*ಗಜಲ್*
********
ಚಳಿಯು ನಿನ್ನಯ ಆಲಿಂಗನವನ್ನು ಬಯಸುತಿದೆ
ಒಂಟಿತನ ನಿನ್ನಯ ಜೊತೆಯನ್ನು ಬಯಸುತಿದೆ
ಬದುಕಿನಲ್ಲಿ ಬಹು ದೂರ ಸಾಗಬೇಕಾಗಿದೆ ನಾನು
ಜೀವನವು ನಿನ್ನಯ ಸನಿಹವನ್ನು ಬಯಸುತಿದೆ
ನನ್ನೆದೆಯ ಗೂಡು ಹಾಳುಬಿದ್ದ ಕೊಂಪೆಯಾಗಿದೆ
ನನ್ನ ಹೃದಯವು ನಿನ್ನ ಬಡಿತವನ್ನು ಬಯಸುತಿದೆ
ತಿಂದ ಅನ್ನ ರುಚಿಯೆನಿಸುತಿಲ್ಲ ಮುದ್ದು ಬಂಗಾರಿ
ಜೀವವು ನಿನ್ನ ಪ್ರೀತಿಯ ಕೈತುತ್ತನ್ನು ಬಯಸುತಿದೆ
‘ಮಲ್ಲಿ’ಯ ಮೈ-ಮನವು ಮರೆತಿದೆ ಬದುಕುವುದನ್ನು
ಬರಡಾದ ಬಾಳು ನಿನ್ನ ಸಾಂಗತ್ಯವನ್ನು ಬಯಸುತಿದೆ
–✍️ರತ್ನರಾಯಮಲ್ಲ ಕಲಬುರ್ಗಿ