e-ಸುದ್ದಿ, ಮಸ್ಕಿ
ಮುಂದಿನ ಎರಡು ವರ್ಷಗಳಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಪ್ರದೇಶವಾಗಿ ಮಾಡಿ ಕ್ಷೇತ್ರದ ಜನರಿಗೆ ಆರ್ಥಿಕವಾಗಿ ಸದೃಡರನ್ನಾಗಿ ಮಾಡಬೇಕೆನ್ನುವುದೇ ನನ್ನ ಮುಖ್ಯ ಗುರಿ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಾನು ಕಳೆದ ಮೂರು ಅವಧಿಯಲ್ಲಿ ಶಾಸಕನಾಗಿದ್ದಾಗಿನಿಂದಲೂ ಮೂರು ಸರ್ಕಾರಗಳ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ನೀರಾವರಿ ಯೋಜನೆ ಜಾರಿಗೆ ಗೊಳಿಸುವಂತೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದೇನೆ. ಅಲ್ಲದೇ ನನ್ನ ಜೊತೆಗೆ ರೈತರ ನಿಯೋಗವನ್ನು ಸಹ ಕರೆದುಕೊಂಡು ಹೋಗಿ ನೀರಾವರಿ ಯೋಜನೆ ಜಾರಿ ಮಾಡುವಂತೆ ಮನವಿ ಸಹ ಮಾಡಿದ್ದೇವೆ. ಈಗಲೂ ಸಹ ನಾನು ರೈತರ ವಿಷಯದಲ್ಲಿ ರಾಜಕಾರಣ ಮಾಡಲು ಭಯಸುವುದಿಲ್ಲ ಎಂದರು.
ಕ್ಷೇತ್ರಕ್ಕೆ ನೀರಾವರಿ ಯೋಜನೆ ಬರುತ್ತದೆ ಎಂದರೆ ನಾನು ರೈತರೊಂದಿಗೆ ಕೈಜೋಡಿಸುವೆ. ಅಲ್ಲದೇ ರೈತರು ಯಾವಾಗ ಕರೆದರೂ ಸಹ ನಾನು ಅವರ ಜೊತಗೆ ಹೋಗಿ ಚರ್ಚಿಸಲು ಸಿದ್ಧ. ಆದರೆ ಇತ್ತಿಚಿಗೆ ಕೆಲವು ರೈತರು ನನ್ನ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ. ಇದು ಶುದ್ಧ ಸುಳ್ಳು. ಕೆಲವರು ನಾನು ಅಭಿವೃದ್ಧಿಗೆ ಅಡ್ಡಿಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಾನು ಯಾವತ್ತು ರಾಜಕಾರಣ ಮಾಡಲ್ಲ ಎಂದರು.
5ಎ ಕಾಲುವೆ ಹೋರಾಟ ಮಾಡುತ್ತಿರುವ ರೈತರ ಗ್ರಾಮಗಳಿಗೆ ನಂದವಾಡಗಿ ಏತ ನೀರಾವರಿ ಯೋಜನೆಯಿಂದ ಹರಿ ನಿರಾವರಿ ಕೊಡಲು ಜಲಸಂಪನ್ಮೂಲ ಸಚಿವರನ್ನು ಒಪ್ಪಿಸಿದ್ದೇನೆ. ಆದರೆ ಹೋರಾಟಗಾರರು ನಂದವಾಡಗಿ ನೀರು ಬೇಡ ಅಂದರೆ ಏನು ಮಾಡಲಿ. ಮೇಲ ಭಾಗದ ರೈತರು ನೀರು ನಮಗೆ ಕೋಡಿ ಎನ್ನುತ್ತಿದ್ದಾರೆ. ನಂದವಾಡಗಿ ನೀರು ಕೈ ತಪ್ಪಿದರೆ ಲಿಂಗಸುಗೂರು ತಾಲೂಕಿನ ರೈತರು ನೀರು ಪಡೆಯುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಜ.27ರಿಂದ ಪಾಮನಕಲ್ಲೂರು ಸೇರಿದಂತೆ ನಾಲ್ಕು ಗ್ರಾಪಂ ವ್ಯಾಪ್ತಿಯಲ್ಲಿ ಸಂಚರಿಸಿ ಪ್ರಚಾರ ಕಾರ್ಯ ಕೈಗೊಳ್ಳುವೆ. ಅಲ್ಲದೇ ಆಯಾ ಗ್ರಾಮಗಳ ರೈತರು ಹಾಗೂ ಅಲ್ಲಿನ ಜನರ ಜೊತೆಗೆ 5ಎ ನಾಲೆಯ ಬಗ್ಗೆ ಚರ್ಚೆ ಮಾಡುವೆ ಎಂದು ತಿಳಿಸಿದರು.
ಮಸ್ಕಿ ಘಟಕದ ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ, ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ಶರಣಬಸವ ಉಮಲೂಟಿ, ಶರಣಯ್ಯ ಸೊಪ್ಪಿಮಠ ಇದ್ದರು.
————–
ರೈತರಿಗಾಗಿ ಮುಖ್ಯಮಂತ್ರಿಗಳ ಕಾಲನ್ನು ಹಿಡಿಯಲು ಸಿದ್ಧ
5ಎ ನಾಲೆ ಯೋಜನೆ ಜಾರಿಗಾಗಿ 66 ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ. 5ಎ ನಾಲೆ ಜಾರಿಗೆ ನೀರಿನ ಲಭ್ಯತೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೊರಾಟ ಮಾಡುವ ರೈತರಾಗಲಿ, ವಿರೋಧ ಪಕ್ಷದ ಮುಖಂಡರಾಗಲಿ ನೀರಿನ ಲಭ್ಯತೆ, ಪೂರಕವಾದ ವರದಿಗಳು ಹಾಗೂ ತಾಂತ್ರಿಕ ವರದಿಗಳು ಏನಾದರೂ ಇದ್ದರೆ ಕೊಡಲಿ ರೈತರೊಂದಿಗೆ ಮುಕ್ತ ಚರ್ಚೆಗೆ ಸಿದ್ದವಿದ್ದೇನೆ. ಅಲ್ಲದೇ ಅವುಗಳನ್ನು ತೆಗೆದುಕೊಂಡು ಹೋಗಿ ಕ್ಷೇತ್ರದ ರೈತರ ಒಳತಿಗಾಗಿ ಮುಖ್ಯಮಂತ್ರಿ ಕಾಲು ಹಿಡಿದು ಯೋಜನೆ ಮಾಡಿಸುತ್ತೇನೆ. ನಾನು ರೈತರ ವಿಷಯ ಹಾಗೂ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಎಂದು ರಾಜಕಾರಣ ಮಾಡಲು ಭಯಸುವುದಿಲ್ಲ
-ಪ್ರತಾಪಗೌಡ ಪಾಟೀಲ್
——————————————————————-
ಪ್ರಮಾಣಕ್ಕೆ ಸಿದ್ಧ.
ನಾನು ಚುನಾವಣೆಯಲ್ಲಿ ಸುಳ್ಳು ಹೇಳಿ ಗೆದ್ದು ಬರಬಹುದು. ಆದರೆ ನಾನು ಸುಳ್ಳು ಹೇಳುವುದಿಲ್ಲ. ಇರುವ ಸತ್ಯವನ್ನೇ ಹೇಳುತ್ತಿದ್ದೇನೆ. ಕ್ಷೇತ್ರದ ನೀರಾವರಿ ವಿಚಾರದಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಒಂದು ವೇಳೆ ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ, ಹೋರಾಟ ಸಮಿತಿ ಮುಖಂಡರು ಯಾವ ದೇವಸ್ಥಾನದಲ್ಲಿ ಬಂದು ಪ್ರಮಾಣ ಮಾಡು ಎಂದರೆ ಅದಕ್ಕೆ ನಾನು ಸಿದ್ದ ಎಂದರು.
——————————————————