e-ಸುದ್ದಿ ಮಸ್ಕಿ
ನೂತನ ಮಸ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವೇ.ಮೂ.ಶರಭಯ್ಯಸ್ವಾಮಿ ಗಣಚಾರ ಕಂಬಾಳಿಮಠ ಮೂಲತಃ ಆಧ್ಯತ್ಮ ಜೀವಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಣ್ಮರೆಯಾಗುತ್ತಿರುವ ಪುರಾಣ ಸಾಹಿತ್ಯವನ್ನು ಮತ್ತೆ ಪೂನರ್ಜೀವನಗೊಳಿಸಿದವರಲ್ಲಿ ಶರಭಯ್ಯಸ್ವಾಮಿ ಮೊದಲಿಗರು.
ವೇ.ಮೂ.ಶರಭಯ್ಯಸ್ವಾಮಿ ಗಣಚಾರ ಕಂಬಾಳಿಮಠ ಹುಟ್ಟಿದ್ದು ಬಳಗಾನೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಳಗಾನೂರಿನಲ್ಲಿ ಮುಗಿಸಿದ್ದಾರೆ. ಓದಿದ್ದು ಪಿಯುಸಿ ವಿಜ್ಞಾನದಲ್ಲಿ ಆಸಕ್ತಿ ತಾಳಿದ್ದು ಸಾಹಿತ್ಯ ಮತ್ತು ಪ್ರವಚನ ಮಾರ್ಗದಲ್ಲಿ. ಇವರ ಕಾವ್ಯನಾಮ ವರಕವಿ. ಸುಮಾರು 20 ಕೃತಿಗಳನ್ನು ರಚಿಸಿದ್ದಾರೆ.
ಭಾಮಿನಿ ಷಟ್ಪದಿಯಲ್ಲಿ ಪುರಾಣ ರಚಿಸುವ ಕಲೆ ಕರಗತವಾಗಿದ್ದು ವೃತ್ತಿಗಾಗಿ ಪ್ರವಚನ ಹೇಳುವದನ್ನು ರೂಢಿಸಿಕೊಂಡಿದ್ದಾರೆ. ಸಂಗೀತ, ಭಕ್ತಿಗೀತೆ ರಚನೆ ಇವರ ಹವ್ಯಾಸಗಳಾಗಿದ್ದು ನಿರಂತರ ಓದು ಅವರನ್ನು ಬೆಳಸಿದೆ.
ಉಟಕನೂರು ತಾತನ ಭಕ್ತಿಗೀತೆಗಳು ಹಾಗೂ ಪುರಾಣ ಸಾಹಿತ್ಯ, ದೇವಸುಗೂರಿನ ಸೂಗೇಶ್ವರ ಪುರಾಣ ಈ ಪುಸ್ತಕ ತೆಲುಗು ಮತ್ತು ಇಂಗ್ಲೀಷ ಭಾಷೆಗಳಿಗೆ ಅನುವಾದಗೊಂಡಿದೆ. ವಂದಲಿ ಮಾರುತೇಶ್ವರ ಪುರಾಣ, ಕಡಗಂಚಿ ಶಾಂತಲಿಂಗೇಶ್ವರ ಪುರಾಣ, ಮರಿಬಸವಸ್ವಾಮಿಗಳ ಮಹಾಪುರಾಣ, ಡವಳಗಿ ಮಡಿವಾಳಮ್ಮನ ಪುರಾಣ, ಹಾಲ್ವಿ, ಚಿಕಲಪರ್ವಿ ಮಹಾಂತ ರುದ್ರಮುನಿಶ್ವರ ಪುರಾಣ, ವಳಬಳ್ಳಾರಿ ಚನ್ನಬಸವ ತಾತ ಪುರಾಣ, ಬಳಗಾನೂರಿನ ಮರಿಶಿವಯೋಗಿಗಳ ಸಂಗೀತ ರೂಪಕ, ಹೊಳೆ ಆಲೂರು ಎಚ್ಚರಸ್ವಾಮಿ ಪುರಾಣ, 51 ಶಕ್ತಿ ಪೀಠಗಳ ಕ್ಷೇತ್ರ ದರ್ಶನ ಪುರಾಣ, ಪೆದ್ದ ಹೋತೂರು ಹುಚ್ಚ ವೀರ ಭ್ರಹ್ಮೇಂದ್ರ ಪುರಾಣ, ತುಪ್ಪದೂರು ಅವಧೂತ ಚನ್ನಯ್ಯ ತಾತನ ಪುರಾಣ, ಸಿಂದಗಿಯ ಆರೂಢ ಸಂಗನ ಬಸವೇಶ್ವರ ಪುರಾಣ, ಪುಟ್ಟರಾಜ ಗವಾಯಿಗಳ ವಿರಚಿತ ಗುರುವಚನಗ್ರಂಥದ 101 ವಚನಗಳಿಗೆ ಟೀಕಾ ತಾತ್ಪರ್ಯ ಹೀಗೆ ಹತ್ತು ಹಲವು ಗ್ರಂಥಗಳನ್ನು ಎಲೆ ಮರೆ ಕಾಯಿಯಾಗಿ ರಚಿಸಿದ ಶರಭಯ್ಯಸ್ವಾಮಿಗೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗಾದಿ ಒಲಿದು ಬಂದಿದೆ.
ತಂದೆ ವೀರಯ್ಯಸ್ವಾಮಿ ತಾಯಿ ಶರಣಮ್ಮ, ಮಡದಿ ಅನುಸೂಯಳೊಂದಿಗೆ ತುಂಬು ಜೀವನ ನಡೆಸುತ್ತಿರುವ ಇವರನ್ನು ಅನೇಕ ಮಠ ಮಾನ್ಯಗಳು ಸತ್ಕರಿಸಿ ಗೌರವ ಸಲ್ಲಿಸಿವೆ. ಇವೆಲ್ಲಕ್ಕಿಂತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಶರಭಯ್ಯಸ್ವಾಮಿಗೆ ಒಲಿದಿರುವದು ಕೀರಿಟ ಧರಿಸಿದಂತಾಗಿದೆ.