ಮಂಜುಳ ನಿನಾದದ ಗುಂಗಿನಲಿ
ಪಸಿರು ಗರಿಕೆಯ
ಕೂರಲಗಿನಂತಹ
ಕುಶಾಗ್ರವಾಸಿಯೇ..
ಮುಂಜಾವು ಅರುಣ ಕಿರಣಕ್ಕೆ
ಥಳ ಥಳ ಹೊಳೆವ ಹಿಮಮಣಿಯೇ..
ಮಾಮರದ ಕೆಂದಳಿರ
ಟೊಂಗೆಯ ಮೇಲೆ ಕುಳಿತು
ಕುಕಿಲ್ವ ಕೋಗಿಲೆಯ ಇಂಚರವೇ..
ಎದೆಯೊಳಗೆ ಮತ್ತೆ ಮತ್ತೆ ಸುಳಿದು
ಸುತ್ತಿ ಹರಿದು ಮೈಯೆಲ್ಲ
ಕಚಗುಳಿ ಇಡುವವಳು ನೀನಾರೇ…
ಮಧ್ಯ ರಾತ್ರಿ ಸದ್ದಿಲ್ಲದೆ
ಸವಿ ನಿದ್ದೆಯೊಳಗೆ ಮುಳುಗಿದ
ಎನ್ನೊಳಗೆ ಇಳಿದು
ಏಳಿಸಿ ಕೆರಳಿಸಿ ಕೇಳಿಗೆ ಕಾವುಗೊಳಿಸುವ
ನಾರಿಮಣಿ ನೀನಾರೇ..!!
ನಿನಗಿದು ಬಿಟ್ಟು
ಬೇರಾವ ಕೆಲಸವೇ ಬಾರದೆಯೇ..?
ಮೋಹನ ಮುರುಳಿಯ
ಇಂಪಿನ ಇನಿ ಸುನಾದವೋ..
ಹರಿವ ನೀರೊಂದಿಗೆ ಮುಂಪರಿದು
ಝೇಂಕಾರ ಹೊರಹೊಮ್ಮಿಸುತ
ನಾದ ಮಾಧುರ್ಯದಲೇ
ಎನ್ನ ಮಂತ್ರಮುಗ್ಧವಾಗಿಸುವವಳೇ..
ತಂಗಾಳಿಯೇ ಗಟ್ಟಿಗೊಂಡು ಹಿಮವಾಗಿ,
ಇಲ್ಲವೆ ಮುಂಜಾವು
ಇಬ್ಬನಿಯೇ ಮಂಜುಗಟ್ಟಿ
ಪಲ್ಲವಿತ ಹಸಿರು ಪರ್ಣಗಳ ಪೂಗಳ ಮೇಲೆಲ್ಲ
ಮುತ್ತಿನ ಮಾಲೆಯಂತೆ
ಅಲಂಕಾರಗೊಂಡು ಎನ್ನಯ ಬೆರಗುಗೊಳಿಸುವವಳೇ..
ನಿನ್ನ ಮೊಗವನ್ನು ಒಮ್ಮೆಯಾದರೂ ತೋರ ಬಾರೇ..
ಮಂಜುಳ ನಾದಗೈಯುತ
ಮನದೊಳಗೆ ಮುಂಪರಿವ
ಹಿಮ ನದಿಯೇ ಜಿನುಗಿ
ಹರಿವ ಜಲದೊರತೆ ನೀನೆಯೇ..?
ನಾನೊಮ್ಮೆಯಾದರೂ
ನಿನ್ನ ಶೀತಲ ಜಲಕೆ ಬೊಗಸೆ ಒಡ್ಡಿ
ಜಲಾಮೃತವ ಪಡೆದು
ತಣಿಯದ ದಾಹವ ಇಂಗಿಸಿಕೊಳ್ಳಲೇ..
ನೀರೆ ನೀನೇ ಹೇಳಬೇಕು..
ಮಂಜುಳ ಕಲರವದ
ನಾದ ತರಂಗಿಣಿಯ ದಡದ ಮೇಲೆ
ದಿಕ್ಕು ತೋಚದೆ ನಿಂತವ ನಾನು..
ನಾನೇನೂ ಮಾಡಲರಿಯೆ
ನಿನ್ನನುಮತಿಯಿಲ್ಲದೆ..!!
–ಡಾ. ಲಕ್ಷ್ಮಣ ಕೌಂಟೆ
ಮಂಜುಳ ನಾದದ ಗುಂಗಿನಲ್ಲಿ ದಿಕ್ಕು ತೋಚದೆ ನಿಂತಿರುವ ಕವಿಗಳ ಸಾಲುಗಳು ಚನ್ನಾಗಿದೆ.