.ಸಜ್ಜನರ ಮಾನವೀಯ ಅಂತಃಕರುಣೆ..

ಸಜ್ಜನರ ಮಾನವೀಯ ಅಂತಃಕರುಣೆ..

ಪೊಲೀಸ್ ಇಲಾಖೆ, ಪೊಲೀಸ್ ಅಧಿಕಾರಿಗಳ ವರ್ಗದಲ್ಲಿ ಮಾನವೀಯ ಅಂತಃಕರಣದ ಅನೇಕರು ಇಲಾಖೆಯಲ್ಲಿ ಇದ್ದಾರೆ. ತೀರಾ ಇತ್ತೀಚೆಗೆ ಸಿಪಿಐ ಆಗಿ ಬಂದು, ಜನ ಸ್ನೇಹಿಯಾಗಿ ಕಾರ್ಯ ಮಾಡುತ್ತಾ, ಅಶಕ್ತನಿಗೆ ಆಶ್ರಯ ನೀಡಿದ್ದಕ್ಕೆ ಸಾರ್ವಜನಿಕರು ಸಿಪಿಐ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಭಲೆ, ಬೇಷ್ ಎಂದರೆ, ಮೇಲಾಧಿಕಾರಿಗಳು ಬೆನ್ನು ತಟ್ಟಿ ನಿನ್ನ ಬೆಂಬಲಕ್ಕೆ ನಾವೀದ್ದೀವಿ ಎಂದಿದ್ದಾರೆ.

ಸಿಪಿಐ ಮಹಾಂತೇಶ ಸಜ್ಜನ ಮುತ್ತಿನಕಲ್ಲು ನಮ್ಮದೇ ಮುದಗಲ್ಲಿನವರು. ಇವರು ದಿನಂಪ್ರತಿ ಬೆಳಗ್ಗೆ ಸೈಕ್ಲಿಂಗ್ ಹೋಗುವಾಗ, ಲಿಂಗಸುಗೂರು ಪಟ್ಟಣದ ನಿವಾಸಿ, ಜಿಮ್ ತರಬೇತುದಾರ, ಆಂಜನೇಯ ಪಾರ್ಶ್ವವಾಯುನಿಂದ ಕೈ, ಕಾಲು ಸ್ವಾಧೀನ ಕಳಕೊಂಡು ಕೃಷಗೊಂಡ ವ್ಯಕ್ತಿ ಪ್ರತಿ ದಿನ ಬೆಳಗ್ಗೆ 7 ಗಂಟೆಗೆ ಒಂದು ಕೈಯಲ್ಲಿ ಊರುಗೋಲು, ಮತ್ತೊಂದು ಕೈಯಲ್ಲಿ ಬುತ್ತಿಯ ಚೀಲ ಹಿಡಿದುಕೊಂಡು ಕಾಲು ಎಳೆದು ಹಾಕುತ್ತಾ ನಡೆದುಕೊಂಡು 4 ಕಿಲೋ ಮೀಟರ ದೂರದ ಪೆಟ್ರೊಲ್ ಬಂಕ್ ನಲ್ಲಿ ತಿಂಗಳಿಗೆ 3 ಸಾವಿರಕ್ಕೆ ದುಡಿಯಲು ತೆರಳುವ ಸಂಕಷ್ಟದ ದೃಶ್ಯ ಕಂಡು ಸಹೃದಯಿ ಸಿಪಿಐ ಸಜ್ಜನರು ಮಮ್ಮಲ ಮರುಗಿದ್ದಾರೆ. ಜೊತೆಗಿದ್ದ ಅವರ ಮಗು ಕೂಡಾ ಪಪ್ಪಾ ಇವರಿಗೇನಾದ್ರು ಸಹಾಯ ಮಾಡು… ಪಾಪ ನೋಡು ಅವರ ಕಷ್ಟ ನೌಕರಿ ಕೊಡು… ಎಂದು ಹಾಲುಗಲ್ಲದ ಮಗು ತೊದಲುತ್ತಾ ಮರುಗಿದೆ. ಇದರಿಂದ ತಾಯಿ ಹೃದಯದ ಸಜ್ಜನರ ಕರುಳು ಚುರ್ರೆಂದಿದೆ. ಬಡತನ ಕೆಟ್ಟ ಕೋಡಿ, ತುತ್ತು ಅನ್ನಕ್ಕಾಗಿ ಜಿಮ್ ತರಬೇತುದಾರ ಆಂಜನೇಯ ಪಡಿಪಾಟಲು ಹೋಗಲಾಡಿಸುವ ಯೋಚನೆ, ತಲೆ ಕೊರೆದಿದೆ. ಆಗ ಸಿಪಿಐ ಸಜ್ಜನರ ಮತಿಗೆ ಹೊಳೆದದ್ದು ಲಿಂಗಸುಗೂರು ಪಟ್ಟಣದ ಬಸ್ ನಿಲ್ದಾಣದ ಬಳಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ಚೌಕಿ ನಿರ್ವಹಣೆ ಕೆಲಸಕ್ಕೆ ನಿಯೋಜನೆ ಮಾಡಿದ್ರಾಯ್ತು ಎನ್ನುವ ಯೋಚನೆ ಹೊಳೆದಿದೆ ತಮ್ಮಿಂದ ತಿಂಗಳಿಗೆ 5 ಸಾವಿರ ವೇತನ ನೀಡಲು ನಿರ್ಧರಿಸಿ ಎಸ್.ಪಿಯವರಿಂದ ಚೌಕಿಯ ಬೀಗದ ಕೈ ಆಂಜನೇಯನಿಗೆ ಹಸ್ತಾಂತರಿಸಿದಾಗ ಸಿಪಿಐ ರವರು ಮುಖಾರವಿಂದದಲ್ಲಿ ಧನ್ಯತೆ ಭಾವ ಅರಳಿ ಬಂದಿತು.

ಪೊಲೀಸ್ ಅಧಿಕಾರಿಗಳ ಕಾರ್ಯವು ನೆರೆದ ಜನರಿಗೇ ಮಾದರಿಯಾಗುವ ಜೊತೆಗೆ ಸಿಪಿಐ ಸಜ್ಜನರು ಹಾಗೂ ಪೊಲೀಸರ ಅಧಿಕಾರಿಗಳ ಅಂತರಾಳದಲ್ಲಿ ಹೃದಯ ಮಿಡಿಯುವ ನೆರವಿನ ಕರುಳು ಇದೆ. ಎನ್ನುವುದು ಅನಾವರಣ ಗೊಂಡಿತು. ಇದರ ಜೊತೆಗೆ ಸಂಕಷ್ಟದ ಸಂದರ್ಭದಲ್ಲಿ ಪೊಲೀಸರ ಜೊತೆಗೆ ಕೈ ಜೋಡಿಸಿದ ಸಾರ್ವಜನಿಕರಿಗೆ ನಗದು ಪುರಸ್ಕಾರ ನೀಡಿ ಗೌರವಿಸಿದರು. ಸಿಪಿಐ ಸಜ್ಜನರ ಕಾರ್ಯದಿಂದ ಪ್ರೇರಣೆಗೊಂಡ ಎಸ್.ಪಿ ಪ್ರಕಾಶ ನಿಕ್ಕಮ್ ಸಾಹೇಬರು ಪೊಲೀಸರಿಗೆ ನೆರವಾದ ಆ ನಾಲ್ಕೂ ಜನರಿಗೂ 5 ಸಾವಿರ ನಗದು ಬಹುಮಾನ ಘೋಷಣೆ ಮಾಡಿದರು. ಇದೇ ಅಲ್ಲವೇ ಮಾನವೀಯ ಅಂತ:ಕರುಣೆ ಅಂದರೆ.

ಸತ್ತಾಗ ಏನು ಕಟಿಗೊಂಡು ಹೋಗೊದಿಲ್ಲ… ಇದ್ದಾಗ ಒಳ್ಳೆ ಕೆಲ್ಸ ಮಾಡಬೇಕು. ನಿವೃತ್ತಿಯಾದ ಬಳಿಕ ಜನ ನಮ್ಮನ್ನ ಈತತ ಬಾರಪಾ ಅಂತಾ ಕರೆಯಬೇಕು ಎನ್ನುತ್ತಾರೆ ಸಿಪಿಐ ಮಹಾಂತೇಶ ಸಜ್ಜನ್ ರವರು.

ಗುರುರಾಜ ಗೌಡರು

Don`t copy text!