ವಚನ ಸಾಹಿತ್ಯದಲ್ಲಿ ಆರ್ಥಿಕ ಚಿಂತನೆ ಆಧುನಿಕ ಆರ್ಥಿಕ ಅಭಿವೃದ್ಧಿ ಕಾರ್ಯತಂತ್ರಗಳ ತುಲನಾತ್ಮಕ ಅಧ್ಯಯನ

ವಚನ ಸಾಹಿತ್ಯದಲ್ಲಿ ಆರ್ಥಿಕ ಚಿಂತನೆ
ಆಧುನಿಕ ಆರ್ಥಿಕ ಅಭಿವೃದ್ಧಿ ಕಾರ್ಯತಂತ್ರಗಳ ತುಲನಾತ್ಮಕ ಅಧ್ಯಯನ

ಹುಟ್ಟು ಬಂಜೆಯ | ಮಗನೊಬ್ಬ ||
ಈಯದೆಮ್ಮೆಯ | ಗಿಣ್ಣವ ಬೇಡಿದನು ||
ಕೊಂಬಿಲ್ಲದ ಮರನನೇರಿ | ತುಂಬ ಹಣ್ಣ ಮೆಲಿದನು ||
ಗುಹೇಶ್ವರ ಗುಹೇಶ್ವರ | ಇಳಿ ಎಂದಡೆ ಅಳುತ್ತೈದಾನೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-288 / ವಚನ ಸಂಖ್ಯೆ-1600)

ತನ್ನ ಅಂತರಂಗವೇ ಅರಿವಾಗದ ಮತ್ತು ಮಾನವ ಐಹಿಕ ಸುಖಭೋಗಗಳ ಜಾಲದಲ್ಲಿ ಸಿಕ್ಕಿಬಿದ್ದಿರುವ, ಆಧ್ಯಾತ್ಮದ ಸೊಗಡಿರುವ ಅದ್ಭುತ ಪರಿಕಲ್ಪನೆಯ ಅಲ್ಲಮ ಪ್ರಭುಗಳ ವಚನವಿದು. ಇನ್ನೂ ಹುಟ್ಟದೇ ಇರುವ ಅಂತರಂಗದ ಅರಿವನ್ನು ಹುಟ್ಟು ಬಂಜೆಗೆ ಹೋಲಿಸುವ ಅದ್ಭುತ ಶಬ್ದ ಪ್ರಯೋಗ ಇದು. Pure Philosophical Terminology ನಲ್ಲಿ ಇದನ್ನು “ಆತ್ಮಗರ್ಭ” ಅಂತಾರೆ. ಪ್ರತೀದಿನ ಏನಾದರೊಂದು ಹೊಸದನ್ನು ಕಲಿತು ತನ್ನನ್ನು ತಾನು ಮರುಹುಟ್ಟು ಪಡೆಯುವುದು. Every day we learn something by which we take a rebirth a little bit by little bit every day. ಹುಟ್ಟು ಬಂಜೆಯ ಮಗ ಅಂದರೆ ಅರಿವು ಇಲ್ಲದೇ ಹುಟ್ಟಿದ ಜ್ಞಾನ. ಇಂಥ ಮಗ ಈಯದ ಎಮ್ಮೆಯ ಗಿಣ್ಣವನ್ನು ಬೇಡತಾ ಇದ್ದಾನೆ. ಅಂದರೆ Readymade food which is not possible to manufacture. ಅಂದರೆ ಅರಿವಿನ ವಿಸ್ತಾರ ಮತ್ತು ಜ್ಞಾನವನ್ನು ಸಂಪಾದಿಸದೇ ಎಲ್ಲವೂ ಬೇಕೆನ್ನುವ ಹುಚ್ಚುತನ. ಅಜ್ಞಾನಿಯೊಬ್ಬ ಲಂಚ ಕೊಟ್ಟು ಸಾಹಿತ್ಯ ವಿದ್ವಾನ್ ಪ್ರಶಸ್ತಿ ತೆಗೆದುಕೊಂಡ ಹಾಗೆ.

ಪಂಚೇಂದ್ರಿಯಗಳನ್ನು ರೆಂಬೆ ಕೊಂಬೆಗಳಿಲ್ಲದ ಮರಕ್ಕೆ ಹೋಲಿಸುವ ಮತ್ತು ತುಂಬ ಹಣ್ಣು ಮೆಲಿದನು ಎನ್ನುವ ಐಹಿಕ ಸುಖಭೋಗಗಳು ಎನ್ನುವ ಅಲ್ಲಮ ಪ್ರಭುಗಳ ಅನುಭಾವ ಸಾಹಿತ್ಯದ ಅದ್ಭುತ ಶಬ್ದ ಜೋಡಣೆ. ಅಂತರಂಗದ ಅರಿವು ಮೂಡಿಸುತ್ತೇನೆ ಮರದಿಂದ ಇಳಿದು ಬಾ ಎಂದರೆ ಅಳುತ್ತಾನೆ ಎನ್ನುವಲ್ಲಿ ಮಾನವ ಐಹಿಕ ಸುಖಭೋಗಗಳಲ್ಲಿ ಎಷ್ಟು ತಲ್ಲೀನನಾಗಿದ್ದಾನೆ ಎನ್ನುವುದನ್ನು ನಾಲ್ಕೇ ನಾಲ್ಕು ಸಾಲುಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ ಅಲ್ಲಮ ಪ್ರಭುಗಳು.
In the nut shell, we are in a state of “Suspended Sence of Disbelief” that all is well & all is well. When it comes to enlightening our soul it goes to a spin not to accept the reality. This is exactly what is happening in our modern day “Economic Development Strategies and Transformation” scenario.

ಆಧುನಿಕ ಪ್ರಪಂಚದ ಎಲ್ಲ ದೇಶಗಳೂ ಮಾಡತಾ ಇರೋ ಆಧುನಿಕ ಆರ್ಥಿಕ ಅಭಿವೃದ್ಧಿಯ ಕಾರ್ಯತಂತ್ರಗಳು ಮತ್ತು ಪರಿವರ್ತನೆಯ ಸೂತ್ರಗಳು, ನಿರ್ಧಾರಗಳು, ಆಧುನಿಕ ಯೋಚನೆಗಳು, ಅನುಷ್ಠಾನಗೊಳಿಸುತ್ತಿರುವ ಮಾರುಕಟ್ಟೆ ವ್ಯವಸ್ಥೆಗಳು ಮೇಲ್ನೋಟಕ್ಕೆ ಎಲ್ಲವೂ ಸರಿ ಮತ್ತೆ ಮತ್ತೆ ಎಲ್ಲವೂ ಸರಿ ಎನ್ನುವಂತಿದೆ.

ಈ ಯೋಜನೆಗಳ ದೋಷಪೂರಿತ ಅನುಷ್ಠಾನ (Faulty Approach) ದಿಂದ ಉಂಟಾಗುವ ಅಡ್ಡ ಪರಿಣಾಮಗಳಿಂದ ಭ್ರಷ್ಠಾಚಾರ ಮತ್ತು ಕಪ್ಪುಹಣದ ಸಂಗ್ರಹದಿಂದ ಬಡವ ಶ್ರೀಮಂತರ ನಡುವೆ ನಿರ್ಮಾಣವಾಗುತ್ತಿರುವ ಕಂದಕ ಮತ್ತು ಶೀತಲ ಸಮರ ಅನಾಹುತಗಳಿಗೆ ಕಾರಣವಾಗಿದೆ. ಇದರ ಒಂದು ಉದಾಹರಣೆ ಅಂದರೆ ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣ (Globalization & Liberalization) ದ ಪ್ರಭಾವದಿಂದ ಭಾರತದ ಪರಂಪರೆ, ಸಂಸ್ಕೃತಿ ಮತ್ತು ಕೌಟುಂಬಿಕ ವ್ಯವಸ್ಥೆಯ ಮೇಲೆ ಆಗಿರುವುದನ್ನು ನಾವು ಕಾಣಬಹುದು. ಇಂಥ ಶೀತಲ ಸಮರವನ್ನು ತಮ್ಮ ಒಂದು ವಚನದಲ್ಲಿ ಬಸವಣ್ಣನವರು 12 ನೇ ಶತಮಾನದಲ್ಲಿಯೇ ಎಚ್ಚರಿದ್ದಾರೆ.

ಊರ ಸೀರೆಗೆ | ಅಸಗ ಬಡಿ ಹಡೆದಂತೆ ||
ಹೊನ್ನೆನ್ನದು ಮಣ್ಣೆನ್ನದು | ಎಂದು ಮರುಳಾದೆ ||
ನಿಮ್ಮನರಿಯದ | ಕಾರಣ ||
ಕೆಮ್ಮನೆ ಕೆಟ್ಟೆ | ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-34 / ವಚನ ಸಂಖ್ಯೆ-310)

ಇನ್ಯಾರದೋ ಸೀರೆಯನ್ನು ತನ್ನದೇ ಸೀರೆಯೆಂದು ಭಾವಿಸುವ ಅಗಸನನ್ನು ಆರ್ಥಿಕತೆಗೆ ಹೋಲಿಸಬಹುದು. ಆಧುನಿಕ ಅರ್ಥ ವ್ಯವಸ್ಥೆಯೇ ಹೊರಗಿನವರು ಹೂಡಿದ ಬಂಡವಾಳದಿಂದ ನಡೆಯುವ ಪ್ರಕ್ರಿಯೆ. ಶೇರು ಮಾರುಕಟ್ಟೆ (Stock Market), ಪಾಶ್ಚಿಮಾತ್ಯ ಬಂಡವಾಳಶಾಹಿ ಅರ್ಥ ವ್ಯವಸ್ಥೆ (Anglo Saxon Capitalism) ಅಥವಾ ಮುಕ್ತ ಮಾರುಕಟ್ಟೆ ಮಾದರಿ (Free Market Theory) ಇದಕ್ಕೆ ಉತ್ತಮ ಉದಾಹರಣೆಗಳು. ಹೊನ್ನು ಮಣ್ಣು ಎಲ್ಲವೂ ನನ್ನದೇ ಮತ್ತು “ನಿಮ್ಮನರಿಯದ ಕಾರಣ” ಅಂದರೆ ಪರಿಣಾಮಗಳನ್ನೂ ಲೆಕ್ಕಿಸದೇ ಹೊಣ್ಣು ಮಣ್ಣಿಗಾಗಿ ಮರುಳಾಗಿ ವ್ಯರ್ಥವಾಗಿ ಹಾಳಾಗಿ ಹೋಗುವಂತಾಯಿತು. Stock Market ಏರಿಳಿತವನ್ನು ಕಂಡಾಗ ಆಗುವ ಆರ್ಥಿಕ ಅನಾಹುತಗಳನ್ನು 2008 ರಲ್ಲಿ ಅಮೇರಿಕದಲ್ಲಿ ಉಂಟಾದ “ಆರ್ಥಿಕ ಹಿಂಜರಿತ” (Economic Recession) ದಿಂದ ಇಡೀ ಪ್ರಪಂಚದ ಆರ್ಥಿಕ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗಿದ್ದನ್ನು ನಾವೀಗಾಗಲೇ ಕಂಡಿದ್ದೇವೆ. ಇಂದಿನ ಆರ್ಥಿಕ ನೀತಿಗಳಿಂದ ಅಸಮಾನತೆಯನ್ನು ಬಿತ್ತುವ ಮತ್ತು ಆಗುವ ಅನಾಹುತಗಳನ್ನು ಎಷ್ಟು ಸರಳವಾಗಿ ಅರ್ಥ ಮಾಡಿಕೊಳ್ಳಬಹುದು ಬಸವಣ್ಣನವರ ಈ ವಚನದ ಮೂಲಕ.

ಜರ್ಮನಿಯ ತತ್ವಜ್ಞಾನಿ ಮತ್ತು ಕಮ್ಯುನಿಸ್ಟ್ ಸಿದ್ಧಾಂತದ ಪ್ರತಿಪಾದಕರಾದ ಫ್ರೆಡರಿಕ್ ಏಂಜಲ್ಸ್ ಮತ್ತು ಕಾರ್ಲ್ ಮಾರ್ಕ್ಸ್ ಇವರಿಬ್ಬರ ಆರ್ಥಿಕ ಚಿಂತನೆಗಳ ಮತ್ತು ಆರ್ಥಿಕ ನೀತಿಗಳ ಅಪಾರ ಪ್ರಭಾವ ಭಾರತದ ಮೇಲೆ ಇದೆ. 1845 ರಲ್ಲಿ ಕಾರ್ಲ್ ಮಾರ್ಕ್ಸ ಜೊತೆಗೂಡಿ “The Communist Manifesto” ಬಿಡುಗಡೆ ಮಾಡತಾರೆ. ಬಸವಣ್ಣನವರ ಸಾಮಾಜಿಕ ಚಳುವಳಿಗಳನ್ನು ಮತ್ತು ಸಮಾಜೋ-ಧಾರ್ಮಿಕ ಚಳುವಳಿಗಳನ್ನೂ ಸಹ ಆಳವಾಗಿ ಅಭ್ಯಾಸ ಮಾಡಿದ್ದಾರೆ.

Friedrich Engels Says: “Labour Created Man”. Basavanna declared “Work is Worship”. By doing so, he exalted physical labour into a religious ideology and gave a severe blow to a society which looked down upon different professions since labour was fundamentally woven fabric of caste.

ಫ್ರೆಡರಿಕ್ ಏಂಜಲ್ಸ್ ಹೇಳತಾರೆ: ಕಾಯಕವೇ ಕೈಲಾಸ ಎಂದ ಬಸವಣ್ಣನವರು “ಕಾಯಕ ಯೋಗಿಗಳ ನಾಯಕ” ಎನ್ನುವ ಮೂಲಕ ಶ್ರೇಣೀಕೃತ ಸಮಾಜದಲ್ಲಿ ತುಳಿತಕ್ಕೊಳಗಾದ ಕಾಯಕ ಯೋಗಿಗಳಿಂದ ಆರ್ಥಿಕ ಮತ್ತು ಸಮಾಜೋ-ಧಾರ್ಮಿಕ ಚಳುವಳಿಯನ್ನು ಹುಟ್ಟು ಹಾಕಿದರು. ಶ್ರಮಿಕ ವರ್ಗದವರನ್ನು ಮೇಲಕ್ಕೆತ್ತುವ ಕೆಲಸವನ್ನು ಬಸವಣ್ಣನವರು ಮಾಡಿದರು. ಅವರ ಕಾಯಕಕ್ಕೆ ದೈವತ್ವವನ್ನು ಕೊಡುವ ಮೂಲಕ ಅವರ ಕಾಯಕಕ್ಕೆ ನ್ಯಾಯ ಒದಗಿಸಿದರು.

ಜಾತಿ ಸೂಚಕ ಹೆಸರುಗಳು ಅಥವಾ ಜಾತಿ ವಾಚಕವನ್ನೇ ದೈವತ್ವವನ್ನಾಗಿಸಿದ ಬಸವಣ್ಣನವರು ಅವರಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಿದ್ದರು.

ಸೆಟ್ಟಿ ಎಂಬೆನೆ | ಸಿರಿಯಾಳನ? ||
ಮಾಡಿವಾಳಯ್ಯನೆಂಬೆನೆ | ಮಾಚಯ್ಯನ? ||
ಡೋಹರನೆಂಬೆನೆ | ಕಕ್ಕಯ್ಯನ? ||
ಮಾದರನೆಂಬೆನೆ | ಚೆನ್ನಯ್ಯನ? ||
ಆನು ಹಾರುವೆನೆಂದಡೆ | ಕೂಡಲ ಸಂಗಯ್ಯ ನಗುವನಯ್ಯಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-36 / ವಚನ ಸಂಖ್ಯೆ-345)

ಇದನ್ನೇ ಇಟಲಿಯ ಕ್ಯಾಥೋಲಿಕ್ ಪಾದ್ರಿ “ಥಾಮಸ್ ಅಕ್ವಿನಾಸ್” ಎನ್ನುವ ತತ್ವಜ್ಞಾನಿಯು 13 ನೇ ಶತಮಾನದಲ್ಲಿ ಹೇಳಿದ್ದು. “The wealth of Nations and The Theory of Moral Sentiments” ಎನ್ನುವ ಅವರ ಪ್ರವಚನದಲ್ಲಿ “ಭಾವನಾತ್ಮಕವಾಗಿ ಧರ್ಮ ಮತ್ತು ಆರ್ಥಿಕ ಚಿಂತನೆಗಳು ಒಂದಕ್ಕೊಂದು ಪೂರಕ ಚಿಂತನೆಗಳು ಆದರೂ ಅವೇ ಮುಖ್ಯವಲ್ಲ” ಎಂದು ಹೇಳುವ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಇಂಥ ಚಿಂತನೆಗಳನ್ನು ಬಸವಾದಿ ಶರಣರ ವಚನಗಳಲ್ಲಿ ನಾವು ಕಾಣಬಹುದು.

“ಜಾಗತೀಕರಣ” (Globalization) ಮತ್ತು ಉದಾರೀಕರಣ (Liberalization) ಎಂಬ ಎರಡು ಮಾದರಿಗಳು ಇಡೀ ಪ್ರಪಂಚವನ್ನು ಆವರಿಸಿರುವ ಆರ್ಥಿಕ ಮಾದರಿಗಳು. ತಾಂತ್ರಿಕವಾಗಿ ಅಂತರ್ರಾಷ್ಟ್ರೀಯ ಸ್ಥರದಲ್ಲಿ ನಡೆಯುವ ವ್ಯಾಪಾರ ವಹಿವಾಟು, ಬಂಡವಾಳ ಹೂಡಿಕೆ ಮತ್ತು ಮಾಹಿತಿ ತಂತ್ರಜ್ಞಾನದ ವಿನಿಮಯ ಜಾಗತೀಕರಣದ ಮೂಲಮಂತ್ರ. ಜಾಗತೀಕರಣದ ಪರಿಣಾಮ ಪರಿಸರ, ವಾತಾವರಣ, ಸಂಸ್ಕೃತಿ, ರಾಜಕೀಯ ವ್ಯವಸ್ಥೆ, ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಜನಜೀವನದ ಮೇಲೆ ಅಪಾರ ಪ್ರಭಾವ ಬೀರುತ್ತದೆ.

ಸ್ವಾತಂತ್ರ್ಯಾನಂತರ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಮೂರು ಸುನಾಮಿಗಳನ್ನು ಕಂಡಿದೆ. ಮೊದಲನೇ ಇಪ್ಪತೈದು ವರ್ಷ ಸಮಾಜವಾದ (Socialism), ಏರಡನೇ ಇಪ್ಪತೈದು ವರ್ಷ ಜ್ಯಾತ್ಯಾತೀತತೆ (Secularism) ಮತ್ತು ಮೂರನೇ ಇಪ್ಪತೈದು ವರ್ಷ ಜಾಗತೀಕರಣ (Globalization). ಎಂಥ ಪರಿಸ್ಥಿತಿಯೆಂದರೆ ಅತೀವೇಗವಾಗಿ ಬರುವ ವಾಹನದ ಪ್ರಖರ ಬೆಳಕಿನ ಮುಂದೆ ಜಿಂಕೆಮರಿಯೊಂದಕ್ಕೆ ದಾರಿಕಾಣದೇ ನಿಂತಂತೆ ಭಾಸವಾಗಿತ್ತು. ಈ ಪ್ರಖರ ಬೆಳಕಿನಡಿಯಲ್ಲಿ ಭಾರತದ ಉತ್ಕೃಷ್ಟ ಸಾಮಾಜಿಕ ಜನಜೀವನ, ಜಾನಪದ ಸಂಸ್ಕೃತಿ ಮತ್ತು ಪರಂಪರೆಗಳು ಕಣ್ಮರೆಯಾಗುವ ಎಲ್ಲ ಲಕ್ಷಣಗಳೂ ಕಂಡು ಬಂದವು. ಜಾಗತೀಕರಣದ ಅತೀ ಶೀಘ್ರ ಮತ್ತು ದೋಷಪೂರಿತ ಅನುಷ್ಠಾನದ ಜೊತೆಗೆ ಅದರ ಸಮಸ್ಯೆಗಳನ್ನೂ ನಾವು ಆಹ್ವಾನ ಮಾಡಿಕೊಳ್ಳಬೇಕಾಯಿತು. ಇಂಥ ಅನುಭವದಿಂದ ಭಾರತದ ಆರ್ಥಿಕ ವ್ಯವಸ್ಥೆ ಮಂಜುಗಡ್ಡೆಯಂತೆ ಹೆಪ್ಪುಗಟ್ಟಿತ್ತು. 1999 ರಿಂದ ಇತ್ತೀಚೆಗೆ ಆರ್ಥಿಕವಾಗಿ ಚೇತರಿಕೆ ನೀಡುವ ಅಭೂತಪೂರ್ವ ಪ್ರಯತ್ನಗಳು ಸಾಗಿಬಂದವು.

ನಗೆಯ ಮಾರಿತಂದೆಯವರ ಈ ವಚನ ಆಧುನಿಕ ಆರ್ಥಿಕ ವ್ಯವಸ್ಥೆಯ ಒಂದು ವಿಡಂಬನೆಗೆ ಸಾಕ್ಷಿ. ಎಂತವರನ್ನೂ ಮರುಳು ಮಾಡಿ ಸಿಕ್ಕಿ ಹಾಕಿಸುವಂಥ ಆರ್ಥಿಕ ನೀತಿಗಳನ್ನು ಹುಟ್ಟುಹಾಕಲಾಗಿದೆ. ಮೇಲ್ನೋಟಕ್ಕೆ ಸರಿ ಎನಿಸಿದರೂ ಅವುಗಳ ಒಳ ತಿರುಳುಗಳು ಮತ್ತು ಒಳ ಒಪ್ಪಂದಗಳು ನಮ್ಮ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ತಳಹದಿಯನ್ನು ತುಳಿಯುವಂಥ ನೀತಿಗಳು.

ಕಲ್ಲಿಯ ಹಾಕಿ | ನೆಲ್ಲವ ತುಳಿದು ||
ಗುಬ್ಬಿಯ ಸಿಕ್ಕಿಸುವ | ಕಳ್ಳನಂತೆ ||
ವಾಗದ್ವೈತವ ಕಲಿತು | ಸಂಸ್ಕೃತದ ಮಾತಿನ ||
ಪಸರವ ಮುಂದೆ | ಇಕ್ಕಿಕೊಂಡು ||
ಮತ್ಸ್ಯದ ವಕ್ತ್ರದಲ್ಲಿ | ಗ್ರಾಸವ ಹಾಕುವನಂತೆ ||
ಅದೇತರ ನುಡಿ? ಮಾತಿನ ಮರೆ | ಆತುರವೈರಿ ಮಾರೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1323 / ವಚನ ಸಂಖ್ಯೆ-1190)

ವಿಶ್ವಸಂಸ್ಥೆಯವರು ನಡೆಸಿದ ಒಂದು ಸಮಾವೇಶದಲ್ಲಿನ ಸಂದೇಶವನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕಾಗಿದೆ.
UNITED NATIONS CONFERENCE ON TRADE AND DEVELOPMENT: April-2005
G-24 Discussion Paper No. 37: PRIORITIZING ECONOMIC GROWTH: ENHANCING MACROECONOMIC POLICY CHOICE
Colin I. Bradford, Jr.
Professor, Department of Economics and School of International Service, American University, Washington, DC.

Bradford Colin writes: However, recent experience also suggests that financial stability is not sustainable without social improvement, and that poverty reduction and enhanced equity are not sustainable without financial stability.

ಬ್ರಾಡ್ ಫೋರ್ಡ್ ಕಾಲಿನ್ ಬರೆಯುತ್ತಾರೆ: ಆಧುನಿಕ ಅರ್ಥಶಾಸ್ತ್ರದ ಅನುಷ್ಠಾನದ ಅನುಭವಗಳ ಪ್ರಕಾರ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಅಭಿವೃದ್ಧಿ ಸಾಧಿಸಿದರೆ ಮಾತ್ರ ಆರ್ಥಿಕ ಸ್ಥಿರತೆ ಮತ್ತು ಸಮರ್ಥನೀಯ ಬೆಳವಣಿಗೆಯನ್ನು ಸಾಧಿಸಲು ಸಾಧ್ಯ. ಹಸಿವು ಮತ್ತು ಬಡತನ ನೀಗಿಸಲು ಉದಾರ ಸಾಮಾಜಿಕ ನೀತಿಯಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ.

ಇದನ್ನೇ 12 ನೇ ಶತಮಾನದಲ್ಲಿ ಬಸವಣ್ಣನವರು ಎಚ್ಚರಿಸಿದ್ದರು ಎನ್ನುವುದು ಅವರ ವಚನಗಳಲ್ಲಿ ನಾವು ಕಾಣಬಹುದು.

ಕಾಂಚನವೆಂಬ | ನಾಯನೆಚ್ಚಿ ||
ನಿಮ್ಮ ನಾನು | ಮರೆದೆನಯ್ಯಾ ||
ಕಾಂಚನಕ್ಕೆ ವೇಳೆಯಲ್ಲದೆ | ಲಿಂಗಕ್ಕೆ ವೇಳೆ [ಯ] ಲ್ಲ ||
ಹಡಿಕೆಗೆ ಮೆಚ್ಚಿದ | ಸೊಣಗ ||
ಅಮೃತದ ರುಚಿಯ ಬಲ್ಲುದೆ | ಕೂಡಲಸಂಗಮದೇವಾ? ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-34 / ವಚನ ಸಂಖ್ಯೆ-314)

ಎಂಥ ಅದ್ಭುತ ಪರಿಕಲ್ಪನೆ. ಆಧುನಿಕ ಅರ್ಥ ವ್ಯವಸ್ಥೆಯನ್ನು ಅಪ್ಪಿಕೊಂಡು “ಲಿಂಗಪೂಜೆ” ಅಂದರೆ ನಮ್ಮ ಪರಂಪರೆ ಸಂಸ್ಕೃತಿಯನ್ನು ಮರೆತಿರುವದನ್ನು ಇಂದು ನಾವು ಕಾಣಬಹುದು. ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಎಷ್ಟು ದೂರ ಮಾಡಿದ್ದೇವೋ ಅಷ್ಟು ಆಧುನಿಕರಾಗಿದ್ದೇವೆ ಎನ್ನುವ ಸಂಕೀರ್ಣ ಕಾಲಘಟ್ಟದಲ್ಲಿ ನಾವಿದ್ದೇವೆ. ಇಲ್ಲಿ ಡಾ. ಎಮ್. ಎಮ್. ಕಲಬುರ್ಗಿಯವರು ಪದೇ ಪದೇ ಹೇಳುತ್ತಿದ್ದ “ಸುಸಂಸ್ಕೃತ ಮನೆಗಳ ವಾತಾವರಣ ಹೇಗಿರಬೇಕು” ಎನ್ನುವ ಮಾತನ್ನು ನಾವು ನೆನಪಿಸಿಕೊಳ್ಳಬೇಕು. ಆರ್ಥಿಕವಾಗಿ ಸಬಲರಾಗಿಲ್ಲದಿದ್ದರೂ ಸಾಂಸ್ಕೃತಿಕವಾಗಿ “ಮಹಾಮನೆ” ಯಾಗಿರಬೇಕು.

ಮನೆ ನೋಡಾ ಬಡವರು | ಮನ ನೋಡಾ ಘನ ||
ಸೋಂಕಿನಲ್ಲಿ ಶುಚಿ | ಸರ್ವಾಂಗ ಕಲಿಗಳು ||
ಪಸರಕ್ಕನುವಿಲ್ಲ | ಬಂದ ತತ್ ಕಾಲಕೆ ಉಂಟು ||
ಕೂಡಲಸಂಗನ ಶರಣರು | ಸ್ವತಂತ್ರಧೀರರು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-35 / ವಚನ ಸಂಖ್ಯೆ-326)

“ಮನೆ ನೋಡಾ ಬಡವರು ಮನ ನೋಡಾ ಘನ” ಎನ್ನುವ ವಚನವನ್ನು ಸಾಮಾನ್ಯವಾಗಿ ಡಾ. ಎಮ್. ಎಮ್. ಕಲಬುರ್ಗಿಯವರು ಎಲ್ಲ ಭಾಷಣಗಳಲ್ಲಿ ಹೇಳತಿದ್ದರು. ಯಾವ ಮನೆಯಲ್ಲಿ ಗುರುಸೇವೆ ಅಂದರೆ ಜ್ಞಾನ ಸೇವೆ, ಲಿಂಗಪೂಜೆ ನಂತರ ಜಂಗಮ ದಾಸೋಹ ಎನ್ನುವ ಸಾಮಾಜಿಕ ಪರಿಕಲ್ಪನೆಯಂತಹ ತ್ರಿವಿಧ ತತ್ವಗಳ ಅನುಷ್ಠಾನ ಇರತದೆಯೋ ಅದು ಮಹಾಮನೆ ಎನ್ನುವ ಬೆಳಕನ್ನು ನೀಡತದೆ ಅನ್ನುವಂತಹ ಮಾತನ್ನು ಹೇಳತಿದ್ದರು. ಇದು ಅವರ ಸಾಮಾಜಿಕ ಕಳಕಳಿಗೆ ಹಿಡಿದಂಥಾ ಕನ್ನಡಿ ಎನ್ನಬಹುದು.

ಇಂಥ ಆಧುನಿಕ ಆರ್ಥಿಕ ವ್ಯವಸ್ಥೆಯ ಕಾಲಘಟ್ಟದಲ್ಲಿ ಬಸವಣ್ಣನವರ ಈ ವಚನ ಇಂದಿಗೂ ಪ್ರಸ್ತುತ. ಎಷ್ಟೇ ಆಧುನಿಕವಾಗಿದ್ದೇವೆ ಎಂದರೂ ಸಹ ನಮ್ಮ ಪರಂಪರೆ ಸಂಸ್ಕೃತಿಯನ್ನು ಮರೆತರೆ ನಾಯಿಗಿಂತ ಕಡೆಯಾಗುತ್ತೇವೆ ಎನ್ನುವುದನ್ನು ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ. ಇದು ಜಾಗತೀಕರಣ ಮತ್ತು ಉದಾರೀಕರಣ ಎನ್ನುವ ಆಧುನಿಕ ಅರ್ಥ ವ್ಯವಸ್ಥೆಯ ಒಂದು ಕೆಟ್ಟ ಪರಿಣಾಮ. ಯಾವುದೋ ಆಧುನಿಕ ಸಂಸ್ಕೃತಿಯ ಬೆನ್ನು ಹತ್ತಿ ಅದನ್ನು ಅನುಕರಿಸುವ ಹುಚ್ಚು ಉನ್ಮಾದದಿಂದ ನಮ್ಮ ಮುಂದಿನ ಪೀಳಿಗೆಯನ್ನು ತಪ್ಪುದಾರಿಗೆ ಎಳೆಯುವದನ್ನು ತಪ್ಪಿಸಬೇಕಾದ ತುರ್ತು ಅನಿವಾರ್ಯತೆ ಇದೆ.

ಆಧುನಿಕ ಅರ್ಥ ವ್ಯವಸ್ಥೆ ಹುಟ್ಟುಹಾಕುವ ಇನ್ನೊಂದು ಕ್ರೂರ ಮುಖವೆಂದರೆ ಭ್ರಷ್ಟಾಚಾರ. ಯಾವಾಗ ಅನೈತಿಕವಾಗಿ ಗಳಿಸಿದ ಹಣದ ಸಂಗ್ರಹ ಮತ್ತು ಚಲಾವಣೆ ಪ್ರಮುಖವಾಗುತ್ತದೆಯೋ ಅದು ಭ್ರಷ್ಟಾಚಾರಕ್ಕೆ ಮುನ್ನುಡಿಯಾಗುತ್ತದೆ. ಇದನ್ನೇ ಶರಣೆ “ಕನ್ನಡಿ ಕಾಯಕದ ರೇಮಮ್ಮ” ಎಷ್ಟು ಅದ್ಭುತವಾಗಿ ಚಿತ್ರಿಸಿದ್ದಾರೆ. ಮೊದಲು ನನ್ನನ್ನು ನಾನು ಅರಿಯಬೇಕು ಆವಾಗಲೇ ಸಮಷ್ಠಿ ಪ್ರಜ್ಞೆಯ ಅರಿವಾಗುವುದು. ಆವಾಗಲೇ ಭ್ರಾಷ್ಟಾಚಾರವೆಂಬ ಮುಳ್ಳನ್ನು ಕಿತ್ತು ಹಾಕಬಹುದು.

ಕೈಯಲ್ಲಿ ಕನ್ನಡಿಯಿರಲು | ತನ್ನ ತಾ ನೋಡಬಾರದೆ? ||
ಲಿಂಗಜಂಗಮದ ಪ್ರಸಾದಕ್ಕೆ | ತಪ್ಪಿದಲ್ಲಿ ಕೊಲ್ಲಬಾರದೆ? ||
ಕೊಂದಡೆ ಮುಕ್ತಿಯಿಲ್ಲವೆಂಬವರ | ಬಾಯಲ್ಲಿ ||
ಪಡಿಹಾರನ | ಪಾದರಕ್ಷೆಯನಿಕ್ಕುವೆ ||
ಮುಂಡಿಗೆಯನೆತ್ತಿರೊ | ಭ್ರಷ್ಟ ಭವಿಗಳಿರಾ? ||
ಎತ್ತಲಾರದಡೆ | ಸತ್ತ ಕುನ್ನಿ ನಾಯ ಬಾಲವ ||
ನಾಲಗೆ ಮುರುಟಿರೋ | ಸದ್ಗುರುಸಂಗ ನಿರಂಗಲಿಂಗದಲ್ಲಿ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-870 / ವಚನ ಸಂಖ್ಯೆ-747)

ಹಾಗಾದರೆ ಈ ಭ್ರಷ್ಟಾಚಾರ ಅಂದರೇನು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಇದರ ವ್ಯಾಖ್ಯಾನವನ್ನು ಅಂತರ್ರಾಷ್ಟ್ರೀಯ ಸ್ಥರದಲ್ಲಿ ಕಾರ್ಯನಿರ್ವಹಿಸುವ TRANSPERENCY INTERNATIONAL ಕೊಡುತ್ತದೆ.

Corruption is the abuse of public office and entrusted power for private gain.
ಸ್ವಂತ ಹಿತಾಸಕ್ತಿಗೊಸ್ಕರ ಸಾರ್ವಜನಿಕ ಕಛೇರಿ ಮತ್ತು ಸಾರ್ವಜನಿಕ ಸೇವೆಗಾಗಿ ವಹಿಸಿಕೊಂಡ ಹುದ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವ ದುರಾಗ್ರಹವುಳ್ಳ ವ್ಯವಸ್ಥೆಯೇ “ಭ್ರಷ್ಟಾಚಾರ”.

ಭ್ರಷ್ಟಾಚಾರದ ಮೂಲಗಳಾದ ಸ್ವಹಿತಾಸಕ್ತಿ ಮತ್ತು ಸಾರ್ವಜನಿಕ ಸೇವೆಗಳ ದುರುಪಯೋಗದ ವಿರುದ್ಧ ಬಸವಾದಿ ಶರಣರು 12 ನೇ ಶತಮಾನದಲ್ಲಿ ಗುಡುಗಿದ್ದಾರೆ. ಅಲ್ಲಮ ಪ್ರಭುಗಳ ಈ ವಚನದಲ್ಲಿ ಇಂಥ ಅನಾಚಾರಗಳನ್ನು ದ್ರೋಹವೆಂದು ನಿರೂಪಿಸಿದ್ದಾರೆ.

ತನುವರ್ಪಿತವೆಂದಡೆ | ಗುರುದ್ರೋಹ ||
ಮನವರ್ಪಿತವೆಂದಡೆ | ಲಿಂಗದ್ರೋಹ ||
ಧನವರ್ಪಿತವೆಂದಡೆ | ಜಂಗಮದ್ರೋಹ ||
ಇಂತೀ ತನುಮನಧನಂಗಳೆಂಬ | ಅನಿತ್ಯವನು ||
ನಿತ್ಯಕ್ಕರ್ಪಿಸಿ ಭಕ್ತನಾದೆನೆಂದಡೆ | ಅದು ಅಜ್ಞಾನ ನೋಡಾ ||
ಒಡೆಯರಿಗೆ | ಉಂಡೆಯ ಮುರಿದಿಕ್ಕಿ ||
ನಾ ಭಕ್ತನೆಂಬ ಮಾತ | ಸಮ್ಯಕ್ ಶರಣರು ಮೆಚ್ಚುವರೆ? ||
ನಮ್ಮ | ಗುಹೇಶ್ವರಲಿಂಗಕ್ಕೆ ||
ನೀನು ಆವುದರಲ್ಲಿ | ಏನರ್ಪಿಸಿ ಭಕ್ತನಾದೆ ||
ಹೇಳಾ | ಸಂಗನಬಸವಣ್ಣಾ? ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-250 / ವಚನ ಸಂಖ್ಯೆ-1219)

ತನು, ಮನ ಮತ್ತು ಧನಗಳು ಸ್ವಂತದ್ದು ಅನ್ನುವದು ಯಾವುದೂ ನಮ್ಮವಲ್ಲ. ಆದರೂ ಅದನ್ನು ಗಳಿಸಿದ್ದೇವೆ ಎನ್ನುವ ಅಹಂಕಾರದಿಂದ ಗುರು, ಲಿಂಗ ಮತ್ತು ಜಂಗಮಕ್ಕೆ ಅರ್ಪಿಸುತ್ತೇನೆ ಎನ್ನುವದನ್ನು ದ್ರೋಹವೆಂದು ಅಲ್ಲಮ ಪ್ರಭುಗಳು ಎಚ್ಚರಿಸಿದ್ದಾರೆ. ಇದು ಭ್ರಷ್ಟಾಚಾರದ ಮೂಲವೆಂದೇ ನಾವು ಪರಿಕಲ್ಪಿಸಬಹುದು. ಗಳಿಸಿದ್ದು ನಮ್ಮದಲ್ಲ ಮತ್ತು ಅದರಲ್ಲಿ ನಮಗೆ ಸಲ್ಲಬೇಕಾದದ್ದನ್ನು ಮಾತ್ರ ಇಟ್ಟುಕೊಂಡು ಸಮಾಜಕ್ಕೆ ಅರ್ಪಿಸಬೇಕು. ಇಲ್ಲವಾದರೆ ಅದು ಭ್ರಷ್ಟಾಚಾರಕ್ಕೆ ಇಂಬು ಮಾಡಿಕೊಡುತ್ತದೆ ಎನ್ನುವ ಸಂದೇಶವನ್ನು ನಮ್ಮ ಬಸವಾದಿ ಶರಣರು ಹೇಳಿದ್ದನ್ನು ನಾವು ಮನಗಾಣಬೇಕಾಗಿದೆ.

ಒಲೆ ಹೊತ್ತಿ ಉರಿದಡೆ | ನಿಲಬಹುದಲ್ಲದೆ ||
ಧರೆ ಹೊತ್ತಿ ಉರಿದರೆ | ನಿಲಲುಬಾರದು ||
ಏರಿ ನೀರುಂಬಡೆ | ಬೇಲಿ ಕೆಯ್ಯ ಮೇವಡೆ ||
ನಾರಿ ತನ್ನ | ಮನೆಯಲ್ಲಿ ಕಳುವಡೆ ||
ತಾಯ ಮೊಲೆವಾಲು | ನಂಜಾಗಿ ಕೊಲುವಡೆ ||
ಇನ್ನಾರಿಗೆ ದೂರುವೆ | ಕೂಡಲಸಂಗಮದೇವಾ? ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-13 / ವಚನ ಸಂಖ್ಯೆ-26)

ಇಂದಿನ ಆಧುನಿಕ ಪ್ರಪಂಚದ ಭ್ರಾಷ್ಟಾಚಾರದ ಪರಿಣಾಮಗಳನ್ನು ನಿರೂಪಿಸುವಂತಿದೆ ಬಸವಣ್ಣನವರ ಈ ವಚನ. ಧರೆ ಹತ್ತಿ ಉರಿಯುವಂತೆ, ಕೆರೆಗೆ ಕಟ್ಟಿದ ಏರಿಯೇ ಎಲ್ಲ ನೀರನ್ನು ಕುಡಿಯುವಾಗ, ಬೇಲಿಯೇ ಎದ್ದು ಹೊಲವನ್ನು ಮೇಯುವಾಗ, ತನ್ನ ಮನೆಯಲ್ಲಿಯೇ ಸ್ತ್ರೀ ಕಳುವು ಮಾಡುವಾಗ ಮತ್ತು ಹೆತ್ತ ತಾಯಿಯ ಎದೆಯ ಹಾಲೇ ಹಾಲಾಹಲವಾದಾಗ ಬದುಕುವುದು ಹೇಗೆ ಎಂಬ ಪ್ರಶ್ನೆಯೇ ಭ್ರಷ್ಟಾಚಾರದ ಕಭಂಧ ಬಾಹುಗಳ ವಿಕೃತ ಮನಸ್ಸನ್ನು ಚಿತ್ರಿಸುತ್ತದೆ.

ಎಂಥ ವಿಡಂಬನೆ ಈ ಆಧುನಿಕ ಭ್ರಷ್ಟಾಚಾರದ ರಾಕ್ಷಸರ ಅಟ್ಟಹಾಸ. ಇದಕ್ಕೆ ಪರಿಹಾರವೆಂದರೆ ಭ್ರಷ್ಟಾಚಾರಿಗಳ ಮನೆಯ ಜೊತೆಗೆ ವೈವಾಹಿಕ ಸಂಭಂಧಗಳನ್ನು ಧಿಕ್ಕರಿಸುವುದರ ಜೊತೆಗೆ ಸಾಮಾಜಿಕ ಬಹಿಷ್ಕಾರ ಹಾಕುವುದು. ಆದರೆ ನಮ್ಮ ಸಮಾಜದಲ್ಲಿ ಆಗುತ್ತಿರುವುದೇನು? ಕಡುಭ್ರಷ್ಟ ವರನಿಗೆ ಕನ್ಯೆಯನ್ನು ಕೊಡಲು ಸಾಲು ಸಾಲಾಗಿ ನಿಂತುಕೊಳ್ಳುವ ಉನ್ಮಾದ. ನಾ ಕಂಡ ಕಡುಭ್ರಷ್ಟರ ಮನೆಯಲ್ಲಿ ಒಂದಿಲ್ಲೊಂದು manufacturing defect ಇರುವ ಮಕ್ಕಳು ಹುಟ್ಟಿದ್ದಾವೆ ಮತ್ತು ಒಂದಿಲ್ಲೊಂದು ರೋಗಿ ಯಾವಾಗಲೂ ಹಾಸಿಗೆಯಲ್ಲಿರುತ್ತದೆ. ಇಂಥ ನರಕವನ್ನು ಅನುಭವಿಸಲು ಯಾಕೆ ಈ ಜಂಜಾಟ, ತಿಕ್ಕಾಟ ಮತ್ತು ಹಾರಾಟ ನನಗೆ ಅರ್ಥವಾಗುವುದಿಲ್ಲ.

ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ | ಸತ್ಪಾತ್ರಕ್ಕೆ ಸಲ್ಲದಯ್ಯಾ ||
ನಾಯ ಹಾಲು ನಾಯಿಗಲ್ಲದೆ | ಪಂಚಾಮೃತಕ್ಕೆ ಸಲ್ಲದಯ್ಯಾ ||
ನಮ್ಮ ಕೂಡಲಸಂಗನ | ಶರಣರಿಗಲ್ಲದೆ ||
ಮಾಡುವ ಅರ್ಥ | ವ್ಯರ್ಥ ಕಂಡಯ್ಯಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-27 / ವಚನ ಸಂಖ್ಯೆ-223)

ಹಾಗಾದರೆ ಈ ಭ್ರಷ್ಟಾಚಾರದ ಮೂಲವಾದ ಕಪ್ಪುಹಣ ಅಂದರೇನು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಇದರ ವ್ಯಾಖ್ಯಾನವನ್ನು NATIONAL INSTITUTE OF PUBLIC FINANCE AND POLICY (NIPEP) ಕೊಡುತ್ತದೆ.

Black money is income illegally obtained or not declared for tax purpose. The aggregates of income which are taxable but not reported to the tax authorities.
ಅನೈತಿಕವಾಗಿ ಗಳಿಸಿದ ಅಥವಾ ಯಾವುದೇ ವರಮಾನ ತೆರಿಗೆಯನ್ನು ಪಾವತಿಸದೇ ಕೂಡಿಟ್ಟ ಹಣ ಅಥವಾ ಆಸ್ತಿ ಮತ್ತು ಬೆಲೆಬಾಳುವ ವಸ್ತುಗಳು. ತೆರಿಗೆಗೆ ಒಳಪಡುವ ಒಟ್ಟು ಆದಾಯವನ್ನು ತೆರಿಗೆ ಇಲಾಖೆಯ ಗಮನಕ್ಕೆ ತರದೇ ಇಟ್ಟುಕೊಂಡಂಥ ವರಮಾನ.

ಬಸವಾದಿ ಶರಣರೆಲ್ಲರೂ ಧನ ಸಂಗ್ರಹವನ್ನು ಧಿಕ್ಕರಿಸಿದವರು. ಕಸಕ್ಕಿಂತ ಕಡೆಯಾಗಿ ಕಂಡವರು. ಬಸವಣ್ಣನವರ ಸಾಮಾಜಿಕ ಕ್ರಾಂತಿಯಿಂದ ಪ್ರಭಾವಿತರಾಗಿ ವೃತಿಯಿಂದ ವ್ಯಾಪಾರಿಯಾಗಿದ್ದಂಥ ಸೌರಾಷ್ಟ್ರದಿಂದ ಕಲ್ಯಾಣಕ್ಕೆ ಬಂದ ಶರಣ ಆದಯ್ಯನವರು ಸ್ಪಷ್ಟವಾಗಿ ತಮ್ಮ ವಚನದಲ್ಲಿ ಇದರ ಬಗ್ಗೆ ಬರೆದಿದ್ದಾರೆ. ಅನ್ಯಮಾರ್ಗದಿಂದ ಗಳಿಸಿದ ಧನವನ್ನು ಕೈಯಿಂದ ಮುಟ್ಟಲಾರೆ ಎಂದು ಅವರು ನಂಬಿದ ಸೌರಾಷ್ಟ್ರ ಸೋಮೇಶ್ವರನ ಮೇಲೆ ಆಣೆ ಮಾಡಿ ಹೇಳುತ್ತಾರೆ ಮತ್ತು ಹಾಗೆಯೇ ಬದುಕಿದ್ದವರು.

ಹಣ ಬಂಗಾರ ವಸ್ತ್ರ | ಕಪ್ಪಡ ಬಟ್ಟೆಯಲ್ಲಿ ||
ನೆಟ್ಟನೆ ಬಿದ್ದಿರಲು ಕಂಡು | ಕಾತರಿಸಿ ಕೈಮುಟ್ಟಿ ||
ಎತ್ತದ ಭಾಷೆ ಕೊಟ್ಟಡೆ | ಮುಟ್ಟದ ಭಾಷೆ ||
ಇಂತಿದಕಳುಪಿದೆನಾದಡೆ | ಸೌರಾಷ್ಟ್ರ ಸೋಮೇಶ್ವರಾ ||
ನಿಮ್ಮಾಣೆ ನಿಮ್ಮ | ಪ್ರಮಥರಾಣೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1065 / ವಚನ ಸಂಖ್ಯೆ-1138)

ಅನ್ಯಮಾರ್ಗದಿಂದ ಗಳಿಸಿದ ಧನವನ್ನು ಕೈಯಿಂದ ಮುಟ್ಟಲಾರೆ ಎಂದು ಅವರು ನಂಬಿದ ಸೌರಾಷ್ಟ್ರ ಸೋಮೇಶ್ವರನ ಮೇಲೆ ಆಣೆ ಮಾಡಿ ಹೇಳುತ್ತಾರೆ ಮತ್ತು ಹಾಗೆಯೇ ಬದುಕಿದ್ದವರು ಎಂದು ಶರಣ ಚರಿತ್ರೆಗಳಲ್ಲಿ ಕಾಣಬಹುದು.

ಶರಣ ಸಿದ್ಧಾಂತವನ್ನು ಮತ್ತು ವಚನ ಸಾಹಿತ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಇಂಗ್ಲೀಷಿನಲ್ಲಿ ವಚನ ಚಿಂತನೆಗಳ ಪುಸ್ತಕಗಳನ್ನು ಬರೆದು ಪ್ರಕಟಿಸಿ ಪ್ರಪಂಚದ ಎಲ್ಲೆಡೆ ಪಸರಿಸುವಂಥ ಕಾರ್ಯಮಾಡುತ್ತಿರುವ ಧಾರವಾಡದ ಶರಣೆ ಡಾ. ಉಜ್ವಲಾ ಹಿರೇಮಠ ಅವರು ಬರೆದ “Lives of Saints” ನಲ್ಲಿ ಶರಣ ಆದಯ್ಯನವರ ಘನವ್ಯಕ್ತಿತ್ವದ ಉಲ್ಲೇಖ ಮಾಡಿದ್ದಾರೆ.

How to find Someshwara. He tells it is not through “Incantations and Penance” Mantra and Tantra…/incense and Aarthi…/not by grabbing “other’s money and women” not by bowing “to other’s gods/ that is the ordained thing,/In this eternal decree Saurastra Someshwara is”
(Lives of Saints-2018 / Dr. Ujwala S. Hiremath / Page No: 230)

ಬೇರೆಯವರ ಹೊನ್ನು ಮತ್ತು ಹೆಣ್ಣನ್ನು ಮುಟ್ಟುವುದರಿಂದ ಸೌರಾಷ್ಟ್ರ ಸೋಮೇಶ್ವರನನ್ನು ಒಲಿಸಿಕೊಳ್ಳಲಾಗುವುದಿಲ್ಲ ಎನ್ನುವುದರ ಮೂಲಕ ಅನೈತಿಕ ಧನ ಆದಾಯವನ್ನು ಧಿಕ್ಕರಿಸಿದವರು ಶರಣ ಆದಯ್ಯನವರು. ಆದಯ್ಯನವರ ಈ ಆದರ್ಶ ಚಿಂತನೆಯನ್ನು ಮಂಡಿಸುವುದರ ಮೂಲಕ ಅವರ ಘನ ವ್ಯಕ್ತಿತ್ವಕ್ಕೆ ಕನ್ನಡಿಯನ್ನು ಹಿಡಿದಿದ್ದಾರೆ ಶರಣೆ ಡಾ. ಉಜ್ವಲಾ ಹಿರೇಮಠ ಅವರು.

ಹಾಗಾದರೆ ಈ ಕಪ್ಪುಹಣದ ಸಂಗ್ರಹಕ್ಕೆ ಮೂಲಗಳು ಯಾವುವು ಎನ್ನುವುದಕ್ಕೆ ನೂರಕ್ಕೂ ಹೆಚ್ಚು ದೇಶಗಳಲ್ಲಿ ಶಾಖೆಗಳನ್ನು ಹೊಂದಿರುವ ಅಂತರ್ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಸಂಸ್ಥೆ “Transperency International” ಕೊಡುವ ಕೆಲವು ಕಾರಣಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ.

• ಅವೈಜ್ಞಾನಿಕ ಹೆಚ್ಚಿನ ತೆರಿಗೆ ದರ (High Rate of Taxes).
• ಭ್ರಷ್ಟಾಚಾರ (Corruption).
• ಸರ್ಕಾರದಿಂದ ಅಥವಾ ಸಂಘ ಸಂಸ್ಥೆಗಳಿಂದ ಖರೀದಿ ಮತ್ತು ಸರಬರಾಜು (Procurement).
• ನಿಗದಿಯಾದ ದರಕ್ಕಿಂತ ಹೆಚ್ಚಿನ ದರಕ್ಕೆ ಕೊಳ್ಳುವಿಕೆ ಮತ್ತು ಈ ವಿಷಯವನ್ನು ಹತ್ತಿಕ್ಕುವುದು (Suppression of receipts & inflation of expenditure).
• ಸರ್ಕಾರದಿಂದ ನೀಡಲಾಗುವ ಪರ್ಮಿಟ್ ರಾಜ್ ಎನ್ನುವ ಕರಾಳ ದಂಧೆ (System of control Permits & Licenses).
• ತೆರಿಗೆ ಇಲಾಖೆಯ ಅಸಮರ್ಪಕ ಮತ್ತು ಸಾಮರ್ಥ್ಯವಿಲ್ಲದ ನೌಕರರು ಮತ್ತು ಕಾನೂನುಗಳ ಅನೈತಿಕ ಉಲ್ಲಂಘನೆ (Ineffective enforcement of tax laws).
• ರಾಜಕೀಯ ಪಕ್ಷಗಳ ಜೊತೆಗಿನ ಅನೈತಿಕ ಸಂಬಂಧ (Funding of political parties).

ಕಳ್ಳದಾರಿಯಿಂದ ತೆರಿಗೆ ವಂಚನೆಯನ್ನು ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಖಂಡಿಸಿದ್ದಾರೆ.

ಭಂಡವ ತುಂಬಿದ | ಬಳಿಕ ||
ಸುಂಕವ ತೆತ್ತಲ್ಲದೆ | ಹೋಗಬಾರದು ||
ಕಳ್ಳನಾಣ್ಯ ಸಲುಗೆಗೆ | ಸಲ್ಲದು ||
ಕಳ್ಳನಾಣ್ಯವ | ಸಲಲೀಯರಯ್ಯಾ ||
ಭಕ್ತಿಯೆಂಬ ಭಂಡಕ್ಕೆ | ಜಂಗಮವೇ ||
ಸುಂಕಿಗ | ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-25 / ವಚನ ಸಂಖ್ಯೆ-198)

“ಕದ್ದು ತಿಂದಡೆ ಕೈಹಿಡಿದೊಮ್ಮೆ ಬಡಿದು ತುಡುಗುಣಿತವ ಬಿಡಿಸಯ್ಯಾ” ಎನ್ನುವ ವಚನದ ಮೂಲಕ ಬಸವಣ್ಣನವರು ಈ ಎಲ್ಲ ಅಸಮರ್ಪಕ ಧೋರಣೆಗಳನ್ನು ಧಿಕ್ಕರಿಸಿದವರು.

ನೀನಿಕ್ಕಿದ ಬೀಯದಲ್ಲಿ | ವಂಚನೆಯುಳ್ಳಡೆ ||
ಸಂಗಾ ನಿಮ್ಮ | ತೊತ್ತುತನಕ್ಕೆ ದೂರವಯ್ಯಾ ||
ಕದ್ದು ತಿಂದಡೆ | ಕೈಹಿಡಿದೊಮ್ಮೆ ಬಡಿದು ||
ತುಡುಗುಣಿತವ | ಬಿಡಿಸಯ್ಯಾ ||
ಜಂಗಮ ಮನೆಗೆ | ಬಂದಲ್ಲಿ ಒಸರಿಸಿದಡೆ ||
ಹಿಡಿದು ಮೂಗ | ಕೊಯ್ಯಯ್ಯಾ ಕೂಡಲಸಂಗಮದೇವಾ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-25 / ವಚನ ಸಂಖ್ಯೆ-198)

ಮಹಾಭಾರತದಲ್ಲಿ ಬರುವ ಪಾತ್ರಗಳಲ್ಲಿ “ಬಾಹುಕ” ಎನ್ನುವ ಆರ್ಥಿಕ ಸಲಹೆಗಾರನ ವರ್ಣನೆ ಬರುತ್ತದೆ. ಕಂಸನ ಮಾವನಾದ ಜರಾಸಂಧನ ಆಸ್ಥಾನದ ಆರ್ಥಿಕ ಸಲಹೆಗಾರ ಈ ಬಾಹುಕ. ಪ್ರಜೆಗಳನ್ನು ನನ್ನ ಹಿಡಿತದಲ್ಲಿ ಹೇಗೆ ಇಟ್ಟುಕೊಳ್ಳಬೇಕು ಎನ್ನುವುದಕ್ಕೆ ಬಾಹುಕನ ಸಲಹೆಯನ್ನು ಕೇಳತಾನೆ ಕಂಸ.
ನಿನ್ನ ಭಂಡಾರವನ್ನು ಪ್ರಜೆಗಳಿಗೊಸ್ಕರ ತೆರೆದಿರಿಸು. ಪ್ರಜೆಗಳು ತಿಂದು ಕುಡಿದು ಮೋಜು ಮಸ್ತಿಯಲ್ಲಿ ಕಳೆಯುವಂತೆ ಮಾಡು. ಪ್ರಜೆಗಳು ಅವರ ತಂದೆ ತಾಯಿಯರನ್ನು ಪ್ರಯೋಜನವಿಲ್ಲದವರಂತೆ ನೋಡುವ ರೀತಿಯಲ್ಲಿ ಪ್ರಜೆಗಳನ್ನು ಬೆಳೆಸು. ಕಾಯಕ, ಪ್ರೀತಿ ಮತ್ತು ಕರುಣೆಯಿಂದ ನೋಡುವವರನ್ನು ಅಪಹಾಸ್ಯ ಮಾಡುವಂಥ ಗುಣಗಳನ್ನು ಅವರಲ್ಲಿ ಹಾಸುಹೊಕ್ಕಾಗಿ ಮಾಡುವಂತೆ ಬೆಳೆಸು. ಹಸುವಿಗೆ ನಿಂತಲ್ಲೇ ಹುಲ್ಲು ಹಾಕಿ ಬೆಳೆಸಿದಾಗ ನಿನ್ನ ಕರುಣೆಗಾಗಿ ಕಾಯುವ ಪರಿಸ್ಥಿತಿ ಉಂಟಾಗುವ ರೀತಯಿಂದ ಪ್ರಜೆಗಳು ಬೆಳೆದಾಗ ಎಲ್ಲದಕ್ಕೂ ತಲೆಯಾಡಿಸುವ ಅಪ್ರಯೋಜಕ ಪ್ರಜೆಗಳು ನಿನ್ನ ಹಂಗಿನಲ್ಲಿ ಇರುತ್ತಾರೆ.

ಇಂಥಹದ್ದೇ ಒಂದು ಆರ್ಥಿಕ ನೀತಿಯನ್ನು 2008 ರ ನೋಬೆಲ್ ಪುರಸ್ಕೃತ ಮತ್ತು ಅಮೇರಿಕಾದ ಪ್ರಖ್ಯಾತ ಆರ್ಥಿಕ ತಜ್ಞ “ಅಲೆನ್ ಗ್ರೀನ್ಸ್ಪಾನ್” ಅನುಷ್ಠಾನಕ್ಕೆ ತಂದಿದ್ದರು. ಈ ಆರ್ಥಿಕ ನೀತಿಯ ಮೂಲಕ “ಕೌಟುಂಬಿಕ ರಕ್ಷಣೆ” (Social Security) ಮತ್ತು “ಆರೋಗ್ಯ ರಕ್ಷಣೆ” Health Security ಎಂಬ ನೀತಿಗಳನ್ನು ಜಾರಿಗೆ ತರಲಾಯಿತು. ಇದರ ಪರಿಣಾಮ ಅರ್ಧದಷ್ಟು ಅಮೇರಿಕಾದ ಕುಟುಂಬಗಳು ಜೀವನ ನಿರ್ವಹಣೆಗಾಗಿ ಸರ್ಕಾರವನ್ನೇ ಅವಲಂಬಿಸಬೇಕಾಯಿತು. ಆಧುನಿಕ ಆರ್ಥಿಕ ಸೂತ್ರಗಳ ಅಡ್ಡ ಪರಿಣಾಮವಿದು.

ಇಂಥ ಅರ್ಥಶಾಸ್ತ್ರದ ಸೂತ್ರಗಳನ್ನು ಬಸವಾದಿ ಶರಣರು 12 ನೇ ಶತಮಾನದಲ್ಲಿ ಹರಿದೊಗೆದು ಸಮ ಸಮಾಜವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು ಎನ್ನುವುದಕ್ಕೆ ಬಸವಣ್ಣನವರ ಈ ವಚನವೇ ಸಾಕ್ಷಿ.

ಊರ ಮುಂದೆ ಹಾಲಹಳ್ಳ | ಹರಿವುತ್ತಿರಲು ||
ಒರೆಯಾವಿನ ಬೆನ್ನಲಿ | ಹರಿಯಲದೇಕಯ್ಯಾ? ||
ಲಜ್ಜೆಗೆಡಲೇಕೆ? | ನಾಣುಗೆಡಲೇಕೆ? ||
ಕೂಡಲಸಂಗಮದೇವರುಳ್ಳನ್ನಕ್ಕ | ಬಿಜ್ಜಳನ ಭಂಡಾರವೆನಗೇಕಯ್ಯಾ ||
(ಬಸವಣ್ಣನವರ ವಚನಗಳು: ಡಾ. ಅರ್. ಸಿ. ಹಿರೇಮಠ / ಕರ್ನಾಟಕ ವಿಶ್ವವಿದ್ಯಾಲಯ ಪ್ರಕಾಶನ ಧಾರವಾಡ-1968 / ಪುಟ ಸಂಖ್ಯೆ-301 / ವಚನ ಸಂಖ್ಯೆ-754)

ಇಡೀ ಸಮಾಜದಿಂದ ನೆರವು ಹರಿದು ಬರುತ್ತಿರುವಾಗ ಬಿಜ್ಜಳನ ಧನವನ್ನು ನಾನ್ಯಾಕೆ ಆಶ್ರಯಿಸಲಿ ಎನ್ನುವುದನ್ನು ಬಸವಣ್ಣನವರು “ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು ಒರೆಯಾವಿನ ಬೆನ್ನಲಿ ಹರಿಯಲದೇಕಯ್ಯಾ” ಎನ್ನುವುದರ ಮೂಲಕ ಸ್ಪಷ್ಟಪಡಿಸಿದ್ದಾರೆ. ಅರ್ಥಶಾಸ್ತ್ರಜ್ಞ ಅಲೆನ್ ಗ್ರೀನ್ಸ್ಪಾನ್ ಮತ್ತು ಮಾಹಾಭಾರತದ ಅರ್ಥಶಾಸ್ತ್ರ ಸಲಹೆಗಾರ ಬಾಹುಕನ ನೀತಿಗಳನ್ನು ಬಸವಾದಿ ಶರಣರು ಸಾರಾಸಗಟಾಗಿ ತಿರಸ್ಕರಿಸಿರುವುದನ್ನು ನಾವು ಅವರ ವಚನಗಳ ಮೂಲಕ ಗಮನಿಸಬಹುದು. ಅನ್ಯಾಯದಿಂದ ಬಂದ ಧನವನ್ನು ಬಸವಾದೀ ಶರಣರು ಯಾವತ್ತೂ ಮನ್ನಿಸಲಿಲ್ಲ.

ಜೇಡರ ದಾಸಿಮಯ್ಯನವರು ಶ್ರೀಮಂತರ ಅಹಂಕಾರವನ್ನು ಅತ್ಯಂತ ಕಟು ಶಬ್ದಗಳಲ್ಲಿ ನಿಂದಿಸಿದ್ದಾರೆ. ಅನ್ಯಾಯದಿಂದ ಗಳಿಸಿದ ಧನದಿಂದ ಬಂದ ಮದದಿಂದ ಮೆರೆಯುವವರ ಸಂಪತ್ತನ್ನು ನಾಯಿಯ ಬಾಯಿಯೊಳಗಿರುವ ಮೂಳೆಗೆ ಹೋಲಿಸಿದ್ದಾರೆ.

ಅರ್ಥವುಂಟೆಂದು ಅಹಂಕರಿಸಿ | ಮಾಡುವನ ಭಕ್ತಿ ||
ತೊತ್ತಿನ ಕೂಟ | ತೊರೆಯನ ಮೇಳದಂತೆ ||
ತನು-ಮನ-ಧನದಲ್ಲಿ | ವಂಚನೆಯುಳ್ಳ ||
ಪ್ರಪಂಚಿಯ ಮನೆಯ | ಕೂಳು ಶುನಕನ ಬಾಯ ||
ಎಲುವ ಪ್ರತಿಶುನಕ ತಿಂದಂತೆ | ಕಾಣಾ ರಾಮನಾಥಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1275 / ವಚನ ಸಂಖ್ಯೆ-720)

ಒಡವೆ ಭಂಡಾರ ಕಡವರ ದ್ರವ್ಯವ | ಬಡ್ಡಿ ಬೆವಹಾರಕ್ಕೆ ಕೊಟ್ಟು ||
ಮನೆಯ ಗೋಂಟಿನಲ್ಲಿ | ಹೊಯಿದುಕೊಂಡಿದ್ದೆನಾದಡೆ ||
ಅದು ಎನ್ನರ್ಥವಲ್ಲ | ಅನರ್ಥವೆಂದೆಂಬೆ ಸಂಗಮದೇವಾ ||
ನೀನು ಜಂಗಮರೂಪಾಗಿ | ಬಂದು ಆ ಧನವನು ||
ನೀನು ಬಲ್ಲಂತೆ ಎನ್ನ | ಮುಂದೆ ಸೂರೆಗೊಳುತಿರ್ದಡೆ ||
ನಾನು ಬೇಕು ಬೇಡೆಂದು | ಮನದಲ್ಲಿ ಮರುಗಿದೆನಾದಡೆ ||
ನಿಮ್ಮಾಣೆ | ನಿಮ್ಮ ಪ್ರಮಥರಾಣೆ ||
ಮನದೊಡೆಯ | ನೀನೆ ಬಲ್ಲೆ ||
ಕಾಮನೇಮವೆಂಬ | ಸಿಂಧುಬಲ್ಲಾಳನ ವಧುವ ||
ಸರ್ವಭುವನದೊಡೆಯ | ಸಂಗಮದೇವರು ಬೇಡುವಂತಲ್ಲ ||
ಎನ್ನ ಸತಿ ನೀಲಲೋಚನೆ | ಪೃಥ್ವಿಗಗ್ಗಳೆಯ ಚೆಲುವೆ ||
ಆಕೆಯನು ಸಂಗಮದೇವಾ | ನೀನು ಜಂಗಮರೂಪಾಗಿ ಬಂದು ||
ಎನ್ನ ಮುಂದೆ | ಸಂಗವ ಮಾಡುತ್ತಿರಲು ||
ಎನ್ನೊಡನಿರ್ದ ಸತಿಯೆಂದು | ಮಾಯಕ್ಕೆ ಮರುಗಿದೆನಾದಡೆ ||
ನಿಮ್ಮಾಣೆ | ನಿಮ್ಮ ಪ್ರಮಥರಾಣೆ ||
ಮನದೊಡೆಯ | ನೀನೆ ಬಲ್ಲೆ ||
ಪ್ರತ್ಯಕ್ಷವಾಗಿ ಸಿರಿಯಾಳಸೆಟ್ಟಿ | ಚಂಗಳವ್ವೆಯ ಮನೆಗೆ ಬಂದು ||
ಅವರ ಮಗನ | ಬೇಡುವಂತಲ್ಲ ||
ಸಂಗಮದೇವಾ ನಿಮ್ಮ | ಹೆಸರ ಚಿಕ್ಕಸಂಗಯ್ಯನಿದ್ದಾನೆ ||
ನೀನು ಜಂಗಮರೂಪಾಗಿ ಬಂದು | ಆತನ ಹಿಡಿದು ||
ಎನ್ನ ಮುಂದೆ | ಹೆಡಗುಡಿಯ ಕಟ್ಟಿ ||
ಚಿನಿಖಂಡವ ಮಾಡಿ | ಬಾಣಸವ ಮಾಡುವಲ್ಲಿ ||
ಎನ್ನ ಉದರದಲ್ಲಿ ಬಂದ | ಪುತ್ರನೆಂದು ||
ಮಾಯಕ್ಕೆ ನಾನು | ಮರುಗಿದೆನಾದಡೆ ||
ನಿಮ್ಮಾಣೆ | ನಿಮ್ಮ ಪ್ರಮಥರಾಣೆ ||
ಮನದೊಡೆಯ | ನೀನೆ ಬಲ್ಲೆ ||
ಇಂತೀ ತ್ರಿವಿಧವೂ | ಹೊರಗಣವು ||
ಎನ್ನ ನೋವಿನೊಳಗಲ್ಲ | ಎನ್ನ ಬೇನೆಯೊಳಗಲ್ಲ ||
ಇನ್ನು ನಾನಿದೇನೆ | ಕದ್ದ ಕಳ್ಳನ ಕಟ್ಟುವಂತೆ ಕಟ್ಟಿ ||
ನೀನು | ಜಂಗಮರೂಪಾಗಿ ಬಂದು ||
ಎನ್ನಂಗದ ಮೇಲೆ | ಶಸ್ತ್ರವನಿಕ್ಕಿ ನೋಡು ||
ಬಸಿದ ಶೂಲಪ್ರಾಪ್ತಿಯ | ಮಾಡಿ ನೋಡು ||
ಸೂಜಿಯ ಮೊನೆಯಂತಿರ್ದ | ಶೂಲದ ಮೇಲಿಕ್ಕಿ ನೋಡು ||
ನವಖಂಡವ ಮಾಡಿ | ಕಡಿಕಡಿದು ನೋಡು ||
ಆ ಶೂಲವೈದೈದು | ಮುಖವಾಗಿ ಹಾಯುವಾಗ ||
ಹರಿತಿನಿಸಿ | ನೋಡು ||
ಈ ರೀತಿಯಲ್ಲಿ | ಎನ್ನ ಭಂಗಬಡಿಸಿ ||
ನೋಡಿದಡೆಯೂ ಲಿಂಗಾರ್ಚನೆಯ | ಮಾಡುವುದ ಬಿಡೆ ||
ಜಂಗಮದಾಸೋಹವ | ಮಾಡುವುದ ಬಿಡೆ ||
ಪಾದತೀರ್ಥಪ್ರಸಾದವ | ಕೊಂಬುದ ಬಿಡೆ ||
ಇಂತೀ ತ್ರಿವಿಧಕ್ಕೆ | ರೋಷವ ಮಾಡಿಬಿಟ್ಟೆನಾದಡೆ ||
ನಿಮ್ಮಾಣೆ | ನಿಮ್ಮ ಪ್ರಮಥರಾಣೆ ||
ಇಷ್ಟರೊಳಗೆ ತಪ್ಪುಳ್ಳಡೆ | ಮೂದಲಿಸಿ ||
ಮೂಗಕೊಯಿ | ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-100 / ವಚನ ಸಂಖ್ಯೆ-1110)

ಎಲ್ಲವೂ ಸಮಷ್ಠಿಯ ಕೊಡುಗೆಯೆಂದು ಭಾವಿಸಿದ್ದವರು ಬಸವಣ್ಣನವರು. ಕಂಡವರ ದ್ರವ್ಯ ಮತ್ತು ಮುಚ್ಚಿಟ್ಟ ಧನದಾಸೆಯನ್ನು ಬಸವಣ್ಣನವರೂ ಒಳಗೊಂಡಂತೆ ಎಲ್ಲ ಬಸವಾದಿ ಶರಣರು ಬಯಸಲಿಲ್ಲ. ಎಲ್ಲಿಯವರೆಗೆ ಬಸವಣ್ಣನವರ ವಿಚಾರಧಾರೆಯಿತ್ತೆಂದರೆ, ಕಟ್ಟಕೊಂಡ ಪತ್ನಿ, ಸ್ವಂತ ಮಗ ಮತ್ತು ಅವರ ದೇಹವೂ ಸಹ ನಿರಾಕಾರ ಶಿವನ ಮಹಾ ಪ್ರಸಾದವೆಂದೇ ನಂಬಿ ಬದುಕಿದ್ದಂಥವರು. ಬಸವಾದಿ ಶರಣರು ತಮ್ಮ ಜೀವನದುದ್ದಕ್ಕೂ ಇಂಥ ಒಂದು ಉದಾತ್ತ ಆರ್ಥಿಕ ಬದ್ಧತೆಯನ್ನು ಯಾವಾಗಲೂ ಪ್ರದರ್ಶಿಸಿದಂಥವರು. ತಮ್ಮ ಉದ್ದಾತ್ತ ಚಿಂತನೆಗಳಿಂದ ಸಮ ಸಮಾಜವನ್ನು ಕಟ್ಟಲು ಪ್ರೇರೇಪಿಸಿದಂಥವರು. ಅವರ ದೈವೀದತ್ತವಾದ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡು ಆರ್ಥಿಕ ಸಮಾನತೆಯತ್ತ ಸಮಾಜವನ್ನು ಮುನ್ನಡೆಸುವ ಜಾವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ.

1943 ರಲ್ಲಿ ಅಬ್ರಹಾಂ ಮಾಸ್ಲೋ ಎನ್ನುವ ಅಮೇರಿಕಾದ ಮನಃಶಾಸ್ತ್ರಜ್ಞ “Maslow’s hierarchy of needs” a theory of psychological health predicated on fulfilling innate human needs in priority, culminating in self-actualization” ಎನ್ನುವ ಹೊಸ ಸೂತ್ರವನ್ನು ಹುಟ್ಟುಹಾಕುತ್ತಾನೆ.

ಅಮೇರಿಕಾದ ಮನಃಶಾಸ್ತ್ರಜ್ಞ ಅಬ್ರಹಾಂ ಮಾಸ್ಲೋನ ಆಧುನಿಕ ಮನೋ ವೈಜ್ಞಾನಿಕ ಸೂತ್ರವನ್ನು ಮೀರಿಸುವ ತತ್ವವನ್ನು ಶರಣರ ಮನೆಯ ಮುಂದೆ ಕಸ ಗುಡಿಸುತ್ತಿದ್ದ “ಶರಣೆ ಸತ್ಯಕ್ಕ” ನವರು ಹೇಳಿದ್ದಾರೆಂದರೆ 12 ನೇ ಶತಮಾನದ ಬಸವಾದಿ ಶರಣರ ವೈಜ್ಞಾನಿಕ ಚಿಂತನೆ ಗೌರೀಶಂಕರದೆತ್ತರಕ್ಕಿತ್ತು ಎನ್ನುವ ಪರಿಕಲ್ಪನೆ ನಮಗೆ ಬರುತ್ತದೆ. ಶರಣೆ ಸತ್ಯಕ್ಕನವರ ಕಾಯಕನಿಷ್ಠೆ ಮತ್ತು ಭ್ರಷ್ಟ ರಹಿತ ಜೀವನದ ಆದರ್ಶಗಳು ಪ್ರಪಂಚದ ಎಲ್ಲ ದೇಶಗಳಿಗೂ, ಎಲ್ಲ ಕಾಲಕ್ಕೂ ಮತ್ತು ಎಲ್ಲ ಜನರಿಗೂ ಅನ್ವಯವಾಗುವಂಥಾದ್ದು. “ಸಾಮಾನ್ಯ ಶರಣರು ಅಸಾಮಾನ್ಯ ಮತ್ತು ಉತ್ಕೃಷ್ಠ ಸಮಾಜವನ್ನು ನಿರ್ಮಾಣ ಮಾಡಿದರು” “Ordinary people created extraordinary Society in 12th Century” ಎನ್ನುವುದಕ್ಕೆ ಶರಣೆ ಸತ್ಯಕ್ಕ ಅತ್ಯುತ್ತಮ ಉದಾಹರಣೆ.

ಲಂಚವಂಚನಕ್ಕೆ ಕೈಯಾನದ ಭಾಷೆ | ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ ||
ನಾನು ಕೈಮುಟ್ಟಿ ಎತ್ತಿದೆನಾದರೆ | ನಿಮ್ಮಾಣೆ ನಿಮ್ಮ ಪ್ರಮಥರಾಣೆ ||
ಅದೇನು ಕಾರಣವೆಂದರೆ | ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ ||
ಇಂತಲ್ಲದೆ ನಾನು ಅಳಿಮನವ ಮಾಡಿ | ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ ||
ನೀನಾಗಲೇ ಎನ್ನ | ನರಕದಲ್ಲಿ ಅದ್ದಿ ||
ನೀನೆದ್ದು ಹೋಗಾ | ಶಂಭುಜಕ್ಕೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-915 / ವಚನ ಸಂಖ್ಯೆ-1227)

ಮಾನವ ಜೀವನದ ಎಲ್ಲ ಮೌಲ್ಯಗಳನ್ನೂ ಎತ್ತಿ ಹಿಡಿಯುವಂಥ ಅಬ್ರಹಾಂ ಮಾಸ್ಲೋನ “ಮಾನಸಿಕ” (Psychological), “ರಕ್ಷಣೆ” (Safety), “ಪ್ರೀತಿ ಮತ್ತು ವಾತ್ಸಲ್ಯ” (Love/Belonging), “ಗೌರವ” (Esteem) ಮತ್ತು “ಸ್ವಾಭಿಮಾನ” (Self-actualization) ಗಳಂಥ ತತ್ವಗಳನ್ನು ಈ ವಚನ ಒಳಗೊಂಡಿದೆ. ಅನ್ಯಾಯದಿಂದ ಬಂದದ್ದನ್ನು ಬಯಸಬಾರದು, ಯಾರನ್ನೂ ಮೋಸಗೊಳಿಸಬಾರದು ಮತ್ತು ಸ್ವಂತ ದುಡಿಮೆಯಿಂದ ಸಂಪಾದಿಸಬೇಕೆನ್ನುವ ತತ್ವವನ್ನು ಶರಣೆ ಸತ್ಯಕ್ಕ ನಿರೂಪಿಸುತ್ತಾಳೆ.

ಕಾಯಕ ತತ್ವದ ರಾಯಭಾರಿಯಾಗಿರುವ “ಆಯ್ದಕ್ಕಿ ಲಕ್ಕಮ್ಮ” ನವರ ಕಾಯಕ ನಿಷ್ಠೆ ಅನುಪಮ ಮತ್ತು ಅಲೌಕಿಕವಾದದ್ದು. ಅದ್ಭುತ ವಚನದ ಮೂಲಕ ಭ್ರಷ್ಠರಹಿತ ಕಾಯಕ ಹೇಗಿರಬೇಕೆಂಬುದನ್ನು ನಿರೂಪಿದ್ದಾರೆ. ಮನಃಶುದ್ಧಿಯಿಂದ ಕಾಯಕ ಮಾಡಿದರೆ ಎಲ್ಲೆಡೆ ಸಂಪತ್ತಿನ ಮಳೆಯಾಗುತ್ತದೆ ಎನ್ನುವುದನ್ನು ಹೇಳಿದ್ದಾರೆ.

ಮನ ಶುದ್ಧವಿಲ್ಲದವಂಗೆ | ದ್ರವ್ಯದ ಬಡತನವಲ್ಲದೆ ||
ಚಿತ್ತಶುದ್ಧದಲ್ಲಿ | ಕಾಯಕವ ಮಾಡುವಲ್ಲಿ ||
ಸದ್ಭಕ್ತಂಗೆ ಎತ್ತ ನೋಡಿದತ್ತತ್ತ | ಲಕ್ಷ್ಮಿ ತಾನಾಗಿಪ್ಪಳು ||
ಮಾರಯ್ಯಪ್ರಿಯ ಅಮರೇಶ್ವರಲಿಂಗದ | ಸೇವೆಯುಳ್ಳನ್ನಕ್ಕರ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-867 / ವಚನ ಸಂಖ್ಯೆ-724)

2000 ನೆ ಇಸವಿಯಲ್ಲಿ Development Research Group, The World Bank, and Kennedy School of Government, Harvard University ಯಿಂದ ಪ್ರಕಟವಾದ ಒಂದು ಲೇಖನ: “The Place of Social Capital in Understanding Social and Economic Outcomes”. ಇದನ್ನು Woolcock and Narayan ಎನ್ನುವವರು ಮಂಡಿಸಿದ್ದಾರೆ. ಅದರ ಕೆಲವು ಸಾಲುಗಳನ್ನ ಇಲ್ಲಿ ಉಲ್ಲೇಖ ಮಾಡಲಾಗಿದೆ.

Social capital perspective can be used not only to help explain the emergence and persistence of power relations, but—perhaps more important — to provide a constructive basis for doing something about it. Modernization theory advocates the wholesale transformation of all traditional social relationships if greater prosperity is to be attained and as a mechanism for helping forge access to these institutions.

ಸಾಮಾಜಿಕ ಬಂಡವಾಳವನ್ನು ಶಕ್ತಿಯಾಗಿ ಉಪಯೋಗಿಸಬೇಕು. ಅದರಿಂದ ಹೊರ ಹೊಮ್ಮುವ ಆರ್ಥಿಕ, ಸಾಮಾಜಿಕ ತತ್ವ ಸಿದ್ಧಾಂತಗಳು ಸಮಾಜವನ್ನು ಒಗ್ಗೂಡಿಸಲು ಮತ್ತು ಸಬಲೀಕರಣಗೊಳಿಸುವತ್ತ ಸಾಗುತ್ತವೆ. ಆಧುನಿಕ ಆರ್ಥಿಕ ನೀತಿ ಮತ್ತು ಸೂತ್ರಗಳು ಪರಂಪರೆ ಮತ್ತು ಸಂಸ್ಕೃತಿಗಳನ್ನು ಒಗ್ಗೂಡಿಸಿದಾಗ ಆಗುವ ಧನಾತ್ಮಕ ಪರಿಣಾಮಗಳು ಇಡೀ ಸಮಷ್ಠಿಯನ್ನು ಸಬಲೀಕರಿಸುತ್ತದೆ.

ಈ ತತ್ವ ಸಿದ್ಧಾಂತವನ್ನೇ ಅಲ್ಲಮ ಪ್ರಭುಗಳ ಈ ವಚನ ಪ್ರಶ್ನಾರ್ಥಕವಾಗಿ ನಿರೂಪಿಸಿದೆ. ಅಂದರೆ ಈ ಎಲ್ಲ ಸಿದ್ಧಾಂತಗಳನ್ನೂ ನಾವು ಪಾಲಿಸಿದಾಗ ಮಾತ್ರ ಸಮಾಜವನ್ನು ಉನ್ನತ ಮಟ್ಟದಲ್ಲಿ ನೋಡಲು ಸಾಧ್ಯ ಎನ್ನುವದಕ್ಕೆ ಉದಾಹರಣೆ.

ಬೆವಸಾಯವ ಮಾಡಿ ಮನೆಯ | ಬೀಯಕ್ಕೆ ಬತ್ತವಿಲ್ಲದಿರ್ದಡೆ ||
ಆ ಬೆವಸಾಯದ | ಘೋರವೇತಕ್ಕಯ್ಯಾ? ||
ಕ್ರಯವಿಕ್ರಯವ ಮಾಡಿ | ಮನೆಯಸಂಚ ನಡೆಯದನ್ನಕ್ಕ ||
ಆ ಕ್ರಯವಿಕ್ರಯದ | ಘೋರವೇತಕ್ಕಯ್ಯಾ? ||
ಒಡೆಯನನೋಲೈಸಿ ತನುವಿಂಗೆ | ಅಷ್ಟಭೋಗವ ಪಡೆಯದಿರ್ದಡೆ ||
ಆ ಓಲಗದ | ಘೋರವೇತಕ್ಕಯ್ಯಾ? ||
ಭಕ್ತನಾಗಿ ಭವಂ | ನಾಸ್ತಿಯಾಗದಿರ್ದಡೆ ||
ಆ ಉಪದೇಶವ ಕೊಟ್ಟ ಗುರು | ಕೊಂಡ ಶಿಷ್ಯ ||
ಇವರಿಬ್ಬರ ಮನೆಯಲಿ | ಮಾರಿ ಹೊಗಲಿ ||
ಗುಹೇಶ್ವರನೆಂಬವನತ್ತಲೆ | ಹೋಗಲಿ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-65)

ವ್ಯವಸಾಯದಿಂದ ಉತ್ಪನ್ನವಿಲ್ಲದಿದ್ದರೆ, ವ್ಯಾಪಾರ ಮಾಡಿ ಲಾಭವಿಲ್ಲದಿದ್ದರೆ, ಒಡೆಯರನ್ನು ಸಂತುಷ್ಟಗೊಳಿಸಿ ಕಾಣಿಕೆಗಳನ್ನು ಪಡೆಯದಿದ್ದರೆ, ಗುರುವಿನಿಂದ ಪಾಠ ಕಲಿಯಲು ಅವಕಾಶವಿಲ್ಲದಿದ್ದರೆ ಎಲ್ಲವೂ ವ್ಯರ್ಥ. ಅಂತೆಯೇ ಸಮಾಜದ ಎಲ್ಲ ಚರಾಚರ ವಸ್ತುಗಳಿಂದ, ಎಲ್ಲ ವರ್ಗಗಳವರ ಸಹಯೋಗದಿಂದ ಲಾಭವಾದಾಗ ಮಾತ್ರ ಸುಖಿ ಸಮಾಜ ನಿರ್ಮಾಣ ಸಾಧ್ಯ ಎನ್ನುವುದನ್ನು ಈ ವಚನದಲ್ಲಿ ನಿರೂಪಿಸಿದ್ದಾರೆ ಅಲ್ಲಮ ಪ್ರಭುಗಳು.

ಎಲ್ಲವೂ ಆಧುನಿಕ ಮತ್ತು ನಾವೇ ಶ್ರೇಷ್ಠ ಮತ್ತು ವೈಜ್ಞಾನಿಕ ಸೂತ್ರಗಳನ್ನು ಅನುಷ್ಠಾನಗೊಳಿಸಿಕೊಂಡಿದ್ದೇವೆ ಎನ್ನುವದು ನಮ್ಮ ಇಂದಿನ ಭ್ರಾಂತಿ ಎಂದರೆ ತಪ್ಪಾಗಲಾರದು. ನಾವು ಅಥವಾ ಹಿರಿಯ ಸಾಮಾಜಿಕ ಮತ್ತು ಆರ್ಥಿಕ ತಜ್ಞರು ಅಥವಾ ವಿಜ್ಞಾನಿಗಳು ಹೇಳಿರುವ ಎಲ್ಲ ಸೂತ್ರಸಿದ್ಧಾಂತಗಳನ್ನು 12 ನೇ ಶತಮಾನದ ಬಸವಾದಿ ಶರಣರು ಅನುಷ್ಠಾನಗೊಳಿಸಿ ಸುಖಿ ಮತ್ತು ಸಮ ಸಮಾಜವನ್ನು ನಿರ್ಮಾಣ ಮಾಡಿದ್ದು ನಮಗೆ ವಚನ ಸಾಹಿತ್ಯ ಮತ್ತ ಇತಿಹಾಸದಿಂದ ತಿಳಿದು ಬರುತ್ತದೆ. ಆದರೂ ನಮಗೆ ಹಳೆಯ ಸಿದ್ಧಾಂತಗಳು ರುಚಿಸುವುದಿಲ್ಲ. ಅಲ್ಲಮ ಪ್ರಭುಗಳ ಈ ವಚನ ಪ್ರಸ್ತುತ ಎಡಬಿಡಂಗಿ ಮನಸ್ಸುಗಳಿಗೆ ಹಿಡಿದ ಕನ್ನಡಿ ಎನ್ನಬಹುದು.

ಕೊಟ್ಟ | ಕುದುರೆಯನೇರಲರಿಯದೆ ||
ಮತ್ತೊಂದು | ಕುದುರೆಯನೇರ ಬಯಸುವರು ||
ವೀರರೂ ಅಲ್ಲ | ಧೀರರೂ ಅಲ್ಲ ||
ಇದು ಕಾರಣ ನೆರೆ | ಮೂರು ಲೋಕವೆಲ್ಲವೂ ||
ಹಲ್ಲಣವ ಹೊತ್ತುಕೊಂಡು | ತೊಳಲುತ್ತ ಇದ್ದಾರೆ ||
ಗುಹೇಶ್ವರನೆಂಬ | ಲಿಂಗವನವರೆತ್ತ ಬಲ್ಲರು? ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-148 / ವಚನ ಸಂಖ್ಯೆ-127)

ಇಡೀ ಪ್ರಪಂಚದ ಎಲ್ಲ ದೇಶಗಳು ಪರಂಪರೆ ಮತ್ತು ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ಆರ್ಥಿಕ ನೀತಿಗಳನ್ನು ರೂಪಿಸುವುದರಲ್ಲಿ ತೊಡಗಿಸಿಕೊಂಡಿವೆ. ಆದರೆ ಭಾರತದ ಆರ್ಥಿಕ ಮಾದರಿಗಳು ಮತ್ತು ನೀತಿಗಳು ಸರಿ ಸುಮಾರು 7500 ವರ್ಷಗಳಿಂದ ಇದೇ ತಳಹದಿಯ ಮೇಲೆ ನಡೆದು ಬಂದಿರುವುದನ್ನು ನಾವು ಕಾಣಬಹುದು. 1800 ವರ್ಷಗಳ ಸಮಗ್ರ ಆರ್ಥಿಕ ನೀತಿಗಳ ಇತಿಹಾಸವಿರುವ ಭಾರತದ ಆರ್ಥಿಕ ಮಾದರಿಯು ಎಲ್ಲ ರೀತಿಯಿಂದಲೂ ಪರಿಕ್ಷೆಗೊಳಪಟ್ಟು ಸಧೃಢವಾಗಿ ಅನುಷ್ಠಾನಗೊಂಡಿರುವ ಆರ್ಥಿಕ ಮಾದರಿ. ಪ್ರಪಂಚದ ಆರ್ಥಿಕ ವ್ಯವಸ್ಥೆಗಳು ತಲ್ಲಣಗೊಂಡಿರುವ ಈ ಸಂಕಷ್ಟ ಕಾಲದಲ್ಲಿ ಎಲ್ಲ ದೇಶಗಳು ಭಾರತದ ಆರ್ಥಿಕ ಮಾದರಿಗಳತ್ತ ನೋಡುವಂತಾಗಿದೆ. ಪ್ರಪಂಚದ ಆರ್ಥಿಕತೆ ಕುಸಿದಿರುವ ಈ ಸಂಕಷ್ಟ ಕಾಲದಲ್ಲಿ ಭಾರತಕ್ಕೆ ಎಲ್ಲ ಅವಕಾಶಗಳ ಬಾಗಿಲುಗಳು ತೆರೆದುಕೊಂಡಿವೆ. ಅತ್ಯಂತ ಕುತೂಹಲಕರ ಘಟ್ಟದಲ್ಲಿ ನಾವಿದ್ದೇವೆ. ಮುಂದಿನ 20 ವರ್ಷಗಳು ಭಾರತಕ್ಕೆ ಪರೀಕ್ಷೆಯ ಸಮಯ. ಭಾರತದ ಉನ್ನತ ಮಟ್ಟಕ್ಕೇರುವ ಎಲ್ಲ ಅವಕಾಶಗಳೂ ಇವೆ. ಆದರೆ ಭಾರತ ನಿರೀಕ್ಷಿಸಿದ ಮಟ್ಟದಲ್ಲಿ ಬೆಳೆಯುತ್ತಿಲ್ಲ ಎನ್ನುವುದೇ ಸಧ್ಯದ ಸವಾಲು.

“ಜಾತಸ್ಯ ಮರಣಂ ಧೃವಂ” ಎನ್ನುವ ನಾಣ್ಣುಡಿಯಂತೆ ನಾವೆಲ್ಲರೂ ಒಂದು ದಿನ ನಿರ್ಗಮಿಸುವವರೆ. ಆದರೆ ಹೋಗುವ ಮುನ್ನ ಸಮಾಜಕ್ಕೆ ಮತ್ತು ಸಮಷ್ಠಿಯಲ್ಲಿ ನಾವು ಬದುಕಿದ್ದೆವು ಎನ್ನುವುದಕ್ಕೆ ಏನಾದರೂ ಸಾಧನೆಯನ್ನು ಅಥವಾ ಸಮಾಜಕ್ಕೆ ಕೊಡುಗೆಯನ್ನು ನೀಡಿ ಹೋಗಬೇಕೆಂಬ ಸದಾಶಯವನ್ನುಳ್ಳ ಬಸವಣ್ಣನವರ ಈ ಅದ್ಭುತ ಮತ್ತು ಅನುಪಮ ವಚನದ ಮೂಲಕ ಲೇಖನಕ್ಕೆ ವಿರಾಮ ಹೇಳುತ್ತೇನೆ.

ಹೊತ್ತಾರೆ ಎದ್ದು | ಅಗ್ಘವಣೆ ಪತ್ರೆಯ ತಂದು ||
ಹೊತ್ತು ಹೋಗದ ಮುನ್ನ | ಪೂಜಿಸು ಲಿಂಗವ ||
ಹೊತ್ತು ಹೋದ ಬಳಿಕ | ನಿನ್ನನಾರು ಬಲ್ಲರು? ||
ಹೊತ್ತು ಹೋಗದ ಮುನ್ನ | ಮೃತ್ಯುವೊಯ್ಯದ ಮುನ್ನ ||
ತೊತ್ತುಗೆಲಸವ ಮಾಡು | ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-24 / ವಚನ ಸಂಖ್ಯೆ-172)

ಸಂಗ್ರಹ ಮತ್ತು ಲೇಖನ :
ವಿಜಯಕುಮಾರ ಕಮ್ಮಾರ, ತುಮಕೂರು
ಮೋಬೈಲ್ ನಂ: 9741 357 132
ಈ-ಮೇಲ್: vijikammar@gmail.com

Don`t copy text!