ಬಾರದು ಬಪ್ಪದು; ಬಪ್ಪದು ತಪ್ಪದು
ಅಂಜಿದಡೆ ಮಾಣದು, ಅಳುಕಿದಡೆ ಮಾಣದು,
ವಜ್ರಪಂಜರದೊಳಗಿದ್ದಡೆ ಮಾಣದು,
ತಪ್ಪದವೋ ಲಲಾಟಲಿಖಿತ.
ಕಕ್ಕುಲತೆಗೆ ಬಂದಡೆ ಆಗದು ನೋಡಾ.
ಧೃತಿಗೆಟ್ಟು, ಮನ ಧಾತುಗೆಟ್ಟಡೆ
ಅಪ್ಪುದು(ಆಗುವುದು) ತಪ್ಪದು.
ಬಾರದು ಬಪ್ಪದು;ಬಪ್ಪದು ತಪ್ಪದು;
ಕೂಡಲಸಂಗಮದೇವಾ.
ಭಾವಾರ್ಥ-
*ಅಂಜಿದಡೆ ಮಾಣದು, ಅಳುಕಿದಡೆ ಮಾಣದು,*
*ವಜ್ರಪಂಜರದೊಳಗಿದ್ದಡೆ ಮಾಣದು, ತಪ್ಪದವೋ ಲಲಾಟಲಿಖಿತ.*
ಯಾವುದೊ ಒಂದು ಕೆಟ್ಟ ಸನ್ನಿವೇಶಕ್ಕೆ
ನೀನು ಹೆದರಿ-ಬೆದರಿ ಅಂಜಿ ಅಳುಕಿ ಗಾಜಿನ ಮನೆಯಲ್ಲಿದ್ದರು ಬರುವುದನ್ನು ತಡೆಯಲು
ಯಾರಿಂದಲೂ ಸಾಧ್ಯವಿಲ್ಲ..
ನೀನು ಮಾಡಿದ ಕರ್ಮಫಲವು ನಿನ್ನನ್ನು
ಹಿಂಬಾಲಿಸಿಕೊಂಡು ಬರುತ್ತಿರುವಾಗ
ನೀನು ಆತಂಕದಿಂದ
ವಜ್ರಪಂಜರದ(ಏಳುಸುತ್ತಿನ ಕೋಟೆ)ಯಲ್ಲಿದರೂ ಬಿಡದು..
ಬರುವುದನ್ನು ತಡೆಯಲು
ಯಾರಿಂದಲೂ ಸಾಧ್ಯವಿಲ್ಲ,.
ಬರದೇ ಇರುವ ಸಾವು, ನೀ
ಸಾಯಬೇಕೆಂದು ಹೊರಟರು ಬರುವುದಿಲ್ಲ.
ನೀನು ಮಾಡಿದ ಕರ್ಮಫಲವೇ
ನಿನ್ನ ಹಣೆಯ ಬರಹ *ಲಲಾಟ ಲಿಖಿತ..*
*ಕಕ್ಕುಲತೆಗೆ ಬಂದಡೆ ಆಗದು ನೋಡಾ.*
*ದೃತಿಗೆಟ್ಟು ಮನ, ಧಾತುಗೆಟ್ಟಡೆ ಅಪ್ಪುದು(ಆಗುವುದು) ತಪ್ಪದು.*
*ಬಾರದು ಬಪ್ಪದು; ಬಪ್ಪದು ತಪ್ಪದು:*
*ಕೂಡಲಸಂಗಮದೇವಾ*
ಅಯ್ಯೋ ಏನಾಗುವುದೊ ಎಂದು ಕಕ್ಕುಲತೆಗೆ ಬಿದ್ದು ದೇವರೇ ಗತಿಯೆಂದು,
ಪ್ರಾಣ ಭಯಕ್ಕೆ ದಾನಧರ್ಮ ಮಾಡಿದಡೂ
ನೀ ಮಾಡಿದ ಕರ್ಮ ನಿನ್ನನ್ನು ಬಿಡದು,
ಕೊನೆಗೆ ಧೃತಿಗೆಟ್ಟು, ಮನಸ್ಸಿನ ಸ್ಥಿರತೆಯನ್ನು ಕಳೆದುಕೊಂಡು.
ರೋಷಾವೇಶದಿಂದ ಬೈದರೂ ಬಿಡದು,
ಮಾಡಿದ ಕರ್ಮಫಲ ಉಂಡಲ್ಲದೇ ಹೋಗಲೀಯದು:
*ಬಾರದು ಬಪ್ಪದು,*
ಬಾರದ್ದನ್ನು ನೀನು ಬಯಸಿ ನೆನೆದರೂ
ಅದು ನಿನಗೆ ಬಾರಲಾರದು ಸಿಗಲಾರದು.
ಅದರ ಬಗ್ಗೆ ನೀನು ಚಿಂತಿಸಬೇಡ,
*ಬಪ್ಪದು ತಪ್ಪದು*
ಬರುವುದನ್ನು ನೀನು ಬೇಡವೆಂದರೂ
ಬರಲಾರದೆ ಇರಲಾರದು,
ಬಯಸದಿದ್ದರೂ ಬಂದೇ ಬರುವುದು..
ಹೆದರದಿರು ಬೆದರದಿರು: ಅಂಜದಿರು ಅಳುಕದಿರು: ಕುಂದದಿರು ಕುಸಿಯದಿರು: ಧೃತಿಗೆಡದಿರು.
ಗುರು ಬಸವಣ್ಣನವರು ಹೇಳಿದಂತೆ…
ನಾಳೆ ಬಪ್ಪುದು ನಮಗಿಂದೆ ಬರಲಿ,
ಇಂದು ಬಪ್ಪುದು ನಮಗೀಗಲೆ ಬರಲಿ,
ಇದಕಾರಂಜುವರು, ಇದಕಾರಳುಕುವರು ‘ಜಾತಸ್ಯ ಮರಣಂ ಧ್ರುವಂ’ ಎಂದುದಾಗಿ
ನಮ್ಮ ಕೂಡಲಸಂಗಮದೇವರು ಬರೆದ ಬರಹವ ತಪ್ಪಿಸುವಡೆ
ಹರಿಬ್ರಹ್ಮಾದಿಗಳಿಗಳವಲ್ಲ.
ಎಂಬುದನ್ನು ಅರಿತು ಏನಾಗುವುದೊ
ಎಂತಾಗುವುದೊ ಎಂಬ
ಆಗುಹೋಗುವಿನ ಭಯಬಿಟ್ಟು,
ಧೃತಿಗೆಡದೆ, ಧೈರ್ಯವಾಗಿ, ಎಚ್ಚರದಿಂದ, ಸಾಗಬೇಕು.
ಈ ಜೀವನ ತನ್ನ ಗುರಿಯತ್ತ ಮುನ್ನಡೆಯಬೇಕು,
ಎಂಬುದೇ ಮೇಲಿನ ವಚನದ ಭಾವಾರ್ಥ….
–ವಿಶ್ಲೇಷಣೆ
ಲೋಕೇಶ್ ಎನ್ ಮಾನ್ವಿ