e-ಸುದ್ದಿ, ಮಸ್ಕಿ
5ಎ ಕಾಲುವೆ ಹೋರಾಟಕ್ಕೆ ನಮ್ಮದು ತಕರಾರಿಲ್ಲ. ಆದರೆ ನಂದವಾಡಗಿ ಏತ ನೀರಾವರಿಯ 2.25 ಟಿಎಂಸಿ ನೀರು ಕೂಡ ಸದ್ಯಕ್ಕೆ ಬಳಸಿಕೊಳ್ಳಲು ರೈತರ ಒಪ್ಪಿಗೆ ಇದೆ ಸರ್ಕಾರ ಈ ಬಗ್ಗೆ ಲಿಖಿತ ಭರವಸೆ ನೀಡಬೇಕು ಎಂದು ರೈತ ಮುಖಂಡ ಬಾಬುಗೌಡ ಹಿಲಾಲಪೂರ ಹೇಳಿದರು.
ಮಸ್ಕಿ ಪಟ್ಟಣದ ಭ್ರಮರಾಂಭ ದೇವಿ ಕಲ್ಯಾಣ ಮಂಟಪದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ನಾರಾಯಣಪೂರ ಬಲದಂಡೆ ಕಾಲುವೆಯ 5ಎ ಶಾಖಾ ಕಾಲುವೆ ಕಾಲುವೆ ಅನುಷ್ಠಾನಕ್ಕೆ ಆಗ್ರಹಿಸಿ ಮೊದಲು ಹೊರಾಟ ಆರಂಭ ಮಾಡಿದ್ದೆ ನಾವು. ಹಳ್ಳಿ-ಹಳ್ಳಿಗೂ ಹೋಗಿ ರೈತರನ್ನು ಸಂಘಟನೆ ಮಾಡಿ ಹೋರಾಟ ಆರಂಭಿಸಿದ್ದೇವು. ಆದರೆ ಕೆಲ ಕಾರಣಾಂತರಗಳಿಂದ ಹೋರಾಟದಲ್ಲಿ ಭಾಗವಹಿಸಲಾಗಿಲ್ಲ. ಅದರೆ ಈಗ ನಡೆಸಿರುವ ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ 5ಎ ಕಾಲುವೆ ಅನುಷ್ಠಾನಕ್ಕೆ ತಾಂತ್ರಿಕ ತೊಂದರೆ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದಕ್ಕೆ ಪರ್ಯಾಯವಾಗಿ ನಂದವಾಡಗಿ ಏತ ನೀರಾವರಿ ಎರಡನೇ ಹಂತ ಸೂಕ್ಷ್ಮ(ಹನಿ) ನೀರಾವರಿ ಯೋಜನೆಯಲ್ಲಿ 2.25 ಟಿಎಂಸಿ ನೀರು ಹಂಚಿಕೆಯಾಗಿದ್ದು, ಇದು 5ಎ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ಹಳ್ಳಿಗಳಿಗೆ ಬರಲಿದೆ ಎನ್ನುತ್ತಿದ್ಧಾರೆ. ಅಲ್ಲದೇ ಈ ಯೋಜನೆಯ ಹನಿ ನೀರಾವರಿ ಬದಲು ಹರಿ ನೀರಾವರಿಯಾಗಿ ಬದಲಾಯಿಸಲು ಸರ್ಕಾರ ಒಪ್ಪಿಗೆ ಸೂಚಿಸುತ್ತಿದೆ ಹೀಗಾಗಿ ಸದ್ಯ ಈ ಭಾಗಕ್ಕೆ ಬಂದ ನೀರಾವರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲು ರೈತರೆಲ್ಲರೂ ಒಪ್ಪಿಗೆ ನೀಡಿದ್ದಾರೆ. 5ಎ ಕಾಲುವೆ ಬೇಡಿಕೆಯನ್ನು ಜೀವಂತವಾಗಿರಿಸಿಕೊಂಡೇ ನಂದವಾಡಗಿ ಏತ ನೀರಾವರಿ ಯೋಜನೆ ನೀರನ್ನು ಬಳಸಿಕೊಳ್ಳಲು ರೆಡಿ ಇದ್ದೇವೆ. ಹೀಗಾಗಿ ಸರ್ಕಾರ ಈ ಯೋಜನೆ ಜಾರಿಗೆ ಕೂಡಲೇ ಡಿಪಿಆರ್ ತಯಾರಿಸಿ, ಹರಿ ನೀರಾವರಿ ವ್ಯವಸ್ಥೆ ಮಾಡಿಕೊಡಬೇಕು ಇದಕ್ಕಾಗಿ ಸರ್ಕಾರಕ್ಕೆ ವಾರದ ಗಡುವು ನೀಡುತ್ತಿದ್ದೇವೆ ಎಂದರು.
ರೈತ ಮುಖಂಡರಾದ ಚಂದ್ರು ಧಣಿ ಜಾಗೀರದಾರ, ಸಂತೋಷ ರಾಜಗುರು ಮಾತನಾಡಿ, 5ಎ ಕಾಲುವೆ ಜಾರಿ ಕುರಿತು ಅಧ್ಯಯನ ನಡೆಸಲು ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಅಧ್ಯಯನ ವರದಿವರೆಗೂ ಕಾಯದೇ ಸದ್ಯ ನಂದವಾಡಗಿ ಏತ ನೀರಾವರಿ ಮೂಲಕ ಹಂಚಿಕೆಯಾದ ನೀರು ಬಳಕೆಗೆ ರೈತರ ಒಪ್ಪಿಗೆ ಇದೆ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಹೇಳಿದರು.
ಮುಖಂಡರಾದ ವಿಜಯ್‍ಕುಮಾರ್ ಗುತ್ತೆದಾರ, ಸಂಗಪ್ಪ ಹಡಪದ, ಲಕ್ಷ್ಮಣ ಸುಧಾಕರ, ಶ್ರೀಶೈಲಪ್ಪ ಬಡಿಗೇರ, ಶರಣಗೌಡ ಬಸಾಪುರ, ರಮೇಶ ಶಾಸ್ತ್ರೀ ಸೇರಿ ಇತರರು ಇದ್ದರು.
——————-
ರೈತರ ಎರಡು ಗುಂಪುಗಳ ನಡುವೆ ವಾಗ್ವಾದ
5ಎ ಕಾಲುವೆ ಅನುಷ್ಠಾನಕ್ಕೆ ಧರಣಿ ನಿರತ ಎರಡು ಗುಂಪುಗಳ ನಡುವೆ ಮಂಗಳವಾರ ವಾಗ್ವಾದ ನಡೆಯಿತು.
ನಾರಾಯಣಪೂರ ಬಲದಂಡೆ ಕಾಲುವೆಯ ಶಾಖಾ ಕಾಲುವೆ 5ಎ ಯೋಜನೆ ಜಾರಿಗೆ ಆಗ್ರಹಿಸಿ ಕಳೆದ 53 ದಿನಗಳಿಂದ ರೈತರು ನಿರಂತರ ಹೋರಾಟ ನಡೆಸಿದ್ದಾರೆ. ಅನಿರ್ಧಿಷ್ಠ ಧರಣಿ, ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ, ಮಸ್ಕಿ ಬಂದ್ ಮೂಲಕ ಉಗ್ರ ಚಳವಳಿ ಮಾಡಿದ್ದಾರೆ. ಆದರೆ ಈಗ ದಿಢೀರ್ ಪ್ರತ್ಯಕ್ಷವಾದ ರೈತರ ಗುಂಪೊಂದು 5ಎ ಕಾಲುವೆ ಅನುಷ್ಠಾನಕ್ಕೆ ತಾಂತ್ರಿಕ ಸಮಸ್ಯೆ ಇದ್ದರೆ, ಕೂಡಲೇ ನಂದವಾಡಗಿ ಏತ ನೀರಾವರಿ ಎರಡನೇ ಹಂತದ ಹನಿ ನೀರಾವರಿಯನ್ನು ಹರಿ ನೀರಾವರಿಯಾಗಿ ಈ ಭಾಗಕ್ಕೆ ನೀರಿನ ಸೌಲಭ್ಯ ಕೊಟ್ಟರೇ ಅದನ್ನು ಬಳಸಿಕೊಳ್ಳಲು ಸಿದ್ಧ ಎನ್ನುವ ಹೇಳಿಕೆ ನೀಡಿತು. ಸುದ್ದಿ ತಿಳಿದ ಹೋರಾಟ ನಿರತ ರೈತರ ಗುಂಪು ಮಸ್ಕಿಗೆ ಆಗಮಿಸಿ ಪತ್ರಿಕಾಗೋಷ್ಠಿ ನಡೆಸಿದ ರೈತರ ಗುಂಪಿನ ನಡೆ ಕುರಿತು ಆಕ್ಷೇಪಿಸಿದರು. 5ಎ ಕಾಲುವೆ ಹೋರಾಟ ಸಮಿತಿಯ ಬಸವರಾಜಪ್ಪ ಹರ್ವಾಪೂರ, ದೇವರೆಡ್ಡಿ ಬುದ್ದಿನ್ನಿ, ಶಿವಕುಮಾರ ವಟಗಲ್, ಬಸನಗೌಡ ವಟಗಲ್ ಸೇರಿ ಇತರರು ಮಾತನಾಡಿ, ಹೋರಾಟ ದಾರಿ ತಪ್ಪಿಸುವುದು ಬೇಡ, ರೈತರೆಲ್ಲರೂ ಒಂದೇ ಎಲ್ಲರು ಒಗ್ಗಟ್ಟಾಗಿ ಹೋರಾಟ ಮಾಡಿದರೆ 5ಎ ಕಾಲುವೆ ಬರಲಿದೆ ಎಂದು ಮನವಿ ಮಾಡಿದರು.
ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಕಾವು ಜೋರಾಯಿತು. ಪರಸ್ಪರ ವಾಗ್ವಾದ ಉಂಟಾಗಿ ಮಾತಿನ ಸಂಘರ್ಷ ಕಾವೇರಿದಾಗ ಮಸ್ಕಿ ಪೊಲೀಸರು ಮಧ್ಯಪ್ರವೇಶಿಸಿ ಇತ್ಯರ್ಥಪಡಿಸಿದರು. ಒಟ್ಟಿನಲ್ಲಿ 5ಎ ಕಾಲುವೆಗೆ ಹೋರಾಟ ನಡೆಸಿದ್ದ ರೈತರು ಎರಡು ಗುಂಪುಗಳಾಗಿ ವಿಂಗಡಣೆಯಾಗಿದ್ದು ಮಂಗಳವಾರದ ಚಿತ್ರಣ ಸಾಕ್ಷಿಕರಿಸಿತು.