ್ಭದಲ್ಲಿ ಮಾರಿಕಾದೇವಿಯನ್ನು ಸ್ತುತಿಸಿ ಅವಳ ಕುರಿತಾಗಿ ತಪಸ್ಸನ್ನು ಮಾಡಿ ಸಂಚಾರ ಕೈಗೊಳ್ಳುವ ಸಂದರ್ಭದಲ್ಲಿ ತಾನು ಯಾವ ಗ್ರಾಮದಲ್ಲೂ ಪ್ರವೇಶಿಸುವುದಿಲ್ಲ ಎಂಬ ಅಭಯವನ್ನು ದೇವಿಯಿಂದಲೇ ಪಡೆದ ತಿಮ್ಮಮ್ಮನವರ ದೈವಿಕ ಶಕ್ತಿ ಅಗಾಧವಾದುದಾಗಿದೆ.
ಹೀಗೆ ತಿಮ್ಮಮ್ಮನವರು ತಮ್ಮ ಕಾರ್ಯಗಳಿಂದ ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತಾ ಅಲೌಕಿಕ ಶಕ್ತಿ ಇರುವ ಮಹಾಸಾದ್ವಿಯಾಗಿ ಗೋಚರಿಸತೊಡಗಿದರು.
ನಂತರ ತಿಮ್ಮಮ್ಮನವರು ಹೂನೂರಿನಿಂದ ಮುರುಗೋಡಿಗೆ ಹೋಗಿ ಚಿದಂಬರ ದೀಕ್ಷಿತರ ದರ್ಶನವನ್ನು ಮಾಡುತ್ತಾರೆ.
ದೀಕ್ಷಿತರೂ ಕೂಡ ಅಗಾಧ ಜ್ಞಾನವುಳ್ಳವರು. ಅಸಾಧಾರಣ ಶಕ್ತಿ ಉಳ್ಳವರಾಗಿದ್ದರು. ಒಮ್ಮೆ ತಿಮ್ಮಮ್ಮನವರು ತಿರುಪತಿಗೆ ಹೊರಟಾಗ ತಂಗಿದ ಗ್ರಾಮದ ಮಾರ್ಗವಾಗಿಯೇ ದೀಕ್ಷಿತರು ಪ್ರಯಾಣ ಬೆಳೆಸುತ್ತಿದ್ದಾಗ ಅಮ್ಮನವರು ಅದೇ ಗ್ರಾಮದಲ್ಲಿ ತಂಗಿರುವ ವಿಷಯ ತಿಳಿದು ಅವರನ್ನು ಭೇಟಿಯಾಗುವ ಆಸೆಯಿಂದ ಯಾವುದೇ ವಾಹನ ಲಭ್ಯವಿರದಿದ್ದಾಗ ಸಮೀಪದಲ್ಲಿ ಹೋಗುತ್ತಿದ್ದ ಹುಲಿಯನ್ನೇ ಪಳಗಿಸಿ ಹುಲಿಯ ಮೇಲೆ ಕುಳಿತು ನಡೆದರೆ; ತಿಮ್ಮಮ್ಮನವರು ದೀಕ್ಷಿತರನ್ನು ಸ್ವಾಗತಿಸಲು ತಮ್ಮ ಕಟ್ಟೆಗೇ ಚಲಿಸಲು ಆಜ್ಞಾಪಿಸುತ್ತಾರೆ. ಇದನ್ನು ಅರಿತ ದೀಕ್ಷಿತರು ನಾವು ಸಜೀವಿ ಹುಲಿಯನ್ನು ಪಳಗಿಸಿದರೆ ತಾವು ನಿರ್ಜೀವಿಗೇ
ಜೀವ ತುಂಬಿ ಚಲಿಸುವಂತೆ ಮಾಡಿದಿರಿ ಎಂದು ಶ್ಲಾಘಿಸುತ್ತಾರೆ.
ಮತ್ತೊಂದು ಸಂದರ್ಭದಲ್ಲಿ ತಿಮ್ಮಮ್ಮನವರು ತಟ್ಟಿದ ಬೆರಣಿ ಕೂಡ ಗೋವಿಂದನ ನಾಮ ಸ್ಮರಣೆ ಮಾಡಿರುವುದು ಸೋಜಿಗೆ ಎನಿಸುತ್ತದೆ ಮತ್ತು ತಿಮ್ಮಮ್ಮನವರ ಆಧ್ಯಾತ್ಮಿಕ ಶಕ್ತಿ ಎಷ್ಟಿತ್ತೆಂಬುದು ಮನದಟ್ಟಾಗುತ್ತದೆ.
ಬುದ್ದಿನ್ನಿ ಮಾಧವ ತೀರ್ಥರ ಸಮಕಾಲೀನರಾದ ತಿಮ್ಮಮ್ಮನವರು ಮಾಧವ ತೀರ್ಥರನ್ನು ಭೌತಿಕವಾಗಿ ದರ್ಶಿಸಲು ಸಾಧ್ಯವಾಗದಿದ್ದಾಗ ಇಬ್ಬರೂ ಯೋಗಾ ದರ್ಶನ ಮಾಡಿರುವುದು ಅಪರೂಪವೆನಿಸುತ್ತದೆ.
ಹೀಗೆ ಬಾಲ್ಯ ವಿವಾಹವಾಗಿ ತಮ್ಮ ಹತ್ತನೇ ವಯಸ್ಸಿನಲ್ಲಿಯೇ ವೈಧವ್ಯವನ್ನು ತಾಳಿ ತಮ್ಮ ಅಷ್ಟೂ ಬದುಕನ್ನು ಆಧ್ಯಾತ್ಮಿಕ ಚಿಂತನೆಗೆ, ಜ್ಞಾನಮಾರ್ಗಕ್ಕೆ ಮೀಸಲಿಟ್ಟು ಅನೇಕ ಜನರಿಗೆ ಉಪಕಾರ, ಆರೋಗ್ಯ ಜ್ಞಾನ ದರ್ಶನವನ್ನು ನೀಡಿದ ತುರಡಗಿ ತಿಮ್ಮಮ್ಮನವರು 64 ಬಾರಿ ತಿರುಪತಿ ಯಾತ್ರೆಯನ್ನು ಗೈದು ವೆಂಕಟೇಶನ ಅನುಗ್ರಹಕ್ಕೆ ಪಾತ್ರರಾಗಿದ್ದಲ್ಲದೆ ತಮ್ಮ ಜೊತೆಗೆ ಸಾವಿರಾರು ಯಾತ್ರಿಕರಿಗೂ ಕೂಡ ವೆಂಕಟೇಶನ ದರ್ಶನವನ್ನು ಮಾಡಿಸಿ ಅವನ ಅನುಗ್ರಹವನ್ನು ಮಾಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಹೀಗೆ ಆಧ್ಯಾತ್ಮಿಕ ಜೀವನ ಸಾಗಿಸಿದ ತುರಡಗಿ ತಿಮ್ಮಮ್ಮನವರು ಕ್ರಿ.ಶ 1813ರಲ್ಲಿ ಹರಿಪಾದ ಸೇರುತ್ತಾರೆ.
ಆ ಸಮಯದಲ್ಲಿ “ಪರಮಾತ್ಮನ ಸಾಕ್ಷಾತ್ಕಾರವನ್ನು ಹೊಂದಬೇಕಾದರೆ ಮೊಟ್ಟಮೊದಲು ಮನಸ್ಸಿನ ನಿಗ್ರಹಕ್ಕಾಗಿ ಮೂರ್ತಿ ಪೂಜೆಯನ್ನು ಮಾಡಬೇಕು. ದೇವರ ಮೂರ್ತಿ ಎಂದರೆ ಶ್ರೀ ಪರಮಾತ್ಮನ ಪ್ರತೀಕವೆಂದೇ ಭಾವಿಸಿ ಧ್ಯಾನ ಮಾಡಬೇಕು. ಕೊನೆಯಲ್ಲಿ ಅಂತರ್ಮುಖರಾಗಿ ಹೃದಯಸ್ಥ ಪರಮಾತ್ಮನನ್ನು ಪೂಜಿಸುವುದೇ ಸಾಕ್ಷಾತ್ಕಾರದ ಶ್ರೇಷ್ಠವಾದ ಸಾಧನವಾಗಿದೆ”, ಎಂಬ ಸಂದೇಶವನ್ನು ಭಕ್ತ ಜನರಿಗೆ ಸಾರಿದ್ದಾರೆ.
ತಿಮ್ಮಮ್ಮನವರ ಪರಿನಿರ್ವಾಣದ ನಂತರವೂ ಅನೇಕ ಮಹಿಮೆಗಳು ಜರುಗಿವೆ. ಅಮ್ಮನವರ ದೇಹ ದಹನ ಮಾಡಿದ ಸ್ಥಳದಲ್ಲಿ ಅಮ್ಮನವರೇ ತಿಳಿಸಿದಂತೆ ಅಶ್ವತ್ಥ ವೃಕ್ಷದ ಸಸಿಗಳು ಮತ್ತು ಅದರ ದಕ್ಷಿಣ ದಿಕ್ಕಿನಲ್ಲಿ ಪ್ರಾಣ ದೇವರ ಮೂರ್ತಿ ಲಭ್ಯವಾಗಿದೆ, ಅಲ್ಲಿ ಪ್ರತಿ ದಿನ ಹರಿ ವಾಯು ಗುರುಗಳ ಪೂಜೆ ನೆರವೇರುತ್ತ ಬರುತ್ತಿದೆ. ಸಸಿ ಬೆಳೆದ ಜಾಗದಲ್ಲಿ ಕಟ್ಟೆ ಕಟ್ಟಿಸಿದ್ದು ಇವತ್ತಿನವರೆಗೂ ಅದು ಅಮ್ಮನ ಕಟ್ಟೆ ಎಂದು ಪ್ರಸಿದ್ಧಿ ಹೊಂದಿದೆ.
ಅಮ್ಮನವರು ಹರಿಪಾದ ಸೇರಿದ ನಂತರವೂ ಅವರು ವಾಸಿಸುತ್ತಿದ್ದ ಮಾರುತಿ ದೇವಸ್ಥಾನದ ಆವರಣವನ್ನು ಕೆಲ ದಿನಗಳ ಕಾಲ ಅವರೇ ಬಂದು ಸ್ವಚ್ಛಗೊಳಿಸುತ್ತಿದ್ದರು ಎಂಬುದನ್ನು ಕೇಳಿದರೆ ಕುತೂಹಲ, ಆಶ್ಚರ್ಯ ಮತ್ತು ಅವರ ಭಕ್ತಿಯ ಪರಾಕಷ್ಟೆ ಎಷ್ಟಿತ್ತೆಂಬುದನ್ನು ಕಾಣುತ್ತೇವೆ.
ಮುಂದೆ ಒಮ್ಮೆ ಅಮ್ಮನವರ ಆರಾಧನೆಗಾಗಿ ಸಂಗ್ರಹಿಸಿದ ದೇಣಿಗೆ ಹಣವನ್ನು ಕಳ್ಳರು ಕದ್ದೊಯ್ಯುತ್ತಿರೀವಾಗಲೇ ಅವರ ಮೈಯೆಲ್ಲ ತುರಿಕೆಯಾಗಿ ಮತ್ತೆ ಮರಳಿ ಬಂದು ಹಣವನ್ನು ಕೊಟ್ಟು ಅಮ್ಮನವರಿಗೆ ಕ್ಷಮೆ ಕೇಳಿದ ನಂತರ ತುರಿಕೆ ಕಡಿಮೆ ಆಯಿತೆಂಬುದು ಅಮ್ಮನವರ ಗಮನಾರ್ಹ ಮಹಿಮೆಯಾಗಿದೆ.
ಮುಂದೆ ಒಮ್ಮೆ ರಾಮದಾಸರು ಅಮ್ಮನವರ ಕಟ್ಟೆಗೆ ಆಗಮಿಸಿ, ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ ನಂತರ ಅವರ ಹೊಟ್ಟೆ ನಿಬ್ಬರಾಗಿ ನೋವು ಉಂಟಾದಾಗ ಇಡೀ ಊರಲ್ಲೆಲ್ಲ ಹುಡುಕಿದರೂ ಸಿಗದ ನಿಂಬೆಹಣ್ಣು, ರಾಮದಾಸರು ತಿಳಿಸಿದಂತೆ ಅಮ್ಮನವರ ಕಟ್ಟೆಯಲ್ಲಿ ನಿಂಬೆಹಣ್ಣು ಸಿಕ್ಕಿದ್ದು ಅದರಿಂದ ರಾಮದಾಸರ ಹೊಟ್ಟೆ ನಿಬ್ಬರಗೂ ಕಡಿಮೆಯಾಗಿದ್ದನ್ನು ಇವತ್ತಿಗೂ ಕೂಡ ಅಮ್ಮನವರ ವಂಶೀಕರು ಸ್ಮರಿಸಿಕೊಳ್ಳುತ್ತಾರೆ.
ದಾಸ ಸಾಹಿತ್ಯ ಮೇಲ್ಪಂಕ್ತಿಯಲ್ಲಿದ್ದ ಸಮಯದಲ್ಲಿ ಜೀವಿಸಿದಂತಹ ತಿಮ್ಮಮ್ಮನವರು ಕೂಡ ಅದರ ಪ್ರಭಾವಕ್ಕೆ ಒಳಗಾಗಿ ಭಗವಂತನ ನಾಮ ಕೀರ್ತನೆಗಳನ್ನು ರಚಿಸಿದ್ದು, ಕೇವಲ ಕೆಲವು ಮಾತ್ರ ಪ್ರಸ್ತುತವಾಗಿ ಲಭ್ಯ ಇದ್ದದ್ದು ನಮ್ಮೆಲ್ಲರ ದುರದೃಷ್ಟ ಎಂದು ಹೇಳಬಹುದು. ಇದರ ಕುರಿತಾಗಿ ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರು ತಮ್ಮ ಪಿ ಹೆಚ್ ಡಿ ಸಂಶೋಧನಾ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಒಂದು ತಿಮ್ಮಮ್ಮನವರ ರಚನೆಯ ಕವಿತೆಯನ್ನೂ ಸೇರ್ಪಡಿಸಿದ್ದಾರೆ. ಇನ್ನೂ ಆಗಿನ ಕಾಲದಲ್ಲಿ ತಿಮ್ಮಮ್ಮನವರ ಕೀರ್ತನೆಗಳನ್ನು ಬರೆದುಕೊಳ್ಳುವಂತಹ ಪ್ರಯತ್ನ ಯಾರಾದರೂ ಮಾಡಿದ್ದರೆ ಇಂದಿಗೆ ತಿಮ್ಮಮ್ಮನವರ ಸಾವಿರಾರು ಕೀರ್ತನೆಗಳು ನಮ್ಮೆದುರಿಗೆ ಕಾಣಸಿಗುತ್ತಿದ್ದವು.
ಅಮ್ಮನವರ ನಂತರದಲ್ಲಿ ಬಂದಂತಹ ದಾಸರು ತಿಮ್ಮಮ್ಮನವರ ಕುರಿತಾಗಿ ಕೀರ್ತನೆಗಳನ್ನು ರಚಿಸಿದ್ದಾರೋ ಇಲ್ಲವೋ ಎಂಬುದು ತಿಳಿಯದಾಗಿದ್ದು ಆದರೆ ಇತ್ತೀಚಿಗೆ ಕೆಲವರು ಅಮ್ಮನವರ ಕುರಿತಾಗಿ ಅಷ್ಟಕ, ಕೀರ್ತನೆಗಳನ್ನು ರಚಿಸಿದ್ದಾರೆಂಬುದು ಖುಷಿಯ ಸಂಗತಿಯಾಗಿದೆ.
ಈಗಲೂ “ಅಮ್ಮನ ಕಟ್ಟೆ” ಎಂದೇ ಪ್ರಸಿದ್ಧವಾದ ತುರಡಗಿಯ ಊರ ಮುಂದಿನ ಹಳ್ಳದ ಆಚೆ ತಟ, ಅಮ್ಮನವರ ಸಾನಿಧ್ಯ ಇರುವ ಸ್ಥಳದಲ್ಲಿ ಈಗಲೂ ಆರಾಧನೆ ಜರಗುತ್ತದೆ. ಮೊದಮೊದಲಿಗೆ ಅವರ ವಂಶದವರು ಆರಾಧನೆ ಮಾಡುತ್ತಾ ಬಂದಿದ್ದು ಪ್ರಸ್ತುತ ಸಾದ್ವಿ ಶಿರೋಮಣಿ ತಿಮ್ಮಮ್ಮನವರ ವಿಶ್ವಸ್ಥ ಮಂಡಳಿಯವರು ವೈಭವದಿಂದ ಆರಾಧನೆಯನ್ನು ಆಚರಿಸುತ್ತಾರೆ. ಹಲವು ದಾಸ ಸಾಹಿತ್ಯದ ಕಾರ್ಯಗಳು, ಸಂಗೀತ ಸೇವೆಗಳು, ನೃತ್ಯಗಳು ಹೀಗೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಾಧನೆ ಸಂದರ್ಭದಲ್ಲಿ ಪ್ರತಿ ವರ್ಷವೂ ಜರಗುತ್ತವೆ.
ಅಮ್ಮನವರನ್ನು ದಹನ ಮಾಡಿದ ಸ್ಥಳದಲ್ಲಿ ಬೆಳೆದ ಅಶ್ವತ್ಥ ವೃಕ್ಷದ ಬಳಿ ದೊರೆತ ಪ್ರಾಣ ದೇವರ ಮೂರ್ತಿಯನ್ನು ಮತ್ತು ಅಮ್ಮನವರ ಉಪಾಸನಾ ಮೂರ್ತಿಯಾದ ವೆಂಕಟರಮಣನನ್ನು ವೃಂದಾವನದಲ್ಲಿ ಪ್ರತಿಷ್ಠಾಪಿಸಲಾಗಿದೆ. ಅಲ್ಲಿ ಬೆಳೆದಿದ್ದ ಅಶ್ವತ್ಥ ವೃಕ್ಷದಲ್ಲಿ ಪೊಟೊರೆಯೊಳಗೆ ಸಾಲಿಗ್ರಾಮವೂ ಉದ್ಭವಿಸಿತ್ತು ಎಂದು ಹೇಳುತ್ತಾರೆ. ಕೆಲವು ವರ್ಷಗಳ ಹಿಂದೆ ಬೃಹದಾಕಾರವಾಗಿ ಬೆಳೆದಿದ್ದ ಅಶ್ವತ್ಥ ವೃಕ್ಷ ನಿರ್ವಾಣ ಹೊಂದಿದ ವರ್ಷವೇ ಅಮ್ಮನವರು ವಾಸಿಸುತ್ತಿದ್ದ ಹೂನೂರಿನ ಮುಖ್ಯಪ್ರಾಣನ ಆಲಯದಲ್ಲಿರುವ ಬೇವಿನ ಮರದ ಮಧ್ಯ ಪವಾಡ ಸದೃಶ ರೀತಿಯಲ್ಲಿ ಅಶ್ವತ್ಥ ವೃಕ್ಷ ಚಿಗುರೊಡೆದು ಇವತ್ತು ಭವ್ಯವಾಗಿ ಬೆಳೆದು ನಿಂತಿದೆಯಂತೆ.
ಇವತ್ತಿಗೂ ಹುನೂರಿನ ದಿ.ಶ್ರೀ ಜಗನ್ನಾಥ ಹುದ್ದಾ ಅವರ ಮನೆಯಲ್ಲಿ ಅಮ್ಮನವರಿಗೆ ಸೇರಿದ ಬೆತ್ತ ಇದೆ ಎಂದು ತಿಳಿಯಲಾಗಿದೆ. ಜೊತೆಗೆ ಅಮ್ಮನವರ ವಂಶಿಕರ ಮನೆಯಲ್ಲಿ ತಿಮ್ಮಮ್ಮನವರು ಯಾತ್ರಾ ಅವಧಿಯಲ್ಲಿ ಬಳಸುತ್ತಿದ್ದ ಗೋಪಾಲ ಬುಟ್ಟಿ, ಪೂಜೆ ಮಾಡುತ್ತಿದ್ದ ಪ್ರಾಣದೇವರ ಹಾಗೂ ವೆಂಕಟರಮಣನ ಬೆಳ್ಳಿಯ ವಿಗ್ರಹಗಳು ಕೂಡ ದರ್ಶನಕ್ಕೆ ಲಭ್ಯ ಇವೆ. ಅಷ್ಟೇ ಅಲ್ಲದೆ ಕಳಮಳ್ಳಿಯ ಶ್ರೀ ರಾಜೇಂದ್ರ ಕುಲಕರ್ಣಿ ಅವರ ಮನೆಯಲ್ಲಿ ಅಮ್ಮನವರಿಂದ ಪ್ರಾಪ್ತವಾದ ಅಕ್ಷಯಪಾತ್ರೆ ಇದೆ. ಅಮ್ಮನ ಮತ್ತೋರ್ವ ಪರಮ ಭಕ್ತಳಾಗಿದ್ದ ಗಜೇಂದ್ರಗಡದ ಕೊಡಗಾನೂರಿನ ಜೀಜಾಬಾಯಿ ಎಂಬುವವರ ಬಳಿ ಅಮ್ಮನವರು ಪ್ರಸಾದಿಸಿದ ಅಡುಗೆಯ ಸೌಟು ಇದೆ. ಅಲ್ಲಿ ಆರಾಧನಾ ಸಮಯದಲ್ಲಿ ಸೌಟಿಗೆ ಪೂಜಿಸಲ್ಲಿಸಿ ಅದನ್ನು ಅಡುಗೆಯಲ್ಲಿ ನಾಲ್ಕು ಸಾರಿ ಕೈಯಾಡಿಸಿ ಬಂದ ಜನಕ್ಕೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ
ಪ್ರತಿ ವರ್ಷ ಅಮ್ಮನವರ ಆರಾಧನ ದಿನ ಮಹಾಮಂಗಳಾರತಿ ನೆರವೇರಿಸುವ ಸಮಯದಲ್ಲಿ ಅಮ್ಮನವರು ಶೇಷರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಈಗಲೂ ಇದೆ.
ಅಮ್ಮನವರ ಉತ್ಸವದ ಸಮಯದಲ್ಲಿ ಬರುವ ಜನರ ಲೆಕ್ಕ ತೆಗೆದುಕೊಳ್ಳದೆ ಅಡುಗೆ ಸಿದ್ಧಪಡಿಸಲಾಗುತ್ತದೆ. ಆದರೆ ಎಷ್ಟೇ ಜನ ಬಂದರೂ ಆಹಾರ ಎಂದಿಗೂ ಕೊರತೆ ಆಗುವುದಿಲ್ಲ ಎಂಬ ನಂಬಿಕೆ ಉಳಿದು ಬಂದಿದೆ.
ಇದೇ ಸಂದರ್ಭದಲ್ಲಿ ಎಲ್ಲ ಜನರ ಊಟದ ನಂತರ ಅನ್ನ ಉಳಿದರೆ ಜೋಳ ಸಜ್ಜೆ ಧಾನ್ಯಗಳು ಸಮೃದ್ಧಿಯಾಗಿ ಬರುತ್ತವೆ ಎಂದೂ, ಹಯಗ್ರೀವ ಉಳಿದರೆ ಅಕ್ಕಡಿ ಕಾಳು ಚೆನ್ನಾಗಿ ಬರುವವೆಂದೂ, ಸಾರು ಉಳಿದರೆ ಯಥೇಚ್ಛ ಮಳೆ ಬರುವುದು ಎಂಬ ನಂಬಿಕೆ ಆಗಿನಿಂದಲೂ ಉಳಿದುಕೊಂಡು ಬಂದಿದೆ.
ಹೀಗೆ ಅಮ್ಮನವರ ಮೇಲಿನ ಭಕ್ತಿಯಿಂದ ಅನೇಕ ನಂಬಿಕೆಗಳು ಪ್ರಸ್ತುತ ದಿನಗಳಲ್ಲೂ ಉಳಿದುಕೊಂಡು ಬಂದಿವೆ.
ಅಮ್ಮನವರನ್ನು ಭಕ್ತಿಯಿಂದ ಭಜಿಸಿದರೆ ಆವರ ಆಸೆಗಳು ಈಡೇರುತ್ತವೆ ಎಂದು ಭಕ್ತರು ನಂಬಿದ್ದಾರೆ.
ಧನ, ಧಾನ್ಯ, ಆರೋಗ್ಯ, ಸಂಪತ್ತು, ಸಂತಾನ ಪ್ರಾಪ್ತಿ ಆಗುವುದು. ಅಷ್ಟೇ ಅಲ್ಲದೆ ರೋಗ ರುಜೀನಗಳು ಬಂದವರನ್ನು ಅಮ್ಮನ ಕಟ್ಟೆಯ ಮೇಲೆ ಮಲಗಿಸಿದರೆ ಕೂಡಲೇ ರೋಗ ಪರಿಹಾರವಾಗುತ್ತವೆ ಎಂಬ ವಿಶ್ವಾಸ ಹಿಂದಿನಿಂದಲೂ ಭಕ್ತರಲ್ಲಿ ಉಳಿದುಕೊಂಡು ಬಂದಿದೆ.
ಹೀಗೆ ತುರಡಗಿ ತಿಮ್ಮಮ್ಮನವರ ಬದುಕು ಜನ್ಮದಿಂದ ಅಂತ್ಯದವರೆಗೂ ಅನೇಕ ಮಹಿಮೆಗಳಿಂದ ಕೂಡಿದೆ. ಅವರು ತಮ್ಮ ಬದುಕಿಗಿಂತ ಭಕ್ತರ ಬದುಕಿನ ಉದ್ಧಾರಕ್ಕಾಗಿ ಮಿಡಿದಿದ್ದಾರೆ, ತಪಗೈದಿದ್ದಾರೆ ಎಂದರೆ ತಪ್ಪಾಗುವುದಿಲ್ಲ.
ಇಂತಹ ಅಪ್ರತಿಮ ಸಾಧ್ವಿ ಬಗೆಗೆ ಬರೆಯುವ ಅವಕಾಶ ದಕ್ಕಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ.

ಈ ಲೇಖನದಲ್ಲಿ ಇರುವ ಎಲ್ಲ ಅಂಶಗಳನ್ನು ಶ್ರೀ ಗುಂಡುರಾವ್ ದೇಸಾಯಿಯವರ “ಸಾಧ್ವಿ ಶಿರೋಮಣಿ ತುರಡಗಿ ತಿಮ್ಮಮ್ಮನವರು” ಎಂಬ ತಿಮ್ಮಮ್ಮನವರ ಚರಿತ್ರೆ ಕುರಿತಾದ ಕೃತಿಯಿಂದ ಆಯ್ದುಕೊಳ್ಳಲಾಗಿದೆ ಎಂದು ಹೇಳುತ್ತ ಈ ಲೇಖನಕ್ಕೆ ಪೂರ್ಣ ವಿರಾಮ ನೀಡುತ್ತೇನೆ.
“ಧನ್ಯವಾದಗಳೊಂದಿಗೆ”

-ವರದೇಂದ್ರ ಕೆ ಮಸ್ಕಿ

9945253030

Don`t copy text!