ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ
ಎಲ್ಲ ಇದ್ದೂ ಭಣಗುಡುತ್ತಿದೆ.
ಎದೆಯ ಬೆಳಕೇ ಆರಿ ಹೋದಂತೆ
ಮನದಲ್ಲಿ ಗಾಢ ಕಾರ್ಗತ್ತಲೆ
ಅವ್ವ ಹೇಳಿಕೊಂಡು ಹಗುರಾಗುತ್ತಿದ್ದಳು
ಅಪ್ಪ ಮೌನ ಹೊದ್ದು ನಿರ್ಲಿಪ್ತನಾಗುತ್ತಿದ್ದ
ಅವ್ವನ ಮಾತಿಗೆ ಕಿವಿಯಾದೆವು
ಅಪ್ಪನ ಮೌನಕ್ಕೆ ಕಣ್ಣಾದೆವು
ಕೊನೆಗೆ ಮಾತು ಮರೆತ ಅಪ್ಪ
ನೆನಪುಗಳನ್ನೂ ತೂರಿಬಿಟ್ಟ
ಬಿಸಿ ರೊಟ್ಟಿಗೆ, ರಾಗಿ ಗಂಜಿಗೆ,
ಹಸಿವು- ಬಾಯಾರಿಕೆಗೆ,
ರಾತ್ರಿ- ಬೆಳಗುಗಳಿಗೆ ಸ್ಪಂದಿಸದೇ
ತನ್ನೊಳಗೆ ಇಳಿಯುತ್ತಾ
ಮೌನವಾಗಿ
ಕಣ್ಣು ತೆರೆಯುವುದನ್ನೇ ನಿಲ್ಲಿಸಿದ…
ಜೋಪಾನ ಮಾಡಿದ ಹೆಂಡತಿ,
ಒಡಲ ಮಕ್ಕಳು, ಮೊಮ್ಮಕ್ಕಳು,
ಜೀವದಂತಿದ್ದ ಗೆಳೆಯರು,
ಹತ್ತಿರದ ಬಂಧುಗಳು,
ದೂರದ ಬಳಗಕ್ಕೆ ಕರೆ ಮಾಡಲು
ರೀಚಾರ್ಜ್ ಮಾಡಿಸಿಕೊಳ್ಳುತ್ತಿದ್ದ ಮೊಬೈಲ್,
ಬಸವ ಟಿವಿ ನೋಡಲು
ಪಕ್ಕದಲ್ಲೇ ಇಟ್ಟುಕೊಳ್ಳುತ್ತಿದ್ದ ರಿಮೋಟ್…
ಕೊನೆಗೆ ಎದೆಯ ಮೇಲಿನ
ಲಿಂಗವನ್ನೂ ಮರೆತು ಬಿಟ್ಟ.
ಮುಂಜಾನೆಯ ಅಂಗಳ,
ನಡುಮನೆಯ ಕುರ್ಚಿ,
ಕೋಣೆಯ ಮಂಚ,
ಮೂಲೆಯಲ್ಲಿನ ಕೋಲು,
ಟೀಪಾಯಿ ಮೇಲಿನ ಕನ್ನಡಕ,
ಸಿಂಕ್ ಪಕ್ಕದಲ್ಲಿನ ಹಲ್ಲಿನ ಸೆಟ್…
ಕಾಯುತ್ತಿರುವಂತಿವೆ ಅಪ್ಪನಿಗಾಗಿ
ಇದ್ದಾಗ ಅಪ್ಪನ ಜಗತ್ತಿನಲ್ಲಿ
ತೂರಿಕೊಳ್ಳದ ಸಂಕಟ,
ಮಸಣದ ಮಣ್ಣಲ್ಲಿ
ವಿಭೂತಿ ಬೂದಿಯ ಹಚ್ಚಿಸಿಕೊಳ್ಳುತ್ತಿದ್ದ
ಅಪ್ಪನ ಶಾಂತ ಮುಖ
ಮಿಸುಕಾಡುತ್ತಿದೆ ಮನದಲ್ಲಿ ಒಂದೆ ಸಮ
ಬಯಲಲ್ಲಿ ಬಯಲಾದ ಅಪ್ಪ
ಪದಾರ್ಥದಿಂದ ಪ್ರಸಾದಕ್ಕೆ
ಎಲ್ಲೆ ದಾಟಿದ ಜೀವ
ಮಾತನಾಡದೆಯೇ
ಕಲಕುತಿದೆ ಎದೆಯ ಭಾವ
ಅಪ್ಪನಿಲ್ಲದ ಮನೆ
ಹೇಗೆ ಮರೆಯುವದು ನೋವ?
-ಕೆ ಅರ್ ಮಂಗಳಾ
ಬೆಂಗಳೂರು