ಬೆಳಕ ಸ್ವೀಕರಿಸಿ

ಬೆಳಕ ಸ್ವೀಕರಿಸಿ

ಅಂತಃಕರಣ ಮಲ್ಲಿಗೆಯಾಗಿ
ಪರಿಮಳಿಸಿತ್ತು ಕಣ್ಣ ಬಿಂಬದಲಿ
ಮಾತೃ ವಾತ್ಸಲ್ಯಕೆ ರೆಕ್ಕೆ ಪುಕ್ಕ ಬಂದಾಗ
ಆಕಾಶ ತೀರಾ ಸನಿಹದಲಿ ||

ಹಸಿವು ನೂರು ಸಾವಿರ
ನೋವುಗಳ ಅಗಸ್ತ್ಯೋದರ
ಅದು ಬದುಕಲ್ಲಿ ತುಂಬದು, ಹಸಿವು ತುಂಬಿಸುವ ಪ್ರಯತ್ನ
ಆಕಾಶಕ್ಕೆ ಏಣಿ ಇಟ್ಟಂತೆ, ಆಗದು ||

ಕಾಯಕವನು ಮರೆತು
ಅದೃಷ್ಟವನು ನಂಬಿ ಕುಳಿತ ಅಲೆಮಾರಿ ಸೋಮಾರಿ
ಕನಸಲ್ಲಿ ಕಜ್ಜಾಯ ತಿಂದು
ಬಾಯಿ ಚಪ್ಪರಿಸುವ ಪರಿ ಉಸಾಬರಿ ||

ಖಚಿತ ಭರವಸೆಗಳಿಗೆ
ನಂಬಿಕೆಯೇ ಪ್ರಾಧಾನ್ಯ
ನಕಾರಾತ್ಮಕ ದೂರ
ಕಂಗಳು ಕುರುಡಾದಾಗ
ಮನದ ಸುತ್ತಲೂ ಗಾಢಾಂಧಕಾರ ||

ಮಾನವ ಏನಿದು ನಿನ್ನ ಬದುಕು ?
ಬರೀ ಕನವರಿಕೆ ಹಳ ಹಳಿ
ಬಿದ್ದ ಪುಚ್ಛಗಳಲಿ ಹಕ್ಕಿ ಹುಡುಕುವ
ವ್ಯರ್ಥ ಪ್ರಯತ್ನ ಕಳಕಳಿ ||

ಆತ್ಮ ನಂಬಿಕೆ ಘನೀರ್ಭೂತವಾದಾಗ
ಫಲಶೃತಿ ಸಹಜ
ವಿಕಾಸ ವೈಚಾರಿಕ ಪ್ರಜ್ಞೆಯ
ಸಾಕ್ಷೀಭೂತ ಮನುಜ ||

ಪಾಂಡಿತ್ಯದಹಮಿಕೆ ನೈಜ ಬದುಕನ್ನು
ಮರೆತ ದಿವಾಳಿತನ
ಬರೀ ಗಿಳಿಪಾಠ ಅರಿವನ್ನು
ಅರಗಿಸಿಕೊಳ್ಳದ ನಯವಂಚಕತನ ||

ಒಳಗೆ ಉರಿಯುತಿರಲಿ
ಸದಾ ದಿವ್ಯ ಪ್ರಕಾಶ ಪರಂಜ್ಯೋತಿ
ಈ ಚರ್ಮದ ತಿದಿಗೇನು ಗೊತ್ತು
ಬೆಳಕಿನ ಆಳ-ನಿರಾಳ ಪ್ರೀತಿ ||

ಕಾಣುತಿರುವುದೆಲ್ಲವೂ ಸತ್ಯವಲ್ಲವೆಂದು ಗೊತ್ತಿದ್ದಾಗ್ಯೂ ಕೂಡ ಅದೇಕೆ
ಇನಿತು ಬಡಿವಾರ, ಆಡಂಬರ,ಒಳಗೊಳಗೇ ಆಷಾಢಭೂತಿತನ, ಜೋಕೆ ||

ಬೆಳಕು ಯಾವ ದಿಕ್ಕಿನಿಂದಲೇ
ಬರಲಿ, ಮುಕ್ತವಾಗಿ ಸ್ವೀಕರಿಸಿ
ಆ ವಿನಯವಂತಿಕೆ ಖಂಡಿತ ವಾಗಿಯೂ
ಸಂತೃಪ್ತಿದಾಯಕ ಆಸ್ವಾದಿಸಿ ||

✍️ ಅಯ್ಯಪ್ಪಯ್ಯ ಹುಡಾ ರಾಯಚೂರು

Don`t copy text!