ಕರಣೇಂದ್ರೀಯಗಳು
12 ನೇ ಶತಮಾನ ಆಧ್ಯಾತ್ಮಿಕ ಜ್ಞಾನ ಪರಾಕಾಷ್ಟೆಯನ್ನು ಮುಟ್ಟಿ ಪರಶಿವನ ಸಾದಖ್ಯವನ್ನು ಸಾಕ್ಷಾತ್ಕರಿಸಿಕೊಂಡ ಮೂರ್ತಕಾಲವದು.
ಸರಳ ಸುಂದರ ಆಡುಮಾತಿನ ರಚನೆಯ ಮೂಲಕ ಜನಸಾಮಾನ್ಯರಲ್ಲಿದ್ದ ಕೀಳರಿಮೆಯನ್ನು, ಅವರ ಅಜ್ಞಾನ ಮತ್ತು ಮೌಢ್ಯತೆಯನ್ನು ಕಳೆದು, ಅವರನ್ನು ಜ್ಞಾನಮೂರ್ತಿಗಳನ್ನಾಗಿ ಮಾಡಿ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಅವರು ಆಧ್ಯಾತ್ಮದ ಜ್ಞಾನ ಶಿಖರವನ್ನು ತಲುಪಿಸಿದ ಉತ್ತುಂಗ ಕಾಲ. ಶರಣರು ಉಪಮಾತೀತರು, ಉಪಮಿಸಬಾರದು, ಎನ್ನುವಂತೆ ಶರಣರನ್ನು ಯಾರಿಗೂ ಹೊಲಿಸಲು ಸಾಧ್ಯವಿಲ್ಲ. ಅವರಿಗೆ ಅವರೆ ಸಾಟಿ.
ತಮಗೆಲ್ಲ ಗೊತ್ತಿರುವಂತೆ ನಾವು ಗುರುಗಳಿಂದ ಕರಣಪ್ರಸಾದವನ್ನು ತೆಗೆದುಕೊಳ್ಳುತ್ತಿದ್ದೆವು. ಆದರೆ ಇದರ ಮಹತ್ವವೆನೆಂದು ನಮಗೆ ತಿಳಿದಿರಲಿಲ್ಲ. ಮನೆಯಲ್ಲಿ ಹಿರಿಯರು ಹೇಳುತ್ತಿದ್ದರಿಂದ ಕರಣಪ್ರಸಾದವನ್ನು ತೆಗೆದುಕೊಳ್ಳುತ್ತಿದ್ದೆವು.
ಈಗ ಶರಣರ ಬಗ್ಗೆ ಅಭ್ಯಸಿಸುವಾಗ ಕರಣ ಎಂದರೇನು. ಕರಣೇಂದ್ರೀಯಗಳು ಯಾವುವು. ಅವುಗಳ ಮಹತ್ವವೆನು, ಹಾಗೂ ಅವುಗಳ ನಿಯಂತ್ರಣ ಹೇಗೆ ಸಾಧ್ಯ ಎಂಬುದನ್ನು ಅರಿಯೋಣ.
______________________
ಕರಣ ಎಂದರೆ ಉಪಕರಣ, ಆತ್ಮನ ಉಪಕರಣ ಎಂಬ ಅರ್ಥವಿದೆ. ಆತ್ಮನು ಚಿನ್ಮಯ ವಸ್ತುವಾದ್ದರಿಂದ ಅದು ಯಾವುದೆ ರೀತಿಯಲ್ಲಿ ಕ್ರಿಯಿಸಲಾರದು. ಆದರೆ ಅದಕ್ಕೆ ಕರಣಗಳ ಸಂಗವಾದರೆ ಆತ್ಮವು ಅವುಗಳ ಮೂಲಕ ಕ್ರಿಯಿಸಬಲ್ಲದು.
_______________________
ಅಂದರೆ ಆತ್ಮವು ಬುದ್ಧಿಯಿಲ್ಲದೆ ಚಿಂತಿಸಲಾರದು, ಅಹಂ ಇಲ್ಲದೆ ನಾನು ಎಂಬ ಪ್ರಜ್ಞೆ ಅದಕ್ಕೆ ಬರಲಾರದು. ಮನಸ್ಸು ಇಲ್ಲದೆ ಕೇಂದ್ರೀಕರಿಸಲಾದು, ಚಿತ್ತವಿಲ್ಲದೆ ಆಸೆ ಆಕಾಂಕ್ಷೆಗಳನ್ನು ಪಡೆಯಲಾರದು. ಆದ್ದರಿಂದ ಇವುಗಳನ್ನು “ಅಂತಃಕರಣ ಚತುಷ್ಟಯಃ” ಎಂದು ಕರೆಯುತ್ತೆವೆ. ಅಂದರೆ 1) “ಮನ”, 2) “ಬುದ್ಧಿ”, 3) “ಚಿತ್ತ” ,4) ”ಅಹಂಕಾರ” ಇವು ಅಂತರಂಗದ ಕರಣೇಂದ್ರೀಯಗಳು, ಉಳಿದವುಗಳೆಲ್ಲ ಬಾಹ್ಯ ಕರಣೇಂದ್ರೀಯಗಳು. ಉದಾ –ಪಂಚೇಂದ್ರೀಯಗಳು, ಕರ್ಮೇಂದ್ರೀಯಗಳು, ಇತ್ಯಾದಿ.
ಈ ಕರಣೇಂದ್ರೀಯಗಳು ನಮ್ಮನ್ನು ವಿಕಾಸದ ಕಡೆಗೆ ಕೊಂಡೊಯ್ಯುವ ಸನ್ಮಾರ್ಗಗಳಾಗಬೇಕು. ವಿನಾಶದತ್ತ ಒಯ್ಯುವ ದುರ್ಮಾರ್ಗಗಳಾಗಬಾರದು. ಅದಕ್ಕಾಗಿ ಅವುಗಳಿಗೆ ಬಸವತತ್ವಾಚರಣೆಯ ಜೋತೆಗೆ ಉತ್ತಮ ಸಂಸ್ಕಾರದ ಅವಶ್ಯಕತೆ ಇದೆ.
___________________________
ಮನ : ವೀರ ವಿರಾಗಿನಿ ಅಕ್ಕಮಹಾದೇವಿ ಹೇಳುವಂತೆ “ಲೋಕದಾ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳಾ ಚೇಷ್ಟೆಗೆ ಮನವೆ ಬೀಜಾ,
ನಮ್ಮ ಎಲ್ಲ ಸಂಕಲ್ಪ ವಿಕಲ್ಪಗಳು ಹುಟ್ಟುವದು ನಮ್ಮ ಮನದಲ್ಲಿಯೆ.ನಮ್ಮ ಸುತ್ತಮುತ್ತಲ ಪರಿಸರ ಮತ್ತು ನಮ್ಮ ಸಂಸ್ಕಾರಕ್ಕೆ ತಕ್ಕಂತೆ ನಮ್ಮ ಸಂಕಲ್ಪಗಳು ರೂಪಗೊಳ್ಳುತ್ತವೆ. ಶಕ್ತಿಶಾಲಿ ಸಂಕಲ್ಪಗಳಿಂದ ನಮಗೂ ಮತ್ತು ಸಮಾಜಕ್ಕು ಒಳ್ಳೆಯದು. ಅಂದರೆ ಭಾವಕ್ಕೆ ತಕ್ಕಂತೆ ಭಾಗ್ಯ ಎನ್ನುತ್ತೆವೆ. ಆದರೆ ಆಧ್ಯಾತ್ಮದಲ್ಲಿ ಮನವನ್ನು ನಿರ್ವಿಕಲ್ಪ ಸ್ಥಿತಿಯಲ್ಲಿ ನಿಲ್ಲಿಸುವುದೆ ಸಾಧನೆ. ಅಂದರೆ ಯಾವುದೆ ಸಂಕಲ್ಪಗಳು ಮನದಲ್ಲಿ ಹುಟ್ಟಬಾರದು. ಯಾವುದೆ ಯೋಚನೆಗಳಿಲ್ಲದ ಶಾಂತ ಮನಸ್ಕನಾಗಿರಬೇಕು. ಮನದ ನಿಶಬ್ದದ ಅನುಭವ ನಮಗಾಗಬೇಕು. ಲಿಂಗ ಪೂಜೆಯ ವೇಳೆಯಲ್ಲಿ ಮನವು ನಿಸ್ಸಂಕಲ್ಪ ಸ್ಥಿತಿ ತಲುಪುವುದೆ ಲಿಂಗಾಂಗ ಸಾಮರಸ್ಯ. ಮೌನ ಬಂಗಾರ ಅಂದರೆ ಮನಸ್ಸನ್ನು ಮೌನವಾಗಿಸುವುದು. ಅಂದಾಗ ಮಾತ್ರ ಅಲ್ಲಿ ಪರಮಾತ್ಮನ ವಾಸ.
_______________________
ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ
ಎನ್ನ ಬಿಡು ತನ್ನ ಬಿಡು ಎಂಬುದು ಕಾಯವಿಕಾರ
ಎನ್ನ ಬಿಡು ತನ್ನ ಬಿಡು ಎಂಬುದು ಮನೋವಿಕಾರ
ಕರಣೇಂದ್ರೀಯಗಳೆಂಬ ಸೊಣಗ ಮುಟ್ಟದ ಮುನ್ನ
ಮನ ನಿಮ್ಮನೆಯ್ದುವುದೇ ಕೂಡಲಸಂಗಮ ದೇವಾ.
________________________
ಬುದ್ಧಿ : ಚಿಂತೆ ಮತ್ತು ಚಿಂತನೆ ಇವುಗಳಲ್ಲಿ ತುಂಬಾ ವ್ಯತ್ಯಾಸವಿದೆ.ಮನುಷ್ಯ ಹಲವಾರು ಚಿಂತೆಯಲ್ಲಿ ತೊಳಲಿ ಬಳಲುತ್ತಾನೆ. ಅದರಿಂದ ತನ್ನ ಜೀವನವನ್ನೆ ವಿನಾಶದತ್ತ ಕೊಡೊಯ್ಯತ್ತಾನೆ. ಅತಿಯಾದ ಬುದ್ಧಿಯಿಂದ ಮಾನವ ಇಂದು ಎನೆಲ್ಲಾ ಅನಾಹುತಗಳಿಗೆ ಕಾರಣನಾಗಿದ್ದಾನೆ. ಯಾಂತ್ರಿಕ ಬದುಕಿನಲ್ಲಿ ಸಾಧನೆಯ ಹೆಸರಿನಲ್ಲಿ ಅಧೋಗತಿಗೆ ಇಳಿಯುತ್ತಿದ್ದಾನೆ. ಅದೆ ತನ್ನ ಉನ್ನತಿಗೆ ಬೇಕಾದ ಸದುದ್ಧೇಶದಿಂದ, ಸದ್ವಿಚಾರದಿಂದ, ಸದ್ಭಕ್ತಿಯಿಂದ, ಕೂಡಿದ ಚಿಂತನೆಗಳನ್ನು ಮಾಡಿದರೆ ಅವನು ಶರಣನಾಗುತ್ತಾನೆ. “ಸದುವಿನಯವೆ ಸದಾಶಿವನ ಒಲುಮೆಯಯ್ಯಾ” ಎನ್ನುವಂತೆ ಸದುದ್ಧೆಶದಿಂದ ಕೂಡಿದ ವಿನಯಶೀಲ ಬುದ್ಧಿ ನಮ್ಮಲ್ಲಿರಬೇಕು.
ದಂದುಗ ಬಿಡದು ಮನದ ಸಂದೇಹ ಹಿಂಗದಾಗಿ
ಮುಂದೆ ಲಿಂಗವ ಕಂಡಿಹೆನೆಂಬುದು ಹುಸಿ ನೋಡಾ
ಬೆಂದ ಕರಣಾದಿಗಳು ಒಂದೆ ಫಥವನರಿಯವು
ಎಂತು ಶಿವಪಥವೆನಗೆ ಸಾಧ್ಯವಪ್ಪುದಯ್ಯ
ಎನ್ನ ತಂದೆ ಕೂಡಲಸಂಗಮ ದೇವಾ
ನಿಮ್ಮ ಶರಣರ ಬಳಿವಿಡಿದಡೆ ಎನ್ನ ದಂದುಗ ಹಿಂಗುವುದು.
___________________
ಚಿತ್ತ : ಯೋಗ ಇದರ ಅರ್ಥವೆ “ಚಿತ್ತವೃತ್ತಿ ನಿರೋದಃ” ಅಂದರೆ ಚಿತ್ತದಲ್ಲಿ ಅಲೆಯಂತೆ ಬರುವ ಯೋಚನೆಗಳನ್ನು ತಡೆಗಟ್ಟುವುದೆ ಯೋಗ. ಅಂದರೆ ಚಿತ್ತದಲ್ಲಿ ಸಾಕಷ್ಟು ಆಸೆ ಆಕಾಂಕ್ಷೆಗಳು ಬರುತ್ತಿರುತ್ತವೆ. ಇವುಗಳನ್ನು ತಡೆಗಟ್ಟುವುದರಿಂದ ಮಾತ್ರ ಸಾಧನೆ ಸಾಧ್ಯ. ಚಿತ್ತಶುದ್ಧಿ ಇಲ್ಲದೆ ಶಿವಯೋಗದಲ್ಲಿ ಜೀವಾತ್ಮ ಮತ್ತು ಪರಮಾತ್ಮರ ಸಂಯೋಗವಾಗಲಾರದು. ಚಿತ್ತಶುದ್ಧಿಯಿಂದ ಅಖಂಡ ಪರಿಪೂರ್ಣತೆ ಸಾಧ್ಯ. ಆದ್ದರಿಂದ ಆದಯ್ಯ ಶರಣರು ಚಿತ್ತದಲ್ಲಿ ನಿರಾಪೇಕ್ಷೆ ಇರಬೇಕು . ಮತ್ತು ಬಸವಣ್ಣನವರು “ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ” ಎಂದು ಹೇಳಿದ್ದಾರೆ.
____________________________
ಮೌನದಲುಂಬುವುದು ಆಚರವಲ್ಲ
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ ಶಿವಶರಣೆನ್ನುತ್ತಿರಬೇಕು
ಕೂಡಲಸಂಗನ ನೆನೆಯುತ್ತ ಉಂಡಡೆ
ಕರಣವೃತ್ತಿಗಳಡಗುವವು.
_______________________
ಅಹಂಕಾರ : ನಾನು ಎನ್ನುವ ಅಹಂಕಾರ ಮತ್ತು ಅಭಿಮಾನ ಮಾನವನ ಸಾಧನೆಗೆ ಅಡ್ಡಯನ್ನುಂಟುಮಾಡುತ್ತವೆ. ವೀರ ವಿರಾಗಿನಿ ಅಕ್ಕಮಹಾದೇವಿ ಹೇಳುವಂತೆ “ನಾನಳಿದು ನೀನುಳಿವ ಪರಿಯ ತೋರಯ್ಯಾ ಎನಗೆ”, ಎಂದು ಚೆನ್ನಮಲ್ಲಕಾರ್ಜುನನಲ್ಲಿ ಕೇಳುತ್ತಾಳೆ. ನಾನು ಎಂಬ ಅಹಂಕಾರ ಅಳಿದು ಹೃದಯದ ತುಂಬ ನೀನೆ ಉಳಯುವ ದಾರಿಯನ್ನು ತೋರಿಸು ಎಂದು ಕೇಳುತ್ತಾಳೆ. ಅಣ್ಣ ಬಸವಣ್ಣನವರು “ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ”. ಎಂದು ನಿರಹಂಕಾರ ಭಾವವನ್ನು ತೋರುತ್ತಾರೆ. ಮತ್ತೋಂದು ಕಡೆ “ನಾನೊಬ್ಬನೆ ಭಕ್ತನು ಉಳಿದಶರಣರೆಲ್ಲ ಲಿಂಗ ಜಂಗಮರು” ಎಂದು ಕಿಂಕರ ಭಾವದಿಂದ ನುಡಿಯುತ್ತಾರೆ. ಎಲ್ಲ ಶರಣರು, ದಾಸರು ಕೂಡಾ ನಿರಹಂಕಾರದಿಂದ ಮಾತ್ರ ಮುಕ್ತಿ ಸಾಧ್ಯ ಎಂದು ಸಾರಿ ಹೇಳಿದ್ದಾರೆ. ನಾನು ನಾನೆಂಬ ಅಹಂಕಾರಿಗಳೆಲ್ಲ ಅಳಿದು ಹೋಗಿದ್ದಾರೆ. ನಿರಹಂಕಾರಿಗಳು ಮಾತ್ರ ನಿತ್ಯ, ಸತ್ಯ ಚೇತನರಾಗಿದ್ದಾರೆ.
______________________
ಈ ಕರಣೇಂದ್ರೀಯಗಳಿಂದಲೆ ಒಳಿತು ಕೆಡಕುಗಳು ಸಂಭವಿಸುತ್ತವೆ. ಹಾಗಾದರೆ ಈ ಕರಣೇಂದ್ರೀಯಗಳ ನಿಯಂತ್ರಣ ಹೇಗೆ ಸಾಧ್ಯ, ಅಂದರೆ ನಾಡಿ ಶೋಧನದಿಂದ (ಅನುಲೋಮ, ವಿಲೋಮ ) ಅಂದರೆ ಪ್ರಣಾಯಾಮ ಮತ್ತು ಪ್ರತ್ಯಾಹಾರದಿಂದ ಮಾತ್ರ ಸಾಧ್ಯ. ನಾಡಿ ಶೋಧನದಿಂದ “ಇಡಾ, ಪಿಂಗಳ, ಷುಶುಮ್ನ” ನಾಡಿಗಳು ಜಾಗ್ರತವಾಗುತ್ತವೆ.
ಇದರಲ್ಲಿ ಇಡಾ ನಾಡಿಯು ನಮ್ಮ ಎಡ ಭಾಗವನ್ನು ಪ್ರತಿನಿಧಿಸುತ್ತದೆ. ಇದು ಕರಣೇಂದ್ರೀಯಗಳಾದ ಮನ, ಬುದ್ಧಿ, ಚಿತ್ತ, ಅಹಂಕಾರಗಳನ್ನು ನಿಯಂತ್ರಿಸುತ್ತದೆ. ಮನುಷ್ಯ ಅಂತಃರ್ಮುಖಿಯಾಗಲು ಇಡಾ ನಾಡಿಯು ಮುಖ್ಯ ಕಾರಣ. ಇದನ್ನು ಚಂದ್ರನಾಡಿ ಎಂತಲು ಕರೆಯುತ್ತೆವೆ.
ಧರ್ಮದ ಹತ್ತು ಲಕ್ಷಣಗಳಲ್ಲಿ “ದಮೆ” ಯು ಒಂದು. “ದಮೆ” ಅಂದರೆ ಆಂತರಿಕ ಶೌಚ. ಅಂದರೆ ಮನ, ಬುದ್ಧಿ, ಚಿತ್ತ, ಅಹಂಕಾರಗಳನ್ನು ಕಲ್ಮಶಗಳನ್ನು ಕಳೆದು ಶುದ್ಧವಾಗಿಡುವುದು. ಇದನ್ನೆ ಬಸವಣ್ಣನವರು ಅಂತರಂಗ ಶುದ್ಧಿ ಎಂದು ಹೇಳಿದ್ದಾರೆ. ಅಂತರಂಗ ಶುದ್ಧಿಗೆ ಬಾಹ್ಯ ಶುದ್ಧಿಯು ಅವಶ್ಯವಾಗಿ ಬೇಕೆ ಬೇಕು.
ಹೀಗೆ ಕರಣೇಂದ್ರೀಯಗಳು ನಮ್ಮ ಆಧ್ಯಾತ್ಮಿಕ ಸಾಧನೆಗೆ ಮತ್ತು ಸಾಮಾಜಿಕ ಬದುಕಿಗೂ ಕೂಡಾ ಸಹಾಯಕವಾಗುವುದರಿಂದ ಅವುಗಳನ್ನು ಸ್ವಚ್ಛವಾಗಿ ಮತ್ತು ಸಧೃಢವಾಗಿ ಇಟ್ಟುಕೊಂಡಾಗ ಮಾತ್ರ ನಾವು ಶರಣರ ಜೀವನ ನಡೆಸಬಹುದು.
ಶರಣು ಶರಣಾರ್ಥಿಗಳು
ಸವಿತಾ.ಎಮ್.ಮಾಟೂರ
ಇಲಕಲ್ಲ