ಮಹಿಳೆಗಂಟಿದ ಮಾಯೆ,ಮೈಲಿಗೆಗಳ ಪೊರೆಯನ್ನು ಕಳಚಿ ಜಂಗಮ,ಮಠಾಧೀಶೆಯರನ್ನಾಗಿಸಿದ ಶರಣರು
ಜಗತ್ತಿನಲ್ಲಿ ಸ್ತ್ರೀ ಸ್ವಾತಂತ್ರ್ಯವನ್ನು ಮೊಟ್ಟಮೊದಲು ಪ್ರತಿಪಾದಿಸಿದ ಧರ್ಮ ಶರಣಧರ್ಮ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಹಿಳೆಗೆ ಆರ್ಥಿಕ, ಧಾರ್ಮಿಕ, ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ನೀಡಿ ಅವರನ್ನು ಮೊದಲು ಗೌರವಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಸ್ತ್ರೀಯು ಸಮಾಜದಲ್ಲಿ ಪುರುಷನಿಗೆ ಸಮಾನವೆಂದು ತಿಳಿದುಕೊಂಡು ಸ್ತ್ರೀ ಸಮಾನತೆಯನ್ನು ತಮ್ಮ ಚಳುವಳಿಯ ಮುಖ್ಯ ಉದ್ದೇಶಗಳಲ್ಲಿ ಒಂದನ್ನಾಗಿಸಿಕೊಂಡು ಆಕೆಗೆ ಸಮಾನ ಸ್ಥಾನಮಾನ, ಸವಲತ್ತುಗಳನ್ನು ಕಲ್ಪಿಸಿಕೊಟ್ಟವರು ಶರಣರು. ಜೊತೆಗೆ ಆಕೆ ಅತ್ಯಂತ ಸೊಗಸಾಗಿ, ಗಂಭೀರವಾಗಿ ವಚನಗಳನ್ನು ರಚನೆ ಮಾಡುವ ಮಟ್ಟಿಗೆ ಬೆಳೆಯಿಸಿ ವಚನಕಾರ್ತಿಯರ ಸಮೂಹವನ್ನು ಸೃಷ್ಟಿಸಿದವರು ಶರಣರು. ತಮಗೆ ಸರಿಸಮನಾದ ಸ್ಥಾನವನ್ನು ಕಲ್ಪಿಸಿ ಆಲೋಚಿಸುವಲ್ಲಿ,ಅನುಭವಗಳನ್ನು ಅಭಿವ್ಯಕ್ತಿಸುವಲ್ಲಿ ಅನುಭವದೆತ್ತರಕ್ಕೆ ಎರುವದನ್ನು ಕಲಿಸಿದರು.ಅಷ್ಟೇ ಅಲ್ಲದೆ ಬಸವ,ಅಲ್ಲಮ ರಂತಹ ಮಹಾಜ್ಞಾನಿಗಳನ್ನು ಕೆಲವು ಸಂದರ್ಭಗಳಲ್ಲಿ ಪ್ರಶ್ನಿಸುವ ದಿಟ್ಟತನ ತೋರಿಸುವ ಮಟ್ಟಿಗೆ ಶರಣೆಯರನ್ನು ಬೆಳಸಿದರು.
ಬಸವಪೂರ್ವ ಯುಗದಲ್ಲಿ ಸಮಾಜ ಸ್ತ್ರೀಯರನ್ನು ಅಸಮಾನತೆಯ ದೃಷ್ಟಿಯಿಂದಲೇ ಕಾಣುತಿತ್ತು.ಸ್ತ್ರೀ ಪುರುಷರ ನಡುವೆ ಇದ್ದ ಜೈವಿಕ ಭಿನ್ನತೆಯನ್ನು ಸಮಾಜವು ಅಸಮಾನತೆ ಎಂದೇ ಬಿಂಬಿಸಿತ್ತು.ಸ್ತ್ರೀ ಪುರುಷರು ಅಸಮಾನರು ಎಂದು ವಾದ ಮಂಡಿಸುವ ಬಹಳಷ್ಟು ಜನ ಅಸಮಾನತೆಗೆ ಮುಖ್ಯವಾಗಿ ೧) ಮನಃಶಾಸ್ತ್ರಿಯ ೨) ಜೈವಿಕ ಭಿನ್ನತೆ ಎಂಬ ಎರಡು ಕಾರಣಗಳನ್ನು ನೀಡುತ್ತಿದ್ದರು.ಇವೆರಡೂ ಕಾರಣಗಳನ್ನು ನಿರಾಕರಿಸುವ ಮೂಲಕ ಶರಣರು ಮಹಿಳೆಯರಿಗೆ ಸಮಾನ ಸ್ಥಾನಮಾನವನ್ನು ಕಲ್ಪಿಸಿದರು.
೧) ಮನಃಶಾಸ್ತ್ರಿಯ ಹಿನ್ನೆಲೆಯಲ್ಲಿ ‘ಮಾಯೆ ‘ ಎಂಬ ಆಪಾದನೆ:-
ಪಾರಂಪರಿಕ ಸಮಾಜವು ಮಹಿಳೆಯನ್ನು ಅಬಲೆ ಎಂದು ಹೇಳುವದರೊಂದಿಗೆ ಅವಳನ್ನು ಮಾಯೆ,ಮಿಥ್ಯೆ,ಮಾರಿ ಎಂದು ಬಿಂಬಿಸಿತ್ತು.ಈ ಮೂಲಕ ಅವಳನ್ನು ಮಾನಸಿಕವಾಗಿ ಜರ್ಜರಿತಗೊಳಿಸಿತ್ತು.ಮಾಯೆ ಆದ ಅವಳು ಆಧ್ಯಾತ್ಮಿಕ ಸಾಧನೆಗೆ ತೊಡಕು ಎಂಬ ಭಾವನೆ ಸಮಾಜದಲ್ಲಿ ನೆಲೆಗೊಳ್ಳುವ ಹಾಗೆ ಮಾಡಿತ್ತು.ಹಾಗಾಗಿ ಆಧ್ಯಾತ್ಮಿಕ ಸಾಧನೆಯನ್ನು ಮಾಡುವವರು ಸನ್ಯಾಸ ಧರ್ಮವನ್ನು ಸ್ವೀಕರಿಸಬೇಕು ಎಂಬ ನಿಯಮ ಸಮಾಜದಲ್ಲಿ ರೂಢಿಯಲ್ಲಿತ್ತು. ಇದರಿಂದ ಮಹಿಳೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು.ಆದರೆ ಮಹಿಳೆಯರಿಗೆ ಸಮಾನತೆಯನ್ನು ನೀಡುವ ಧೋರಣೆಯನ್ನು ಹೊಂದಿದ್ದ ಶರಣರು ಮೊಟ್ಟಮೊದಲಿಗೆ ಸಮಾಜದಲ್ಲಿ ಬೇರುಬಿಟ್ಟಿದ್ದ ಹೆಣ್ಣು ಮಾಯೆ ಎಂಬ ಕಾಲ್ಪನಿಕತೆಯನ್ನು ಬುಡಸಮೇತ ಕಿತ್ತೊಗೆದರು.ಸ್ತ್ರೀ ಪುರುಷರಲ್ಲಿ ಒಂದೆ ಆಗಿರುವ ಆತ್ಮತತ್ವವನ್ನು ಪ್ರತಿಪಾದಿಸುವ ಮೂಲಕ ಸ್ತ್ರೀ ಪುರುಷರ ಸಮಾನತೆಯನ್ನು ಪುರಸ್ಕರಿಸಿದರು.ಆತ್ಮತತ್ವದ ವ್ಯಾಖ್ಯಾನವನ್ನು ಎತ್ತಿ ಹಿಡಿಯುವ ಮೂಲಕ ಸ್ತ್ರೀಯರಿಗೆ ಅಂಟಿದ ಮಾಯೆ ಎಂಬ ಆಪಾದನೆಯನ್ನು ನಿರಾಕರಿಸಿದರು.
ಅಲ್ಲಮಪ್ರಭು-
ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ
ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ
ಎಂದು ಹೇಳುವ ಮೂಲಕ ಮಹಿಳೆಯರಿಗೆ ಇದ್ದ ಮಾಯೆ ಎಂಬ ಆಪಾದನೆಯನ್ನು ಸಾರಾಸಗಟಾಗಿ ತಳ್ಳಿಹಾಕುತ್ತಾರೆ.ಆ ಮೂಲಕ ನಮ್ಮ ಆಧ್ಯಾತ್ಮಿಕ ಸಾಧನೆಗೆ ಮಣ್ಣು, ಹೊನ್ನು ಗಳಂತೆ ಹೆಣ್ಣು ಸಹ ತೊಡಕಲ್ಲ.ನಮ್ಮ ಮನದಲ್ಲಿರುವ ಅತ್ಯಾಸೆಗಳೆ ನಮಗೆ ಮಾಯೆಯಾಗಿ ತೋರುತ್ತವೆ.ಆಸೆಗಳನ್ನು ಕಳೆದುಕೊಂಡವ ಎಂತಹ ವಸ್ತುಗಳು ತನ್ನ ಎದುರಿಗಿದ್ದರು ಅವುಗಳ ಜಾಲಕ್ಕೆ ಸಿಲುಕುವದಿಲ್ಲ.ನಿರ್ಮೋಹಿಯಾದವನಿಗೆ ಯಾತರ ಭಯವು ಇಲ್ಲ. ಸಾಧಕ ತನ್ನಲ್ಲಿರುವ ಮೋಹವನ್ನು ಕಳೆದುಕೊಂಡು ನಿರ್ಮೋಹಿಯಾಗಬೇಕು ಹೊರತು ತನ್ನಲ್ಲಿ ದೋಷಗಳನ್ನು ಇಟ್ಟುಕೊಂಡು ಮತ್ತೊಬ್ಬರ ಮೇಲೆ ಆಪಾದನೆಯನ್ನು ಮಾಡಬಾರದು ಎನ್ನುವ ಮೂಲಕ ಮಹಿಳೆಯರನ್ನು ಮಾಯೆ ಎಂದು ಕರೆದ ಸಮಾಜಕ್ಕೆ ಮಾಯೆ ನಿನ್ನಲ್ಲಿಯೇ ಇದೆ ಎಂಬ ಚಾಟಿ ಎಟು ಕೊಡುತ್ತಾರೆ.
ಸಿದ್ಧರಾಮ-
ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ
ಎನ್ನುವ ಮೂಲಕ ಮಹಿಳೆಯರನ್ನು ಕಪಿಲಸಿದ್ದ ಮಲ್ಲಿಕಾರ್ಜುನನಿಗೆ ಹೋಲಿಸುತ್ತಾನೆ.ಇಲ್ಲಿ ಅಂಕಿತನಾಮವಾದ ಕಪಿಲಸಿದ್ಧ ಮಲ್ಲಿಕಾರ್ಜುನ ಎನ್ನವದು ಶರಣರ ಪ್ರಕಾರ ದೈವವಲ್ಲ.ಅದು ಅಂತರಾತ್ಮದ ಅರಿವು.ಸಿದ್ದರಾಮ ಮಹಿಳೆಯನ್ನು ಅಂತರಾತ್ಮದ ಅರಿವು ಎನ್ನುವ ಮೂಲಕ ಅವರು ಸಹ ಪುರುಷರಿಗೆ ಸರಿಸಮನಾಗಿ ಜ್ಞಾನವನ್ನು, ಅರಿವನ್ನು ಪಡೆಯುವ ಶಕ್ತಿ ಹೊಂದಿದ್ದಾರೆ ಎಂಬ ಅರಿವನ್ನು ಸಮಾಜಕ್ಕೆ ಮಾಡಿಕೊಡುತ್ತಾರೆ.ಹೆಣ್ಣು ಜ್ಞಾನವನ್ನು ಪಡೆಯಲು ಅರ್ಹಳಲ್ಲ ಎಂಬ ಸಾಮಾಜಿಕ ನಂಬಿಕೆಯನ್ನು ಮುರಿಯುತ್ತಾರೆ.
ಹೀಗೆ ಶರಣರು ಕೊಟ್ಟ ವೈಚಾರಿಕ ಪ್ರಜ್ಞೆಯಿಂದ ಜಾಗೃತಗೊಂಡ ಶರಣೆಯರು ಮಾಯೆ ಎಂಬ ಆಪಾದನೆಯನ್ನು ನಿರಾಕರಿಸುವದರೊಂದಿಗೆ ತಮ್ಮನ್ನು ಮಾಯೆ ಎಂದು ಆಪಾದನೆಯನ್ನು ಮಾಡಿದ ಸಮಾಜವನ್ನು ಪ್ರಶ್ನಿಸುವ ಹಂತಕ್ಕೆ ಬೆಳೆಯುತ್ತಾರೆ.
ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ-
ಹೊನ್ನ ಬಿಟ್ಟುಲಿಂಗವವನೊಲಿಸಬೇಕೆಂಬರು
ಹೊನ್ನಿಗು ಲಿಂಗಕ್ಕು ವಿರುದ್ಧವೇ ?
ಹೆಣ್ಣು ಬಿಟ್ಟು ಲಿಂಗವನೊಲಿಸಬೇಕೆಂಬರು
ಹೆಣ್ಣಿಗೂ ಲಿಂಗಕ್ಕು ವಿರುದ್ದವೇ ?
ಎಂದು ಹೆಣ್ಣು ಆಧ್ಯಾತ್ಮಿಕ ಸಾಧನೆಗೆ ತೊಡಕು ಎಂದು ಹೇಳಿದ ಸಮಾಜವನ್ನೆ ಹೆಣ್ಣಿಗು ಲಿಂಗಕ್ಕು ವಿರುಧ್ಧವೇ? ಎಂದು ಪ್ರಶ್ನಿಸುವ ಮೂಲಕ ಹೆಣ್ಣು, ಹೊನ್ನು, ಮಣ್ಣು ಗಳಾವವು ಸಾಧನೆಗೆ ತೊಡಕಲ್ಲ ಎಂದು ತಿಳಿ ಹೇಳುತ್ತಾಳೆ.ಆಧ್ಯಾತ್ಮಿಕ ಸಾಧನೆ ಎನ್ನುವುದು ಅರಿವಿನಿಂದ ಒದಗುವ ಸುಖ ಹೊರತು ಬೇರೆನಲ್ಲ.ನಮ್ಮಲ್ಲಿರುವ ಅರಿವನ್ನು ಜಾಗೃತಗೊಳಿಸಿಕೊಂಡು ಆ ಸುಖ ಕಾಣಬೇಕು ಹೊರತು ಯಾವ ಯಾವ ವಸ್ತುಗಳನ್ನು ತೊರೆಯುವದರಿಂದಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ನೀಡುತ್ತಾಳೆ.ಇದನ್ನು ಮೀರಿ ನಡೆದ
ಅಕ್ಕಮಹಾದೇವಿ-
ಪುರುಷನ ಮುಂದೆ ಮಾಯೆ
ಸ್ತ್ರೀ ಎಂಬ ಅಭಿಮಾನವಾಗಿ ಕಾಡುವದು
ಸ್ತ್ರೀಯರ ಮುಂದೆ ಮಾಯೆ
ಪುರುಷನೆಂಬ ಅಭಿಮಾನವಾಗಿ ಕಾಡುವದು
ಲೋಕವೆಂಬ ಮಾಯೆಗೆ
ಶರಣರ ಚಾರಿತ್ರ್ಯ ಮರುಳಾಗಿ ತೋರುವದು
ಚೆನ್ನಮಲ್ಲಕಾರ್ಜುನನೊಲಿದ ಶರಣರಿಗೆ
ಮಾಯೆಯಿಲ್ಲ ಮರುಹಿಲ್ಲ ಅಭಿಮಾನವಿಲ್ಲ
ಎನ್ನುತ್ತಾಳೆ.ಇಲ್ಲಿ ಅಕ್ಕ ಯಾವ ಪುರುಷ ಸಮಾಜ ಹೆಣ್ಣನ್ನು ಮಾಯೆ, ಅವಳು ಆಧ್ಯಾತ್ಮಿಕ ಸಾಧನೆಗೆ ತೊಡಕು ಎಂದು ಜರಿದಿತ್ತೊ ಅದೇ ಪುರುಷ ಸಮಾಜಕ್ಕೆ ‘ ನಮ್ಮ ಆಧ್ಯಾತ್ಮಿಕ ಸಾಧನೆಗೆ ನೀವು ಅಡ್ಡಿಯಲ್ಲವೇ ? ‘ ಎಂದು ಪ್ರಶ್ನಿಸುತ್ತಾಳ .ಜೊತೆಗೆ ನಿಜ ಶರಣರಿಗೆ ಯಾವುದು ಮಾಯೆಯಲ್ಲ ಎಂಬ ನಿಜದ ಅರಿವನ್ನು ಮಾಡಿಸುತ್ತಾಳೆ.
ಮಾಯೆಯ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದ ಶರಣರು ದಾಂಪತ್ಯ ಜೀವನಕ್ಕೆ ಒತ್ತು ನೀಡಿ ‘ ಸತಿ ಪತಿಗಳಲೊಂದಾದ ಭಕ್ತಿ ಹಿತವಪ್ಪುದು ಶರಣರಿಗೆ ‘ಎಂಬಂತೆ ಸಾಧನೆಗೆ ಒಬ್ಬರಿಗೊಬ್ಬರು ಪೂರಕವಾಗಿರಬೇಕೆಂಬ ಸತ್ಯವನ್ನು ಸಮಾಜಕ್ಕೆ ಅರಹುತ್ತಾರೆ.
೨) ಜೈವಿಕ ಭಿನ್ನತೆ ಹಿನ್ನೆಲೆಯಲ್ಲಿ ಮೈಲಿಗೆ ಎಂಬ ಆಪಾದನೆ
ಪಾರಂಪರಿಕ ಸಮಾಜ ಸ್ತ್ರೀ ಪುರುಷರ ಅಸಮಾನತೆಗೆ ಒಡ್ಡಿದ ಮತ್ತೊಂದು ಕಾರಣ ಜೈವಿಕ ಭಿನ್ನತೆ. ಮಹಿಳೆಯರ ಸ್ತ್ರೀತ್ವದ ಸೂಚಕಗಳಾದ ಋತುಚಕ್ರ,ಗರ್ಭಿಣಿ, ಪ್ರಸವ ಮುಂತಾದ ಹೆರುವ ಹೊರುವ ನೈಸರ್ಗಿಕ ಕ್ರಿಯೆಗಳಿಗೆ ಸಮಾಜ ಸೂತಕಗಳೆಂದು ಹಣೆಪಟ್ಟಿ ಕಟ್ಟಿತ್ತು.ಈ ಕಾರಣದಿಂದ ಮಹಿಳೆಯರನ್ನು ಅಸ್ಪೃಶ್ಯರಂತೆ ಕಂಡು ಅವರನ್ನು ಇಂತಹ ಸಂದರ್ಭಗಳಲ್ಲಿ ಮನೆಯಿಂದ ಹೊರಗಿಡುವ ಕ್ರೂರ,ಅಮಾನವೀಯ ಪದ್ಧತಿಗಳನ್ನು ಅನುಸರಿಸಿಕೊಂಡು ಬಂದಿತ್ತು. ಈ ಕಾರಣಗಳನ್ನು ನೆಪ ಮಾಡಿ ವೇದಾಧ್ಯಯನ, ಮಂತ್ರಪಠಣ ಮುಂತಾದ ಉನ್ನತ ಧಾರ್ಮಿಕ ಕಾರ್ಯಗಳಿಂದ ಅವಳನ್ನು ದೂರಮಾಡಲಾಗಿತ್ತು.ಆ ವೇಳೆಯಲ್ಲಿ ಅವಳು ಮಾಡುವ ನೈವೇದ್ಯ ದೇವರಿಗೆ ಸಲ್ಲದೆಂಬ ನಂಬಿಕೆ ಪ್ರಚಲಿತದಲ್ಲಿತ್ತು.
ಜೈವಿಕ ಲಕ್ಷಣಗಳ ಕಾರಣದಿಂದ ಸ್ತ್ರೀಯರನ್ನು ಕನಿಷ್ಠಗೊಳಿಸುವದನ್ನು ಶರಣರು ವಿರೋಧಿಸಿದರು. ಶರಣರು ಸ್ತ್ರೀ ವ್ಯಕ್ತಿತ್ವದ ಸುತ್ತುವರೆದಿದ್ದ ವಿಕೃತ ಕಲ್ಪನೆಗಳನ್ನು ವೈಚಾರಿಕ ನೆಲೆಯಲ್ಲಿ ವಿಶ್ಲೇಷಿಸಿದರು. ಪ್ರಾಕೃತಿಕವಾಗಿರುವ ಸ್ತ್ರೀ ಪುರುಷರ ಜೈವಿಕ ಭಿನ್ನತೆಗಳನ್ನು ಆಧಾರವಾಗಿಟ್ಟುಕೊಂಡು ಸ್ತ್ರೀತ್ವವನ್ನು ಗೌಣವಾಗಿಸುವ ವೈದಿಕ ಚಿಂತನಾ ಕ್ರಮಗಳನ್ನು ನಿರಾಕರಿಸಿದರು. ಶರಣರು ಸಮಾಜವು ಮಹಿಳೆಯರಿಗೆ ಅಂಟಿಸಿದ್ದ ಅಸ್ಪೃಶ್ಯತೆಯ ಕೊಚ್ಚೆಯಿಂದ ಅವರನ್ನು ಹೊರತಂದರು.
ಚೆನ್ನಬಸವಣ್ಣ-
ಹೊಲೆ ಹೊಲೆ ಎಂದನಯ್ಯಾ ಬಸವಣ್ಣ
ಹೊಲೆ ಹುಟ್ಟಿದ ಮೂರು ದಿನಕ್ಕೆ ಪಿಂಡಕ್ಕೆ ನೆಲೆಯಾಯಿತು
ನರರಿಗೆ ಹೊಲೆ ,ಸುರರಿಗೆ ಹೊಲೆ
ಹರಿಬೃಹ್ಮಾದಿಗಳಿಗೆ ಹೊಲೆ
ಇರುವ ಹೊಲೆಯಲ್ಲಿ ಹುಟ್ಟಿ ಹೊಲೆಯನಲೆಗಳೆದರೆಂಬ
ಉಭಯಭೃಷ್ಟರ ಮುಖವ ನೋಡಲಾಗದು ಕೂಡಲ ಚನ್ನಸಂಗಮದೇವ
ಮನುಷ್ಯನೇ ಇರಲಿ, ದೇವಾನುದೇವತೆಗಳೆ ಇರಲಿ ಪ್ರತಿಯೊಬ್ಬರ ಜನನಕ್ಕೆ ಕಾರಣವಾದದ್ದು ಮಹಿಳೆಯರ ಋತುಚಕ್ರ.ಹಾಗಾಗಿ ಹೆಣ್ಣಿನ ಈ ನೈಸರ್ಗಿಕ ಕ್ರಿಯೆಯನ್ನು ಆಧರಿಸಿ ಅವಳನ್ನು ದೂರವಿರಿಸುವವರು ಭೃಷ್ಟರು.ಅವರ ಮುಖವನ್ನು ನೋಡಲಾಗದು ಎನ್ನುತ್ತಾನೆ ಚೆನ್ನಬಸವಣ್ಣ. ಹೆಣ್ಣಿನ ನೈಸರ್ಗಿಕ ಕ್ರಿಯೆಯಿಂದ ಅವಳನ್ನು ಅಸ್ಪೃಶ್ಯಳನ್ನಾಗಿ ಕಂಡರೆ, ಅದೇ ಹೊಲೆಯಲ್ಲಿ ಜನಿಸಿದ ನಾವು ಅಸ್ಪೃಶ್ಯರಲ್ಲವೇ-? ಎಂಬ ಪ್ರಶ್ನೆಯನ್ನು ಚೆನ್ನಬಸವಣ್ಣ ಹೆಣ್ಣುಮಕ್ಕಳನ್ನು ಕೀಳಾಗಿ ಕಂಡ ಸಮಾಜಕ್ಕೆ ಎತ್ತುತ್ತಾನೆ. ‘ಹೊಲೆಗಂಡಲ್ಲದೆ ಪಿಂಡದ ನೆಲೆಗೆ ‘ಆಶ್ರಯವಿಲ್ಲ ಎನ್ನುವ ಮೂಲಕ ಹೆಣ್ಣಿನ ಋತುಚಕ್ರದ ಹೊರತು ಭೂಮಿಯ ಮೇಲೆ ಮನುಷ್ಯನ ಸೃಷ್ಟಿ ಅಸಾಧ್ಯ ಎಂಬ ವೈಜ್ಞಾನಿಕ ಸತ್ಯವನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡುತ್ತಾನೆ.
ಋತುಚಕ್ರದ ವೇಳೆಯಲ್ಲಿ ಮಹಿಳೆ ಮಾಡುವ ಅಡುಗೆ ನೈವೇದ್ಯಕ್ಕೆ ಸಲ್ಲದು ಎಂಬ ಪಾರಂಪರಿಕ ನಂಬಿಕೆಗೆ
ಚೆನ್ನಬಸವಣ್ಣ-
ಭವಿಯ ಮನೆಯಲ್ಲಿ ಭವಿಪಾಕವಲ್ಲದೆ
ಭಕ್ತನ ಮನೆಯಲ್ಲಿ ಭವಿಪಾಕವಿಲ್ಲವಯ್ಯಾ
ಆ ಭಕ್ತನೂ,ಆ ಭಕ್ತನ ಸ್ತ್ರೀಯು ಲಿಂಗವಂತಳಾಗಿ
ಗುರುಲಿಂಗ ಜಂಗಮಕ್ಜೆ ಬೇಕೆಂದು
ಭಕ್ತಿಯಿಂದ ಲಿಂಗಹಸ್ತದಿಂದ ಮಾಡಿದ
ದ್ರವ್ಯ,ಸಕಲ ಪದಾರ್ಥಗಳೆಲ್ಲ ಶುದ್ಧಪಾಕ
ಅತ್ಯಂತ ಪವಿತ್ರಪಾಕ ಅದನಲ್ಲಗಳೆದಡೆ
ದ್ರೋಹವಯ್ಯಾ ಆ ಭಕ್ತಿ ಪದಾರ್ಥವನ್ನು ಲಿಂಗಕ್ಕೆ
ಕೊಟ್ಟುಕೊಳ್ಳಬೇಕಯ್ಯಾ ಕೂಡಲಚೆನ್ನಸಂಗಬಸವ
ಎನ್ನುತ್ತಾನೆ. ಶರಣ ದಂಪತಿಗಳು ಶುದ್ಧವಾದ ಮನಸ್ಸಿನಿಂದ ಮಾಡಿದ ಅಡುಗೆ ನೈವೇದ್ಯಕ್ಕೆ ಸಲ್ಲುತ್ತದೆ. ಭಕ್ತರಲ್ಲದವರು ಢಾಂಭಿಕ ಭಕ್ತರು ಮಾಡಿದ ಅಡುಗೆ ನೈವೇದ್ಯಕ್ಕೆ ಸಲ್ಲದು ಅದು ಮೈಲಿಗೆ. ಅದನ್ನು ಬಿಟ್ಟು ಪವಿತ್ರವಾದ ಮನಸ್ಸಿನಿಂದ ಭಕ್ತರು ಮಾಡಿದ ಅಡುಗೆಯನ್ನು ನಿರಾಕರಿಸುವದು ದ್ರೋಹ.ಮೈಲಿಗೆ ಎನ್ನುವದು ನಮ್ಮ ಮನಸ್ಸಿನಲ್ಲಿದೆ ಹೊರತು ನೈಸರ್ಗಿಕವಾಗಿ ಬಂದ ಹೆಣ್ಣಿನ ಕ್ರಿಯೆಗಳಲ್ಲಿ ಇಲ್ಲ ಎಂಬ ಧೋರಣೆಯನ್ನು ಚೆನ್ನಬಸವಣ್ಣ ವ್ಯಕ್ತಪಡಿಸುತ್ತಾನೆ.
‘ ಸತಿ ಭಕ್ತೆಯಾದಡೆ ಹೊಲೆಗಂಜಲಾಗದು,ಪತಿ ಭಕ್ತನಾದಡೆ ಕುಲಕಂಜಲಾಗದು’ ಎಂಬ ಪ್ರಭುವಿನ ವಚನವು ಸಹ ಭಕ್ತರಾದವರಿಗೆ ಯಾವ ಹೊಲೆತನವು ಇಲ್ಲ, ಸೂತಕವು ಇಲ್ಲ ಎಂದು ಮನದಟ್ಟು ಮಾಡುತ್ತದೆ.
ಪ್ರಾಕೃತಿಕವಾಗಿ ಸ್ತ್ರೀ ಪುರುಷರ ದೇಹದಲ್ಲಿ ಭಿನ್ನತೆ ಇದೆಯೇ ಹೊರತು ಅಂತರಂಗದಲ್ಲಿರುವ ಅರಿವು, ಸುಜ್ಞಾನ ಆತ್ಮಚೇತನ ಭಿನ್ನವಿಲ್ಲವೆಂದು ಶರಣರು ಸಮರ್ಥಿಸಿದರು.
ಜೈವಿಕ ಭಿನ್ನತೆಯ ಕಾರಣಕ್ಕಾಗಿರುವ ಅಸಮಾನತೆಯನ್ನು ವಿರೋಧಿಸಿದ ಶರಣರು ಪುರುಷನಷ್ಟೇ ಮಹಿಳೆಯರಿಗು ಎಲ್ಲಾ ರೀತಿಯ ಧಾರ್ಮಿಕ ಹಕ್ಕುಗಳನ್ನು ಮುಕ್ತವಾಗಿ ನೀಡಿದರು.ಪರಿಣಾಮವಾಗಿ ಸ್ತ್ರೀಯರು ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಮುಕ್ತವಾಗಿ ಭಾಗವಹಿಸುವ ಅವಕಾಶ ಪಡೆದರು. ಈ ಅವಕಾಶದಿಂದ ಸ್ತ್ರೀಯರು ಕೂಡ ಪುರುಷರಂತೆ ಆಧ್ಯಾತ್ಮಿಕ ಸಾಧನೆಗೈದರು.ಜೊತೆಗೆ ಶರಣಧರ್ಮದ ಉನ್ನತ ಸ್ಥಾನಗಳಾದ ಗುರುವಾಗಿ,ಜಂಗಮವಾಗಿ ( ಇಲ್ಲಿ ಗುರುತ್ವ- ಜಂಗಮತ್ವ ಗಳು ಸಾಧನೆಯ ಸ್ಥಿತಿಗಳು ಹೊರತು ಇಂದಿನಂತೆ ಜಾತಿಯ ಹುಟ್ಟುಗಳಲ್ಲ.)ಹೊರಹೊಮ್ಮಿದರು.ಗುಡ್ಡಾಪುರದ ಶರಣೆ ದಾನಮ್ಮ ಚರಜಂಗಮಳಾಗಿ ನಾಡೆಲ್ಲ ಸಂಚರಿಸಿ ಭಕ್ತರಿಗೆ ಲಿಂಗದೀಕ್ಷೆ ನೀಡಿದಳು.ವಿಮಳಾದೇವಿ ಎಂಬ ಶರಣೆ ಮಠಾಧೀಶರಂತೆ ಮಠಾಧಿಕಾರಿಣಿಯಾಗಿ ಕಾರ್ಯ ನಿರ್ವಹಿಸಿದಳು.( ಫ.ಗು.ಹಳಕಟ್ಟಿಯವರ – ಶರಣೆಯರ ಚರಿತ್ರೆಗಳು).
ಭಕ್ತಿ ಪಂಥ ಕಟ್ಟಿಕೊಟ್ಟ ಬಹುದೊಡ್ಡ ತಾತ್ವಿಕತೆ ಎಂದರೆ ಹೆಣ್ಣು ಗಂಡಾಗುವ ಪರಿ.ಇಲ್ಲಿ ಹೆಣ್ಣು ಗಂಡಾಗುವಿಕೆ ಎಂದರೆ ಗಂಡು ತನ್ನಲ್ಲಿರುವ ಅಹಂ ಅನ್ನು ಕಳೆದುಕೊಳ್ಳುವ ರೀತಿ.ಉತ್ತಿಷ್ಟನಾಗಿರುವ ಗಂಡು ತನ್ನಲ್ಲಿರುವ ಅಹಂ ಅನ್ನು ಕಳೆದುಕೊಂಡು ಕನಿಷ್ಟನಾಗುವ ಬಗೆ. ಮನುಷ್ಯ ಗಂಡಾಗಿದ್ದರೂ ಅಂತರಾತ್ಮವನ್ನು ಕೂಡುವ ಸುಖವನ್ನು ಅನುಭವಿಸಬೇಕಾದರೆ ಆತ ತನ್ನೆಲ್ಲ ಅಹಂಕಾರವನ್ನು ಕಳೆದುಕೊಂಡು ಕನಿಷ್ಠತನವನ್ನು ಬೆಳೆಸಿಕೊಳ್ಳಬೇಕು.
ಶರಣರು “”ಶರಣ ಸತಿ ಲಿಂಗ ಪತಿ” ಎನ್ನುವ ಮೂಲಕ ತಮ್ಮ ಅಹಂ ಅನ್ನು ಕಳೆದುಕೊಂಡು ಹೆಣ್ಣಾದರು.ಹೆಣ್ಣಿನ ಭಾವನೆ ಮನಸ್ಸು ಬೆಳೆಸಿಕೊಂಡ ಅವರಿಗೆ ಹೆಣ್ಣಿನ ನೋವುಗಳನ್ನು ಅರಿಯಲು,ಸ್ಪಂದಿಸಲು ಸಾಧ್ಯವಾಯಿತು.ಆ ಕಾರಣದಿಂದಾಗಿ ಅವರು ಹೆಣ್ಣಿನ ಮೇಲಿರುವ ಆಪಾದನೆಗಳನ್ನು, ನೋವುಗಳನ್ನು ದೂರಮಾಡಲು ಪ್ರಯತ್ನಿಸಿದರು. ಅದರಿಂದಾಗಿ ಶರಣರು ಸ್ತ್ರೀ ಪುರುಷರಲ್ಲಿರುವ ದೈಹಿಕ ಅಸಮಾನತೆಯನ್ನು ಅಲ್ಲಗಳೆದು ಹೆಣ್ಣಿಗೊಂದು ಮನಸ್ಸು, ಅಸ್ತಿತ್ವ, ವಿಚಾರ ಸ್ವಾತಂತ್ರ್ಯ ಇದೆ ಎಂದು ತಿಳಿಸಿಕೊಟ್ಟರು.ಭೋಗ ಸಾಧನವಾಗಿದ್ದ ಹೆಣ್ಣು ಶರಣರು ಕಲ್ಪಿಸಿದ ಈ ಸ್ವಾತಂತ್ರ್ಯದಿಂದ ವ್ಯಕ್ತಿತ್ವದ ಚೇತನ ಚಿಲುಮೆಯಾದಳು.ವಚನಗಳ ಸೃಷ್ಟಿಕರ್ತೆ,ಸಂರಕ್ಷಕಿಯಾಗಿ ಕಾರ್ಯ ನಿರ್ವಹಿಸಿದಳು.
ಡಾ.ರಾಜೇಶ್ವರಿ ವೀ.ಶೀಲವಂತ
ಬೀಳಗಿ