ನಿನ್ನ ಕೊಂದವರು ಗಾಂಧಿ
ಸತ್ಯ ಶಾಂತಿ
ನ್ಯಾಯ ಮೂರ್ತಿ
ಗಾಂಧೀ ನಮ್ಮ
ನಾಯಕ
ತಂದು ಕೊಟ್ಟನು
ನಮಗೆ ಬಾಪು
ಸಮತೆ ಸಮರಸ
ಸ್ವಾಭಿಮಾನ
ಕಾಲು ನಡಿಗೆ
ಮೇಕೆ ಹಾಲು
ಸರಳ ಬದುಕಿನ
ಫಕೀರನು
ಗಟ್ಟಿಗೊಳಿಸಿದ
ಮನುಜ ಮನುಜರ
ನೂತ ನೂಲಿನ ದಾರದಿ
ಕೆಂಪು ಕೋಟೆಯ
ಹಬ್ಬ ಸಡಗರ
ಮರೆತು ಬಿಟ್ಟೆವು
ಮೋಹನ
ಎಲ್ಲರ ಕೈಯಲಿ
ಧ್ವಜ ಪತಾಕೆ
ರಾಷ್ಟ್ರ ಗೀತೆ
ಹರುಷ ಕೇಕೆ
ಹೀಗೊಂದು ದಿನ
ನೀನು ನಡೆದೇ
ಪ್ರಾರ್ಥನೆ
ನಿನ್ನ ಗುರಿ ಇಟ್ಟು
ಕೊಂದುಬಿಟ್ಟೆವು
ಹೇ ರಾಮ ನಿನ್ನ ಮಂತ್ರ
ಉಸಿರು ಬಿಟ್ಟ ಉದ್ಗಾರ
ನಾವು ನಿನ್ನನು
ಕೊಂದು ಬಿಟ್ಟೆವು
ಸತ್ಯ ಸಮಾಧಿ
ಮಾಡಿಬಿಟ್ಟೆವು .
ಈಗ ವರ್ಷಕ್ಕೊಮ್ಮೆ
ನಿನ್ನ ನೆನಪು
ಇಂದು ರಾಜಘಾಟದ
ನಿನ್ನ ಸಮಾಧಿ ದರ್ಶನಕೆ
ಎಲ್ಲ ರಕ್ಕಸರ ದಂಡು
ನಿನ್ನ ಕೊಂದವರ
ಸಾಲು ಸಾಲು
ನಿನಗೆ ವಂದನೆ ಪೂಜೆ
ರಘುಪತಿ ರಾಘವ ರಾಜಾರಾಮ
ಪತಿತ ಪಾವನ ಸೀತಾರಾಮ
ಅಲ್ಲಿ ಕುಳಿತು ಕಣ್ಣೀರಿಡುತ್ತೇವೆ
ಸಂಜೆ ಟಿವಿ ಬಾನುಲಿಯಲ್ಲಿ
ಭಾಷಣ ಸಂವಾದ
ಪತ್ರಿಕೆ ತುಂಬೆಲ್ಲಾ
ನಿನ್ನ ಫೋಟೋ ಲೇಖನ
ಅಂದು ನಿನ್ನ ಕೊಂದವರು
ಇಂದು ನಿನ್ನ ಮೌಲ್ಯಗಳನ್ನು
ಕೊಲ್ಲುತ್ತಿದ್ದಾರೆ.
ಬೇಕಿಲ್ಲ ನ್ಯಾಯ ಧರ್ಮ ನೀತಿ
ಸ್ವಾರ್ಥ ತುಂಬಿದ ಭಾರತ
ಕ್ಷಮಿಸಿ ಬಿಡು ಗಾಂಧೀ
ನಿನ್ನ ಕೊಂದವರು ನಾವು
-ಡಾ ಶಶಿಕಾಂತ ಪಟ್ಟಣ ರಾಮದುರ್ಗ