e-ಸುದ್ದಿ, ಮಸ್ಕಿ
ಸತತ ಮಳೆಯಿಂದ ಅತಿವೃಷ್ಟಿಗೆ ಸಿಲುಕಿದ ತೊಗರಿ ಈ ಬಾರಿ ಫಸಲಿನಲ್ಲೂ ದಾಖಲೆ ಬರೆದಿದೆ. ಬಿತ್ತನೆಯಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದ ಬೆಳೆ ಈ ಬಾರಿ ರೈತರ ಜೇಬಿಗೂ ಭರ್ಜರಿ ಆದಾಯ ಹರಿಸಿದೆ.
ಮಸ್ಕಿ ತಾಲೂಕು ಮಾತ್ರವಲ್ಲದೇ ರಾಯಚೂರು ಜಿಲ್ಲೆಯಲ್ಲಿ ಖುಷ್ಕಿ ಪ್ರದೇಶದಲ್ಲಿ ತೊಗರಿ ಬೆಳೆ ಈ ಬಾರಿ ಅತ್ಯಧಿಕ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿತ್ತು. ಕೃಷಿ ಇಲಾಖೆ ಅಧೀನದ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಇದ್ದ ಬೀಜಗಳು ಮಾತ್ರವಲ್ಲದೇ ಖಾಸಗಿಯಾಗಿಯೂ ಬೀಜದ ಪ್ಯಾಕೇಟ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದವು. ಖುಷ್ಕಿ ಪ್ರದೇಶದ ಬಹುಭಾಗ ಈ ಬಾರಿ ತೊಗರಿ ಬೆಳೆಯನ್ನೇ ಬೆಳೆಯಲಾಗಿತ್ತು. ಪ್ರತಿ ವರ್ಷ ಹತ್ತಿ, ಸೂರ್ಯಪಾನ, ಸಜ್ಜೆ ಬೆಳೆಯುತ್ತಿದ್ದ ರೈತರು ಈ ಬಾರಿ ಈ ಬೆಳೆಗಳನ್ನು ಕೈ ಬಿಟ್ಟು ಬಹುತೇಕ ಕಡೆಗಳಲ್ಲಿ ತೊಗರಿ ಬೆಳೆಯನ್ನೇ ಬಿತ್ತನೆ ಮಾಡಲಾಗಿತ್ತು. ಹೀಗಾಗಿ ಬಿತ್ತನೆಯಾದ ತೊಗರಿ ಬಹುತೇಕ ಕಡೆಗಳಲ್ಲಿ ಅನಾವೃಷ್ಠಿಗೆ ಸಿಲುಕಿತ್ತು. ಆದರೂ ಫಸಲಿನಲ್ಲಿ ಭರ್ಜರಿ ಇಳುವರಿ ಬಂದಿದ್ದು ರೈತರ ಮುಖದಲ್ಲಿ ಸಂತಸ ಮೂಡಿಸಿದೆ.
ಎಕರೆಗೆ 4-6 ಕ್ವಿಂಟಲ್: ತಾಲೂಕಿನ ಪಾಮನಕಲ್ಲೂರು, ಹಾಲಾಪೂರ, ಗುಡದೂರು, ಬಳಗಾನೂರು, ಸಂತೆಕಲ್ಲೂರು ಮೆದಕಿನಾಳ, ಸೇರಿ ಬಹುತೇಕ ಹೋಬಳಿಯಲ್ಲಿ ತೊಗರಿ ಬೆಳೆಯನ್ನು ಬಿತ್ತನೆ ಮಾಡಲಾಗಿತ್ತು. ಫಸಲು ಹಂತಕ್ಕೆ ಬಂದಿರುವ ತೊಗರೆ ಬೆಳೆಯ ಕಟಾವು ಪ್ರಕ್ರಿಯೆ ಜೋರಾಗಿ ನಡೆದಿದೆ. ಕೂಲಿ ಕಾರ್ಮಿಕರ ಬದಲಾಗಿ ಈ ಬಾರಿ ಮಷಿನ್‍ಗಳಿಂದಲೇ ತೊಗರಿ ಕೊಯ್ಲು ಹೆಚ್ಚಾಗಿ ನಡೆದಿದೆ. ಎಕರೆಗೆ 1 ಸಾವಿರದಿಂದ 1200 ರೂ.ನಂತೆ ತೊಗರಿ ಕೊಯ್ಲು ಮಷಿನ್‍ಗಳಿಗೆ ದರ ನಿಗದಿ ಮಾಡಲಾಗಿದೆ.
ಕಟಾವು ಯಂತ್ರಗಳಿಂದಲೇ ಕೊಯ್ಲು ಮಾಡಿಸುತ್ತಿರುವ ರೈತರು ಬಂದ ತೊಗರಿ ಫಸಲನ್ನು ಜಮೀನುಗಳಲ್ಲಿಯೇ ರಾಶಿ ಮಾಡಿದ ಸ್ಥಳಗಳಲ್ಲಿ ಇಲ್ಲವೇ ಗ್ರಾಮದ ಖಾಲಿ ನಿವೇಶನಗಳಲ್ಲಿ ಕಣ ಮಾಡುತ್ತಿದ್ಧಾರೆ. ಬಿಸಿಲಿಗೆ ಹಾಕಿ ಒಣಗಿಸಲಾಗುತ್ತಿದೆ. ಹೀಗೆ ಕಟಾವು ಮಾಡಿದ ತೊಗರೆ ಈ ಬಾರಿ ಎಕರೆಗೆ 5-6 ಕ್ವಿಂಟಲ್‍ವರೆಗೂ ಇಳುವರಿ ಬಂದಿದೆ. ಪ್ರತಿ ವರ್ಷ ಸಾಮಾನ್ಯವಾಗಿ 2-3 ಕ್ವಿಂಟಲ್‍ಗೆ ಸೀಮಿತವಾಗುತ್ತಿದ್ದ ಇಳುವರಿ 5-6 ಕ್ವಿಂಟಲ್‍ಗೆ ಹೆಚ್ಚಳವಾಗಿದ್ದು, ರೈತರಲ್ಲಿ ಸಂತಸ ಇಮ್ಮಡಿಸಿದೆ.
ಬೆಲೆ ಚೇತರಿಕೆ ನಿರೀಕ್ಷೆ: ತೊಗರಿ ಬೆಳೆಯ ಇಳುವರಿ ಏನೋ ಈ ಬಾರಿ ಚನ್ನಾಗಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಇನ್ನು ಸೂಕ್ತ ದರ ಸಿಗುತ್ತಿಲ್ಲ ಎನ್ನುವ ಚಿಂತೆ ರೈತರಲ್ಲಿ ದೂರವಾಗಿಲ್ಲ. ಸದ್ಯ ಖಾಸಗಿ ಮಾರುಕಟ್ಟೆಯಲ್ಲಿ ತೊಗರಿ ಕ್ವಿಂಟಲ್‍ಗೆg 5300-5500ರೂ.ವರೆಗೆ ಮಾರಾಟವಾಗುತ್ತಿದೆ. ಈ ಬಗ್ಗೆ ಇನ್ನು ಚೇತರಿಕೆಯಾಗಬೇಕು ಎನ್ನುವುದು ರೈತರ ಲೆಕ್ಕಚಾರ. ಆದರೆ ಸರಕಾರ ಇನ್ನು ಖರೀದಿ ಪ್ರಕ್ರಿಯೆಯನ್ನು ಆರಂಭಿಸುತ್ತಿಲ್ಲ. ಸದ್ಯ ತೊಗರಿ ಮಾರಾಟಕ್ಕೆ ಆಸಕ್ತ ಇರುವ ರೈತರ ನೋಂದಣಿ ಪ್ರಕ್ರಿಯೆ ಮಾತ್ರ ಆರಂಭಿಸಿದೆ.
ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ತೊಗರಿ ಖರೀದಿಗಾಗಿ ರೈತರ ಹೆಸರು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಆದರೆ ಇಲ್ಲಿಯೂ ತೊಗರಿ ಬೆಳೆಯ ನಿರ್ಧಿಷ್ಠ ದರ ನಿಗಧಿ ಮಾಡಿಲ್ಲ. ಹೀಗಾಗಿ ಇಳುವರಿ ಬಂದರೂ ಮಾರುಕಟ್ಟೆಯಲ್ಲಿ ನಿರ್ಧಿಷ್ಠ, ಸೂಕ್ತ ಬೆಲೆ ಇಲ್ಲ ಎನ್ನುವ ಕೊರಗಿನಲ್ಲಿಯೇ ರೈತರು ಖಾಸಗಿ ಮಾರುಕಟ್ಟೆಯಲ್ಲಿ ಸಿಗುವ ಬೆಲೆಗೆ ತೊಗರಿ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ.
…………….
ಪ್ರತಿ ವರ್ಷಕ್ಕಿಂತ ಈ ಬಾತಿ ತೊಗರಿ ಇಳುವರಿಲ್ಲಿ ಹೆಚ್ಚಾಗಿದೆ. ಎಕರೆಗೆ 4-5 ಕ್ವಿಂಟಲ್ ಬಂದಿದೆ. ಇನ್ನು ಚನ್ನಾಗಿರುವ ಜಮೀನುಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಇಳುವರಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಸರಕಾರ ಖರೀದಿ ಕೇಂದ್ರ ಆರಂಭಿಸಿ ಹೆಚ್ಚಿನ ದರಕ್ಕೆ ಖರೀದಿ ಮಾಡಬೇಕಿದೆ.
-ಬಸ್ಸಪ್ಪ ರೈತ ಮಸ್ಕಿ.
………….
ತೊಗರಿ ಖರೀದಿಗಾಗಿ ಸÀರ್ಕಾರದ ನಿರ್ದೇಶನದಂತೆ ಈಗಾಗಕಲೇ ಕೃಷಿ ಪತ್ತಿನ ಸಹಕಾರಿ ಕೇಂದ್ರಗಳಲ್ಲಿ ರೈತರ ಹೆಸರು ನೋಂದಣಿ ಮಾಡಿಕೊಳ್ಳಲು ಆರಂಭಿಸಲಾಗಿದೆ. ಸರ್ಕಾರದ ಆದೇಶದ ಬಳಿಕ ಖರೀದಿ ಪ್ರಕ್ರಿಯೆ ನಡೆಸಲಾಗುವುದು.
-ಎಂ.ಶಿವಶರಣ ಕೃಷಿ ಅಧಿಕಾರಿ, ಮಸ್ಕಿ