ದಿನಸಮುದ್ರ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 68 ಲಕ್ಷ ದುರ್ಬಳಕೆ!

e-ಸುದ್ದಿ, ಮಸ್ಕಿ


ರೈತರಿಗೆ ಉಳಿತಾಯ, ಸಾಲ-ಸಹಕಾರದ ಮೂಲಕ ನೆರವಾಗಬೇಕಾದ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿಯೇ ಅವ್ಯವಹಾರ ನಡೆದಿದೆ. ಬರೋಬ್ಬರಿ 68.21 ಲಕ್ಷ ರೂ. ಹಣ ದುರ್ಬಳಕೆಯಾದ ಪ್ರಕರಣವೊಂದು ಬೆಳಕಿಗೆ ಬಂದಿದೆ!.
ಮಸ್ಕಿ ತಾಲೂಕಿನ ದಿನಸಮುದ್ರ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಇಂತಹ ಚಮತ್ಕಾರ ನಡೆದಿದೆ. ಅಸಲಿಗೆ ಇಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದ್ದು ಯಾರೋ ಹೊರಗಿನವರಲ್ಲ; ಬದಲಾಗಿ ಸಹಕಾರಿ ಸಂಘದ ಆಡಳಿತಾಧಿಕಾರಿಯೇ ಅವ್ಯವಹಾರ ನಡೆಸಿದ್ದಾರೆ.
ಆರ್‍ಡಿಸಿಸಿ ಬ್ಯಾಂಕ್‍ನ ಮುಖ್ಯಸ್ಥರು ತನಿಖೆ ನಡೆಸಿದ ವೇಳೆ ಈ ಸಂಗತಿ ಬಯಲಾಗಿದ್ದು, ಹಣ ದುರ್ಬಳಕೆ ಬಗ್ಗೆ ಸ್ವತಃ ಅಲ್ಲಿನ ಸಿಇಒ ಅವರೇ ತಪ್ಪೊಪ್ಪಿಗೆ ಪತ್ರ ನೀಡಿದ್ದಾರೆ.
ಘಟನೆ: ದಿನಸಮುದ್ರ ಸಹಕಾರಿ ಸಂಘದ ಸಿಇಓ ಬಸವರಾಜ ಹಣ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಆರ್‍ಡಿಸಿಸಿ ಬ್ಯಾಂಕ್‍ನ ವ್ಯವಸ್ಥಾಪಕರು ದಿನಸಮುದ್ರ ಪಿಎಸ್‍ಎಸ್‍ಎನ್‍ನ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧಾರದ ಮೇಲೆ ಆರ್‍ಡಿಸಿಸಿ ಬ್ಯಾಂಕ್‍ನ ವೃತ್ತ ನಿರೀಕ್ಷಕ ಬಸವರಾಜ ಕೆ. ಡಿಸೆಂಬರ್-2, 2020 ರಂದು ದಿನಸಮುದ್ರ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಭೇಟಿ ನೀಡಿ, ನಗದು ಪುಸ್ತಕ ಪರಿಶೀಲನೆ ಮಾಡಿದ್ದಾರೆ. 30,72,565 ರೂ. ಖಾತೆಯಲ್ಲಿರುವುದು ಗೊತ್ತಾಗಿದೆ. ಅದನ್ನು ಸಾದರ ಪಡಿಸಲು ಸಿಇಓ ಬಸವರಾಜ ಅವರಿಗೆ ಸೂಚನೆ ನೀಡಿದ್ದು, ಸಂಘದಲ್ಲಿ ಕೆಲವೊಂದು ಖರ್ಚು ಹಾಕುವದು ಬಾಕಿ ಇದ್ದು, ಅದನ್ನು ಸರಿಪಡಿಸಲು ಜ.5, 2021 ರ ವರೆಗೆ ಕಾಲಾವಕಾಶ ಕೋರಿದ್ದರು.
ಹಣ ದುರ್ಬಳಕೆಯಾದ ಕುರಿತಂತೆ ಕೂಡಲೇ ಆಡಳಿತ ಮಂಡಳಿ ಸಭೆ ಕರೆದು ಪರಿಶೀಲಿಸಲು ಆರ್‍ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರು ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಈ ಹಿನ್ನಲೆಯಲ್ಲಿ ಜ.5 ರಂದು ಆಡಳಿತ ಮಂಡಳಿ ಸಭೆ ನಡೆದಿದ್ದು, ಹಣದ ಅವ್ಯವಹಾರದ ಕುರಿತಂತೆ ಸಭೆಯಲ್ಲಿ ಸಮಗ್ರವಾಗಿ ಪರಿಶೀಲನೆ ನಡೆದಿದೆ. 28,10,720 ನಗದು ಹಾಗೂ 40,11,146 ವ್ಯವಹಾರ ಸಾಲದಲ್ಲಿ ವಿವಿಧ ಖಾತೆಗಳಿಗೆ ಖರ್ಚು ಹಾಕಿ ಭೋಗಸ್ ಸಾಲ ಸೃಷ್ಠಿಸಿರುವದು ಮೇಲ್ನೋಟಕ್ಕೆ ಕಂಡು ಬಂದಿದೆ.
ಒಟ್ಟು 68 ಲಕ್ಷ 21 ಸಾವಿರದ 866 ರೂ.ಗಳ ಹಣವನ್ನು ಸಿಇಓ ಬಸವರಾಜ ದುರ್ಬಳಕೆ ಮಾಡಿಕೊಂಡಿರುವ ತಪ್ಪೊಪ್ಪಿಕೊಂಡು ಲಿಖಿತವಾಗಿ ಬರೆದುಕೊಟ್ಟಿದ್ದಾರೆ.
————————————————-

ದಿನಸಮುದ್ರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಣ ದುರ್ಬಳಕೆಯಾಗಿರುವದು ಕಂಡು ಬಂದಿದೆ. ಈಗಾಗಲೇ ತನಿಖೆ ನಡೆದಿದ್ದು ಕಾರ್ಯದರ್ಶಿ ತಪ್ಪು ಒಪ್ಪಿಕೊಂಡಿದ್ದಾನೆ. ಆತನ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವದು
-ಐಎಸ್.ಗಿರಡ್ಡಿ, ಎಂ.ಡಿ., ರಾಯಚೂರು ಜಿಲ್ಲಾ ಸಹಕಾರಿ ಬ್ಯಾಂಕ್ ರಾಯಚೂರು

Don`t copy text!