ಆಸೆಗಾಗಿ ಅಲ್ಲ ಆಸರೆಯಾಗಿ

ಆಸೆಗಾಗಿ ಅಲ್ಲ ಆಸರೆಯಾಗಿ

ನಾ ಬಯಸಿದ ನಿರ್ಮಲ ಪ್ರೀತಿ
ಆಸೆಗಾಗಿ ಅಲ್ಲ, ಆಸರೆಗಾಗಿ
ಬದುಕಿನಾಸರೆಗಾಗಿ, ಹಿತವಾಗಿ
ನೋವು ಮರೆದು ಮುನ್ನಡೆಸಲು.

ಮನವ ಮುದಗೋಳಿಸಿ ಹದವಾಗಿಸಲು
ಮನದಿ ಮುಗ್ಧ ನಗು ತುಂಬಲು
ಆಯಾಸದ ಅರಿವು ಅಳಿಸಲು
ಬಯಕೆಯ ಬದುಕ ಅರಳಿಸುವ ಪ್ರೀತಿ.

ಬದುಕು ಸಾಗಿಸಲು ಬಳಲಿದಾಗ
ಬಣ್ಣ ಬಣ್ಣದ ಕನಸು ನೀಡಿ
ಕಣ್ಣ ತುಂಬ ಆಸೆ ಅರಳಿಸಿ
ಬದುಕುವಾಸೆ ಬದುಕಿಸುವ ಪ್ರೀತಿ.

ಹೋನ್ನ ಹಾದಿಯಲಿ ನನ್ನ ನಡಿಸಿ
ನನ್ನಾಸೆಯ ರಥವನನೆಳೆಯಲು
ಸಾರಥಿಯಾಗಿ ಅಭಯವನಿತ್ತು
ಭವ ಭಯ ಮುಕ್ತ ಗಳಿಸುವ ಪ್ರೀತಿ.

ನಿನ್ನ ಪ್ರೀತಿಯೆ ನನ್ನ ಶಕ್ತಿ
ನಿನ್ನೋಲವೆ ನನಗೆ ಸ್ಪೂರ್ತಿ
ಹತ್ತಿರವಿರದಿದ್ದರೆನಂತೆ ಬಾಳಲಿ
ಎತ್ತರದ ನಿಲುವು ತಂದ ಪ್ರೀತಿ.

ಮನದ ಮಾತು ಮೌನವಾಗಿದೆ
ಮೌನ ಮುರಿದು ಗರಿ ಕಟ್ಟಿ ಕುಣಿದಿದೆ
ಹಾಡಿ ಪಾಡಿ ಒಲಿದು ನಲಿದು
ಹೋಸ ಬಾಳಿಗೆ ಅನುವಾದ ಪ್ರೀತಿ.

ಸವಿತಾ ಎಮ್ ಮಾಟೂರು, ಇಲಕಲ್ಲ

Don`t copy text!