ಚಹಾ..
ಎರಡೆ ಚಮಚ ಸಕ್ಕರೆ
ಒಂದು ಚಮಚ ಟೀ ಪುಡಿ
ಅದೆಷ್ಟು ಜೀವಗಳ ತಣಿಸಿತ್ತು
ಮನಸುಗಳು ಸಿಹಿಯಾಗಲು
ಸಕ್ಕರೆ ನೆಪ ಮಾತ್ರ
ಅಜ್ಜಿ, ತಾತ, ಅಪ್ಪ ಅವ್ವ
ಮನೆಗೆ ಬಂದವರ ಜೊತೆ ಮಾತಿಗೆ ಇನ್ನೆರಡು
ನಿಮಿಷಗಳನು ಕೈಗಿಡುತ್ತಾ
ಸಂಬಂಧಗಳ ಕಾಪಿಡುವಲ್ಲಿಯೂ
ಇದೆ ಚಹಾದ ಪಾತ್ರ
ಕಹಿಯೂ ಕುದ್ದು ಬೇಕಾದಷ್ಟು ಬೇಯ್ದು
ಸ್ವಾದ ಹದ ಮೀರಿ ತನ್ನತನ ತೋರಿ
ಘಮ್ಮೆಂದು ಒಮ್ಮೆಲೆ ಮನಸರಳಿಸುವ
ಚಹಾಕ್ಕೆನಾದರೂ ಇದೆಯೆ ಸೂತ್ರ
ಮಾಸದ ನೆನಪುಗಳ ಬೆಚ್ಚಗಿರಿಸುವ
ಒಂದು ಲೋಟದಲ್ಲಿಯೂ
ಒಂದೇ ನೋಟವಾಗಿಸುವ
ಚಹಾದಲ್ಲೇನಾದ್ರು ಇದೆಯಾ ತಂತ್ರ.
ಜಡತೆ ಅಯಾಸಗಳ ಕಳೆವ
ವಿರಾಮ ಕಾಲದ ಒಡನಾಡಿಯಾಗುವ
ಒಂದು ಕಪ್ಪು ಟೀ ಎಂದಾಕ್ಷಣವೆ ಗೆಳೆಯರ ಜೋಡಿಸುವ
ಚಹಾದಲ್ಲೇನಾದರೂ ಇದೆಯಾ
ದಿವ್ಯೌಷದ ಮಂತ್ರ…
– ಸುಗುರೇಶ ಹಿರೇಮಠ