e-ಸುದ್ದಿ, ಮಸ್ಕಿ
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಸರ್ಕಾರಿ ಯೋಜನೆಗಳ ಸವಲತ್ತುಗಳನ್ನು ಸದುಪಯೋಗ ಪಡೆದುಕೊಂಡು ಸ್ವಯಂ ಉದ್ಯೋೀಗಿಗಳಾಗಿ ಆರ್ಥಿಕವಾಗಿ ಮುಂದೆ ಬರಬೇಕು ಎಂದು ಪುರಸಭೆ ಅಧ್ಯಕ್ಷೆ ವೀಜಯಲಕ್ಷ್ಮೀ ಬಸನಗೌಡ ಪೋಲಿಸ್ ಪಾಟೀಲ್ ಹೇಳಿದರು.
ಪಟ್ಟಣದ ಗಚ್ಚಿನ ಮಠದ ಅವಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಜಿಲ್ಲಾ ಪಂಚಾಯತ್ ರಾಯಚೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಿಳೆಯರೊಂದಿಗೆ ನಡೆದ ಸಂವಾದ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಅತಿ ಹಿಂದುಳಿದ ಮಹಿಳೆಯರಿಗಾಗಿ ಸರ್ಕಾರದಿಂದ ಸಾಕಷ್ಟು ಯೋಜನೆಗಳಿವೆ. ಆದರೆ ಅವುಗಳ ಬಗ್ಗೆ ನಮ್ಮ ಮಹಿಳೆಯರಲ್ಲಿ ಜಾಗೃತಿ ಕಡಿಮೆ ಇದೆ. ಇದರಿಂದ ಹಿನ್ನಡೆಯಾಗುತ್ತಿದೆ. ಸಂವಾದ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಮಹಿಳೆಯರಿಗೆ ತಿಳಿಸಿದಾಗ ಮಾತ್ರ ಮಹಿಳೆಯರು ಪ್ರತಿಯೊಂದು ಕ್ಷೇತ್ರಗಳಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಮಹಿಳಾ ಅಭಿವೃದ್ಧಿ ನಿಗಮ ಯೋಜನಾಧಿಕಾರಿ ಗೋಪಾಲ್ ನಾಯಕ ಮಾತನಾಡಿ ಮಾಜಿ ದೇವದಾಸಿ ಮಹಿಳೆರಿಗೆ ಮಾಶಾಸನ ಸ್ವಯಂ ಉಧ್ಯೋಗ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವ ದೇವದಾಸಿಯರಿಗೆ ಮನೆಗಳನ್ನು ಕಟ್ಟಿಕೊಳ್ಳುವುದಕ್ಕಾಗಿ ಸಹಾಯಧನ ನೀಡಲಾಗುವುದು. ಅಲ್ಲದೇ ದೇವದಾಸಿ ಮಹಿಳೆಯರ ಹೆಣ್ಣು ಮಕ್ಕಳ ಮದುವೆಗಾಗಿ ಸರ್ಕಾರದಿಂದ ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಮಗದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕ ವೀರನಗೌಡ, ಜಿಪಂ ಮಾಜಿ ಸದಸ್ಯೆ ಶರಣಮ್ಮ ಕಾಮರಡ್ಡಿ, ಪುರಸಭೆ ಉಪಾಧ್ಯಕ್ಷೆ ಕವಿತಾ ಮಾಟೂರು, ಸದಸ್ಯರಾದ ಪುಷ್ಪಾ ಸೊಪ್ಪಿಮಠ, ವರ್ಷಾ ಪ್ರಸನ್ನ ಪಾಟೀಲ್, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ ಅಧ್ಯಕ್ಷೆ ಶರಣಮ್ಮ ಹೂನೂರು, ಶ್ರೀದೇವಿ ಶ್ರೀನಿವಾಸ, ಈರಮ್ಮ ಗುಂಜಳ್ಳಿ, ಶರಣಮ್ಮ ಪಾಟೀಲ್ ಇದ್ದರು.