ಕವಿತೆ
ದೇವರ ಚಟ
ನಿನ್ನ ಪದತಲದಲ್ಲೇ ತಲತಲಾಂತರದಿಂದ
ಅಜ್ಜ ಮುತ್ತಜ್ಜರು ಮೊಮ್ಮಕ್ಕಳನ್ನು ಕೂರಿಸಿಕೊಂಡು
ಗುಡಿಗೆ ಬಂದವರನ್ನೇ ಅಮ್ಮಾ ತಾಯಿ, ಯಪ್ಪಾ ತಂದೆ
ಎಂದು ಪೀಡಿಸುತ್ತ ಭಿಕ್ಷೆ ಬೇಡುವುದ ಕಂಡೂ
ನನ್ನನ್ನು ಸಿರಿವಂತನನ್ನಾಗಿಸಲು ಬೇಡುವುದು
ಚಟವಾಗಿದೆ ನನಗೆ
ನಿನ್ನ ಸನಾತನ ಪಾದ ಮೈ ತೊಳೆದ ನೀರು
ಮೋರಿಯ ಮೂಲಕ ಹೌಜಿಗೆ ಸೇರಿ
ಹುಳುಗಳಾದ ತೀರ್ಥವನ್ನೇ ಕುಡಿದು
ಭಕ್ತಿಯಿಂದ ತಲೆಗೆ ಒರೆಸಿ ನನ್ನ ಮೈಮನಗಳನ್ನು
ಶುಚಿಗಾಗಿಡಲು ಬೇಡಿಕೊಳ್ಳುವುದು
ಚಟವಾಗಿದೆ ನನಗೆ
ಗರ್ಭ ಗುಡಿಯ ಬಾಗಿಲಲಿ ಭಕ್ಳಳೊಬ್ಬಳೇ ಇದ್ದರೆ
ನಿನ್ನಪೂಜಾರಿ ಅವಳ ಕೆನ್ನೆಗೆ ಅರಿಸಿನ
ಹಚ್ಚಿದಂತೆ ಮಾಡಿ ಕೆನ್ನೆ ಜಿಗುಟುವುದನ್ನು
ಕೇಳಿಯೂ ಪತ್ನೀ ಸಮೇತನಾಗಿ ಬಂದು
ನಮ್ಮನ್ನು ಕಾಪಾಡಲು ಕೇಳುವುದು
ಚಟವಾಗಿದೆ ನನಗೆ
ಹುಳು ಬಿದ್ದ ಕಾಲನ್ನು ಚಾಚಿಕೊಂಡೋ
ಮೊಂಡಾದ ಕೈಗಳಿಂದ ತಮಟೆ ಬಾರಿಸುತ್ತಲೋ
ಅವರುಗಳು ಹಾಡುವ ನಿನ್ನ ಮಹಿಮೆ ಕೇಳುತ್ತ
ನನ್ನ ಕುಟುಂಬಕ್ಕೆ ಆಯುಷ್ಯಾರೋಗ್ಯ
ಕೊಡುವಂತೆ ಬೇಡಿಕೊಳ್ಳುವುದು
ಚಟವಾಗಿದೆ ನನಗೆ
ನಿನ್ನ ಗುಡಿಗೊಂದಿಕೊಂಡಿದ್ದ
ಬೋರನ ಜಮೀನನ್ನು ಹೇಳಿಕೆ ಹೇಳಿಸಿ
ಅವನೇ ದೇವಸ್ಥಾನಕ್ಕೆ ಬರೆದುಕೊಡುವಂತೆ
ಮಾಡಿದ್ದನ್ನು ನೋಡಿಯೂ ನನ್ನ ವ್ಯಾಜ್ಯಗಳ
ಭಾರ ನಿನಗೇ ಒಪ್ಪಿಸುವುದು
ಚಟವಾಗಿದೆ ನನಗೆ
ಸಾವಿರಾರು ರೂಪಾಯಿಗಳ ಔಷಧ ನುಂಗಿ
ವೈದ್ಯರು ಹೇಳಿದ ಪಥ್ಯ ಪಾಲಿಸಿ
ನನ್ನ ಖಾಯಿಲೆ ಗುಣವಾದೊಡನೆ
ಓಡೋಡಿ ಗುಡಿಗೆ ಬಂದು, ನಿನಗೆ ಅಡ್ಡಬಿದ್ದು,
ಬೂದಿ ಸೇವಿಸಿ, ಕಾಣಿಕೆ ಸಲ್ಲಿಸುವುದು
ಚಟವಾಗಿದೆ ನನಗೆ
ಅಪರೂಪಕ್ಕೊಮ್ಮೆ ಗೆದ್ದಾಗಲೂ
ನಿನ್ನದೇ ಕೃಪೆಯೆನ್ನುವುದು
ಪ್ರತಿನಿತ್ಯ ಸೋತಾಗಲೂ
ನನ್ನದೇ ಕರ್ಮಫಲ ಅಂದುಕೊಳ್ಳುವುದು
ಮತ್ತು ತಪ್ಪದೆ ಉತ್ಸವ ಮಾಡುವುದು
ಚಟವಾಗಿದೆ ನನಗೆ
-ರವೀ ಹಂಪಿ