ಚೆಲುವಿನ ವೈಯ್ಯಾರಿ
ಚೆಲುವ ಚಿತ್ತಾರದ ವೈಯಾರಿ
ಮುಂಗುರುಳ ಬಂಗಾರದ ಮೈಸಿರಿ
ಹಸಿರು ಸೀರೆ ಚೌಕಡಿ ಕುಬಸ
ಸಣ್ಣ ಸೊಂಟಕ್ಕ ಹೊನ್ನ ಡಾಬು
ಘಲ್ ಎನ್ನುವ ಕೈಯ ಬಳೆ
ಇಲಕಲ್ ಸೀರೆ ಉಟ್ಟಾಳ
ಕಂಠಿಹಾರ ತೊಟ್ಟಾಳ
ಮಗಳ ಕೈಯ ಹಿಡದಾಳ
ನವಿಲಿನಂಗ ನಡೆದಾಳ
ಹೆಜ್ಜೆಯ ಮೇಲೆ ಹೆಜ್ಜೆಯನ್ನಿಕ್ಕಿ
ಗೆಜ್ಜೆ ಸದ್ದಿನ ಕುಣಿತಕ್ಕೆ ಹಿಗ್ಗಿ
ಮಗಳನ್ನು ಕುಣಿಸುತ ನಲಿಯುವ ನಲ್ಲೆ
ಎಲ್ಲರ ಮನವಾ ಸೆಳೆಯುವೆಯಲ್ಲೆ
ಹಸಿರಿನ ವನದಲ್ಲಿ ಹಸಿರನುಟ್ಟು
ತಾಯಿ ಮಗಳು ಸಂಭ್ರಮಪಟ್ಟು
ಲೋಕವ ಮರೆವಾ ಆಟದ ಮಾಟ
ಹೃದಯವ ಗೆಲ್ಲೊ ಒಲವಿನ ಕೂಟ
ಕುಂಟಾಪಿಲ್ಲೆ ಆಡುತ ನೆಗೆಯುತ
ಹಾಡುತ ಪಾಡುತ ನಲಿಯೋಣ
ಜೀವನ ಪೂರಾ ಜಯಿಸೋಣ
ನಗುತಾ ಜೀವನ ಸವಿಯೋಣ
–ಸವಿತಾ ಎಮ್ ಮಾಟೂರು, ಇಲಕಲ್