ಓದುಗರ ಓಣಿ : “ಕೆಂಪು – ನೀಲಿ ಗ್ರಂಥಾಲಯ”
ಸಮಾನ ಮನಸ್ಕರೆಲ್ಲರೂ ಕೂಡಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯ. ತಮ್ಮ ವೃತ್ತಿ ಬದುಕಿನ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಕೈಗೆತ್ತಿಕೊಂಡು, ಪುಸ್ತಕ ಪ್ರೇಮಿಗಳಿಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಇಲ್ಲೊಂದು ‘ಸಹಮತ ತಂಡ’
ತನ್ನ ವಿನೂತನ ಕಾರ್ಯ ಮೂಲಕ ಎಲ್ಲೆಡೆ ಸೈ ಎನಿಸುಕೊಳ್ಳುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದ ಗಡಿಜಿಲ್ಲೆ ಬೀದರ್ ನಗರದಲ್ಲಿ ತಂಡವೊಂದು ಎಲೆಮರೆ ಕಾಯಿಯಂತೆ ತಮ್ಮ ನಿಸ್ವಾರ್ಥ ಸಮಾಜಮುಖಿ ಕಾರ್ಯ ಮಾಡುತ್ತಿದೆ. ಸರ್ಕಾರದ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಸೇರಿದಂತೆ ಸಮಾಜ ಸೇವಕರನ್ನು ಒಳಗೊಂಡಿರುವ ಗುಂಪೊಂದು ‘ಶಾಹಿದ್ ಭಗತ್ ಸಿಂಗ್ ‘ ಹೆಸರಿನಲ್ಲಿ ‘ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ‘ ಕಟ್ಟಿದ್ದಾರೆ. ಈ ಟ್ರಸ್ಟ್ ಅಡಿಯಲ್ಲಿ ಮುಂದೇನು? ಎನ್ನುವ ಆಲೋಚಿಸುವ ಹೊತ್ತಿಗೆ ಎಲ್ಲರಿಗೂ ಫಸ್ಟ್ ಹೊಳೆದದ್ದು ‘ಗ್ರಂಥಾಲಯ ಮಾಡೋಣ’ ಎನ್ನುವುದು.
ಗ್ರಂಥಾಲಯ ಮಾಡಬೇಕಾದರೆ ಸುಸಜ್ಜಿತ ವಿಶಾಲ ಕೋಣೆಯ ಬೇಕು. ಅದು ಹೇಗೆ ಎನ್ನುವ ಯೋಚನೆ ಎಲ್ಲರಿಗೂ ಸಹಜವಾಗಿ ಕಾಡುತ್ತಿತ್ತು. ಬಾಡಿಗೆ ಕೋಣೆಯಲ್ಲಿ ಗ್ರಂಥಾಲಯ ನಡೆಸಬೇಕೆಂಬ ಯೋಚನೆಯಲ್ಲಿದ್ದ ಬಳಗದವರಿಗೆ ಉಚಿತವಾಗಿ ಖಾಲಿ ಸೈಟ್ ಬರೆದುಕೊಟ್ಟು ತಂಡಕ್ಕೆ ಸಾಥ್ ನೀಡಿದವರು ಶಿವರಾಜ್ ಪಾಟೀಲ್ ಎನ್ನುವ ಸರ್ಕಾರಿ ನೌಕರರು.
ಇನ್ನೇನು ಜಾಗ ಒಬ್ಬರು ದೇಣಿಗೆ ನೀಡಿದ್ದಾರೆ, ಇನ್ನೂ ಕಟ್ಟಡ ನಿರ್ಮಾಣ ಮಾಡಬೇಕಲ್ಲವೇ?
ಎಲ್ಲವೂ ಸರ್ಕಾರದವರೇ ಮಾಡಬೇಕು ಎಂದು ಕೈಕಟ್ಟಿ ಕುಳಿತರೇ ಏನೂ ಆಗದು. ನಾವೇ ಒಂದಿಷ್ಟು ಹಣ ಕೂಡಿಸಿದರೆ ಆಗಬಹುದಲ್ಲವೇ ಎನ್ನುವ ಚಿಂತನೆ, ಅದಕ್ಕೂ ಮುಂದೆ ಬಂದವರು ಸರ್ಕಾರಿ ನೌಕರರು, ನಿವೃತ್ತ ನೌಕರರು, ಸಮಾಜ ಸೇವಕರು, ಜನಪ್ರತಿನಿಧಿಗಳು ಇನ್ನೂ ಹಲವರು…ಕೊನೆಗೂ ರೆಡಿಯಾಯ್ತಿ ನೋಡಿ 15 ಲಕ್ಷದ ಸುಸಜ್ಜಿತ ಗ್ರಂಥಾಲಯ ಕಟ್ಟಡ.
ಈ ಕಾಲಘಟ್ಟದಲ್ಲಿ ಒಂದು ದೇವಾಲಯ ಕಟ್ಟಡ ನಿರ್ಮಾಣ ಮಾಡುವುದು ಸಾಧ್ಯ ಅದು ಸುಲಭ ಕೂಡ ಹೌದು, ಆದರೆ ಒಂದು ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡುವುದೆಂದರೆ ಅದು ತುಂಬಾ ಕಷ್ಟದ ಕೆಲಸ ಅಷ್ಟೇ ಸಾಹಸದಾಯಕ. ಸಮಾನ ಮನಸ್ಕರ ಒಗ್ಗೂಡಿದಾಗ ಅಸಾಧ್ಯವಾದದ್ದು ಸಾಧಿಸಬಹುದು ಎನ್ನುವುದಕ್ಕೆ ಇಂದು ಸ್ವಂತ ಕಟ್ಟಡ ಹೊಂದಿರುವ ‘ಕೆಂಪು – ನೀಲಿ ಗ್ರಂಥಾಲಯ’ ಸಾಕ್ಷಿಯಾಗಿದೆ.
ಈ ಗ್ರಂಥಾಲಯದ ಹೆಸರಿನಲ್ಲಿ ಒಂದು ವಿಶೇಷವಾದ ಅರ್ಥ ಹೊಂದಿದೆ. ‘ಕೆಂಪು’ ವರ್ಗದ ಸಂಕೇತವಾದರೆ ‘ನೀಲಿ’ ಜಾತಿಯ ಸಂಕೇತ ಸೂಚಿಸುತ್ತದೆ. ದೇಶದಲ್ಲಿ ಕೆಂಪು – ನೀಲಿ ಬಣ್ಣಗಳು ಒಗ್ಗೂಡಬೇಕು, ಕೆಂಪು – ನೀಲಿ ಬಣ್ಣಗಳು ಒಂದೇ ಪಥದಲ್ಲಿ ಮುನ್ನಡೆಯಬೇಕು. ಆವಾಗ ವರ್ಗರಹಿತ ಮತ್ತು ಜಾತಿರಹಿತ ಸಮಾಜ ರೂಪುಗೊಳ್ಳಲು ಸಾಧ್ಯ ಎನ್ನುವ ಮುಂದಾಲೋಚನೆ ಹೊಂದಿರುವ ಈ ಗುಂಪು ಕಟ್ಟಡಕ್ಕೆ “ಕೆಂಪು – ನೀಲಿ ಗ್ರಂಥಾಲಯ” ಎನ್ನುವ ಹೆಸರಿಟ್ಟಿದ್ದಾರೆ. ಈ ಮೂಲಕ ಪುಸ್ತಕ ಓದುಗರ ಸಂಖ್ಯೆ ಹೆಚ್ಚಿಸುವ ಜೊತೆಗೆ ಎಲ್ಲರಿಗೂ ಸಾಹಿತ್ಯ ಓದುವ ಹವ್ಯಾಸ ಕುರಿತಾಗಿ ಆಸಕ್ತಿ ಮೂಡಿಸುತ್ತಿದೆ.
ಬೀದರ್ ನಗರದ ಸಿದ್ದೇಶ್ವರ ಕಾಲೋನಿ ನೌಬಾದಿನಲ್ಲಿ ಒಂದು ಅಂತಸ್ತಿನ ಸ್ವಂತ ಕಟ್ಟಡದಲ್ಲಿ ಸುವ್ಯವಸ್ಥಿತ ಗ್ರಂಥಾಲಯ ರಚನೆಯಾಗಿದೆ. ಸಮಾಜ ಚಿಂತಕರು, ಸಾಹಿತ್ಯಭಿಮಾನಿಗಳು, ಓದುಗರು ಒಂದೆಡೆ ಸೇರಿ ಸದ್ದಿಲ್ಲದೆ ‘ಪ್ರಗತಿಪರ ಬಳಗ’ ಕಟ್ಟಿ ಅದರಿಂದ ಮತ್ತಷ್ಟು ಕನ್ನಡದ ಕಂಪನ್ನು ಸೂಸುವಂತೆ ಮಾಡುತ್ತಿದ್ದಾರೆ.
ಈ ಟ್ರಸ್ಟ್ ನಲ್ಲಿ ಇಂಜನೀಯರಿಂಗ್, ಉಪನ್ಯಾಸಕರು, ಬ್ಯೂಸಿನೆಸ್ ಹೀಗೆ ಬೇರೆ ಬೇರೆ ಕ್ಷೇತ್ರಕ್ಕೆ ಸೇರಿದರೂ ಕೂಡ ಕನ್ನಡ ಪುಸ್ತಕ ಸಾಹಿತ್ಯ ಹಾಗೂ ಸಾಮಾಜಿಕ ಕಳಕಳಿಯ ಕೊಂಡಿಯೊಂದು ಇವರನ್ನು ಒಂದೆಡೆ ಕಲೆಯುವಂತೆ ಬೆಸೆದಿದೆ. ಎರಡು ವರ್ಷ ಪೂರೈಸಿ (ಜನವರಿ 20) ಈಗ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಗ್ರಂಥಾಲಯ ನೂರಾರು ಓದುಗರ, ವಿದ್ಯಾರ್ಥಿಗಳಿಗೆ ‘ಜ್ಞಾನ ದೇಗುಲ’ವಾಗಿ ಪರಿವರ್ತನೆಯಾಗಿ ಜಿಲ್ಲೆ, ರಾಜ್ಯದಲ್ಲಿ ಮಾದರಿ ಎನಿಸುತ್ತಿದೆ.
ಪುಸ್ತಕ ದೇಣಿಗೆ
‘ಕೆಂಪು – ನೀಲಿ ಗ್ರಂಥಾಲಯ’ ರಚನೆ ಮಾಡುವ ಬಗ್ಗೆ ವಿಷಯ ತಿಳಿದ ಕೂಡಲೇ ಮಲ್ಲಿಕಾರ್ಜುನ ಸುಭಾನೆ 2 ಲಕ್ಷ , ಅಭಿಮನ್ಯು 1 ಲಕ್ಷ, ಶಂಕರ ಸುಬಾನೆ 1 ಲಕ್ಷ , ಮಾರುತಿ ಗೋಖಲೆ 2 ಲಕ್ಷ ಅಲಿಂಸಾಬ್ 50 ಸಾವಿರ …ಹೀಗೆ ಹಲವು ಸಮಾಜಪರ ಚಿಂತಕರು, ಉನ್ನತ ಹುದ್ದೆಯ ಸರ್ಕಾರಿ ನೌಕರರು, ನಿವೃತ್ತ ನೌಕರರು, ಸಮಾಜ ಸೇವಕರು ಮುಂದೆ ಬಂದು ಪುಸ್ತಕಗಳನ್ನು ಖರೀದಿಸಿ ಕಳುಹಿಸಿಕೊಟ್ಟಿದ್ದಾರೆ.
ಎಲ್ಲ ಸಮಾನ ಮನಸ್ಕರು ಕೂಡಿ ಕಟ್ಟಿದ ಗ್ರಂಥಾಲಯವನ್ನು 2019 ಜನವರಿ 21ರಂದು ಖ್ಯಾತ ಲೇಖಕ, ಚಿಂತಕ ಆನಂದ ತೇಲ್ತಂಡೆ ಅವರಿಂದ ಅನಾವರಣಗೊಳಿಸಿದ್ದಾರೆ.
ಕೆಂಪು- ನೀಲಿ ಒಳಗಡೆ
ಈ ಗ್ರಂಥಾಲಯದಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಸಂಖ್ಯೆಯ ಪುಸ್ತಕಗಳಿವೆ. ಶರಣ, ದಾಸ, ಸೂಫಿ ಸಾಹಿತ್ಯ ಸೇರಿದಂತೆ ಕನ್ನಡ ,ಹಿಂದಿ, ಇಂಗ್ಲಿಷ್ ಭಾಷೆಯ ಬಹುತೇಕ ಸಾಹಿತ್ಯ ಪುಸ್ತಕಗಳು ಇಲ್ಲಿವೆ. ಅಷ್ಟೇ ಅಲ್ಲದೆ ಎ ದರ್ಜೆಯಿಂದ ಡಿ ಗ್ರೂಪ್ ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಗಳ ಮೌಲ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಓದಲು ವ್ಯವಸ್ಥೆ ಮಾಡಲಾಗಿದೆ. ಪ್ರತಿನಿತ್ಯ 30ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಓದಲು ಬರುತ್ತಾರೆ. ಸುತ್ತಲಿನ ಕಾಲೇಜು, ಹಾಸ್ಟೆಲ್ ವಿದ್ಯಾರ್ಥಿಗಳು, ಬಡಾವಣೆಯ ಜನಸಾಮಾನ್ಯರಿಗೆ, ಸಾಹಿತ್ಯ ಆಸಕ್ತರಿಗೆ ಕನ್ನಡ ಸಾಹಿತ್ಯ ಪುಸ್ತಕ, ವಿವಿಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ, ಪಾಕ್ಷಿಕ ಪತ್ರಿಕೆಗಳನ್ನು ಓದಲು ಈ ಗ್ರಂಥಾಲಯ ‘ಪುಸ್ತಕ ಮನೆ’ಯಂತೆ ತುಂಬಾ ಉಪಯುಕ್ತವಾಗಿದೆ.
ಓದುಗರ ಪುಸ್ತಕ ಮನೆ
ಇದು ಮೊಬೈಲ್ , ಕಂಪ್ಯೂಟರ್, ಎಲ್ಲವೂ ಆನ್ ಲೈನ್ ಜಮಾನಾ, ಈಗ ಪುಸ್ತಕಗಳನ್ನು ಓದುವವರಿಲ್ಲ ಎನ್ನುತ್ತಿರುವ ಈ ಕಾಲಘಟ್ಟದಲ್ಲಿ ಪುಸ್ತಕ ಪ್ರೇಮಿಗಳಿಗೆ ಹೊಸ ಹೊಸ ಪುಸ್ತಕವನ್ನು ಪರಿಚಯಿಸುವುದು. ಸರ್ಕಾರಿ ಹುದ್ದೆಗಾಗಿ ಸಿದ್ಧವಾಗುವ ವಿದ್ಯಾರ್ಥಿಗಳಿಗೆ ವಿವಿಧ ಪುಸ್ತಕಗಳನ್ನು ಒದಗಿಸುವ ವೇದಿಕೆಯಾಗಿದ್ದು, ಎಲ್ಲಾ ಬಗೆಯ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ, ಹಾಗೆ ಇಲ್ಲಿ ಓದಿಕೊಂಡು ಸರ್ಕಾರಿ ನೌಕರಿ ಹಿಡಿದ ಹಲವು ವಿದ್ಯಾರ್ಥಿಗಳು ಈ ಗ್ರಂಥಾಲಯ ಬಗ್ಗೆ ತಮ್ಮ ಪ್ರೀತಿಯ ಮಾತುಗಳನ್ನು ಹೇಳುತ್ತಾರೆ.
“ಕೆಂಪು – ನೀಲಿ ಗ್ರಂಥಾಲಯವು ಎರಡು ಪುಸ್ತಕ ಕೋಣೆ, ಒಂದು ವಿಶಾಲವಾದ ರೀಡಿಂಗ್ ರೂಮ್ ಹೊಂದಿದೆ. ಹೊಸ ಪ್ರತಿಭೆಗಳಿಗೆ ಒಂದೊಳ್ಳೆಯ ವೇದಿಕೆಯಾಗಿದ್ದು, ಹವ್ಯಾಸಿ ಓದುಗರಿಗೆ , ಹೊಸ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸುತ್ತಿದೆ. ಪುಸ್ತಕ ಓದುಗರ ಸಂಖ್ಯೆ, ಸಾಹಿತ್ಯಕ್ಕಾಗಿ ವೇದಿಕೆಗಳು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ “ಕೆಂಪು – ನೀಲಿ” ಬಣ್ಣ ಪ್ರಮುಖ ವೇದಿಕೆಯಾಗಿ ರೂಪುಗೊಂಡಿದೆ.”
ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಸ್ಥಾಪಿಸುವ ಗುರಿ ಹೊಂದಿದೆ. ಜೊತೆಗೆ ಇನ್ನಷ್ಟು ಪುಸ್ತಕಗಳನ್ನು ಓದುಗರಿಗೆ ಕಲ್ಪಿಸುವ ಪ್ರಯತ್ನ, ಹೆಸರಾಂತ ಲೇಖಕರ, ಚಿಂತಕರನ್ನು ಆಹ್ವಾನಿಸಿ ವಿದ್ಯಾರ್ಥಿಗಳ ಜೊತೆ ಸಂವಾದ ಏರ್ಪಡಿಸುವುದು, ವಿಚಾರ ಸಂಕಿರಣ ಹಮ್ಮಿಕೊಳ್ಳುವ ಮಹತ್ವದ ಉದ್ದೇಶಗಳು ನಮ್ಮದಾಗಿವೆ ಎಂದು ಹೇಳುತ್ತಾರೆ ಟ್ರಸ್ಟ್ ಸದಸ್ಯರಾದ ಗಗನ ಫುಲೆ ಅವರು.
‘ಬೀದರ್’ ಎಂದರೆ ಧರಿನಾಡು, ಇಲ್ಲಿನ ಕೆಂಪು ನೆಲವೇ ಶರಣರ ಕಾಯಕ ಭೂಮಿ, ಶರಣರ ವಚನಗಳು ಈ ನೆಲದ ಐಸಿರಿ ಎತ್ತಿ ತೋರಿಸುತ್ತವೆ, ಪ್ರತಿಯೊಬ್ಬರಿಗೂ ಬದುಕು ಕಟ್ಟಿಕೊಡುತ್ತವೆ. ಅದೇ ಕಲ್ಯಾಣ ಶರಣರ ಈ ನೆಲದಲ್ಲಿ ಸಮಾನ ಮನಸ್ಕರೆಲ್ಲರೂ ಕೂಡಿಕೊಂಡು ಯಾವುದೇ ಅಪೇಕ್ಷೆ ಇಲ್ಲದೆ ‘ಕೆಂಪು – ನೀಲಿ ‘ ಒಗ್ಗೂಡಿಸಲು ಗ್ರಂಥಾಲಯ ಕಟ್ಟಿದ್ದು ಹೆಮ್ಮೆಯ ಸಂಗತಿ, ಎಲ್ಲರೂ ಮೆಚ್ಚಲೇಬೇಕು. ಬನ್ನಿ ನಾವು ಒಮ್ಮೆ ಭೇಟಿಯಾಗೋಣ..!
– ಬಾಲಾಜಿ ಕುಂಬಾರ, ಚಟ್ನಾಳ
,ಬೀದರ್
ಮೋ: 9739756216