ಲಿಂಗಾಯತ ಧರ್ಮದಲ್ಲಿ ಶಿವನಿಲ್ಲ ಆರಾಧನೆಯಿಲ್ಲ

ಲಿಂಗಾಯತ ಧರ್ಮದಲ್ಲಿ ಶಿವನಿಲ್ಲ ಆರಾಧನೆಯಿಲ್ಲ

ಶಿವ ಎಂದೆನ್ನುವುದು ಒಂದು ತತ್ವ ಹಾಗು ಪ್ರಜ್ಞೆ ಶಿವ ಮಂಗಳಮಯ ಕಲ್ಯಾಣವೂ ಹೌದು.
ಸಿದ್ಧರಾಮರು ಶಿವನನ್ನು ಹೆಡ್ಡ ದಡ್ಡ ಕೈಲಾಸವೆಂಬುದು ಹಾಳು ಕೊಂಪೆ ಎಂದೆಲ್ಲ ಟೀಕಿಸಿದ್ದಾರೆ. ಶರಣರ ಮಾರ್ಗದಲ್ಲಿ ದೇವರನು ಹೊರಗೆ ಹುಡುಕುವ ಹಾಗಿಲ್ಲ ದೇವರು ನಮ್ಮೊಳಗೇ ಇದ್ದಾನೆ. ಆ ಚೈತನ್ಯದ ನಿರಂತರ ಶೋಧನೆಯೇ ಅಂಗ ಲಿಂಗದ ಯೋಗ . ಇದು ಭ್ರಮಾಂಡ ಮತ್ತು ಪಿಂಡಾಂಡಗಳ ಮಧ್ಯೆ ಸೇತುವೆ.
ಲಿಂಗ ಯೋಗ . ಅಂತರಂಗದ ವಿಕಸನಕ್ಕೆ ಸಾಧನ ಮಾತ್ರ .ಅರಿವನರಿಯುವ ಕುರುಹು ಮಾತ್ರ.ಹೀಗಾಗಿ ಆರಾಧನೆಯಿಲ್ಲದ ನೇಮ ಹೋಮ ದೀಪ ಧೂಪ ಪೂಜೆಯಿಲ್ಲದ ಸ್ವಯಂ ಶೋಧನೆ ಆರಾಧನೆ ಮನುಷ್ಯ ದೇವನಾಗುವ ಉನ್ನತ ಪರಿಯೇ ಲಿಂಗ ಯೋಗ. ನರನು ಹರನಾಗಿ ಮನುಷ್ಯ ಮಹದೇವನಾಗುವ ಜಗತ್ತಿನ ಶ್ರೇಷ್ಠ ಪರಿಕಲ್ಪನೆ ಶರಣ ಸಿದ್ಧಾಂತ . ಲಿಂಗ ಯೋಗವು ಅಂಗ ಲಿಂಗದ ಸಂಗ ಹರಿಯುವ ಅರಿವೊಂದೊಂದಿಗೆ ಅನು ಸಂಧಾನ . ಇಂತಹ ಶ್ರೇಷ್ಠ ಕಾರ್ಯದ ಸಾಧಕ ಭಕ್ತ . ವಿಷಯಾದಿಗಳಲ್ಲಿ ಬದುಕಿದವನು ಭವಿ. ಭಕ್ತ ದೇವನಾಗುವ ಮಾರ್ಗವೇ ಶರಣ ಮಾರ್ಗವು
ಶಿವ ಎಂಬ ಪದವನ್ನು ಬಸವಣ್ಣ ಬಳಸಿಲ್ಲ ಶರಣರು ಎಂಬ ಪದಗಳ ಮುಂದೆ ಶಿವ ಸೇರಿಸಿ ಶಿವ ಶರಣ ಮಾಡಿದ್ದಾರೆ ಶೈವರು.
ಚೈತನ್ಯದ ಚಿತ್ಕಳೆ ಇಷ್ಟಲಿಂಗವು ನಿರಾಕಾರ ತತ್ವವ ಅರಿಯುವ ಸಾಕಾರ ಮೂರ್ತಿ ಅಷ್ಟೇ. ಅದನ್ನು ಅರ್ಚನೆ ನೇಮ ಧೂಪ ದೀಪಕ್ಕೆ ಒಳಪಡಿಸಿದರೆ ಅದು ಕೂಡ ಸ್ಥಾವರವೆನಿಸುತ್ತದೆ.
ಬಸವಣ್ಣನವರು ಹೇಳಿದಂತೆ

*ಎರೆದರೆ ನೆನೆಯದು ಮರೆದರೆ ಬಾಡದು ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆಗೆ ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು.*

*ಲಿಂಗವ ಪೂಜಿಸಿ ಫಲವೇನು ಸಮರತಿ ಸಮಕಳೆ ಸಮಸುಖವನ್ನರಿಯದನಕ್ಕ ನದಿಯೊಳಗೆ ನದಿ ಬೆರೆಸಿದಂತೆ ಕೂಡಲ ಸಂಗಮದೇವ*

ಅದೇ ರೀತಿ ಚೆನ್ನ ಬಸವಣ್ಣನವರು –
*ಲಿಂಗ ಸಾಧಕರೆಲ್ಲ ಭೂ ಭಾರಿಗಳಾದರು ಎಂದಿದ್ದಾರೆ.*
ಅಲ್ಲಮರು ಹೊಟ್ಟೆ ಒಗರಾದ ಮೇಲೆ ಕಲ್ಲು ಕಟ್ಟಿದರೆ ಅದು ಲಿಂಗವೇ ಕಟ್ಟಿದಾತ ಗುರುವೇ ಕಟ್ಟಿಸಿಕೊಂಡಾತ ಶಿಷ್ಯನೇ ಎಂದು ಪ್ರಶ್ನಿಸಿ ಜಂಗಮ ವ್ಯವಸ್ಥೆಯ ನಿಜ
ಸ್ವರೂಪಕ್ಕೆ ದಾರಿ ತೋರಿಸುತ್ತಾರೆ ಶರಣರು.
ಅರಿವನರಿಯಲು ಗುರು ಕೊಟ್ಟ ಕುರುಹ, ಕುರುಹ ಹಿಡಿದು ಅರಿವ ಮರೆತ ಕುರುಬ ನೋಡ ಗುಹೇಶ್ವರ ಎಂದು ಅಲ್ಲಮರು ಈ ಕುರು ಲಾಂಛನಗಳ ಹಿಂದಿನ ಆಶಯಕ್ಕೆ ಧಕ್ಕೆ ಬಂದಾಗ ವಿಡಂಬಿಸಿದ್ದಾರೆ ಟೀಕಿಸಿದ್ದಾರೆ.
ಶರಣರು ಅಷ್ಟಾವರಣ ಪಂಚಾಚಾರ ಮತ್ತು ಷಟ್ಸ್ಥಲಗಳನ್ನು ಹೊಸ ವೈಜ್ಞಾನಿಕ ವೈಚಾರಿಕ ರೀತಿಯಲ್ಲಿ ಅರ್ಥೈಸಿದ್ದಾರೆ ಹಾಗು ವ್ಯಾಖ್ಯಾನಿಸಿದ್ದಾರೆ .
ಇಷ್ಟ ಲಿಂಗಕ್ಕೂ ಚರ ಲಿಂಗ ಸ್ಥಾವರ ಲಿಂಗ ಮುಂತಾದ ಬಾಹ್ಯ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ . ಇಷ್ಟಲಿಂಗವು ಬಸವಣ್ಣನವರ ಹೊಸ ಅನ್ವೇಷಣೆ ಲಿಂಗಾಯತ ಧರ್ಮವು ಅವಿಷ್ಕಾರಗೊಂಡ ಸ್ವತಂತ್ರ ಧರ್ಮವಾಗಿದೆ.
ಅಷ್ಟಾವರಣಗಳನ್ನು ಪಂಚಾಚಾರಗಳನ್ನು ಹೊಸ ರೀತಿಯಲ್ಲಿ ಅರ್ಥಿಸುವ ಪ್ರಯತ್ನ ನಮ್ಮದಾಗಬೇಕು.
ಲಿಂಗಾಯತ ಧರ್ಮದ ತಾತ್ವಿಕ ವಿಚಾರಗಳನ್ನು ಮಾತ್ರ ಸಾದರಪಡಿಸಿದರೆ ಅವುಗಳ ಹಿಂದಿನ ಸಾಮಾಜಿಕ ಆಶಯಗಳಿಗೆ ಪೆಟ್ಟು ಬೀಳುತ್ತದೆ. ಹೀಗಾಗಿ ವಚನಗಳ ಅಧ್ಯಯನದಲ್ಲಿ ತಾತ್ವಿಕ ಸಾಮಾಜಿಕ ಧಾರ್ಮಿಕ ವೈಚಾರಿಕ ಆಧ್ಯಾತ್ಮಿಕ ಚಿಂತನೆಗಳು ಮೂಡಿ ಬರಬೇಕು.
ಹೀಗಾಗಿ ಶಿವಾರಾಧಕ ಲಿಂಗಾಯತರು ಎಂದೆನ್ನುವುದು ಅಷ್ಟೊಂದು ಸರಿ ಎನಿಸುವದಿಲ್ಲ ,ಏಕೆಂದರೆ *ನಮ್ಮಲ್ಲಿ ಶಿವನೂ ಇಲ್ಲ ಆರಾಧನೆಯು ಇಲ್ಲ.*
ಆದರೂ ಒಮ್ಮೊಮ್ಮೆ ಸ್ಪಷ್ಟತೆ ಇಲ್ಲದೆ ಅಥವಾ ಕೇವಲ ತಾತ್ವಿಕ ವಿಚಾರಗಳನ್ನು ಪ್ರತಿಪಾದಿಸಿದಾಗ ಹೀಗೆ ಗೊಂದಲು ಉಂಟಾಗುತ್ತದೆ.
ಅಷ್ಟಾಗಿಯೂ ನಾವು ಉತ್ತರಿಸಬೇಕಾದದ್ದು ಯಾರಿಗೆ.
ಹಿಂದೂ ಧರ್ಮಿಯರಿಗೆ ಅಲ್ಲವೇ ? ಹಿಂದೂ ಧರ್ಮವೇ ಅಲ್ಲ ಅದು ನಾಗರೀಕತೆ ಎಂದು ಸುಪ್ರೀಂ ಕೋರ್ಟ್ ಹೇಳಿದಾಗ ನಾವೇಕೆ ಅದಕ್ಕೆ ತಲೆ ಕೆಡಿಸಿಕೊಳ್ಳಬೇಕು. ಈ ದೇಶದಲ್ಲಿ ಇರುವ ಎಲ್ಲ ಧರ್ಮಗಳು ಪ್ರಸಕ್ತವಾಗಿ ಹಿಂದೂ ನಾಗರೀಕತೆ ಹಿಂದೂ ಸಂಸ್ಕೃತಿಗೆ ಒಳಪಟ್ಟಿವೆ.
ಹಿಂದಿನ ತಲೆ ಮಾರಿನ ಅನೇಕ ಸಂಶೋಧಕರ ಕೃತಿಗಳಲ್ಲಿ ಅಷ್ಟಾವರಣ ಪಾದಪೂಜೆ ಪಾದೋದಕ ಪ್ರಸಾದಗಳ ಸ್ಪಷ್ಟ ಚಿತ್ರಣವಿಲ್ಲ ಹೀಗಾಗಿ ಅವುಗಳ ಪರಿಷ್ಕರಣೆ ಅಗತ್ಯವೆಂದು ನನ್ನ ವ್ಯಕ್ತಿಗತ ಅಭಿಮತವಾಗಿದೆ


ಡಾ.ಶಶಿಕಾಂತ.ಪಟ್ಟಣ ಪುಣೆ

Don`t copy text!