ಇಬ್ಬರು ಕವಿಗಳು ಒಂದೇ ಚಿತ್ರಕ್ಕೆ ವಿಭಿನ್ನವಾಗಿ ರಚಿಸಿದ ಕವಿತೆಗಳು
– ಸಂಪಾದಕ
ಪುಟ್ಟ ಬೀಜ
ಪುಟ್ಟ ಬೀಜಕೆ ಎಷ್ಟು ಛಲ
ಮಣ್ಣ ಸೀಳಿ ಮೇಲೆ ಬಂದು
ಹನಿ ನೀರು ಸಿಕ್ಕರೂ ಸಾಕು
ಎದ್ದು ನಿಲ್ಲುವ ಅದಮ್ಯ ಬಲ ||
ಅದೆಷ್ಟು ಶಕ್ತಿ ನಿನ್ನೊಳು
ಎಷ್ಟು ಕನಸು ಕಣ್ಣೊಳು
ಅಡೆತಡೆಗಳ ಮೀರಿ ನೀನು
ಬೆರಗುಗೊಳಿಸಬಲ್ಲೆ ||
ಆಕಾಶವ ನಾಚಿಸುವಾ
ಆಸೆ ನಿನ್ನ ಎದೆಯಲಿ
ಭೂತಾಯಿಯ ನಗಿಸುವಾ
ಭಾಷೆ ನಿನ್ನ ಮನದಲಿ ||
ಬೆಳೆಯುವಾ ಆತುರದಿ
ಅಡ್ಡ ಬಂದ ಬಂಡೆಯನ್ನೆ
ಸೀಳಿ ಬೆಳೆದು ನಿಂತೆ
ಅಚ್ಚರಿ ಪಡುವಂತೆ ||
ಗೆಲ್ಲುವಾ ಛಲದಲಿ
ಮುನ್ನುಗ್ಗಲೆಬೇಕು
ಸಾಧನೆಯಾ ಹಾದಿಯಲ್ಲಿ
ಧೈರ್ಯದಿ ನಿಲ್ಲಬೇಕು ||
ದೇವನೊಲುಮೆ ಇದ್ದರೆ
ಕೊರಡು ಸಹ ಕೊನರುವದು
ಕೊನರುವಾವರೆಗು ನಾವು
ಸಹನೆ ಮೀರದಿರಬೇಕು. ||
–ಸವಿತಾ ಎಮ್ ಮಾಟೂರು, ಇಳಕಲ್
——————————————
ಕಲ್ಲು ಬಂಡೆ
ನಿನಗಂತು ಮನೆಯಿಲ್ಲ
ಮಡದಿ ಮಕ್ಕಳ ಚಿಂತೆಯಿಲ್ಲ
ಕಲ್ಲು ಮನಸು ಕರಗದು
ನಿನೊಂದು ಅಲುಗಾಡದೆ ಹೆಬ್ಬಂಡೆ
ನಿನ್ನ ಸೀಳಿಕೊಂಡು ನಾ ಬಂದೆ
ಕಲ್ಲು ಬಂಡೆಯಲ್ಲು ಹೃದಯವಿದೆ
ಅದಕೆ ನಾನು ಇಣುಕಿಕೊಂಡೆ
ಹಳೆಯ ಅಲೆಯ ಹೊಡೆತಕ್ಕೆ ಸಿಕ್ಕಿ
ತಾಳಲಾರದೆ ಹೊಸ ಅಲೆಯಲಿ
ತೊಯ್ದಾಡಲು ಹುಟ್ಟಿಕೊಂಡೆ
ಅರಿವಾಗಿದೆ ಹಿತ್ತಲು ಗಿಡ
ಮದ್ದಲ್ಲ
ಆಲಿಸಲು ಇಂದು ಸುತ್ತಲು
ಜನರಿಲ್ಲ
–ಸೌವೀ, ಮಸ್ಕಿ