ಕಾಣದ ಕೈವಾಡಗಳಿಂದ ಹೋರಾಟದ ದಾರಿ ತಪ್ಪಿಸುವಿಕೆ

e-ಸುದ್ದಿ, ಮಸ್ಕಿ
ಎನ್‍ಆರ್‍ಬಿಸಿ 5 ಎ ಕಾಲುವೆಗಾಗಿ ನಡೆದ ಹೋರಾಟವನ್ನು ದಿಕ್ಕು ತಪ್ಪಿಸಲು ಯಾವುದೋ ಕಾಣದ ಕೈಗಳು ಕೆಲಸ ಮಾಡುತ್ತಿವೆ ಇದಕ್ಕೆ ರೈತರು ಯಾರೂ ಹೆದರುವುದಿಲ್ಲ. ನಮ್ಮ ಹೋರಾಟ ಅಚಲವಾಗಿದ್ದು, 5 ಎ ಜಾರಿ ಆಗುವರೆಗೂ ಹೋರಾಟ ನಡೆಸುತ್ತೇವೆ ಎಂದು ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪುರ ಹೇಳಿದರು.
ಪಟ್ಟಣದ ಭ್ರಮರಾಂಭ ದೇವಿ ಕಲ್ಯಾಣ ಮಂಟಪದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. 12 ವರ್ಷದಿಂದ 5 ಎ ಕಾಲುವೆ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದೇವೆ ಆಗಲಿ ನಮಗೆ ನಂದವಾಡಗಿ ಏತ ನೀರಾವರಿ ಯೋಜನೆ ಬೇಡ ಎಂದು 4 ಪಂಚಾಯತಿಗಳ 52 ಹಳ್ಳಿಗಳ ರೈತರ ಒತ್ತಾಯವಾಗಿದ್ದು ನಮ್ಮ ಯೋಜನೆಗೆ ಆಗ್ರಹಿಸಿ ಹೊರಾಟ ಮಾಡುತ್ತಿದ್ದೇವೆ. ಆದರೆ ರಾಜಕೀಯ ದಾಳದಿಂದಾಗಿ ಕೆಲವರು ರೈತರ ಹೋರಾಟವನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಮತ್ತು ಆಮಿಷೆಕ್ಕೆ ಒಳಗಾಗಿದ್ದಾರೆ ಎಂದು ಜರಿದರು.
ಕೆಲವು ನಮ್ಮ ಅಣ್ಣ-ತಮ್ಮಂದಿರೇ ನಮ್ಮ ಹೋರಾಟಕ್ಕೆ ವಿರುದ್ದವಾಗಿ ಧ್ವನಿ ಎತ್ತಿದ್ದಾರೆ. ಆದರೆ ನಾವು ಅವರನ್ನು ವೈರಿಗಳೆಂದು ಭಾವಿಸುವುದಿಲ್ಲ ಮತ್ತು ಅವರ ಮೇಲೆ ನಮಗೆ ವಿಶ್ವಾಸವಿಲ್ಲ ಎಂದು ಬಸವರಾಜಪ್ಪಗೌಡ ಸ್ಪಸ್ಟಪಡಿಸಿದರು.
ಹೋರಾಟ ಸಮಿತಿಯ ಗೌರವ ಅಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ ಮಾತನಾಡಿ ರೈತರ ಹೋರಾಟದಲ್ಲಿ ರಾಜಕೀಯ ಮೂಗು ತೂರಿಸುವುದು ಸರಿಯಲ್ಲ. ರೈತರ ನಡುವೆಯೇ ಹೊಡೆದಾಳುವ ನೀತಿ ಸೃಷ್ಠಿ ಮಾಡುವುದು ದ್ರೋಹದ ಕೆಲಸವಾಗಿದ್ದು ಅದಕ್ಕೆ ತಕ್ಕ ಪಾಠ ಅವರೇ ಅನುಭವಿಸಲಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಹೋರಾಟ ನಿಲ್ಲದು: ನಂದವಾಡಗಿ ಏತ ನೀರಾವರಿ ಮೂಲಕ ಹನಿ, ಹರಿ ನೀರಾವರಿ ಮಾಡಿದರೂ ಈ ಭಾಗಕ್ಕೆ ನೀರು ತಲುಪುವ ವಿಶ್ವಾಸ ನಮಗಿಲ್ಲ. ಅಲ್ಲದೇ ಈ ರೀತಿ ನೀರಾವರಿಯಿಂದ ರೈತರ ಮೇಲೆ ತೆರಿಗೆ ಭಾರ ಹೆಚ್ಚಾಗಲಿದೆ. 5ಎ ಕಾಲುವೆ ಮೂಲಕ ನೀರು ಬಂದರೆ ಎಕರೆಗೆ 80ರೂ. ತೆರಿಗೆ ಕರವಿದ್ದರೆ, ನಂದವಾಡಗಿ ಏತ ನೀರಾವರಿ ಜಾರಿಯಾದರೆ ಕರಭಾರ ಎಕರೆಗೆ 1313 ರೂ.ವರೆಗೆ ಹೆಚ್ಚಾಗಲಿದೆ. ಇಂತಹ ವಾಸ್ತವ ಸ್ಥಿತಿಯನ್ನು ಅರಿಯದೇ ಕೆಲವು ರೈತರು ಯಾರೋ ಕಾಣದ ವ್ಯಕ್ತಿಗಳ ಮಾತು ಕೇಳಿ ನಂದವಾಡಗಿ ಏತ ನೀರಾವರಿ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದು ಸರಿಯಲ್ಲ ಎಂದು ಹೋರಾಟ ಸಮಿತಿಯ ಸಂಚಾಲಕ ನಾಗರಡ್ಡೆಪ್ಪ ಬುದ್ದಿನ್ನಿ ಹೇಳಿದರು.
ರೈತರ ಹೋರಾಟವನ್ನು ಹತ್ತಿಕ್ಕುವ ಕುತಂತ್ರ ನಡೆಯುತ್ತಿದೆ. ಇಂತಹ ಷಡ್ಯಂತ್ರಗಳಿಗೆ ರೈತರು ಹೆದರುವುದಿಲ್ಲ. ಯಾವುದೇ ಕಾರಣಕ್ಕೂ ರೈತರು ಒಗ್ಗಟ್ಟು ಮುರಿಯುವುದಿಲ್ಲ. 5ಎ ಕಾಲುವೆ ಜಾರಿಯವರೆಗೂ ನಮ್ಮ ಹೋರಾಟ ಕೂಡ ನಿಲ್ಲದು ಎಂದರು.
ಮಲ್ಲಪ್ಪ ಹೂವಿನಬಾವಿ, ಬಸನಗೌಡ ವಟಗಲ್, ಶಿವಶಂಕರರಾವ್ ಜಾಗೀದಾರ, ಮಲ್ಲಿಕಾರ್ಜುನ ಹೂವಿನಬಾವಿ, ವಿಜಯಕುಮಾರ್ ಅಂಗಡಿ, ಸಿದ್ದನಗೌಡ ಚಿಲ್ಕರಾಗಿ, ಶರಣಪ್ಪ ಕುಂಬಾರ, ಮುತ್ತಣ್ಣ ಅಮೀನಗಡ, ಆದನಗೌಡ ಮಲ್ಲಿಕಾರ್ಜುನ ಹಳ್ಳಿ ಸೇರಿ ಇತರರು ಇದ್ದರು.

Don`t copy text!