ಕವಿತೆ
ಸೋಜಿಗವೇ ಸರಿ
ಹೊನ್ನ ಶೂಲದ ಮೇಲೆ
ನಗುತ ಕುಳಿತಿಹ ನೀರೆ
ನಿನ್ನ ಬದುಕಿನಂಗಳದ ಮೇಲೆ
ಬೆಳ್ಳಿ ಬೆಳಕನು ಒಮ್ಮೆ ಹಾಯಿಸೋಣ ಬಾರೆ
ಕಾಣುತಿದೆ ಬರೀ ಮಾತುಗಳ ಸರಮಾಲೆ
ನೀನು ಹೀಗೇ ಇರಬೇಕೆನ್ನುವುದು
ಸಂಸ್ಕಾರವೋ ? ಸಹಜವೋ?
ಸೋಜಿಗವೇ ಸರಿ ||
ಎಲ್ಲಿ ಹುಟ್ಟಿದವನೋ ಅವನು
ತಾವರೆಯಂದದಿ ಅರಳಿದ ನೀನು
ನಿನ್ನ ಬದುಕಿನಲ್ಲಿ ಅವನದು
ಪ್ರವೇಶವೋ, ಆಕ್ರಮಣವೋ
ಅರಳು ನಗೆ ಮಾಸಲ್ಲ ನಿನ್ನದು
ಈ ನಿನ್ನ ಹೂನಗೆ ಸಹಜವೋ ?
ಅಲ್ಲಲ್ಲ
ಸೋಜಿಗವೇ ಸರಿ. ||
ರಸಿಕನೊ ರಕ್ಕಸನೊ
ಧುತ್ತೆಂದು ಬೀಳುವವನ
ತೆಕ್ಕೆಯಲಿ ಒದ್ದಾಡಿ, ಮುದ್ದಾಡಿ
ಗುದ್ದಾಡಿದರೂ
ಅವನಿಗೆ ಕಾಣಿಕೆಯಾಗಿ
ಮುದ್ದು ಮಕ್ಕಳ ಕೊಡುವ
ನಿನ್ನ ಸಹನೆ ಸಹಜವೋ ? ಅಲ್ಲಲ್ಲ
ಸೋಜಿಗವೇ ಸರಿ ||
ಅಪ್ಪ ಅಮ್ಮನೂ ಅಷ್ಟೇ
ಸಹನಾ ಶಕ್ತಿ ನಿನಗೆ, ವಸುಂಧರೆಗೆ
ಕೊಟ್ಟ ವರ ಎನ್ನುವವರೇ
ಅವನು ಹೇಗೇ ಇರಲಿ
ನೀನು ಮಾತ್ರ ಅವನಿ ಯಂತೆ ಸಹನೆಯಿಂದಿರಬೇಕೆನ್ನುವರು
ಸಂಸ್ಕಾರ-ಸಂಸ್ಕೃತಿಯ ಲೇಪನ ಹೊಂದಿದ ಅವರ ಬೋಧನೆಯು
ಸಹಜವೇನಲ್ಲ ಭಯದ ಸಂಕೇತ
ಸೋಜಿಗವೇ ಸರಿ ||
ಇಂಥ ಬೋಧನೆಗೊಳಪಟ್ಟ
ಒಬ್ಬ ಅವನನ್ನೂ ಕಾಣೆ
ಸಹನೆಯ ಪಾಠ ನಿನಗೆ ಮಾತ್ರ
ಸಮಾನತೆಯ ಬಿತ್ತಬೇಕಿರುವ ಭಾಷಣಕಾರರಿಗೂ ನೀನೇ ತುತ್ತು
ಅವನಲ್ಲ.
ಇದನ್ನೂ ಸಹಜವೆನ್ನಬೇಕೇ ?
ಸೋಜಿಗವೇ ಸರಿ ||
✍️ ಆದಪ್ಪ ಹೆಂಬಾ ಮಸ್ಕಿ