ನನ್ನ ಕನಸು

ಸ್ವರ್ಗಾಧಿಪತಿ
ಇಂದ್ರನ ಒಡ್ಡೋಲಗ
ಪುಷ್ಪವೃಷ್ಟಿಸಿ ಸ್ವಾಗತಿಸಲು
ಸರತಿ ನಿಂತಿರೋ
ರಂಭೋರ್ವಸಿ ಮೇನಕೆಯರ ದಂಡು ||

ಗಾಂಧೀ ತಾತನಲ್ಲವೇ ?
ಖುದ್ದು ಇಂದ್ರನೇ ಇಳಿದು ಬಂದಿದ್ದ
ತಾತನಾ ಕೈ ಕುಲುಕಿ
ಆಲಂಗಿಸಿ ಆತ್ಮೀಯವಾಗಿ
ಆಹ್ವಾನಿಸಲೆಂದು ||

ನಗುಮೊಗದ ತಾತನಿಗೆ
ಎನಿತೂ ಖುಷಿಯಿಲ್ಲ
ಕೆಳಗೆ ನೆಟ್ಟಿಹ ದಿಟ್ಟಿ ಬದಲಾಗಲಿಲ್ಲ
ಇಂದ್ರನಾ ವೈಭವವನು ತಲೆ ಎತ್ತಿ ನೋಡಲೂ ಇಲ್ಲ ||

ನಿನ್ನಂತಹ ಅಜ್ಜನನು
ನಾ ನೋಡಲೇ ಇಲ್ಲ
ದೇಶಕ್ಕಾಗಿ ದುಡಿದೆ
ನಡೆದು ನಡೆದು ದಣಿದೆ
ಜನರಿಗಾಗಿ ಬದುಕಿದೆ
ಜನರಿಂದಲೇ ಸತ್ತೆ
ಇಗೋ ನನ್ನ ಪೀಠವೊಂದನ್ನು ಬಿಟ್ಟು ಸ್ವರ್ಗವೆಲ್ಲ ನಿನ್ನದೇ
ಎಂದ ಇಂದ್ರ ||

ನಾನೊಲ್ಲೆ ಅಗೋ ಅಲ್ಲಿ ಕಾಣುತಿಹಳಲ್ಲ ?
ಭೂರಮೆಯ ಹಿರಿಮಗಳು ಭಾರತಾಂಬೆ
ಅವಳ ಮಡಿಲಿಗಿಂತ ಮಿಗಿಲೇನಲ್ಲ ನಿನ್ನ ಸ್ವರ್ಗ
ಕಳಿಸಿಬಿಡಿ ನನ್ನನ್ನು ನನ್ನೂರಿಗೆ
ಸ್ವರ್ಗಕ್ಕೂ ಮಿಗಿಲಾದ ನನ್ನಮ್ಮನ ಮಡಿಲಿಗೆ ||

ಎನ್ನುತ್ತ
ಹೊರನಡೆದ ತಾತ
ಭರತ ಬೂಮಿಯ ಕಡೆಗೆ
ಮರಳಿ ದೀನ ದಲಿತರ ಮನೆಗೆ
ಕೇರಿಯಾ ದಾರಿಯಲಿ ಉಳುಕಿತ್ತು ತಾತನಾ ಕಾಲು
ಬಿದ್ದದ್ದು ನಾನು
ಎದ್ದೆ ನಾನಿದ್ದೆ ಮಂಚದ ಕೆಳಗೆ ||

✍️ ಆದಪ್ಪ ಹೆಂಬಾ ಮಸ್ಕಿ

Don`t copy text!