ನಿಷ್ಠುರ ನಿಲುವಿನ ವಚನಕಾರ ಅಂಬಿಗರ ಚೌಡಯ್ಯ
ಸಾಮಾಜಿಕ ನ್ಯಾಯ ಸ್ಥಾಪನೆಗಾಗಿ ರಾಜಸತ್ತೆಯನ್ನು ಮತ್ತು ಶ್ರೇಣೀಕೃತ ಸಮಾಜದಲ್ಲಿನ ವರ್ಗೀಕರಣ ವ್ಯವಸ್ಥೆಯನ್ನು ವಿರೋಧಿಸಿ ಸಮಾಜದ ವಿವಿಧ ಸ್ತರಗಳ ಜನತೆ ಬೀದಿಗಿಳಿದು ನಡೆಸಿದ ಸಾಮಾಜಿಕ ಕ್ರಾಂತಿಯ ಪ್ರತಿಫಲವೇ ವಚನ ಸಾಹಿತ್ಯ.
೧೨ ನೆಯ ಶತಮಾನದಲ್ಲಿ ಶರಣರು ಸಮಾಜದ ವಿಷಮ ಪರಿಸ್ಥಿತಿಯನ್ನು, ಸಾಮಾಜಿಕ ಅಸಮಾನತೆಯನ್ನು ನಾಶಗೊಳಿಸಿ ಸಾಮಾಜಿಕ ಸಮಾನತೆಯನ್ನು ತರಲು ಹೋರಾಡಿದರು. ಸಮಾಜದಲ್ಲಿನ ಅಮಾನವೀಯ ಪದ್ಧತಿಗಳನ್ನು, ನಂಬಿಕೆಗಳನ್ನು ತಿರಸ್ಕರಿಸಿದರು. ಇಲ್ಲಿಯವರೆಗೆ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ವೃತ್ತಿಯನ್ನು ಆಧರಿಸಿ ಕೀಳಾಗಿ ಕಾಣುತ್ತಿದ್ದ ಪರಂಪರೆಯನ್ನು ಖಂಡಿಸಿದರು. ಬದಲಾಗಿ ವೃತ್ತಿಯನ್ನು ಕಾಯಕ ಎಂದು ಕರೆದು ಕಾಯಕಕ್ಕೆ ಗೌರವದ ಸ್ಥಾನವನ್ನು ಕಲ್ಪಿಸಿದರು.
ಇದರಿಂದಾಗಿ ಸನಾತನ ಧರ್ಮದಲ್ಲಿ ವೃತ್ತಿ ಕಾರಣದಿಂದ ಕೀಳೆಂದು ಪರಿಗಣಿಸಲ್ಪಟ್ಟವರೆಲ್ಲ ಶರಣ ಧರ್ಮದಲ್ಲಿ ಶ್ರೇಷ್ಠತೆಯ ಸ್ಥಾನವನ್ನು ಪಡೆದು ಶರಣರೆನಿಸಿದರು. ಅವರೆಲ್ಲರೂ ಸಾಮಾಜಿಕ ಸುಧಾರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಮುಖಿ ಚಿಂತನೆಯ ವಚನಗಳ ರಚನೆಯಲ್ಲಿ ತೊಡಗಿದರು. ಹಾಗೆ ಪಾರಂಪರಿಕ ಸಮಾಜದಲ್ಲಿ ತನ್ನ ವೃತ್ತಿಯಿಂದ ಕೀಳೆಂದು ಪರಿಗಣಿತವಾಗಿ ಲಿಂಗಾಯತ ಧರ್ಮದಲ್ಲಿ ಕಾಯಕದಿಂದ ಗೌರವಿಸಲ್ಪಟ್ಟು ತಮ್ಮ ಕಾಯಕಕ್ಕೆ ಒಂದು ಗೌರವ ತಂದುಕೊಟ್ಟ ಶ್ರೇಷ್ಠ ವಚನಕಾರರಲ್ಲಿ ವೀರಗಣಾಚಾರಿ ಅಂಬಿಗರ ಚೌಡಯ್ಯ ಒಬ್ಬನು.
ವಚನಕಾರರಲ್ಲಿ ಉಳಿದೆಲ್ಲ ವಚನಕಾರರಿಗಿಂತ ವಿಭಿನ್ನವಾಗಿ ತೋರುವ ವಚನಕಾರ ಅಂಬಿಗರ ಚೌಡಯ್ಯ. ಉಳಿದೆಲ್ಲ ವಚನಕಾರರು ಸಮಾಜದ ದೋಷಗಳನ್ನು ನಯವಾದ ಮಾತುಗಳ ಮೂಲಕ ತಿದ್ದುವ ಪ್ರಯತ್ನ ಮಾಡಿದರು. ಅವರೆಲ್ಲರ ವಚನಗಳಲ್ಲಿ ಸಮಾಜವನ್ನು ಬದಲಾಯಿಸುವ, ಒಪ್ಪಿಸುವ ನಯಗಾರಿಕೆ ಕಂಡುಬರುತ್ತದೆ. ಆದರೆ ಅಂಬಿಗರ ಚೌಡಯ್ಯ ಇವರೆಲ್ಲರಿಗಿಂತ ಭಿನ್ನ. ಸಮಾಜದ ಲೋಪ ದೋಷಗಳನ್ನು ಇತರ ವಚನಕಾರರಂತೆ ನಯ ನಾಜೂಕುತನದಿಂದ ತಿಳಿಸದೆ ಕಠೋರವಾಗಿ ಟೀಕಿಸುತ್ತಾನೆ.ಸಮಾಜದ ಅವ್ಯವಸ್ಥೆಯನ್ನು ಉಗ್ರವಾಗಿ ಖಂಡಿಸುತ್ತಾನೆ.ಆದ್ದರಿಂದಲೇ ಇವನ ವಚನಗಳಲ್ಲಿನ ಉಗ್ರತೆಯನ್ನು ಕಂಡ ಕವಿ ಕಾವ್ಯಾನಂದ ರು ” ನಿಜದ ನಗಾರಿ ನಿರ್ಭಯತೆಯ ಭೇರಿ ಈ ಅಂಬಿಗರ ಚೌಡಯ್ಯ ” ಎಂದು ಅವನ ದಿಟ್ಟತನವನ್ನು ಕುರಿತು ಹೇಳುತ್ತಾರೆ.
೧೨ ನೆಯ ಶತಮಾನದಲ್ಲಿ ಚೌಡಯ್ಯ ಎಂಬ ಹೆಸರಿನ ೪ ಜನ ಶಿವಶರಣರು ಆಗಿ ಹೋಗಿದ್ದಾರೆ. ೧) ಬಹುರೂಪಿ ಚೌಡಯ್ಯ ೨) ಮುಸಡಿ ಚೌಡಯ್ಯ ೩) ಸುರಗಿ ಚೌಡಯ್ಯ ಮತ್ತು ೪) ಅಂಬಿಗರ ಚೌಡಯ್ಯ. ಅದರಲ್ಲಿ ಅಗ್ರಗಣ್ಯನಾದವನು ಅಂಬಿಗರ ಚೌಡಯ್ಯ. ಅಂಬಿಗರ ಚೌಡಯ್ಯನ ಕುರಿತು ಸಿದ್ಧನಂಜೇಶನ ‘ ಗುರುರಾಜ ಚಾರಿತ್ರ್ಯ’,ನಂಜುಂಡೇಶ್ವರ ಕವಿಯ’ ಭೈರವೇಶ್ವರ ಕಾವ್ಯ’ ದಲ್ಲಿ ನಾಮಮಾತ್ರದ ಉಲ್ಲೇಖವಿದೆ. ಹರಿಹರ,ರಾಘವಾಂಕ, ಭೀಮಕವಿ ಮುಂತಾದವರ ಕಾವ್ಯಗಳಲ್ಲಿ ಅಂಬಿಗರ ಚೌಡಯ್ಯನ ಪ್ರಸ್ತಾಪವಿಲ್ಲ. ಘನಲಿಂಗದೇವ (೧೪೮೦) ತನ್ನ ವಚನದಲ್ಲಿ ” ಡೋಹರ ಕಕ್ಕಯ್ಯ ,ಮಾದಾರ ಚನ್ನಯ್ಯ ಅಂಬಿಗರ ಚೌಡಯ್ಯಯಿಂತಿಪ್ಪ ಶಿವಶರಣರ ಮನೆ ಬಾಗಿಲನಿಕ್ಕುವ ಸೊಣಗನಮಾಡಿ ಎನ್ನಿರಿಸಯ್ಯಾ” ಎಂದು ಇತರ ಶರಣರೊಂದಿಗೆ ಅಂಬಿಗರ ಚೌಡಯ್ಯನನ್ನು ಸ್ತುತಿಸುತ್ತಾನೆ.
ಮುಪ್ಪಿನ ಷಡಕ್ಷರಿ ತನ್ನ ” ಸುಭೋದಸಾರ”ದಲ್ಲಿ ” ಅಂಬಿಗರ ಚೌಡಯ್ಯನ ಮುಂಬಾಗಿಲನು ಕಾಯುವ ನಂಬುಗೆಯ ಸೇವಕರು ಕುಂಭಿನಿಯಿಳಗಿನ್ನು ಸರಿಯದಾರು?” ಎಂದು ಚೌಡಯ್ಯನನ್ನು ಹಾಡಿ ಹರಿಸಿದ್ದಾನೆ. ಷಡಕ್ಷರದೇವನು ತನ್ನ ‘ ಬಸವರಾಜ ವಿಜಯ’ ಕೃತಿಯಲ್ಲಿ ” ನಿಡುಗುಡಿಮಾರನಂಬಿಗರ ಚೌಡಯ್ಯ ” ಎಂದರೆ ಮಹಾಲಿಂಗ ತನ್ನ ‘ ಗುರುಭೋಧಾಮೃತ’ ದಲ್ಲಿ ” ಕುಂಬಾರ ಗುಂಡಯ್ಯ ಅಂಬಿಗರ ಚೌಡಯ್ಯ ಕೆಂಬಾವಿಯೊಳಗೆ ಮೆರೆವ ಬೋಗಣ್ಣನಿಗೆ ಸಂಭ್ರಮದೊಳಗೆರಗಿ ನಮಿಸುವೆ” ಎಂದು ಚೌಡಯ್ಯನನ್ನು ಕೊಂಡಾಡುತ್ತಾರೆ.
೧೨ ನೆಯ ಶತಮಾನದಲ್ಲಿ ಬಾಳಿದ ದಿಟ್ಟ ಶರಣ ಅಂಬಿಗರ ಚೌಡಯ್ಯ ಜನಿಸಿದ್ದು ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನ ಚೌಡದಾನಪುರ ( ಚೌಡದಾನಪುರ ಮೊದಲು ಶಿವಪುರ ಆಗಿತ್ತು. ಚೌಡಯ್ಯನವರ ಪಾರಮಾರ್ಥಿಕ ಸಾಧನೆಯನ್ನು ಕಂಡು ಗುತ್ತಲ ಅರಸನು ಅವರಿಗೆ ದಾಸೋಹಕ್ಕೆ ಎಂದು ಶಿವಪುರಗಕ್ಕೆ ಹೊಂದಿಕೊಂಡಿರುವ ಭೂಮಿಯನ್ನು ಕಾಣಿಕೆಯಾಗಿ ನೀಡಿದನು. ಶರಣ ಅಂಬಿಗರ ಚೌಡಯ್ಯ ತನಗೆ ನೀಡಿದ ಈ ಭೂಮಿಯನ್ನು ತನ್ನ ಮಗ ಪುರವಂತ ಹಾಗೂ ಶಿವದೇವರಿಗೆ ದಾನವಾಗಿ ನೀಡಿದನು.ಚೌಡಯ್ಯ ದಾನವಾಗಿ ನೀಡಿದ್ದರಿಂದ ಗ್ರಾಮಕ್ಕೆ ಚೌಡದಾನಪುರ ಎಂದು ಹೆಸರು ಬಂದಿತೆಂದು ಹೇಳಲಾಗುತ್ತದೆ.)ಗ್ರಾಮದಲ್ಲಿ.ಚೌಡಯ್ಯನ ತಂದೆ ವಿರೂಪಾಕ್ಷ. ತಾಯಿ ಪಂಪಾದೇವಿ. ಗುರು ಉದ್ದಾಲಕ. ಮಗ ಪುರವಂತ. ಚೌಡದಾನಪುರ ದಲ್ಲಿ ಪೂರ್ವದಿಂದ ಪಶ್ಚಿಮವಾಹಿನಿ ಆಗಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಜನರನ್ನು ದೋಣಿ ಮೂಲಕ ನದಿ ದಾಟಿಸುವ ಕಾಯಕ ಮಾಡುತ್ತಿದ್ದ.ಆತ ತನ್ನ ವಚನದಲ್ಲಿ” ಛಂದಗೆಟ್ಟವರೆಲ್ಲ ಬಂದೇರಿ ದೋಣಿಯ ಶಿವನೊಂದೆ ಠಾವಿಗೊಯ್ದು ಇಳುಹುವೆ”ಎನ್ನುತ್ತಾನೆ. ಈತನ ಈ ವಚನ ಮತ್ತು ಈತನ ಅಂಬಿಗರ ಚೌಡಯ್ಯ ಎಂಬ ಅಂಕಿತದಿಂದ ಈತ ನದಿ ದಾಟಿಸುವ ಅಂಬಿಗ ವೃತ್ತಿಯನ್ನು ಮಾಡುತ್ತಿದ್ದನೆಂದು ತಿಳಿಯಬಹುದು.ಈತ ತನ್ನ ಗ್ರಾಮದಲ್ಲಿಯೇ ಲಿಂಗೈಕ್ಯನಾಗಿದ್ದು ಚೌಡದಾನಪುರ ದಲ್ಲಿ ಈತನ ಸಮಾಧಿ ಇದೆ.
ಅಂಬಿಗರ ಚೌಡಯ್ಯ ಕಾಯಕ ಪ್ರೇಮಿ.ಕಾಯಕದಲ್ಲಿಯೇ ದೇವರನ್ನು ಕಾಣುವ ಮನೋಭಾವದವ.ಕಾಯಕವಿಲ್ಲದೇ ಮುಕ್ತಿ ಇಲ್ಲ ಎಂದು ನಂಬಿದವ.ಅದಕ್ಕಾಗಿಯೇ ಈತ ಇತರ ವಚನಕಾರರಂತೆ ತನ್ನ ವಚನಗಳಲ್ಲಿ ಯಾವ ಇಷ್ಟ ದೈವಕ್ಕೆ ಮೊರೆ ಹೋಗದೆ ತನ್ನ ಕಾಯಕವನ್ನೆ ತನ್ನ ವಚನಗಳ ಅಂಕಿತವನ್ನಾಗಿ ಮಾಡಿಕೊಂಡ.ಇತರ ವಚನಕಾರರು ಅನುಸರಿಸಿದ ಇಷ್ಟದೈವದ ಅಂಕಿತದ ಸಂಪ್ರದಾಯವನ್ನು ನಿರಾಕರಿಸಿ ತನ್ನ ವೃತ್ತಿ ನಾಮವನ್ನೆ ತನ್ನ ವಚನಗಳ ಅಂಕಿತವನ್ನಾಗಿ ಮಾಡಿಕೊಂಡ ದಿಟ್ಟ ಶರಣ. ಚೌಡಯ್ಯ ೧೧೦೦ ವಚನಗಳನ್ನು ಬರೆದಿರುವನೆಂದು ಹೇಳಲಾಗುತ್ತಿದ್ದು ‘ ಅಂಬಿಗರ ಚೌಡಯ್ಯ’ ಅಂಕಿತದ ಈತನ ೨೭೯ ವಚನಗಳು ದೊರಕಿವೆ.ಈತನಿಗೆ ತನ್ನ ವೃತ್ತಿಯ ಬಗ್ಗೆ ಅಪಾರ ಗೌರವ. ಅದಕ್ಕೆ,
ಅಂಬಿಗನು ಜಗದೊಳಗೆ ಇಂಬಿಲೋಲಾಡುವನು:
ತುಂಲಬಿದ ಸಾಗರದೊಳಗೆ ನೋಡಯ್ಯಾ
ನಿಂದ ದೋಣಿಯನೇರಿದಂದಿನ ಹುಟ್ಟ
ಕಂಡವರಂದವನರಿದಾತ ತೊಳಸುತ್ತಿದ್ದನು
ಛಂದಗೆಟ್ಟವರೆಲ್ಲಾ ಬಂದೇರಿ ದೋಣಿಯನು
ಶಿವನೊಂದೆ ಠಾವಿಗೊಯ್ದಿಳುಹುವೆನೆಂದನಂಬಿಗ ಚೌಡಯ್ಯ
( ಸ.ವ.ಸಂ- ೬,ವ.ಸಂ- ೧೮,ಪು- ೮)
ಎನ್ನತ್ತಾನೆ.ಚೌಡಯ್ಯ ಕೇವಲ ನದಿಯಲ್ಲಿ ದೋಣಿ ನಡೆಸುವವನಲ್ಲ.ಈತ ಭವಬಂಧನಗಳಿರುವ ಸಂಸಾರ ಸಾಗರವನ್ನು ದಾಟಿ ವಿಸ್ತಾರವಾದ ಮೋಕ್ಷ ಸಾಗರದಲ್ಲಿ ದೋಣಿಯನ್ನು ನಡೆಸುವಾತ.ಈತನ ಕೈಯಲ್ಲಿರುವದು ಶಿವಪಥದತ್ತ ಕರೆದೊಯ್ಯುವ ಭರವಸೆಯ ಹರಿಗೋಲು. ಹಾಗಾಗಿ ಈತನಿಗೆ ಯಾವ ಬಂಧನಗಳ ಹಂಗಿಲ್ಲ.ಜೊತೆಗೆ ಇಲ್ಲಿರುವ ಎಲ್ಲರ ಬಗ್ಗೆ ತಿಳಿದಾತ.ಇಲ್ಲಿ ಧರ್ಮದ ಮಾರ್ಗ ತಪ್ಪಿ ನಡೆಯುವವರಿಗೆ ತನ್ನ ದೋಣಿಯಲ್ಲಿ ಬಂದೆರಲು ತಿಳಿಸುತ್ತಾನೆ. ಅವರನ್ನು ಶಿವನಿರುವ ಠಾವಿನಲ್ಲಿ ಇಳಿಸುವೆ ಎಂದು ಎದೆತಟ್ಟಿ ಹೇಳುತ್ತಾನೆ. ತಾನು ತನ್ನ ದೋಣಿ ಮತ್ತು ದೋಣಿಯಲ್ಲಿರುವ ಭಕ್ತರನ್ನೆಲ್ಲ ಶಿವಪಥದತ್ತ ಹಾಯಿಸಿದ ನಿಸ್ಸಿಮ ಅಂಬಿಗ ಈ ಚೌಡಯ್ಯ.
ಅಂಬಿಗರ ಚೌಡಯ್ಯ ನಿಷ್ಠುರ ಪ್ರಕೃತಿಯ ವಚನಕಾರ. ಸಮಾಜದ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ತೋರಿಸಿ ಖಂಡಿಸುವ ಗುಣ ಈತನದು.ಈತ ಸಮಾಜದ ಮೂಢನಂಬಿಕೆ, ಡಂಭಾಚಾರಗಳ ವಿರೋಧಿ. ಕೈಯಲ್ಲಿರುವ ಇಷ್ಟಲಿಂಗವನ್ನು ಬಿಟ್ಟು ಅನ್ಯದೈವಕ್ಕೆ ಎರಗುವದನ್ನು, ಪೂಜಿಸುವದನ್ನು ಈತ ನಿಷ್ಠುರವಾಗಿ ವಿರೋಧಿಸುತ್ತಾನೆ. ಅಂತರವನ್ನು ತನ್ನ ಹರಿತವಾದ ಮಾತುಗಳ ಮೂಲಕ ಜರಿಯುತ್ತಾನೆ.
ಕಟ್ಟಿದ ಲಿಂಗವ ಕಿರಿದು ಮಾಡಿ
ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ
ಇಂತಪ್ಪ ಲೊಟ್ಟಿಮೂಳರ ಕಂಡರೆ
ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ
(ಸ.ವ.ಸಂ-೬,ವ.ಸಂ-೯೩,ಪು- ೩೨)
ಶರಣರಿಗೆ ಇಷ್ಟಲಿಂಗವೇ ಸರ್ವಸ್ವ. ಇಷ್ಟಲಿಂಗದ ಪೂಜೆಯ ಮೂಲಕ ಲಿಂಗಾಂಗ ಸಾಮರಸ್ಯವನ್ನು ಸಾಧಿಸಬೇಕು. ಹಾಗಿರುವಾಗ ಅದನ್ನು ಬಿಟ್ಟು ತಮ್ಮ ಇಷ್ಟಲಿಂಗಕಿಂತ ಅನ್ಯ ದೇವರುಗಳು ಶ್ರೇಷ್ಠ ಎಂದು ತಿಳಿದು ಅವುಗಳ ಪೂಜೆ ಪುನಸ್ಕಾರದಲ್ಲಿ ತೊಡಗುವದು ತಪ್ಪು. ಅಂತಹ ಮೂಢರನ್ನು ಗಟ್ಟಿಯಾದ ಪಾದರಕ್ಷೆಯಿಂದ ಹೊಡೆಯಬೇಕು ಎನ್ನುತ್ತಾನೆ ಚೌಡಯ್ಯ.
ಕಂಡದನ್ನು ಕಂಡ ಹಾಗೆ ಹೇಳುವ ಕೆಂಡದಂತಹ ಕೋಪವುಳ್ಳ ವ್ಯಕ್ತಿತ್ವದ ವಚನಕಾರ ಚೌಡಯ್ಯ.ಈತ ನಯ ನಾಜೂಕನ್ನು ರೂಢಿಸಿಕೊಂಡವನಲ್ಲ.ಈತ ಮೃದುವಾಗಿ ಮಾತನಾಡುವುದು ಅಪರೂಪ. ಬದಲಾಗಿ ಗ್ರಾಮ್ಯ ಮನೋಧರ್ಮವನ್ನು ರೂಢಿಸಿಕೊಂಡ ಒರಟು ವಚನಕಾರ. ತಪ್ಪು ದಾರಿಯಲ್ಲಿ ನಡೆಯುವವರನ್ನು ಸುಧಾರಿಸುವ ಉದ್ದೇಶ ಈತನದು.ಅದಕ್ಕಾಗಿ ಹರಿತವಾದ ಕಟುಟೀಕೆ ಈತನ ವಚನಗಳಲ್ಲಿದೆ.
ಶರಣಧರ್ಮಕ್ಕೆ ತಮ್ಮ ಅಂತರಾತ್ಮದ ಕುರುಹು ಆಗಿ ಇಷ್ಟಲಿಂಗ ಇದೆ.ಹಾಗಿರುವಾಗಲೂ ಕಲ್ಲು ,ಮಣ್ಣು, ಮರ ಮೊದಲಾದ ಭೌತಿಕ ವಸ್ತುಗಳನ್ನು ದೇವರೆಂದು ಪೂಜಿಸುವದನ್ನು ಈತ ಕಠೋರವಾಗಿ ವಿರೋಧಿಸುತ್ತಾನೆ.
ಕಲ್ಲು ದೇವರ ಪೂಜೆಯ ಮಾಡಿ
ಕಲಿಯುಗದ ಕತ್ತೆಗಳಾಗಿ ಹುಟ್ಟಿದರು
ಮಣ್ಣು ದೇವರ ಪೂಜಿಸಿ ಮತಿಹೀನರಾದರು
ಮರನ ದೇವರೆಂದು ಪೂಜಿಸಿ ಮಣ್ಣು ಕೂಡಿದರು
ದೇವರ ಪೂಜಿಸಿ ಸ್ವರ್ಗಕ್ಕೆರದೆ ಹೋದರು
ಜಗದ್ಭರಿತವಾದ ಪರಶಿವನೊಳಗೆ
ಕಿಂಕರನಾದ ಶಿವಭಕ್ತನೆ ಶ್ರೇಷ್ಠವೆಂದ
ನಮ್ಮ ಅಂಬಿಗರ ಚೌಡಯ್ಯ
( ಸ.ವ.ಸಂ-೬,ವ.ಸಂ- ೯೯,ಪು- ೩೪)
ಈ ವಚನದ ಮೊದಲನೆಯ ಭಾಗದಲ್ಲಿ ಚೌಡಯ್ಯ ಇಷ್ಟಲಿಂಗ ಹೊರತು ಪಡಿಸಿದ ಭೌತಿಕ ವಸ್ತುಗಳನ್ನು ದೇವರೆಂದು ಭಾವಿಸಿ ಪೂಜಿಸುವದನ್ನು ನಿರಾಕರಿಸುತ್ತಾನೆ.ಕಲ್ಲು, ಮಣ್ಣು, ಮರ ಮೊದಲಾದ ಭೌತಿಕ ವಸ್ತುಗಳನ್ನು ದೇವರೆಂದು ಬಗೆದು ಪೂಜಿಸುವ ಮೂಢನಂಬಿಕೆಯನ್ನು ವಿರೋಧಿಸುತ್ತಾನೆ. ನಮ್ಮ ಕರಸ್ಥಲದಲ್ಲಿ ಇಷ್ಟಲಿಂಗ ಇರುವಾಗ ಇಲ್ಲದ ದೇವರ ಮೊರೆ ಹೋಗುವ ಅವಶ್ಯಕತೆ ಇಲ್ಲ ಎಂಬ ಭಾವ ಅವನದು.ವಚನದ ಎರಡನೇ ಭಾಗದಲ್ಲಿ ಜಗದ್ಭರಿತ ಶಿವನಲ್ಲಿ ಧೃಡ ಮನಸ್ಸನಿಂದ,ನಿರ್ಮಲವಾದ ಭಾವದಿಂದ ವರ್ತಿಸುವವನೇ ನಿಜವಾದ ಭಕ್ತ ಎನ್ನತ್ತಾನೆ.ಇಷ್ಟಲಿಂಗದ ಪೂಜೆ ಕಾಟಾಚಾರದಾಗದೆ ನಿರ್ಮಲವಾದ ಮನಸ್ಸಿನಿಂದ ಕೂಡಿರಬೇಕೆಂಬ ಧೋರಣೆ ಚೌಡಯ್ಯನದು. ಪ್ರಕೃತಿಯಲ್ಲಿನ ಭೌತಿಕ ವಸ್ತುಗಳನ್ನು ದೇವರೆಂದು ಪೂಜಿಸುವ ಮೂಲಕ ಅವುಗಳ ನಾಶಕ್ಕೆ ಕಾರಣವಾಗುವದನ್ನು ತಡೆದು ಪ್ರಕೃತಿಯನ್ನು ಮಾನವನಿಂದ ರಕ್ಷಿಸುವ ಪ್ರಕೃತಿ ಪ್ರೇಮ ಈತನದು.
ಸಮಾಜದ ವೇಷ ಡಂಭಕರನ್ನು ತೆಗಳದೆ ಬಿಟ್ಟವನಲ್ಲ ಚೌಡಯ್ಯ. ಗುರು, ಜಂಗಮರು ಹೇಗಿರಬೇಕೆಂಬುದನ್ನು ತಿಳಿಸುತ್ತಾನೆ.
ಕಂಥೆ ತೊಟ್ಟವ ಗುರುವಲ್ಲ
ಕಾವಿ ಹೊತ್ತವ ಜಂಗಮನಲ್ಲ
ಶೀಲ ಕಟ್ಟಿದವ ಶಿವಭಕ್ತನಲ್ಲ
ನೀರು ತೀರ್ಥವಲ್ಲ
ಕೂಳು ಪ್ರಸಾದವಲ್ಲ
ಹೌದೆಂಬನ ಬಾಯ ಮೇಲೆ
ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟೊಕನೆ
ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ
( ಸ.ವ.ಸಂ- ೬.ವ.ಸಂ- ೯೦,ಪು- ೩೧)
ನೀಲುವಂಗಿ ತೊಟ್ಟ ಮಾತ್ರಕ್ಕೆ ಗುರುವಾಗಲಾರ,ಕಾವಿ ತೊಟ್ಟಾತನು ಜಂಗಮನಾಗಲಾರ.ಶೀಲ ಕಟ್ಟಿದವ ಶಿವಭಕ್ತನು ಆಗಲಾರ.ಗುರು, ಜಂಗಮ, ಭಕ್ತರಿಗೆ ತನ್ನದೆ ಆದ ಗುಣಗಳಿವೆ .ಅವನ್ನು ಅವರು ರೂಢಿಸಿಕೊಳ್ಳಬೇಕು.ಇಲ್ಲದಿದ್ದರೆ ಎಲ್ಲ ನೀರನ್ನು ತೀರ್ಥ, ಆಹಾರವನ್ನು ಪ್ರಸಾದ ಎಂದಂತಾಗುತ್ತದೆ.ಪ್ರತಿಯೊಂದು ಸಂಸ್ಕಾರ ಹೊಂದಿದಾಗ ಮಾತ್ರ ಯೋಗ್ಯ ಆಗುತ್ತದೆ.ಗುಣಗಳನ್ನು ರೂಪಿಸಿಕೊಳ್ಳದವರನ್ನು ಆರಾಧಿಸುವವರನ್ನು ಯಾವುದೇ ಮುಲಾಜಿಲ್ಲದೆ ಪಾದರಕ್ಷೆ ಇಂದ ಹೊಡೆ ಎಂದು ನಿಷ್ಠುರವಾಗಿ ಹೇಳುತ್ತಾನೆ.
ಚೌಡಯ್ಯನ ವಚನಗಳಲ್ಲಿ ಆಳವಾದ ಅನುಭವ ಮತ್ತು ಸಾಮಾಜಿಕ ಪ್ರಜ್ಞೆ ಎದ್ದು ಕಾಣುತ್ತದೆ. ಸಮಾಜದಲ್ಲಿನ ಅವ್ಯವಸ್ಥೆ, ಅಲ್ಲಿನ ಜಾತಿ ವ್ಯವಸ್ಥೆ ಚೌಡಯ್ಯನ ವಚನಗಳಲ್ಲಿ ಚಿತ್ರಣಗೊಂಡಿದೆ. ಈತ ಯಾರನ್ನೆ ಆಗಲಿ ,ಯಾವುದನ್ನೆ ಆಗಲಿ ತಪ್ಪುಗಳಿದ್ದಾಗ ಟೀಕಿಸದೆ ಬಿಡುವವನಲ್ಲ .ಸಮಾಜದಲ್ಲಿ ಜಾತಿ ಆಧಾರದಿಂದ ಬೇಧಭಾವ ಮಾಡುವವರನ್ನು ಈತ ಕಠೋರವಾಗಿ ವಿರೋಧಿಸಿ ಜಾತಿ ವ್ಯವಸ್ಥೆಯನ್ನು ಸಾರಾಸಗಟಾಗಿ ತಳ್ಳಿಹಾಕುತ್ತಾನೆ.
ಕುರಿಕೋಳಿ ಕಿರುಮಿನ ತಿಂಬವರ
ಊರೊಳಗೆ ಇರು ಎಂಬರು
ಅಮೃತಾನ್ನವ ಕರೆವ ಗೋವ ತಿಂಬವರ
ಊರಿಂದ ಹೊರಗಿರು ಎಂಬರು
ಆ ತನು ಹರಿಗೋಲಾಯಿತ್ತು
ಬೊಕ್ಕಣ,ಸಿದಿಕೆ,ಬಾರುಕೋಲು ,ಪಾದರಕ್ಷೆ
ದೇವರ ಮುಂದೆ ಬಾರಿಸುವದಕ್ಕೆ ಮದ್ದಳೆಯಾಯಿತ್ತು
ಈ ಬುದ್ದಳಿಕೆಯೊಳಗಣ ತುಪ್ಪುವ ಶುದ್ಧಮಾಡಿ
ತಿಂಬ ಗುಜ್ಜ ಹೊಲೆಯರ ಕಂಡಡೆ
ಉದ್ದನೆಯ ಚಮ್ಮಾಳಿಗೆಯ ತೆಕ್ಕೊಂಡು
ಬಾಯ ಕೊ( ಯ್ಯು)ವೆನು ಎಂದಾತ ನಮ್ಮ ಅಂಬಿಗರ ಚೌಡಯ್ಯ
( ಸ.ವ.ಸಂ-೬,ವ.ಸಂ- ೧೧೭,ಪು- ೩೯)
ಕುರಿ ಕೋಳಿ ಮಾಂಸವನ್ನು ತಿನ್ನುವವರನ್ನು ಊರೊಳಗೆ ಇಟ್ಟುಕೊಂಡು, ಪವಿತ್ರವಾದ ಅಮೃತವನ್ನು ನೀಡುವ ಗೋವು ತಿನ್ನುವವರನ್ನು ಊರ ಹೊರಗೆ ಇಡುವದು ನ್ಯಾಯವೇ? ಎಂದು ಪ್ರಶ್ನಿಸುತ್ತಾನೆ. ಗೋವಿನ ದೇಹದಿಂದ ತಯಾರಿಸುವ ವಸ್ತುಗಳು ಸರ್ವೋಪಯೋಗಿ.ಅಂತಹ ವಸ್ತುಗಳನ್ನು ಎಲ್ಲಾ ಜಾತಿಯವರು ಬಳಸುತ್ತಾರೆ.ಆದರೆ ಊರ ಒಳಗಿರುವವರು ತಿನ್ನುವ ವಸ್ತುವಿನಿಂದ ಯಾವ ವಸ್ತುಗಳನ್ನು ತಯಾರಿಸಲು ಬಾರದು.ಕೆಳಕುಲದವರು ತಯಾರಿಸಿದ ವಸ್ತುಗಳನ್ನು ಶುದ್ಧ ಮಾಡಿಕೊಂಡೆವು ಎಂದು ಬಳಸುವವರೆ ನಿಜವಾಗಿಯೂ ಕೆಳಜಾತಿಯವರು. ಅಂತವರು ಊರ ಹೊರಗೆ ಇರಬೇಕಾದವರು.ಇಂತಹ ಬೇಧಭಾವ ಮಾಡುವವರನ್ನು ಉದ್ದನೆಯ ಚಮ್ಮಾಳಿಗೆಯಿಂದ ಬಾಯಿ ಕೊಯ್ಯಬೇಕು ಎನ್ನುತ್ತಾನೆ. ಮೇಲ್ವರ್ಗದವರಿಂದ ಅನುಭವಿಸಿದ ನೋವು ,ಶೋಷಣೆ ಈತನ ವಚನದಲ್ಲಿ ವ್ಯಗ್ರತೆಯ ರೂಪವನ್ನು ಪಡೆದಿದೆ.
ಜಾತಿ ಆಧರಿಸಿ ಊರ ಹೊರಗೆ ಇಡುವದನ್ನು ವಿರೋಧಿಸುವ ಚೌಡಯ್ಯ, ನಮ್ಮ ಮನದಲ್ಲಿರುವ ಕೆಟ್ಟ ಗುಣಗಳು, ನಮ್ಮ ದುರ್ವರ್ತನೆಗಳೆ ಹೊಲೆತನ ಎನ್ನುತ್ತಾನೆ. ನಮ್ಮಲ್ಲಿರುವ ದುರ್ಗುಣಗಳನ್ನು ಬೆರಳು ಮಾಡಿ ತೋರಿಸುತ್ತಾನೆ.
ಹೊಲೆಯ ಹೊಲೆಯ ಎಂದಡೆ ಹೊಲೆಯರೆಂತಪ್ಪರಯ್ಯಾ
ಹೊಲೆಯ ಹೊರಕೇರಿಯಲ್ಲಿರುವನು
ಊರೊಳಗಿಲ್ಲವೆ ಅಯ್ಯಾ ಹೊಲೆಯರು?
ತಾಯಿಗೆ ಬೈದವನೇ ಹೊಲೆಯ
ತಂದೆಗೆ ಉತ್ತರ ಕೊಟ್ಟವನೇ ಹೊಲೆಯ
ತಂದೆಗೆ ಬೈದವನೇ ಹೊಲೆಯ
ಕೊಡುವ ದಾನಕ್ಕೆ ಅಡ್ಡ ಬಂದವನೇ ಹೊಲೆಯ
ನಡೆವ ದಾರಿಗೆ ಮುಳ್ಳ ಹಚ್ಚಿದವನೇ ಹೊಲೆಯ
ಬ್ರಾಹ್ಮಣನ ಕತ್ತಿಗೆಯ ಕೊಯ್ದವನೇ ಹೊಲೆಯ
ಹತ್ತು ಆಡಿದರೆ ಒಂದು ನಿಜವಿಲ್ಲದವನೇ ಹೊಲೆಯ
ಚಿತ್ರದಲ್ಲಿ ಪರಸತಿಯ ಬಯಸಿದವನೇ ಹೊಲೆಯ
ಲಿಂಗಮುದ್ರೆಯ ಕಿತ್ತಿದವನೇ ಹೊಲೆಯ
ಲಿಂಗವ ಬಿಟ್ಟು ತಿರುಗುವವನೇ ಹೊಲೆಯ
ಧರ್ಮವ ಮಾಡದವನೇ ಹೊಲೆಯ
ಬಸವನ ಕೊಂದವನೇ ಹೊಲೆಯ
ಬಸವನ ಇರಿದವನೇ ಹೊಲೆಯ
ಲಿಂಗಪೂಜೆಯ ಮಾಡದವನೇ ಹೊಲೆಯ
ಇಂತಪ್ಪ ಹೊಲೆಯ ಊರತುಂಬ ಇರಲಾಗಿ
ಹೊರಕೇರಿಯವರಿಗೆ ಹೊಲೆಯರನಬಹುದೇ?
( ಸ.ವ.ಸಂ- ೬,ವ.ಸಂ- ೨೯೦,ಪು- ೯೪)
ಊರ ಹೊರಗೆ ಇರುವವರು ನಿಜವಾದ ಹೊಲೆಯರಲ್ಲ.ಕೀಳು ಗುಣಗಳನ್ನು ರೂಢಿಸಿಕೊಂಡವರೇ ನಿಜವಾದ ಹೊಲೆಯರು.ತಂದೆ ತಾಯಿಗೆ ಗೌರವ ಕೊಡದವರು,ತಾವು ದಾನ ಕೊಡದೆ ಕೊಡುವವರಿಗು ತೊಂದರೆ ಮಾಡುವವರು, ನಡೆವ ಹಾದಿಯಲ್ಲಿ ಮುಳ್ಳು ಇಡುವವರು, ಸುಳ್ಳು ಹೇಳುವವ,ಧರ್ಮ ಮಾರ್ಗದಲ್ಲಿ ನಡೆಯದವರು,ಬಸವ ತತ್ವಗಳಿಗೆ ಹಾನಿ ಮಾಡುವವರು,ಲಿಂಗಪೂಜೆ ಮಾಡದವರು ಇವರೆಲ್ಲರೂ ಹೊಲೆಯರು. ಇವರೆಲ್ಲರೂ ಊರ ತುಂಬ ತುಂಬಿರುವಾಗ ಊರ ಹೊರಗೆ ಇರುವ ಸನ್ನಡತೆ ಉಳ್ಳವರನ್ನು ಹೊಲೆಯರೆಂದು ಕರೆಯುವದು ಅಪರಾಧ ಎನ್ನುತ್ತಾನೆ ಚೌಡಯ್ಯ.ಈತನ ಪ್ರಕಾರ ಸನ್ನಡತೆಗಳೆ ಮೇಲ್ಜಾತಿ, ದುರ್ಗುಣಗಳೇ ಹೊಲೆತನ.ಹೀಗೆ ಸಮಾಜದ ಕ್ರೂರತೆಯನ್ನು ವಿರೋಧಿಸುವ
ಈತನ ಈ ಚಾಟಿ ಎಟಿನಂತಹ ಮಾತುಗಳು ದುಷ್ಟರಿಗೆ ಕಹಿಯಾದರು ಒಳ್ಳೆಯವರಿಗೆ ಸಿಹಿಯಾದದಂತು ಸತ್ಯ.
ಅಂಬಿಗರ ಚೌಡಯ್ಯ ಒಬ್ಬ ಬಂಡಾಯ ವಚನಕಾರ. ಈತನ ವಚನಗಳು ಹಸಿ ಗೋಡೆಯಲ್ಲಿ ಹರಳಿಟ್ಟಂತೆ ದಿಟವಾದ ಮಾತುಗಳು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಇಂತಹ ವ್ಯಗ್ರತೆ ,ದಿಟ್ಟತನ ಕಾಣುವುದು ಚೌಡಯ್ಯ ಮತ್ತು ಸರ್ವಜ್ಞರಲ್ಲಿ ಮಾತ್ರ. ತನ್ನ ಬಿಚ್ಚುಹೃದಯದಿಂದ ಬಂದ ಚುಚ್ಚುಮಾತಿನ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಿದವ. ತನ್ನ ಕಹಿಯಾದ ವಚನ ಮಾತ್ರೆಗಳ ಮೂಲಕ ಸಮಾಜಕಂಟಿದ ಭವರೋಗಗಳನ್ನು ನಿವಾರಿಸಲು ಯತ್ನಿಸಿದ.ಅದಕ್ಕಾಗಿಯೇ ಶ್ರೀ ಸಿದ್ದಯ್ಯ ಪುರಾಣಿಕ ಅವರು ” ತಡೆಯಿಲ್ಲದ ಮಹಾನದಿಯ ಕಡೆಗಾಣಿಸಿ ಹಾಯಿಸಿ ನುಡಿಯಿಲ್ಲದ ನಿಸ್ಸೀಮ ಗ್ರಾಮದಲ್ಲಿರಿಸುವನಂತೆ! ಅಬ್ಬಾ ಅದೆಂಥ ಅಂಬಿಗನವ! ಒಡಲಿಲ್ಲದ ಅಂಬಿಗ,ಕಡೆಗಾಣಿಸುವ ಅಂಬಿಗ,ಕಾಸಿನ ಆಸೆಯಿಲ್ಲದ ಅಂಬಿಗ, ಆತ್ಮವಿಶ್ವಾಸದ ಅಂಬಿಗ, ಆಧ್ಯಾತ್ಮಸಂಪದದ ಅಂಬಿಗ, ಅನುಭಾವಿ ಅಂಬಿಗ” ಎಂದು ಅಂಬಿಗರ ಚೌಡಯ್ಯನನ್ನು ಸ್ತುತಿಸುತ್ತಾರೆ.
-ಡಾ.ರಾಜೇಶ್ವರಿ ವೀ.ಶೀಲವಂತ, ಬಿಳಗಿ