ನಮ್ಮ ಸಂಕ್ರಾಂತಿ

ನಮ್ಮ ಸಂಕ್ರಾಂತಿ

ಎಳ್ಳು ಬೆಲ್ಲವ ಬೀರಿ
ಮೆಲ್ಲ ನಗೆಯ ತೋರಿ
ಮಲ್ಲಿಗೆ ಮೃದು ಮನದಿ
ಒಳ್ಳೇ ಮಾತಾಡೋಣ.

ಉತ್ತರಾಯಣ ಕಾಲದ
ಎಳೆ ಬಿಸಿಲು ಒಳ ಬಂದು
ಮನೆ ಮನವ ಗುಡಿಸಿ
ದೀಪವ ಮುಡಿಸ್ಯಾವ.

ಅರುಣ ರಥವನ್ನು ಏರಿ
ಹೊನ್ನ ಕಿರಣವ ತೋರಿ
ಧರೆಗೆ ಧಾವಿಸಿ ಬಂದು
ಜಗ ಬೆಳಗುತ ನಿಂದಾನ.

ರವಿಯ ಕಿರಣದ ಹೊಳಪು
ಮೈಬಣ್ಣ ಬಲು ಬಿಳುಪು
ಮುತ್ತು ಮಂಜಿನ ಹನಿಯು
ಚಿತ್ತಾರದ ರಂಗೋಲಿಯು.

ಸಗ್ಗದ ಬಾಗಿಲು ತೆರೆದು
ಮೊಗ್ಗು ಮಲ್ಲಿಗೆ ಬಿರಿದು
ಹುಗ್ಗಿ ಹಾಲ್ಹೊಳೆ ಹರಿದು
ಸುಗ್ಗಿಯ ಮಾಡ್ಯಾವ.

ಚಿಗುರೊಡೆವ ಹಸುರಿಗೆ
ಹೂವಿನ ಕುಸುರಿಗೆ
ಹೊಸ ಬೆಳಕು ಮೂಡಲಿ
ಜಗವೆಲ್ಲ ಬೆಳಗಲಿ

ಕಿಚ್ಚು ಹಾಯಿಸಿ ಎತ್ತು ಒಡಿಸುವ
ರೈತರಿಗೆ
ಸುಗ್ಗಿ ಸಡಗರದಿ
ತುಂಬಿಲಿ ಮನೆ ಮನವು.

ದಿಕ್ಕು ಬದಲಿಸುವಾ
ದಿನಕರಗೆ ಸಂಕ್ರಾಂತಿ
ಸತ್ಯ ಮಿಥ್ಯದ ನಡುವೆ
ಬದುಕಿಗೆ ಹೊಸ ಕ್ರಾಂತಿ.

-ಸವಿತಾ ಎಮ್ ಮಾಟೂರು, ಇಲಕಲ್ಲ

Don`t copy text!