e-ಸುದ್ದಿ, ಮಸ್ಕಿ
ಇದೇ ಮೊದಲ ಬಾರಿ ಮಸ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ.14 ಭಾನುವಾರದಂದು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಘನಮಠದಯ್ಯ ಸಾಲಿಮಠ ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕಾರ್ಯಕಾರಿ ಸಮಿತಿಯಲ್ಲಿ ಸಮ್ಮೇಳನದ ಅಧ್ಯಕ್ಷರ ಆಯ್ಕೆಗಾಗಿ 8 ಜನರ ಹೆಸರುಗಳು ಪ್ರಸ್ತಾಪವಾದವು. ಅವುಗಳನ್ನು ಚರ್ಚಿಸಿ ಬಳಗಾನೂರಿನ ವೇ.ಮೂ.ಶರಭಯ್ಯ ಸ್ವಾಮಿ ಗಣಚಾರ ಅವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷರು ಪ್ರಕಟಿಸಿದರು.
ಒಂದು ದಿನದ ಸಮ್ಮೇಳನ ಹಮ್ಮಿಕೊಂಡಿದ್ದು ಉದ್ಘಾಟನ ಕಾರ್ಯಕ್ರಮ, ಎರಡು ಚಿಂತನ ಗೋಷ್ಟಿ, ಒಂದು ಕವಿಗೋಷ್ಟಿ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಇನ್ನು ಎರಡು ದಿನದಲ್ಲಿ ಸಮ್ಮೇಳನದಲ್ಲಿ ಭಾಗವಹಿಸುವ ವಿದ್ವಾಂಸರ ಹೆಸರುಗಳನ್ನು ಪ್ರಕಟಿಸುವುದಾಗಿ ತಿಳಿಸಿದರು.
ಸಾಹಿತ್ಯ ಸಮ್ಮೇಳಕ್ಕೆ ಲಾಂಚನವನ್ನು ಶಿಕ್ಷಕ ಸುಗೂರಯ್ಯ ಹಿರೇಮಠ ರಚಿಸಿದ್ದಾರೆ ಎಂದು ಘನಮಠದಯ್ಯ ಸಾಲಿಮಠ ತಿಳಿಸಿದರು.
ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಮಸ್ಕಿ, ಸಾಹಿತಿ ಗುಂಡುರಾವ್ ದೇಸಾಯಿ, ಲಾಂಚನ ತಯಾರಿಸಿದ ಕಲಾವಿದ ಸುಗೂರಯ್ಯ ಹಿರೇಮಠ, ಕಸಾಪ ಪದಾಧಿಕಾರಿಗಳಾದ ರಂಗಯ್ಯ ಶಟ್ಟಿ, ಅಮರೇಶ ಬ್ಯಾಳಿ, ಹನುಮಂತ ನಾಯಕ, ಮಲ್ಲಿಕಾರ್ಜುನ, ಶ್ರೀಧರ ಬಳ್ಳೋಳ್ಳಿ ಇದ್ದರು.
————————
ಲಾಂಚನ ಬಿಡುಗಡೆ
ಮಸ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಚನವನ್ನು ಕಸಾಪ ಗೌರವ ಅಧ್ಯಕ್ಷರು ಹಾಗೂ ಗಚ್ಚಿನ ಹಿರೇಮಠದ ಪೀಠಾಧೀಪತಿ ಶ್ರೀ.ಷ.ಭ್ರ.ವರರುದ್ರಮುನಿ ಶಿವಾಚಾರ್ಯರು ಶನಿವಾರ ಬಿಡುಗಡೆ ಮಾಡಿದರು.
ತಾಯಿ ಭುವನೇಶ್ವರಿ ಭಾವಚಿತ್ರದ ಜತೆಗೆ ತಾಲೂಕಿನ ಕೃಷಿಜ್ಞಾನ ಪ್ರದೀಪಿಕೆ ರಚಿಸಿದ ಸಂತೆಕೆಲ್ಲೂರಿನ ಘನಮಠ ಶಿವಯೋಗಿ, ಪ್ರಖ್ಯಾತ ಮಸ್ಕಿ ಮಲ್ಲಿಕಾರ್ಜುನ ದೇವರ ರಥ, ಕೋಮು ಸೌಹಾರ್ದದ ಸಂಕೇತ ಹಸಮಕಲ್ಲಿನ ಷರೀಫ್ ದರ್ಗಾ, ಅಶೋಕನ ಶಾಸನ, ಮೂರು ಮುಖದ ಹಂಸಪಕ್ಷಿ, ಮಸ್ಕಿ ನಾಲ ಡ್ಯಾಂ, ಭತದ ಗದ್ದೆಯ ಚಿತ್ರಗಳನ್ನೊಳಗೊಂಡ ಲಾಂಚನ ಆಕರ್ಷವಾಗಿದೆ.