e-ಸುದ್ದಿ, ಮಸ್ಕಿ
ಸಮಾಜದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳನ್ನು ಪ್ರತಿಬಿಂಬವಾಗಿ ನಾಟಕಗಳಲ್ಲಿ ನೋಡಬಹುದು. ನಾಟಕಗಳು ಸಮಾಜದ ಕನ್ನಡಿ ಎಂದು ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ಗಚ್ಚಿನ ಮಠದಲ್ಲಿ ಭಾನುವಾರ ಸಂಜೆ ಮೋಹಪುರ ಎಂಬ ರಂಗ ನಾಟಕದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಬಸನಗೌಡ ಪಾಟೀಲ ನಾಟಕವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು.
ಸಮುದಾಯ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವೆಂದ್ರಗೌಡ ಮಾತನಾಡಿ ಕಾದಂಬರಿ ಆಧರಿತ ಮೋಹಪುರ ನಾಟಕದಲ್ಲಿ ಗ್ರಾಮೀಣ ಬದುಕಿನ ಹಳ್ಳಿಯ ರಾಜಕೀಯ, ಅಧಿಕಾರ, ಶ್ರೀಮಂತಿಕೆಯ ಅಟ್ಟಹಾಸ, ನೈತಿಕ ಶಕ್ತಿಯ ಪರೀಕ್ಷೆ ಕುರಿತು ನಾಟಕವಾಗಿದ್ದು ಹಳ್ಳಿಗಳ ಬದಕನ್ನು ನಾಟಕಕಾರ ಸುಂದರವಾಗಿ ಚಿತ್ರಿಸಿದ್ದಾರೆ ಎಂದರು.
ಉಪನ್ಯಾಸಕ ಮಹಾಂತೇಶ ಮಸ್ಕಿ, ಮಸ್ಕಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಶಂಕರಗೌಡ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಘನಮಠದಯ್ಯ ಸಾಲಿಮಠ, ರಂಗ ನಿರ್ದೆಶಕ ರಾಂಜಾನ ಸಾಬ ಉಳ್ಳಾಗಡ್ಡಿ, ಸರ್ಕಾರಿ ನೌಕರರ ಪತ್ತಿನ ಸೌಹಾರ್ದ ಸಹಕಾರಿಯ ಅಧ್ಯಕ್ಷ ರುದ್ರಮುನಿ ಇದ್ದರು.
ಯಶಸ್ವಿ ಪ್ರಯೋಗ ಃ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಇದೇ ಮೊದಲ ಬಾರಿಗೆ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ನಾಟಕ ಸಿದ್ದಪಡಿಸಿಕೊಂಡು ಯಶಸ್ವಿಯಾಗಿ ಪ್ರದರ್ಶಿಸಿದರು.