ಅಹಿಂಸೆಯ ಕುರಿತು ಒಂದು ಸಂವಾದ

ಅಹಿಂಸೆಯ ಕುರಿತು ಒಂದು ಸಂವಾದ

ಪ್ರಶಾಂತ ಸಂಜೆ
ಗಾಂಧಿಯ ಕಾಣಲು ಬಂದವರಲ್ಲಿ
ಮೂವರು ಮುಂದೆ ನಿಂತರು

ಮರಾಠಾ ಪ್ರದೇಶದಿಂದ
ಬಾಲಗರ್ಭಿಣಿ ಮಹಾರ್,
ಗುಜರಾತಿನಿಂದ ದೇಹ ಸುಟ್ಟು
ಮೂಗನಾದ ಭೀಲ್,
ಮಧ್ಯ ದೇಶದಿಂದ ಕಾಲಿಲ್ಲದ
ಬಿಲ್ಲು ಹೊತ್ತು ಕುಂಟುವ ಕೋರ್ಬಾ.

ಪೋಸ್ಟ್ ಕಾರ್ಡಿನಲ್ಲಿ
ಪುಟ್ಟಕ್ಷರಗಳನ್ನು ತುಂಬುತ್ತಿದ್ದ ಗಾಂಧಿ
ಸನ್ನೆ ಮಾಡಿದರು ಮಾತಾಡಿರೆಂದು

ಮಹಾರ್ ಹುಡುಗಿ
ಉಬ್ಬಿದ ಹೊಟ್ಟೆ ತಡವಿದಳು,
‘ಇದಕ್ಕೆ ನೀವೇ ಹೊಣೆ.’
ಗಾಂಧಿಯ ಮುಖದಲ್ಲಿ ಝೆನ್ ನಗು
‘ಅವನನ್ನು ಕಡಿದು ಹಾಕುವ ಬಲವಿತ್ತು
ಹಿಂಸೆ ಬೇಡವೆಂದಿರಿ ನೀವು.’

ಭೀಲ್ ಯುವಕನ ಸನ್ನೆ ಮಾತು,
‘ಸಾಲದ ಸುಳಿಗೆ ಸಿಲುಕಿಸಿ ಜೀತಕ್ಕಿಟ್ಟಿದ್ದ ಒಡೆಯ
ಬಾವಿಯಿಂದ ನೀರು ಸೇದಿದೆನೆಂದು
ಕಟ್ಟಿ ಹಾಕಿ ನಾಲಗೆ ಸೀಳಿ ಬೆಂಕಿ ಹಚ್ಚಿದ
ತಿರುಗಿ ಬಿದ್ದರೆ ಹಿಂಸೆಯೆಂದು
ಅವುಡುಗಚ್ಚಿ ಸಹಿಸಿದೆ.’

ಕೋರ್ಬಾ ಬಿಲ್ಲು ಕೆಳಗಿಳಿಸಿದ,
‘ನನ್ನನ್ನು ಕುಂಟನಾಗಿಸಿದ ಹುಲಿಗೆ
ಬಾಣ‌ ಹೂಡಿ ಕೊಲ್ಲಬಹುದಿತ್ತು.
ಆದರೆ ಅಹಿಂಸೆ ಬಿಟ್ಟರೆ
ಬೇರೇನಿದೆ ನಮಗೆ?’

ಗಾಂಧಿ ಪೆನ್ನು ಕೆಳಗಿಟ್ಟು
ತನ್ನ ನೆಚ್ಚಿನ ಶಿಷ್ಯರೊಂದಿಗೆ ಹೇಳಿದರು,
‘ನೀವು ನನ್ನನು ತಿಳಿದುಕೊಂಡಿರುವುದು
ಬರಿಯ ಮಾತುಗಳಲ್ಲಿ
ಇಲ್ಲಿ ಹಿಂಸೆ ಮಾಡಿದವರು
ಅತ್ಯಾಚಾರಿ, ಜಮೀನ್ದಾರ ಮತ್ತು ಹುಲಿ.
ಭಯದಿಂದ ವಾಸನೆ ಮಾತ್ರ ಹಿಡಿದು ಬಂದ
ಹುಲಿಗೆ ಅದರ ಅರಿವಿರಲಿಲ್ಲ.
ಉಳಿದಿಬ್ಬರು ಕರುಣೆಗೆ ಅರ್ಹರೇ ಅಲ್ಲ.
ಮಗಳೇ, ನಿನಗೆ ಹಲ್ಲು ಉಗುರುಗಳು ಸಾಲದಿದ್ದರೆ
ಕುಡುಗೋಲು ಎತ್ತಿಕೊಳ್ಳಬಹುದಿತ್ತು.’

ಮೂಗರ ಭಾಷೆಯಲ್ಲಿ ಭೀಲ್‌ನೊಂದಿಗೆ ಹೇಳಿದರು,
‘ಮಾತು ಸೋತಲ್ಲಿ ಕೊಡಲಿ ಒದಗುತ್ತಿತ್ತು ನಿನಗೆ’
‘ಹಾಗಾದರೆ ಅಹಿಂಸೆ?’ ಕೋರ್ಬಾ ಕೇಳಿದ
‘ಮಾನ ಪ್ರಾಣ ಉಳಿಸಲು
ಹೋರಾಡುವಾಗ ಹಿಂಸೆ ಕೂಡದೆಂದು
ಹೇಳಿಲ್ಲವಲ್ಲ ನಾನೆಲ್ಲೂ.
ಪ್ರತಿದಾಳಿಗೆ ಮಾತ್ರ ಕೈ ಪೂರ್ತಿ ಚಾಚದಿರಿ.’

ಕೇಳುತ್ತಿದ್ದ ಸಂದರ್ಶಕನೊಬ್ಬ ಅನುಮಾನಿಸಿದ:
‘ಭಗತ್ ಸಿಂಗ್ ಮತ್ತು ಸಂಗಾತಿಗಳನ್ನು
ನೀವು ದೂರಿದ್ದ ನೆನಪು.’

‘ಹೋರಾಟ ಯಾರೊಂದಿಗೆ ಅಂತ
ಚೆನ್ನಾಗಿ ತಿಳಿದಿತ್ತು ನನಗೆ; ಅಷ್ಟೇ.
ಹಿಂಸೆ ಕೈ ಬಿಟ್ಟರೆ ಗೆಲ್ಲುವ ಅವಕಾಶ
ಇತ್ತು ಬಹಳವೇ.’

‘ನಿರಾಹಾರವೂ ಹಿಂಸೆಯೇ ಅಲ್ಲವೇ?’
ಮತ್ತೊಬ್ಬನ ಅನುಮಾನ.
‘ಸ್ವಂತ ದೇಹವನ್ನು ಹಿಂಸಿಸಿ
ಶತ್ರುವಿನ ಮೇಲೆ ಒತ್ತಡ ಹೇರುವುದು…’

‘ನೋಡಿರಿ, ಹಿಂಸೆ ಮತ್ತು ಅಹಿಂಸೆಯ ನಡುವೆ
ಕಟ್ಟಲಾಗಿಲ್ಲ ಕಬ್ಬಿಣದ ಗೋಡೆ.
ತುಲನೆಗೆ ನಿಲುಕದ ಯಾವ ಮೌಲ್ಯವೂ
ಇಲ್ಲ ಬದುಕಿಗೆ.’

ಗರ್ಭಿಣಿ ತನ್ನ ಹೊಟ್ಟೆಯನ್ನೂ
ಭೀಲ್ ತನ್ನ ಸುಟ್ಟ ದೇಹವನ್ನೂ
ಕೋರ್ಬಾ ಇಲ್ಲದ ಕಾಲುಗಳನ್ನೂ
ನೋಡುತ್ತಾ ನಿಂತರು
‘ಅದು ನಮಗೆ ಅರ್ಥವಾಗಲಿಲ್ಲ.’

ಗರ್ಭಿಣಿಯ‌ ಹೊಟ್ಟೆಯೊಳಗಿಂದ
ಎಳೆ ದನಿಯೊಂದು ಹೊರಟಿತು,
‘ಅರ್ಥವಾಯಿತು ನನಗೆ.’

~ ಮಲಯಾಳಂ: ಸಚ್ಚಿದಾನಂದನ್
ಕನ್ನಡಕ್ಕೆ: ಸುನೈಫ್

Don`t copy text!