ತೊರೆಯ ಸ್ನಾನ

ಕಥೆ:

ತೊರೆಯ ಸ್ನಾನ

ಚಿಕ್ಕಮಗಳೂರು ಜಿಲ್ಲೆಯ ಮಾಗುಂಡಿ-ಹೊರನಾಡು ಮಾರ್ಗ ಮಧ್ಯದಲ್ಲಿ ಅದು ಒಂದು ಸುಂದರ ಕಾಫಿ ಎಸ್ಟೇಟ್. ಅಲ್ಲಿ ಇದ್ದ ನಿರ್ಜನತೆಯೇ ಅದರ ಪ್ರಾಕೃತಿಕ ಸೌಂದರ್ಯ ಹಾಗೆ ಉಳಿದುಕೊಂಡಿರಲು ಕಾರಣವಾಗಿದ್ದಿರಬೇಕು. ಅದರ ಮಾಲೀಕರು ಅಲ್ಲಿ ವರ್ಷ ಪೂರ್ತಿ ಇರದಿದ್ದರೂ, ಎಸ್ಟೇಟ್  ನೋಡಿಕೊಂಡರಲು ಇದ್ದ ಆಳು ಅದರ ನಿರ್ವಹಣೆಯ ಹೊಣೆ ಹೊತ್ತಿದ್ದ. ಮಾಲೀಕರು ಯಾವಾಗ ಬೇಕಾದರೂ ಹೊರಟು ಬಂದು ಬಿಡುತ್ತಿದ್ದರಲ್ಲ. ಅದಕ್ಕಾಗಿ ಮನೆಯ ಕಸ ಗುಡಿಸುವುದು, ಪೀಠೋಪಕರಣಗಳ ಮೇಲಿನ ಧೂಳು ಒರೆಸುವುದು, ಬೆಡ್ ಶೀಟ್ ಬದಲಾಯಿಸುವುದು ಹೀಗೆ ಮಾಲೀಕರು ಯಾವತ್ತೂ ಬಂದರೂ ಆ ಮನೆ ವಾಸ ಯೋಗ್ಯ ಎನ್ನುವಂತೆ ನೋಡಿಕೊಳ್ಳುತ್ತಿದ್ದ. ತಾನು ಕೂಡ ಅಲ್ಲಿಯೇ ಒಂದು ಕೋಣೆಯಲ್ಲಿ ಮಲಗಿಬಿಡುತ್ತಿದ್ದ. ಇಲ್ಲವೇ ಕೂಗಳತೆ ದೂರದಲ್ಲಿ ಇದ್ದ ತನ್ನ ಹಳ್ಳಿಯ ಕಡೆಗೆ ರಾತ್ರಿ ಹೊರಟು, ಮರುದಿನ ಬೆಳಿಗ್ಗೆ ವಾಪಸ್ಸಾಗುತ್ತಿದ್ದ.

ಮಾಲೀಕರು ಇವನನ್ನು ಆಳಿನ ಹಾಗೆ ಎಂದು ನೋಡಿದ್ದಿಲ್ಲ. ಅವರ ನಡುವೆ ಮಾತು ಕತೆ ಕಡಿಮೆಯಾದರೂ ಒಬ್ಬರನ್ನೊಬ್ಬರು ಸಂಪೂರ್ಣ ಅರ್ಥ ಮಾಡಿಕೊಂಡಂತೆ ವರ್ತಿಸುತ್ತಿದ್ದರು. ಅವರು ನಸುಕಿನಲ್ಲಿ ಬೇಗ ಎದ್ದರೆ, ಇವನು ಅವರಿಗೆ ಬಿಸಿ ಚಹಾ ಕಾಯಿಸುವುದು, ಎಲ್ಲೋ ಹೊರಟು ನಿಂತರೆ ಅವರ ವಾಹನ ಸ್ವಚ್ಛಗೊಳಿಸುವುದು, ರಾತ್ರಿಯ ಹೊತ್ತಿಗೆ ಊಟ ತಂದು ಕೊಡುವುದು, ಹೀಗೆ ಅವರ ಬೇಕು-ಬೇಡಗಳನ್ನು ಒಬ್ಬ ಬಂಧುವಿನ ಹಾಗೆ ನೋಡಿಕೊಳ್ಳುತ್ತಿದ್ದ. ಮಾಲೀಕರಾದರೂ ಇವನ ಕಷ್ಟಗಳಿಗೆ ಸ್ಪಂದಿಸಿ, ಅವರಿಬ್ಬರಲ್ಲಿ ಒಳ್ಳೆಯ ಅನ್ಯೋನ್ಯತೆ ಮೂಡಿತ್ತು. ಬೇಸಿಗೆಯ ದಿನಗಳಲ್ಲಿ ಹತ್ತಿರದ ತೊರೆಗೆ ಸ್ನಾನಕ್ಕೆ ಹೋಗುವುದು ಹಾಗೆಯೇ ಚಳಿ ರಾತ್ರಿಗಳಲ್ಲಿ ಮನೆ ಹೊರಗೆ ಹಿತವಾಗಿ ಸೌದೆ ಉರಿಸುತ್ತ  ಕುಳಿತುಕೊಳ್ಳುವುದು ಇಬ್ಬರಿಗೂ ಇಷ್ಟದ ವಿಷಯವಾಗಿತ್ತು.

ಮಾಲೀಕರು ಬೆಂಗಳೂರಿನಲ್ಲಿ ಹಲವಾರು ವ್ಯವಹಾರದಲ್ಲಿ ಮುಳುಗಿದ್ದರೂ, ತಮ್ಮ ಎಸ್ಟೇಟ್ ಗೆ ಆಗೊಮ್ಮೆ ಈಗೊಮ್ಮೆ ಬಂದು ಕೆಲ ದಿನ ಉಳಿದುಕೊಂಡಾಗಲೇ ಅವರಿಗೆ ನೆಮ್ಮದಿ. ಇಲ್ಲಿಯ ಪ್ರಕೃತಿ ದೇಹದೊಳಗೆ ತುಂಬುವ ಜೀವಶಕ್ತಿ ಅವರಲ್ಲಿ ಚೈತನ್ಯ ಮೂಡಿಸುತ್ತಿತ್ತು. ಬೇಸಿಗೆಯಲ್ಲಿ ಬಂದರೆ ಕೆಲ ವಾರಗಳಾದರೂ ಉಳಿದುಕೊಳ್ಳುತ್ತಿದ್ದರು. ದೇಶ ವಿದೇಶ ಸುತ್ತಿದ್ದರೂ, ಇಲ್ಲಿನ ಪಶ್ಚಿಮ ಘಟ್ಟಗಳ ನಿಸರ್ಗ ಎರೆಯುವ ತಂಪು ಬೇರೆ ಜಾಗದಲ್ಲಿ ಸಾಧ್ಯವಿಲ್ಲ ಎನ್ನುವುದು ಅವರ ಅನುಭವಕ್ಕೆ ಬಂದ ವಿಷಯ. ಹಾಗಾಗಿಯೇ ಎಸ್ಟೇಟ್ ಅವರಿಗೆ ಹೃದಯಕ್ಕೆ ತುಂಬಾ ಹತ್ತಿರ. ಹಾಗೆಯೆ ಅದನ್ನು ನೋಡಿಕೊಳ್ಳುವ ವ್ಯಕ್ತಿಯನ್ನು ಅವರಿಗೆ ಆಳಿನ ಹಾಗೆ ನೋಡುವುದು ಸಾಧ್ಯವಾಗಿರಲಿಲ್ಲ.

ಎಸ್ಟೇಟ್ ಕಡೆ ಜೋಪಾನ, ಮತ್ತೆ ಬರುವೆ ಎಂದು ಹೇಳಿ ಹೋದ ಮಾಲೀಕರು ಮತ್ತೆ ಬರದೇ ದಿನಗಳು, ತಿಂಗಳುಗಳು ಉರುಳಿದವು. ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಎಸ್ಟೇಟ್ ಮನೆಯ ವೆಚ್ಚಕ್ಕೆಂದು ಪ್ರತಿ ತಿಂಗಳು ಬ್ಯಾಂಕ್ ಗೆ ದುಡ್ಡು ಬರುವಂತೆ ವ್ಯವಸ್ಥೆ ಮಾಡಿದ್ದರಲ್ಲ. ಅದನ್ನು ತೆಗೆದುಕೊಂಡು ಆಳು ಮನೆಯನ್ನು ತನ್ನ ಪ್ರತಿ ದಿನದ ಕರ್ತವ್ಯದಂತೆ ಸ್ವಚ್ಛಗೊಳಿಸಿಗೊಂಡು ಇದ್ದ. ಒಂದಲ್ಲ ಒಂದು ದಿನ ಅವರು ಮರಳಿ ಬರುತ್ತಾರೆ ಎಂಬ ನಂಬಿಕೆ ಅವನಲ್ಲಿ ಬಲವಾಗಿತ್ತು.

ಕೆಲವು ವರ್ಷಗಳ ನಂತರ ಮಾಲೀಕರು ಬಂದೇ ಬಿಟ್ಟರು. “ಅಂತೂ ಬಂದೇ ಬಿಟ್ಟಿರಿ. ನನಗೆ ವಯಸ್ಸಾಗುತ್ತ ಬಂದರೂ, ಯಾವ ಕೆಲಸವನ್ನು ನಿಲ್ಲಿಸಿಲ್ಲ. ನಿಮ್ಮ ವಾಸಕ್ಕೆ ಮನೆ  ಸ್ವಚ್ಛವಾಗಿ ಇದೆ.” ಎಂದು ನೆಮ್ಮದಿಯ ಧ್ವನಿಯಲ್ಲಿ ಹೇಳಿದ ಆಳು.
“ಅದರ ಅಗತ್ಯವಿಲ್ಲ. ಕೊನೆ ಬಾರಿಗೆ ಒಮ್ಮೆ ಮನೆ ಸುತ್ತು ಹಾಕಿ ಬರೋಣ ಬಾ” ಎಂದರು ಯಜಮಾನರು.
ಅರ್ಥವಾಗದಂತೆ ನೋಟ ಬೀರಿದ ಆಳು ಅವರನ್ನು ಹಿಂಬಾಲಿಸಿದ. ಒಂದೊಂದಾಗಿ ಕೋಣೆಯ ಕದ ತೆರೆದಾಗ, ಸ್ವಚ್ಛ ನೆಲದ ಮೇಲೆ ಬಿಸಿಲು ಬೀಳಲಾರಂಭಿಸಿತು. ಕೊನೆಗೆ ಆಳು ಉಳಿದುಕೊಳ್ಳುತ್ತಿದ್ದ ಕೋಣೆಯ ಕದ ತೆಗೆದಾಗ, ಅಲ್ಲಿ ಒಬ್ಬ ವ್ಯಕ್ತಿ ನೆಲದ ಮೇಲೆ ಒರಗಿಕೊಂಡಂತೆ ಕಾಣಿಸಿತು. ಅದು ಉಸಿರು ನಿಂತು ಹೋದ ಒಂದು ನಿರ್ಜಿವ ಶವ ಎಂಬುದರ ಅರಿವಾಯಿತು.
“ಯಾರು ಇಲ್ಲಿ ಸತ್ತು ಬಿದ್ದಿರುವುದು?” ತನಗೆ ಎಂಬಂತೆ ಕೇಳಿಕೊಂಡ ಆಳು.
“ಅದು ನೀನೇ. ನೀನು ದೇಹ ಬಿಟ್ಟು ಆಗಲೇ ಎರಡು ದಿನವಾಯಿತು” ಹೇಳಿದರು ಯಜಮಾನರು.
“ಹಾಗಾದರೆ, ನೀವು ನನ್ನ ನೋಡಲು ಬಂದಿರಾ?” ಕೇಳಿದ ಆಳು.
“ಹೌದು. ನಾನು ದೇಹ ಬಿಟ್ಟು ಬಹಳ ಕಾಲವೇ ಆಯಿತು. ಆದರೆ ನೀನು ಮಾತ್ರ ಮನೆ ಜವಾಬ್ದಾರಿಯಲ್ಲಿ ಮಗ್ನನಾಗಿ ಹೋಗಿದ್ದೆ. ನಿನ್ನ ಸಮಯ ಬರುವುದಕ್ಕಾಗಿ ಇಲ್ಲಿಯವರೆಗೆ ಕಾಯಬೇಕಾಯಿತು” ಉತ್ತರಿಸಿದರು ಯಜಮಾನರು.
“ಹಾಗಾದರೆ ಈ ಮನೆ?”
“ಅದರ ಅವಶ್ಯಕತೆ ಇನ್ನಿಲ್ಲ. ತೊರೆಗೆ ಸ್ನಾನಕ್ಕೆ ಹೋಗೋಣ ಬಾ.”
ಆ ಮನೆಯ ಬಾಂಧವ್ಯ ಅಲ್ಲಿಗೆ ಮುಗಿದರೂ ಯಾವುದೇ ಯೋಚನೆ ಇಲ್ಲದೆ ತಮಗೆ ಖುಷಿ ಕೊಡುವ ತೊರೆಯ ಸ್ನಾನಕ್ಕೆ ಹೊರಟರು.

(ಇತ್ತೀಚಿನ ಹೊರನಾಡು ಪ್ರವಾಸದಲ್ಲಿ ದಾರಿಯಲ್ಲಿ ನೋಡಿದ ಪಾಳು ಮನೆಗಳು ಮತ್ತು ಹಿಂದೆ ಓದಿದ ಕಥೆಗಳ ಪ್ರಭಾವದಿಂದ ರೂಪುಗೊಂಡಿದ್ದು)

ಆನಂದ ಮರಳದ ಮಸ್ಕಿ, ಬೆಂಗಳೂರು

Don`t copy text!