e-ಸುದ್ದಿ ಮಸ್ಕಿ
ನಂದವಾಡಗಿ ಯೋಜನೆಯ 2ನೇ ಹಂತದ ಹನಿ ನೀರಾವರಿ ಯೋಜನೆಗಾಗಿ ಈಗಾಗಲೇ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಎನ್‍ಆರ್‍ಬಿಸಿ 5ಎ ಹೋರಾಟವನ್ನು ಹಾದಿ ತಪ್ಪಿಸಲು ನಂದವಾಡಗಿ 2ನೇ ಹಂತದ ಯೋಜನೆಯನ್ನು ಹನಿ ನೀರಾವರಿ ಬದಲಾಗಿ ಹರಿ ನೀರಾವರಿ ಯೋಜನೆಯನ್ನಾಗಿ ಮಾಡಬೇಕೆಂದು ಸÀರ್ಕಾರದ ಮೇಲೆ ಒತ್ತಡ ಹಾಕಲು ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಬೆಂಗಳೂರಿಗೆ ಕರೆದೊಯ್ಯಲು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮುಂದಾಗಿದ್ದಾರೆಂದು 5ಎ ಕಾಲುವೆ ಹೋರಾಟ ಸಮಿತಿಯ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ ಆರೋಪಿಸಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದ ಆವರಣದಲ್ಲಿ ಸೋಮವಾರ ನಾರಾಯಣಪೂರು ಬಲದಂಡೆ 5ಎ ಪಾಮನಕಲ್ಲೂರು ಶಾಖಾ ಕಾಲುವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಾಮನಕಲ್ಲೂರಿನಲ್ಲಿ ಕಳೆದ 60 ದಿನಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಹೋರಾಟ ನಿರತರಿಗೆ ಯೋಜನೆ ಬಗ್ಗೆ ಚರ್ಚಿಸಲು ಜ.16 ರಂದು ಬೆಂಗಳೂರಿಗೆ ಆಗಮಿಸುವಂತೆ ಸೂಚನೆ ಬಂದಿದ್ದರಿಂದ ಯೋಜನೆ ತಾಂತ್ರಿಕ ಪರಿಶೀಲನಾ ಸಮಿತಿಯ ಸದಸ್ಯರು ತೆರಳಿದ್ದರು. ಸಭೆಯಲ್ಲಿ ಎನ್.ಆರ್.ಬಿ.ಸಿ 5ಎ ಕಾಲುವೆ ಜಾರಿ ಮಾಡುವುದು ಕಷ್ಟಸಾಧ್ಯವಾಗಿದ್ದರಿಂದ ನಂದವಾಡಗಿ ಯೋಜನೆಯ 2ನೇ ಹಂತದಲ್ಲಿ ಕೂಡ ಹರಿ ನೀರಾವರಿ ಯೋಜನೆ ಬರುವುದಿಲ್ಲ. ಆದ್ದರಿಂದ 5ಎ ವ್ಯಾಪ್ತಿಯ ಗ್ರಾಮಗಳಿಗೆ ನಂದವಾಡಗಿ 2ನೇ ಹಂತದಲ್ಲಿ ಹನಿ ನೀರಾವರಿ ಯೋಜನೆಗೆ ಸೇರ್ಪಡೆಗೊಳಿಸುತ್ತೇವೆಂದು ಸ್ವತಃ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆಂದು ಹೇಳಿದರು.
ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜಪ್ವಗೌಡ ಹರ್ವಾಪುರ ಮಾತನಾಡಿ ಯೋಜನೆಯಲ್ಲಿ ಇಲ್ಲದ 9 ಎ ಮತ್ತು ನಂದವಾಡಗಿ ಏತ ನೀರಾವರಿ ಯೋಜನೆ ಜಾರಿಗೊಳಿಸಲು ಸರ್ಕಾರಕ್ಕೆ ಇಚ್ಛಾಶಕ್ತಿ ಇದೆ ಆದರೆ 5 ಎ ಕಾಲುವೆ ಇಚ್ಛಾಶಕ್ತಿ ತೊರಿಸುತ್ತಿಲ್ಲ ಎಂದು ಮಾಜಿ ಶಾಸಕರ ಹೆಸರು ಹೇಳದೆ ಟೀಕಿಸಿದರು.
ನಾಗರಡ್ಡಿ, ಹನುಮಂತಪ್ಪ ಚುಕನಟ್ಟಿ ಮಾತನಾಡಿದರು.